ಬೆಂಗಳೂರು: ಸಾರಿಗೆ ಸಂಸ್ಥೆಯಿಂದ ರಿಯಾಯಿತಿಯಲ್ಲಿ ನೀಡುವ ಬಸ್ಪಾಸ್ನ ಬಾಕಿ ಹಣ 3400 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಬೇಕಿದ್ದು, ಅದರಲ್ಲಿ ಸಾರಿಗೆ ನೌಕರರ ಸಂಬಳಕ್ಕಾಗಿ ಈಗಾಗಲೇ 1920 ಕೋಟಿ ಬಿಡುಗಡೆ ಮಾಡಿದೆ. ಆದರೆ ಉಳಿದ ಬಾಕಿ ಹಣವನ್ನು ಇನ್ನೂ ಬಿಡುಗಡೆ ಮಾಡಬೇಕಿದೆ. ಸರ್ಕಾರ ಸಾರಿಗೆ ಸಿಬ್ಬಂದಿಗಳನ್ನು ಮಾತುಕತೆಗೆ ಕರೆಯುವುದಿಲ್ಲ ಎಂದು ಮೊಂಡುತನ ತೋರುತ್ತಿದೆ. ಸರ್ಕಾರದ ಇಂತಹ ಮೊಂಡುತನ ಹೆಚ್ಚು ದಿನ ನಡೆಯುವುದಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಎಚ್ಚರಿಕೆ ನೀಡಿದರು.
ಸಿಎಂ ಯಡಿಯೂರಪ್ಪ ಅವರ ಮಾತಿಗೆ ಹೆಚ್ಚು ಮಹತ್ವ ಕೊಡಬೇಕಿಲ್ಲ. ನಾವು ಸಂಘಟಿತರಾಗಿರಬೇಕು. ಸಂಘಟಿತರಾಗಿದ್ದಾಗ ಬೇಡಿಕೆಯನ್ನು ಸಾಧಿಸಿಕೊಳ್ಳಬಹುದು. ಸಂಘಟನೆ ಬಲಿಷ್ಠವಾಗಿದ್ದರೆ ಸರ್ಕಾರವೇ ಕೆಲಸ ಮಾಡಿಕೊಡುತ್ತದೆ ಎಂದು ಅವರು ಸಾರಿಗೆ ಸಿಬ್ಬಂದಿ ಮತ್ತು ಸರ್ಕಾರದ ನಡುವಿನ ಹಗ್ಗ ಜಗ್ಗಾಟದ ಕುರಿತು ಅವರು ವಿವರಿಸಿದರು.
ಇತ್ತ ಇಂದೂ ಸಾರಿಗೆ ಸಿಬ್ಬಂದಿ ಮುಷ್ಕರ ಮುಂದುವರೆದಿದೆ. ಬೆಂಗಳೂರಿನ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್ ಮೇಲೆ ಕಲ್ಲೆಸೆತ ನಡೆಸಲಾಗಿದೆ. ಬೆಳಗ್ಗೆ 8.30 ರ ಸುಮಾರಿಗೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದಿದ್ದ ಬಸ್ ಪ್ರಯಾಣಿಕರನ್ನು ಇಳಿಸುವ ವೇಳೆ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ. ಕಲ್ಲೆಸೆತದಿಂದ ಬಸ್‌ನ ಹಿಂಬದಿಯ ಗಾಜು ಸಂಪೂರ್ಣ ಪುಡಿಪುಡಿಯಾಗಿದೆ.
ಮುಷ್ಕರದ 9ನೇ ದಿನವಾದ ಇಂದಿನವರೆಗೆ ಸಾರಿಗೆ ಸಿಬ್ಬಂದಿಗಳ 4 ನಿಗಮದ 62 ಬಸ್ಸುಗಳಿಗೆ ಹಾನಿಯಾಗಿದೆ. KSRTC 36, BMTC 3, NEKRTC 20, NWKRTC 3 ಬಸ್ಸುಗಳಿಗೆ ಹಾನಿ ಉಂಟಾಗಿದೆ.
ಇದನ್ನೂ ಓದಿ: ಸಾರಿಗೆ ನೌಕರರ ಪತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡ ರಾಕಿಂಗ್ ಸ್ಟಾರ್.. ಮುಷ್ಕರಕ್ಕೆ ಕೈ ಜೋಡಿಸುತ್ತಾರಾ ಯಶ್?