
ಬೆಂಗಳೂರು, ಸೆಪ್ಟೆಂಬರ್ 25: ಖ್ಯಾತ ಸಾಹಿತಿ, ಕಾದಂಬರಿಕಾರ ಎಸ್ಎಲ್ ಭೈರಪ್ಪ (SL Bhyrappa) ಅವರ ಸ್ಮಾರಕ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಹಸಿರು ನಿಶಾನೆ ತೋರಿದೆ. ಈ ಕುರಿತು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದರು. ಅಪಾರ ಓದುಗರನ್ನ ಸಂಪಾದಿಸಿದವರು ಭೈರಪ್ಪನವರು. ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಅವರದ್ದು ಜಗತ್ ಪ್ರಸಿದ್ಧ ಆಗಿರುವಂತಹ ಕಾದಂಬರಿಗಳು. ಅವರ, ಕೆಲವು ಕಾದಂಬರಿಗಳನ್ನು ನಾನು ಓದಿದ್ದೇನೆ. ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಿದ್ದರಾಮಯ್ಯ ಹೇಳಿದರು.
ಭೈರಪ್ಪ ಅವರು ಹೆಚ್ಚಿನ ಸಮಯ ಮೈಸೂರಿನಲ್ಲೇ ಇದ್ದವರು. ಹೀಗಾಗಿ ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಭೈರಪ್ಪ ಅವರ ಕಾದಂಬರಿಗಳು ಅನೇಕ ಭಾಷೆಗಳಿಗೆ ಅನುನಾದಗೊಂಡಿವೆ. ಬಹುಶಃ ಕನ್ನಡದ ಇತರ ಯಾವ ಸಾಹಿತಿಯ ಕೃತಿಗಳೂ ಅಷ್ಟೊಂದು ಸಂಖ್ಯೆಯಲ್ಲಿ ಬೇರೆ ಭಾಷೆಗಳಿಗೆ ಅನುವಾದಗೊಂಡಿಲ್ಲ. ಸರಸ್ವತಿ ಸಮ್ಮಾನ್ ಪುರಸ್ಕೃತ ಭೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ಕೂಡ ಸಿಗಬೇಕಿತ್ತು. ಅವರು ಅದಕ್ಕೆ ಅರ್ಹರಾಗಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ಅಂತಿಮ ದರ್ಶನ ಪಡೆದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಭೈರಪ್ಪ ಅವರ ಪತ್ನಿ ಹಾಗೂ ಮಕ್ಕಳ ಜತೆ ಕುಳಿತುಕೊಂಡು ಮಾತನಾಡಿ ಅವರಿಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ: 1 ವಾರ ಬಾನು ಮುಷ್ತಾಕ್ ಮನೆಯಲ್ಲಿ ತಂಗಿದ್ದ ಭೈರಪ್ಪ, ಮಸೀದಿಗೂ ಹೋಗಿದ್ರು: ಕುತೂಹಲಕಾರಿ ಸಂಗತಿಗಳು ಇಲ್ಲಿವೆ
ಎಸ್ಎಲ್ ಭೈರಪ್ಪ ಬುಧವಾರ ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಸದ್ಯ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಅಂತಿಮ ದರ್ಶನ ನಡೆಯುತ್ತಿದ್ದು, ಮಧ್ಯಾಹ್ನದ ನಂತರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮೈಸೂರಿಗೆ ಕೊಂಡೊಯ್ಯಲಾಗುತ್ತದೆ. ಸಂಜೆ ಮೈಸೂರಿನ ಕಲಾಮಂದಿರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಇದೆ. ಶುಕ್ರವಾರ ಮಧ್ಯಾಹ್ನ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Thu, 25 September 25