ಅಂಜಲಿ ರಾಮಣ್ಣ ಬರಹ | ಲೈಂಗಿಕ ಅಲ್ಪಸಂಖ್ಯಾತರಿಗೆ ಅವರ ಹಕ್ಕು ಸಿಗುವಂತಾಗಲು ಪೊಲೀಸರು ಬದಲಾಗಬೇಕು

ಇವತ್ತಿಗೂ ಕೂಡಾ ತೃತೀಯ ಲಿಂಗದ ಮಗು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಂದರೆ ಮುಜುಗರ ಅನುಭವಿಸುತ್ತದೆ. ಕಾನೂನು ರೀತ್ಯಾ ಎಲ್ಲರಿಗೂ ಸಮಾನ ಅವಕಾಶ ಇರಬೇಕು ಎಂಬ ಆದೇಶಗಳನ್ನು ನಾವು ಬರೆಯಬಹುದೇ ಹೊರತು, ಅಂಥ ಆದೇಶಗಳನ್ನು ಯಾವ ವ್ಯವಸ್ಥೆ ಮೂಲಕ ಜಾರಿಗೆ ತರಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಅಂಜಲಿ ರಾಮಣ್ಣ ಬರಹ | ಲೈಂಗಿಕ ಅಲ್ಪಸಂಖ್ಯಾತರಿಗೆ ಅವರ ಹಕ್ಕು ಸಿಗುವಂತಾಗಲು ಪೊಲೀಸರು ಬದಲಾಗಬೇಕು
Follow us
ರಶ್ಮಿ ಕಲ್ಲಕಟ್ಟ
|

Updated on:Dec 18, 2020 | 6:11 PM

ಇಂದು (ಡಿ.18) ವಿಶ್ವ ಅಲ್ಪಸಂಖ್ಯಾತರ ಹಕ್ಕುಗಳ ದಿನ. ಅಲ್ಪಸಂಖ್ಯಾತ ಎನ್ನುವ ಪದವನ್ನು ಬಹುತೇಕ ಸಂದರ್ಭಗಳಲ್ಲಿ ಧಾರ್ಮಿಕ ಆಯಾಮದಿಂದ ಮಾತ್ರ ನೋಡಲಾಗುತ್ತದೆ. ಸಮಾಜದ ಯಾವುದೇ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದವರನ್ನು ನಾವು ಅಲ್ಪಸಂಖ್ಯಾತರು ಎನ್ನಬಹುದು. ಈ ಹಿನ್ನೆಲೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಅಥವಾ ಟ್ರಾನ್ಸ್​​ಜೆಂಡರ್​ಗಳ ಹಕ್ಕುಗಳ ಬಗೆಗಿನ ಹಲವು ಆಯಾಮಗಳನ್ನು ವಕೀಲೆ ಅಂಜಲಿ ರಾಮಣ್ಣ ಈ ಬರಹದಲ್ಲಿ ಚರ್ಚಿಸಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮಕ್ಕಳು ಅಥವಾ ತೃತೀಯ ಲಿಂಗಿ ಎಂದು ಗುರುತಿಸಿಕೊಂಡ ಮಕ್ಕಳು ರಕ್ಷಿಸಲ್ಪಟ್ಟಾಗ ಅವರಿಗಾಗಿ ಕಾನೂನು ಯಾವ ವ್ಯವಸ್ಥೆಯನ್ನು ಕೊಟ್ಟಿದೆ ಎಂಬುದನ್ನು ನೋಡಬೇಕು. ಹೀಗೆ ನೋಡಿದರೆ ಮಕ್ಕಳ ರಕ್ಷಣೆ ಪೋಷಣೆಯಲ್ಲಿ 18 ವರ್ಷದೊಳಗಿರುವ ಎಲ್ಲರಿಗೂ ಯಾವುದೇ ವರ್ಗ ಮತ್ತು ಲಿಂಗಭೇದವಿಲ್ಲದೆ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ತೃತೀಯ ಲಿಂಗಿಗಳಿಗೆ ಬೇಕಾದ ಅವಶ್ಯಕತೆ ವಿಭಿನ್ನವಾಗಿರುವುದರಿಂದ ಮತ್ತು ಸಮಾಜದಲ್ಲಿ ಅವರದ್ದೇ ಆದ ವಾತಾವರಣವನ್ನು ಸೃಷ್ಟಿಸಿಕೊಡಬೇಕಾದ ಅವಶ್ಯಕತೆ ಕೂಡ ಪ್ರಸ್ತುತ ಸಮಾಜದಲ್ಲಿ ಇರುವುದರಿಂದ ಕಾನೂನು ಯಾವುದನ್ನೂ ನೇರವಾಗಿ ಹೇಳುವುದಿಲ್ಲ.  ಹೀಗಾಗಿಯೇ ಮಕ್ಕಳ ಸಂರಕ್ಷಣೆ ವ್ಯವಸ್ಥೆಯ ಅಂಗಗಳಾಗಿರುವ ಚೈಲ್ಡ್ ಲೈನ್, ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸರ ಎದುರು ಒಬ್ಬ ಸಾಮಾನ್ಯ ನಾಗರಿಕ ಇಂಥ ಮಕ್ಕಳಿಗೆ ರಕ್ಷಣೆ ಕೋರಿ ಕರೆತಂದಾಗ ಯಾವ ರೀತಿಯಾಗಿ ಮುಂದಿನ ಕ್ರಮ ವಹಿಸಬೇಕು ಎಂಬುದರ ಬಗ್ಗೆ ಅವರೆಲ್ಲರೂ ಗೊಂದಲಕ್ಕೆ ಬೀಳ್ತಾರೆ.

ಉದಾಹರಣೆಗೆ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳಿಗಾಗಿ ಒಂದು ಕಲ್ಯಾಣ ಸಮಿತಿ ಮತ್ತು ಗಂಡು ಮಕ್ಕಳಿಗಾಗಿ ಕಲ್ಯಾಣ ಸಮಿತಿ ಅಂತ ವ್ಯವಸ್ಥೆ ಇದೆ. ಈಗ ಚೈಲ್ಡ್ ಲೈನ್​​ನವರು ಫೋನ್ ಮಾಡ್ತಾರೆ. ಒಂದು ಮಗು ರೈಲು ನಿಲ್ದಾಣದಲ್ಲಿಯೋ, ಬಸ್ ನಿಲ್ದಾಣದಲ್ಲಿಯೂ ಅಥವಾ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಸಿಗುತ್ತದೆ ಅಂತಿಟ್ಟುಕೊಳ್ಳಿ. ಮೇಲ್ನೋಟಕ್ಕೆ ಆ ಮಗು ಯಾವ ಲಿಂಗದಲ್ಲಿ ಕಾಣಿಸುತ್ತಿದೆಯೋ ಅದಕ್ಕಿಂತ ವಿಭಿನ್ನವಾಗಿರುವ ಲಿಂಗದಲ್ಲಿ ಅದು ತನ್ನನ್ನು ಗುರುತಿಸಿಕೊಂಡು ವಿವರವನ್ನು ಕೊಡುತ್ತದೆ. ಆಗ ಚೈಲ್ಡ್ ಲೈನ್​ನವರಿಗೂ ಗೊಂದಲವುಂಟಾಗುತ್ತದೆ. ಈ ಮಗು ಗಂಡೋ ಅಥವಾ ಹೆಣ್ಣೋ, ಯಾವ ಮಕ್ಕಳ ಕಲ್ಯಾಣ ಸಮಿತಿ ಮುಂದೆ ನಾವು ಕರೆದುಕೊಂಡು ಹೋಗಬೇಕು ಎಂಬ ಗೊಂದಲ ಇದೆ. ಆದರೆ ಚೈಲ್ಡ್ ಲೈನ್ ವ್ಯವಸ್ಥೆ ಎಷ್ಟು ಉತ್ತಮ ಮಟ್ಟದಲ್ಲಿ ನಡೆಯುತ್ತಿದೆ ಅಂದರೆ ಅಂಥಾ ಮಕ್ಕಳನ್ನು ನಿಮಗೆ ರಕ್ಷಣೆ ಇಲ್ಲ, ನೀನು ಗಂಡೂ ಅಲ್ಲ ಹೆಣ್ಣು ಅಲ್ಲ ಹೋಗ್ಬಿಡು ಅಂತ ಕಳಿಸುವುದಾಗಲೀ, ನಮ್ಮ ಸಮಾಜದ ಮಾನಸಿಕ ವ್ಯವಸ್ಥೆಯಲ್ಲಿ ಮಕ್ಕಳನ್ನು ಅಥವಾ ತೃತೀಯಲಿಂಗಿಯರನ್ನ ನಾವು ನಗಣ್ಯಗೊಳಿಸುವಂತೆ ಇಲ್ಲಿ ಮಾಡುವುದಿಲ್ಲ. ಬಾಲಕರ ಕಲ್ಯಾಣ ಸಮಿತಿ ಇರಬಹುದು, ಬಾಲಕಿಯರ ಕಲ್ಯಾಣ ಸಮಿತಿ ಇರಬಹುದು ಅಲ್ಲಿಯ ಸಮಿತಿಯ ನಿರ್ದೇಶನದಂತೆ ಅವರು ಮಕ್ಕಳನ್ನು ಹಾಜರುಪಡಿಸುತ್ತಾರೆ. ಅವರ ಜವಾಬ್ದಾರಿ ಸೀಮಿತವಾಗಿದ್ದರಿಂದ ಅವರು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದರೆ ಅವರ ಜವಾಬ್ದಾರಿ ಮುಗಿದು ಹೋಗುತ್ತದೆ.

ಇದನ್ನೂ ಓದಿ:  Explainer | ಸ್ವಾಭಿಮಾನದ ಬಾಳ್ವೆಯ ತಳಹದಿ ಮಾನವ ಹಕ್ಕುಗಳು

ಪ್ರಾತಿನಿಧಿಕ ಚಿತ್ರ

ಬದಲಾಗಲಿ ಪೊಲೀಸರು

ಇನ್ನು ಪೊಲೀಸರ ವಿಚಾರಕ್ಕೆ ಬಂದರೆ ಅಲ್ಲೂ ಕೂಡಾ ಇದೇ ರೀತಿಯ ದ್ವಂದ ಎದ್ದು ಕಾಣುತ್ತದೆ. ದುರದೃಷ್ಟವಶಾತ್ ಆ ಪೋಲಿಸ್ ಅನ್ನುವ ವ್ಯವಸ್ಥೆಗೆ ಒಂದಷ್ಟು ಅಧಿಕಾರವೂ ಇರುವುದರಿಂದ ಮಕ್ಕಳನ್ನು ರಕ್ಷಣೆ ಮಾಡಬೇಕು, ಅವರು ಯಾವ ಲಿಂಗಕ್ಕೆ ಸೇರಿದ್ದರೂ ಸಹ ಅವರ ಭವಿಷ್ಯ, ರಕ್ಷಣೆ, ಪೋಷಣೆ ವಿಚಾರ ಅವರಿಗೆ ಸೇರಿದ್ದು. ಆದರೆ ಇಂಥ ಭಾವನೆಯನ್ನು ಅವರು ಪ್ರದರ್ಶನ ಮಾಡುವುದಿಲ್ಲ. ಅದರಂತೆ ನಡೆದುಕೊಳ್ಳುವುದಿಲ್ಲ. ಅದರ ಬದಲು ಯಾವುದೋ ಒಂದು ತೃತೀಯ ಲಿಂಗಿ ಮಗು/ವ್ಯಕ್ತಿ ಸಿಕ್ಕಾಗ ಒಂದು ವ್ಯಕ್ತಿ, 18 ವರ್ಷದ ಒಳಗಿನ ವ್ಯಕ್ತಿ ಗಂಡು ಹುಡುಗನಂತೆ ಕಾಣುತ್ತಿದ್ದು ಆ ವ್ಯಕ್ತಿ ತನ್ನನ್ನು ಹೆಣ್ಣು ಎಂದು ಗುರುತಿಸಿಕೊಂಡಾಗ ಪೊಲೀಸರು ದೈಹಿಕ ಬಲಪ್ರಯೋಗವನ್ನು ಆ ಮಗುವಿನ ಮೇಲೆ ಮಾಡುತ್ತಾರೆ. ನಮ್ಮ ಹತ್ತಿರವೇ ಆ ರೀತಿಯ ಕೇಸುಗಳು ಬಂದಿವೆ.

ಹೊಡೆಯುವುದು, ನೀನು ಹುಡುಗ ಇದ್ದೀಯಾ, ಬಟ್ಟೆ ಬಿಚ್ಚಿ ತೋರಿಸುವಂತೆ ಹೇಳುವುದು, ಕಣ್ಣಿಗೆ ಕಾಣುವ ಲಿಂಗದ ಮೇಲೆ ತಾವೇ ಆ ವ್ಯಕ್ತಿಯ ಲಿಂಗ ನಿರ್ಣಯಿಸುವುದು. ಹೊಡೆಯುವುದು, ಬಡಿಯೋದು ಮಾಡುವುದು. ಇದೆಲ್ಲದರ ನಡುವೆ ಒಬ್ಬ ವ್ಯಕ್ತಿ ತನ್ನನ್ನು ತೃತೀಯ ಲಿಂಗಿ ಎಂದು ಗುರುತಿಸಿಕೊಂಡರೂ ಅವರ ಮನೆವರು ಅದನ್ನು ಒಪ್ಪುವುದಿಲ್ಲ. ಅವರು ಮನೆಯಿಂದ ಓಡಿ ಬಂದು ಸಮಾಜದಲ್ಲಿ ಎಲ್ಲೋ ಒಂದು ಕಡೆ ತಮ್ಮನ್ನು ತಾವು ಗುರುತಿಸಿಕೊಳ್ಳುವ ಜನಾಂಗದ ಜತೆ ಸೇರಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಬಂದಿರುತ್ತಾರೆ. ಹೀಗಿರುವಾಗ ಪೋಲೀಸರ ಕೈಗೆ ಸಿಕ್ಕಾಗ ಪೊಲೀಸರು ಹೊಡೆದು ಬಡಿದು ಮಾಡುವುದಲ್ಲದೆ ಅವರ ಮನೆಯವರನ್ನೂ ಕರೆಸಿ ಮತ್ತೆ ಆ ಮಗುವನ್ನು ಮನೆಯವರಿಗೆ ಒಪ್ಪಿಸುವಂಥ ಘಟನೆಗಳೂ ನಡೆದಿವೆ. ಮನೆಯಲ್ಲಿ ರಕ್ಷಣೆ ಇಲ್ಲ ಎಂದು ಓಡಿ ಬಂದ ಮಗುವನ್ನು ಮತ್ತೆ ಮನೆಗೆ ಸೇರಿಸಿದಾಗ ಆ ಮಗುವಿನ ರಕ್ಷಣೆಯ ಕತೆ ಏನು? ಅದರ ಹೊಣೆ ಯಾರದು? ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿಯುತ್ತದೆ. ಹಾಗೂ ಹೀಗೂ ಪೊಲೀಸಿನವರ ಮೂಲಕವಾಗಲೀ ಚೈಲ್ಡ್ ಲೈನ್​ನ ಮೂಲಕವಾಗಲೀ ಮಕ್ಕಳ ಸಮಿತಿ ಎದುರಿಗೆ ಬಂದಾಗ ಮತ್ತೊಂದು ಬೃಹದಾಕಾರವಾದ ಪ್ರಶ್ನೆ ನಿಲ್ಲುತ್ತೆ. ಅದೇನೆಂದರೆ ಆ ಮಕ್ಕಳನ್ನು ನಾವು ಬಾಲಕಿಯರಿಗಾಗಿ ಇರುವ ಸಂಸ್ಥೆಯಲ್ಲಿ ಇರಿಸುವುದೋ ಅಥವಾ ಗಂಡು ಮಕ್ಕಳಿಗಾಗಿ ಇರುವ ಸಂಸ್ಥೆಯಲ್ಲಿ ಇರಿಸುವುದೋ ಎಂಬುದು.

ಈಗ ಆ ಮಗು ದೈಹಿಕವಾಗಿ, ಆಂಗಿಕವಾಗಿ ದೇಹ ರಚನೆಯಲ್ಲಿ ಗಂಡು ಹುಡುಗ ಆಗಿದ್ದರೂ ತನ್ನನ್ನು ತಾನು ಹೆಣ್ಣು ಮಗು ಎಂದು ಗುರುತಿಸಿಕೊಳ್ಳುವುದರಿಂದ ಸಮಿತಿಯವರು ಆ ವ್ಯಕ್ತಿಗಳ ವೈಯಕ್ತಿಕ ಭಾವನೆಗಳನ್ನು ರಕ್ಷಿಸಬೇಕು, ಗೌರವಿಸಬೇಕು. ನೋಡಲು ಗಂಡು ಮಗುವಿನಂತೆ ಇದ್ದು ತನ್ನನ್ನು ತಾನು ಹೆಣ್ಣು ಗುರುತಿಸಿದಾಗ ಬಾಲಕಿಯರ ಮಂದಿರದಲ್ಲಿ ಇರಿಸಿದರೆ ಅಲ್ಲಿನ ಸಿಬ್ಬಂದಿ,’ನೋಡಿ ಇವರಿಗೆ ದೈಹಿಕ ಸಾಮರ್ಥ್ಯ ಹೆಚ್ಚು. ಇವರು ಗಂಡೂ ಅಲ್ಲ ಹೆಣ್ಣೂ ಅಲ್ಲ. ಇವರು ನಮ್ಮ ಹೆಣ್ಣುಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಹಾಗಾಗಿ ಇವರನ್ನು ಬಾಲಕಿಯರ ಮಂದಿರದಲ್ಲಿ ಇಟ್ಟುಕೊಳ್ಳಬಾರದು’ ಎಂದು ಹೇಳಿದ್ದೂ ಇದೆ. ಹಾಗಂತ ಬಾಲಕರ ಮಂದಿರದಲ್ಲಿ ಇಡೋಣ ಎಂದರೆ ಆ ಮಗು ಬಾಲಕರ ಜತೆಗೆ ಹೋಗಲು ಹಿಂಜರಿಯುತ್ತದೆ. ಯಾಕೆಂದರೆ ಅದು ತನ್ನನ್ನು ತಾನು ಹುಡುಗಿ ಎಂದು ಗ್ರಹಿಸಿರುತ್ತದೆ. ಚಲನವಲನಗಳಲ್ಲಿ ಹೆಣ್ಣಿನ ಆಂಗಿಕ ಚಲನೆಯನ್ನು ಇಟ್ಟುಕೊಂಡಿರುತ್ತದೆ. ಹಾಗಾಗಿ ಅದು ಬಾಲಕರ ಮಂದಿರದಲ್ಲಿಯೂ ಹೊಂದದೆ ಇರುವ ಮಗುವಾಗಿ ಉಳಿದುಕೊಂಡು ಬಿಡುತ್ತದೆ. ಇಲ್ಲಿ ಈ ಮಗುವಿನಿಂದ ಹೆಣ್ಣು ಮಕ್ಕಳಿಗೆ ಅಪಾಯ ಇರುವಂತೆಯೇ ಬಾಲಕರ ಮಂದಿರದಲ್ಲಿ ಇತರ ಬಾಲಕರಿಂದ ಈ ಮಗುವಿಗೆ ಅಪಾಯ ಎದುರಾಗುವ ಪರಿಸ್ಥಿಯನ್ನು ಊಹಿಸಿಕೊಳ್ಳಬಹುದು. ಹಾಗಾಗಿ ಇಂಥಾ ಮಕ್ಕಳು ಸಿಕ್ಕಾಗ ಬಾಲಕಿಯರ ಮಂದಿರಕ್ಕೆ ಕಳುಹಿಸುವುದೋ ಬಾಲಕರ ಮಂದಿರಕ್ಕೆ ಕಳುಹಿಸುವುದೋ ಎಂಬ ಗೊಂದಲ ಉಂಟಾಗುತ್ತದೆ.

ಇದನ್ನೂ ಓದಿ:  I can’t breath | ಮನುಷ್ಯರು ಮನುಷ್ಯರಾಗಿ ಬಾಳಲು ಅದೆಷ್ಟು ಸವಾಲುಗಳು?

ಬದಲಾಗಬೇಕಿದೆ ಸಮಾಜದ ಮನಸ್ಥಿತಿ

ನಮ್ಮಲ್ಲಿ ಒಂದು ಕೇಸ್ ಬಂದಿತ್ತು. ಆ ಮಗುವಿಗೆ 18 ವರ್ಷ ತುಂಬಲು ಮೂರು ನಾಲ್ಕು ತಿಂಗಳು ಇತ್ತು. ಆ ಮಗು ಗಂಡು ಮಗು ಆಗಿದ್ದರೂ ತನ್ನನ್ನು ತಾನು ಹೆಣ್ಣು ಮಗು ಎಂದು ಗುರುತಿಸಿಕೊಂಡಿತ್ತು. ಯಾವಾಗ ಮನೆಯಲ್ಲಿ ಈ ವಿಷಯ ಗೊತ್ತಾಯ್ತೋ ಅವರು ವಿರೋಧ ಮಾಡಿದರು ಅಂತ ಆ ಮಗು ಓಡಿ ಹೋಗಿ ಲೈಂಗಿಕ ಅಲ್ಪಸಂಖ್ಯಾತರ ಗುಂಪಿನೊಂದಿಗೆ ರಕ್ಷಣೆ ಕೇಳಿತ್ತು. ಆದರೆ ಈಗೀಗ ಬೆಂಗಳೂರಿನಲ್ಲಿ ಅಂಥ ಗುಂಪುಗಳು ಕೂಡಾ ಸಂಸ್ಥೆಗಳೊಂದಿಗೆ ಸೇರಿ ತಮ್ಮ ಸಮುದಾಯವನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿವೆ. ಇಲ್ಲೂ ಕೂಡಾ ಶಿಕ್ಷಣ ಪಡೆಯುವವರು ಇದ್ದಾರೆ. ಸ್ವಲ್ಪ ಕಾನೂನಿನ ಅರಿವು ಬಂದಿರುವುದರಿಂದ ಅವರು ಕೂಡಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಕರೆದುಕೊಂಡು ಬಂದರು. ಆ ವ್ಯಕ್ತಿಯ ಮನಸ್ಥಿತಿಯನ್ನು ಅರಿತು ನಾವು ಬಾಲಕಿಯರ ಮಂದಿರದಲ್ಲಿಡಲು ಸೂಕ್ತ ಅನ್ನಿಸಲಿಲ್ಲ. ತಕ್ಷಣದ ರಕ್ಷಣೆಗೆ ಸೂಕ್ತ ಎಂದು ಅನಿಸಿ ಆ ಜನಾಂಗದ ಮುಖ್ಯಸ್ಥರಿಗೆ ಆ ಮಗುವನ್ನು ಕೊಟ್ಟು ಆ ಮಗುವಿನ ವಿದ್ಯಾಭ್ಯಾಸದ ಕಡೆಗೆ ಮನವೊಲಿಸುವ ಪ್ರಯತ್ನವನ್ನು ಮಾಡಿದೆವು. ಆ ಮಗು 2ನೇ ಪಿಯುಸಿ ಓದ್ತಾ ಇತ್ತು. ಆಯ್ತು ನಾನು ಎರಡನೇ ವರ್ಷ ಪಿಯುಸಿ ಮುಂದುವರಿಸುತ್ತೀನಿ. ನನಗೆ ಈ ಸಮುದಾಯದ ಜತೆ ಇರಲು ಅವಕಾಶ ಕೊಡಿ, ಮನೆಗೆ ಹೋದರೆ ಅಪಾಯ ಎಂದು ಹೇಳಿತು. ಹಾಗಾಗಿ ನಾವು ಕಾಲೇಜಿನವರ ಜತೆ ಮಾತಾಡಿ ಈ ಬಾಲಕ (ಕಾಲೇಜಿನಲ್ಲಿ ಅದು ಬಾಲಕ ಎಂದು ದಾಖಲಾಗಿತ್ತು) ನಿಮ್ಮ ಕಾಲೇಜಿನಲ್ಲಿ ಶಿಕ್ಷಣ ಮುಂವುವರಿಸುತ್ತಾನೆ ಎಂದು ಹೇಳಿ ಎಲ್ಲ ವ್ಯವಸ್ಥೆ ಮಾಡಿದ್ದೆವು. ಆದರೆ ಏನಾಯ್ತು ಎಂದರೆ ಆ ವ್ಯಕ್ತಿಯೇ ಆ ವಾತಾವರಣಕ್ಕೆ ಹೊಂದಿಕೊಳ್ಳಲು ಆಗಿಲ್ಲ. ಯಾಕೆಂದರೆ ಕಾಲೇಜಿನಲ್ಲಿ ಇಷ್ಟು ದಿನ ಪ್ಯಾಂಟ್ ಶರ್ಟ್ ಹಾಕಿಕೊಂಡು ಬರುತ್ತಿದ್ದ ಹುಡುಗ ಏಕಾಏಕಿ ಸೀರೆ ಅಥವಾ ಚೂಡಿದಾರ್ ಉಟ್ಕೊಂಡು ಬರ್ತಾನೆ ಅಂದಾಗ ಆ ಬದಲಾವಣೆಯನ್ನು ಸ್ವೀಕರಿಸಲು ನಮ್ಮ ಸಮಾಜ ಇನ್ನೂ ಸಿದ್ಧವಾಗಿಲ್ಲ.

ಇದನ್ನೂ ಓದಿ:  ಇಂದು ಅಲ್ಪಸಂಖ್ಯಾತರ ದಿನ: ಏನಿದರ ಹಿನ್ನೆಲೆ?

ತೃತೀಯ ಲಿಂಗಿಗಳ ರಕ್ಷಣೆಗೆ ಸೂಕ್ತ ಅಥವಾ ಪರ್ಯಾಯ ವ್ಯವಸ್ಥೆ ಏನು?

ಅಲ್ಲಿರುವ ತತ್ಸಮಾನ ವಯಸ್ಸಿನ ಮಕ್ಕಳಿಗೂ ಸಹ ಅಂದರೆ 16ರಿಂದ 18 ವರ್ಷದ ಮಕ್ಕಳಿಗೂ ಅವರ ಜೀವನವನ್ನು ಎಕ್ಸ್​ಪ್ಲೋರ್ ಮಾಡುವ ಕುತೂಹಲ ಇರುತ್ತದೆ. ಹೀಗಿರುವಾಗ ಗಂಡು ಮತ್ತು ಹೆಣ್ಣು ಈ ಎರಡೇ ಸಮುದಾಯ ಇರುವ ಸಮಾಜದಲ್ಲಿ ನಾವು ಶಿಕ್ಷಣಕ್ಕೆ ಕಳುಹಿಸಕೊಡಬೇಕಾದುದು ಎಷ್ಟು ಸೂಕ್ತ? ಅದು ಸೂಕ್ತ ಅಲ್ಲದ ಮೇಲೆ ಅದಕ್ಕೆ ಪರ್ಯಾಯ ವ್ಯವಸ್ಥೆ ಏನು?

ಈಗ ಮಗುವಿನ ಜೀವ ರಕ್ಷಣೆ ಮಾಡಬೇಕಲ್ಲ. ಆ ಸಮುದಾಯದ ಮುಖ್ಯಸ್ಥರನ್ನು ಕರೆಸಿ ನಮ್ಮ ಬಾಲಾಪರಾಧಿ ನ್ಯಾಯ ಕಾಯ್ದೆ (juvenile justice act) ಅಡಿಯಲ್ಲಿ ಫಿಟ್ ಪರ್ಸನ್ ಎಂದು ಗುರುತಿಸಿ, ಅವರ ಸುಪರ್ದಿಗೆ ಒಪ್ಪಿಸಲು ಯೋಚನೆ ಮಾಡಿದೆವು. ಫಿಟ್ ಪರ್ಸನ್ ಆಗಲು ಆ ವ್ಯಕ್ತಿಗೆ ಏನೇನು ದಾಖಲೆಗಳು ಬೇಕು ಎಂಬುದನ್ನು ನಾವು ಹೇಳಿದೆವು. ಅವರಿಗೆ ಹರಡುವ ಕಾಯಿಲೆ ಇರಬಾರದು, ಕ್ರಿಮಿನಲ್ ರೆಕಾರ್ಡ್ ಇರಬಾರದು ಹಾಗೇ ಈ ಮಗುವನ್ನು ಕನಿಷ್ಠ ಮಟ್ಟದ ಗೌರವಯುತ ಬಾಳ್ವೆಯನ್ನು ನಡೆಸಲು ಸಾಧ್ಯವಾಗುವ ತಕ್ಕಮಟ್ಟದ ಹಣಕಾಸು ವ್ಯವಸ್ಥೆ ಇರಬೇಕು. ಹೀಗೆ ಫಿಟ್ ಪರ್ಸನ್ ಆಗಲು ಬೇಕಾಗಿರುವ ಒಂದಷ್ಟು ಅರ್ಹತೆಗಳನ್ನು ನಾವು ಹೇಳಿದಾಗ ಅವರು ಅದಕ್ಕೆ ಹಿಂದೇಟು ಹಾಕಿಬಿಟ್ಟರು. ಕೊನೆಗೆ ಬಾಲಕಿಯರ ಮಂದಿರಕ್ಕೆ ದಾಖಲಿಸಬೇಕಾದ ಪರಿಸ್ಥಿತಿ ಬಂತು. ಆದರೆ ಬಾಲಕಿಯರ ಮಂದಿರದಲ್ಲಿ ಆತನನ್ನು ನಾವು ನಮ್ಮ ಸಮಿತಿಯ ಮೂಲಕ ದಾಖಲಿಸಿದ್ದಾಗ ಪ್ರಾಥಮಿಕ ತಪಾಸಣೆ ಮಾಡುತ್ತಾರೆ. ತಪಾಸಣೆ ಅಂದರೆ ಮಗುವಿನ ಎತ್ತರ, ತೂಕದ ಶಾರೀರಿಕ ಗುಣ ಲಕ್ಷಣ ಗುರುತಿಸುವುದು ಅಷ್ಟೇ. ಆದರೆ ನಮ್ಮ ಸಿಬ್ಬಂದಿಗೆ ತೃತೀಯ ಲಿಂಗಿಗಳನ್ನು ಏಕ್ ದಂ ಒಪ್ಪಿಕೊಳ್ಳುವ ಮನಸ್ಥಿತಿ ಇರಲಿಲ್ಲ. ಈ ಮನಸ್ಥಿತಿಯನ್ನು ಬದಲಿಸಲು ಬೇಕಿರುವ ತರಬೇತಿ ಇಲ್ಲ. ಅವರಿಗೆ ವೈಜ್ಞಾನಿಕ ಹಿನ್ನಲೆ ಬಗ್ಗೆ ವಿವರಿಸಿದರೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರಲ್ಲ. ಇಂತಿರುವಾಗ ಅವರು ಏನು ಮಾಡ್ತಾರೆ ಅಂದ್ರೆ ಪ್ರೊಟೊಕಾಲ್ ತರ ನಿನ್ನ ಹತ್ತಿರ ಏನೇನು ಇದೆ? ಈ ಬಟ್ಟೆ ಬಿಚ್ಚಿ ಆ ಬಟ್ಟೆಯನ್ನು ಹಾಕು ಎಂದು ವ್ಯವಸ್ಥೆ ಮಾಡಿದಾಗ ನಮ್ಮ ಸಿಬ್ಬಂದಿಯೇ ಆ ಮಗುವಿನ ದೇಹವನ್ನು ನೋಡಿ, ಅದು ಗಂಡು ಮಗು, ಹುಡುಗನನ್ನು ಬಾಲಕಿಯರ ಮಂದಿರದಲ್ಲಿ ಇಟ್ಟುಕೊಳ್ಳಲು ಆಗಲ್ಲ, ಅವನು ತುಂಬಾ ಶಕ್ತಿವಂತ ಅಂತ ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿಗೆ ಬರುವ ನಮ್ಮಂಥವರೂ ಕೂಡಾ ಇನ್ನೂ ತೃತೀಯ ಲಿಂಗಿ ಮಕ್ಕಳನ್ನು ಒಪ್ಪಿಕೊಳ್ಳುವ ಮಟ್ಟಕ್ಕೆ ಹೋಗಿದ್ದೀವಾ? ಅಂಥ ಮಕ್ಕಳನ್ನು ಅರ್ಥ ಮಾಡಿಕೊಂಡು ಇತರ ಮಕ್ಕಳಂತೆ ಸಹಜವಾಗಿ ಒಪ್ಪಿಕೊಳ್ಳುವ ಪ್ರೌಢಿಮೆಗೆ ನಾವು ತಲುಪಿದ್ದೇವಾ ಎಂಬುದು ಪ್ರಶ್ನೆಯಾಗಿ ಉಳಿಯುತ್ತದೆ. ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಿಗೂ ಸಹ ಈಗ ಆಯ್ಕೆಯ ನಂತರ ಜೆಜೆ ಕಾಯ್ದೆ, ಪೋಕ್ಸೋ ಕಾಯ್ದೆ ಬಗ್ಗೆ, ಮಕ್ಕಳ ಜತೆ ವ್ಯವಹರಿಸುವ ಬಗ್ಗೆ, ಬಾಲ್ಯ ವಿವಾಹದ ಬಗ್ಗೆ ಅವರ ಶಿಕ್ಷಣ ಹಕ್ಕುಗಳ ಬಗ್ಗೆ ಹೀಗೆ ವಿವಿಧ ವಿಚಾರಗಳಲ್ಲಿ ತರಬೇತಿಯನ್ನು ಕೊಟ್ಟರೂ ಇಂಥಾ ಮಕ್ಕಳನ್ನು ಎದುರುಗೊಳ್ಳುವುದು ಹೇಗೆ ಎಂಬ ತರಬೇತಿ ಕೊಡುವುದಿಲ್ಲ.

ಇದನ್ನೂ ಓದಿ: ಗಣಿನಾಡಿನಲ್ಲಿ ಮಂಗಳಮುಖಿಯರ ಬಾಳಿಗೆ ಬೆಳಕಾಯ್ತು ಚಿಕ್ಕಿ ಘಟಕ

ಪ್ರಾತಿನಿಧಿಕ ಚಿತ್ರ

 ಕರ್ನಾಟಕದಲ್ಲಿ  ಕಾನೂನು ಏನು  ಹೇಳುತ್ತದೆ?

2017ರಲ್ಲಿ ರಿಟ್ ಅರ್ಜಿಯೊಂದರ (604/2013 -ನ್ಯಾಷನಲ್ ಲೀಗಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಆ್ಯಂಡ್ ಅದರ್ಸ್) ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಮೇರೆಗೆ ಕರ್ನಾಟಕ ಸರ್ಕಾರ 2017ನೇ ಇಸವಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಬಗ್ಗೆ ಕರ್ನಾಟಕದ ಟ್ರಾನ್ಸ್​ಜೆಂಡರ್ ನೀತಿ ರೂಪಿಸಿದೆ. ಇದರ ಮುಖ್ಯ ಉದ್ದೇಶ ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಿ ಅವರಿಗೆ ಸಂವಿಧಾನದ ಹಕ್ಕುಗಳನ್ನು ಅನುಭವಿಸಲು ಅವಕಾಶ ಮಾಡಿಕೊಡುವುದು. ಲಿಂಗತ್ವ ತಾರತಮ್ಯ ಮಾಡದಂತೆ ತಡೆ, ಉದ್ಯೋಗ ಕೊಡುವ ವ್ಯವಸ್ಥೆ, ಮೂಲಭೂತ ಅವಶ್ಯಕತೆಗಳನ್ನು ಕೊಡಿಸುವುದು, ಅವರ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗೆ ಸಮಾಜದ ಮುಖ್ಯವಾಹಿನಿಯಲ್ಲಿ ನೆಮ್ಮದಿಯಿಂದ ಇರಲು ಸಹಾಯ ಮಾಡುವುದು. ಶಿಕ್ಷಕರು ಮತ್ತು ಸಹ ವಿದ್ಯಾರ್ಥಿಗಳು, ವೈದ್ಯರು ಮತ್ತು ಪೊಲೀಸರು ಇವರು ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳುವ ಹಾಗೆ ಒಂದು ವಾತಾವರಣವನ್ನು ಸೃಷ್ಟಿ ಮಾಡುವುದು. ಇವೆಲ್ಲವೂ ಸರ್ಕಾರದ ಜವಾಬ್ದಾರಿ ಎಂದು ಈ ನೀತಿಯು ಹೇಳುತ್ತದೆ. ಇಂಥ ಮಕ್ಕಳಿಗೆ ಪ್ರತ್ಯೇಕವಾಗಿ ಒಂದು ಪಾಲನಾ ಮಂದಿರ ವ್ಯವಸ್ಥೆ ಮಾಡಬೇಕು. ಅವರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಿಕೊಡಬೇಕು, ಪುನರ್ವಸತಿ ಕಲ್ಪಿಸಬೇಕು ಎಂಬುದೆಲ್ಲಾ ಈ ನೀತಿಯಲ್ಲಿದೆ.

ಈ ನೀತಿಗೆ 18ನೇ ಡಿಸೆಂಬರ್ 2017ರಂದು ಸರ್ಕಾರ ಸಹಿ ಹಾಕಿದೆ. ಸಹಿ ಬಿದ್ದ 12 ತಿಂಗಳೊಳಗೆ ಈ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕು ಎಂದು ಹೇಳಿದೆ. 2018ರ ಒಳಗೆ ಕಾನೂನು ರೀತ್ಯಾ ಅಂಥ ಮಕ್ಕಳಿಗೆ ರಕ್ಷಣೆ/ಪೋಷಣೆ ಕೊಡುವ ಸ್ಥಳದ ವ್ಯವಸ್ಥೆ ಆಗಬೇಕಿತ್ತು. ಆದರೆ ಈವರೆಗೆ, ಅಂಥ ಮಕ್ಕಳನ್ನು ನಿರ್ವಹಿಸುವ ಬಗ್ಗೆ ವಿಶೇಷ ತರಬೇತಿ ನೀಡಿಲ್ಲ. ಇನ್ನಾದರೂ ಈ ಕುರಿತು ಸಮಿತಿ ಸದಸ್ಯರಿಗೆ, ಪೊಲೀಸರಿಗೆ, ಬಾಲಕ-ಬಾಲಕಿಯರ ಮಂದಿರದ ಸಿಬ್ಬಂದಿಗೆ, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗೆ ಕಾನೂನು ತಿಳಿವಳಿಕೆ, ಮಕ್ಕಳ ಜತೆ ನಮ್ಮ ನಡವಳಿಕೆ ಹೇಗಿರಬೇಕು ಎಂಬ ಬಗ್ಗೆ ತಿಳಿಹೇಳಬೇಕಿದೆ.

ಅಂಥ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸುವುದರ ಬಗ್ಗೆ ನಮ್ಮ ಪಾಲನಾ ಮಂದಿರಗಳು ಯಾವುದೇ ವ್ಯವಸ್ಥೆ ಮಾಡಿಕೊಂಡಿಲ್ಲ. ಹಾಗಾಗಿ ಇವತ್ತಿಗೂ ಕೂಡಾ. ತೃತೀಯ ಲಿಂಗದ ಮಗು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಂದರೆ ಮುಜುಗರ ಅನುಭವಿಸುತ್ತದೆ. ಕಾನೂನು ರೀತ್ಯಾ ಎಲ್ಲರಿಗೂ ಸಮಾನ ಅವಕಾಶ ಇರಬೇಕು ಎಂಬ ಆದೇಶಗಳನ್ನು ನಾವು ಬರೆಯಬಹುದೇ ಹೊರತು, ಅಂಥ ಆದೇಶಗಳನ್ನು ಯಾವ ವ್ಯವಸ್ಥೆ ಮೂಲಕ ಜಾರಿಗೆ ತರಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.

(ನಿರೂಪಣೆ: ರಶ್ಮಿ ಕಾಸರಗೋಡು)

ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ ಪರಿಚಯ

ಅಂಜಲಿ ರಾಮಣ್ಣ ವೃತ್ತಿಯಲ್ಲಿ ವಕೀಲೆ. ಅಸ್ತಿತ್ವ ಲೀಗಲ್ ಟ್ರಸ್ಟ್ ಸಂಸ್ಥಾಪಕರಾಗಿರುವ ಇವರು ಮಹಿಳೆ ಹಾಗೂ ಮಕ್ಕಳ ಹಕ್ಕುಗಳು, ಶಿಕ್ಷಣ, ಕಾನೂನು, ಆರ್ಥಿಕ ಪ್ರಗತಿಗೆ ನೆರವು ಮತ್ತು ಎಚ್ಐವಿ ಪೀಡಿತ ಮಹಿಳೆಯರ ಸಮೂಹದಲ್ಲಿ ಜಾಗೃತಿ ಮೂಡಿಸಲು ಹೋರಾಟ ಮಾಡುತ್ತಿದ್ದಾರೆ. ಕಾಯುವೆಯಾ ಕಾಲ (ಕವನ ಸಂಕಲನ), ರಶೀತಿಗಳು (ಪ್ರಬಂಧಗಳ ಸಂಕಲನ), ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ‘ಚೌಕಟ್ಟು’,  ಭ್ರೂಣಹತ್ಯೆ ವಿರೋಧದ ‘ಹೂವಿನ ಹಾಡು’, ಅರುಣಾಚಲದ ಪ್ರವಾಸ ಕಥನ ‘ಬೆಳಕಿನ ಸೆರಗು’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

ಕೆ.ನೀಲಾ ಸುದೀರ್ಘ ಬರಹ | ನಮ್ಮದೇ ಬೆರಳಿನಿಂದ ನಮ್ಮ ಕಣ್ಣನ್ನೇ ಕೀಳಿಸುವ ಹುನ್ನಾರ

Published On - 5:56 pm, Fri, 18 December 20

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್