
ಬೆಂಗಳೂರು, (ಸೆಪ್ಟೆಂಬರ್ 29): ನೇಮಕಾತಿಗಳಲ್ಲಿ 3 ವರ್ಷಗಳ ವಯೋಮಿತಿ ಸಡಿಲಿಕೆ (3 year Age relaxation) ಮಾಡಿ ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ. ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಒಂದು ಬಾರಿಗೆ ಅನ್ವಯವಾಗುವಂತೆ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಇಂದು (ಸೆಪ್ಟೆಂಬರ್ 29) ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಆಯಾ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 3 ವರ್ಷಗಳ ಸಡಿಲಿಸಲಾಗಿದ್ದು, ಆದೇಶ ಹೊರಡಿಸಿದ ದಿನಾಂಕದ ನಂತರ ಮುಂದಿನ ದಿನಾಂಕ 31.12.2027ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳಂತೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.
ಈಗ 5 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ ಜನಪ್ರತಿನಿಧಿಗಳು, ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕಿದ ಪರಿಣಾಮ ಸರ್ಕಾರ ಇದೀಗ 3 ವರ್ಷಗಳ ಸಡಿಲಿಕೆ ಮಾಡಿದೆ. ಈ ವಯೋಮಿತಿ ಸಡಿಲಿಕೆ 2027 ರ ಡಿಸೆಂಬರ್ 31ರೊಳಗೆ ಸರ್ಕಾರ ಹೊರಡಿಸುವ ಎಲ್ಲ ನೇರ ನೇಮಕಾತಿಗಳಿಗೂ ಕೇವಲ ಒಂದು ಬಾರಿ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೂ ಅನ್ವಯಿಸಲಿದೆ.
2019ರಿಂದಲೂ ಕೋವಿಡ್ ಹಾಗೂ ಮತ್ತಿತರೆ ಕಾರಣಗಳಿಂದ ನೇರನೇಮಕಾತಿಗಳಿಗೆ ಸರ್ಕಾರ ಅಧಿಸೂಚನೆ ಹೊರಡಿಸಲಿಲ್ಲ. ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತಿದ್ದಾರೂ ನೇಮಕಾತಿ ಆದೇಶ ಇನ್ನೂ ನೀಡಿಲ್ಲ. ಇದರಿಂದ ಸರ್ಕಾರಿ ಕೆಲಸವನ್ನೇ ನೆಚ್ಚಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಂಡಿರುವ ಲಕ್ಷಾಂತರ ಯುವಕರು ವಯೋಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದರು.