
ಬೆಂಗಳೂರು, (ಜನವರಿ 28): ಅವಧಿ ಪೂರ್ಣಗೊಂಡಿದ್ದ ಕರ್ನಾಟಕದ ವಿವಿಧ 25 ನಿಗಮ ಮಂಡಳಿ (Karnataka Boards And Corporations) ಅಧ್ಯಕ್ಷರ ಪದಾವಧಿಯನ್ನು ಮುಂದುವರೆಸಲಾಗಿದೆ. 2024, ಜನವರಿ 26ರಿಂದ 2 ವರ್ಷಗಳವರೆಗೆ ವಿವಿಧ ನಿಗಮ ಮಂಡಳಿಗಳಿಗೆ ಸಚಿವ ಸಂಪುಟ ಸ್ಥಾನ ಮಾನಗಳೊಂದಿಗೆ 25 ಕಾಂಗ್ರೆಸ್ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು.ಈಗ ನಿಗಮ ಮಂಡಳಿ ಅಧ್ಯಕ್ಷರ ಅಧಿಕಾರವಧಿ ಅಂತ್ಯವಾಗಿದ್ದರಿಂದ ಗಾದಿ ಕೈತಪ್ಪುವ ಆತಂಕದಲ್ಲಿದ್ದರು. ಆದ್ರೆ, ಇದೀಗ ಈ ಹಿಂದೆ ನೇಮಕಗೊಂಡಿದ್ದವರನ್ನೇ ಮುಂದುವರಿಸಲು ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಮುಖ್ಯವಾಗಿ ಮುಂದಿನ ಆದೇಶದವರೆಗೆ ಎಂದು ಉಲ್ಲೇಖಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಯಾವಾಗ ಬೇಕಿದ್ದರೂ ಸ್ಥಾನಕ್ಕೆ ಕುತ್ತು ಬರಹುದು.
ಈ ಹಿಂದೆ ಎರಡು ವರ್ಷಗಳವರೆಗೆ ಅಥವಾ ಮುಂದಿನ ಆದೇಶವರೆಗೆ ಶಾಸಕರನ್ನು ವಿವಿಧ ನಿಗಮಗಳ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈಗಿನ ಆದೇಶದಲ್ಲಿ ಮುಂದಿನ ಆದೇಶವರೆಗೆ ಎಂಬ ಸಾಲು ಉಲ್ಲೇಖಿಸಿದ್ದು, ಅಚ್ಚರಿಕೆ ಕಾರಣವಾಗಿದೆ. ಇದರ ಅರ್ಥ ಯಾವಾಗ ಬೇಕಾದರೂ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನಕ್ಕೆ ಕುತ್ತು ಬರಬಹುದು. ಸದ್ಯ ಪಕ್ಷದೊಳಗೆ ಒಂದೆಡೆ ಸಚಿವ ಸಂಪುಟ ಪುನಾರಚನೆ, ಇನ್ನೊಂದೆಡೆ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗಿವೆ. ಇದರಿಂದಈಗಾಗಲೇ ಎರಡು ವರ್ಷ ಪೂರೈಸಿರುವ ನಿಗಮ ಮಂಡಳಿ ಅಧ್ಯಕ್ಷರು ಸರ್ಕಾರ ಇರುವವರೆಗೆ ಮುಂದುವರೆಯುತ್ತಾರೋ ಅಥವಾ ಮಧ್ಯದಲ್ಲೇ ಸರ್ಕಾರ ಕೈಬಿಡುತ್ತದೆಯೋ ಎಂಬ ಕುತೂಹಲ ಮೂಡಿಸಿದೆ. ಒಂದು ವೇಳೆ ಸಂಪುಟ ಪುನಾರಚನೆಯಾದರೆ ನಿಗಮ ಮಂಡಳಿ ಅಧ್ಯಕ್ಷರಿಗೆ ಮುಂಬಡ್ತಿ ಅಂದರೆ ಸಚಿವ ಸ್ಥಾನ ನೀಡಿ ಹೊಸ ಮುಖಗಳಿಗೆ ನಿಗಮ ಮಂಡಳಿ ನೀಡುವ ಸಾಧ್ಯತೆಗಳು ಇರಬಹುದು.
ಸಚಿವ ಸಂಪುಟದಲ್ಲಿ ಅವಕಾಶ ಸಿಗದ ಶಾಸಕರಿಗೆ ನಿಗಮ ಮಂಡಳಿ ನೀಡಿ ತಲೆಸವರಲಾಗಿತ್ತು. ಇನ್ನು ತಮಗೂ ನಿಗಮ ಮಂಡಳಿ ಬೇಕೆಂದು ಪಟ್ಟು ಹಿಡಿದವರೆಗೆ ಇನ್ನುಳಿದ ಅವಧಿಗೆ ಮಾಡೋಣ ಎಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅಂದು ಬೀಸೋ ದೊಣ್ಣೆಯಿಂದ ಪಾರಾಗಿದ್ದರು. ಆದ್ರೆ, ಇದೀಗ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಿ ಆದೇಶ ಹೊರಡಿಸಿದ್ದರಿಂದ ನಿಗಮ ಮಂಡಳಿ ಕನಸು ಕಾಣುತ್ತಿದ್ದ ಕೆಲ ನಾಯಕರಿಗೆ ನಿರಾಸೆಯಾಗಿದ್ದು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಮುಂದಿನ ನಡೆ ಏನು ಎನ್ನುವುದು ಕಾದುನೋಡಬೇಕಿದೆ. ಇನ್ನು ಮುಂದಿನ ಆದೇಶ ಎಂದು ಉಲ್ಲೇಖಿಸಿದ್ದರಿಂದ ಆಕಾಂಕ್ಷಿಗಳು ಮುಂದೆ ಸಿಗಬಹುದೇನೋ ಎನ್ನುವ ಆಸೆ ಇಟ್ಟುಕೊಳ್ಳಬಹುದು ಅಷ್ಟೇ.