ತೀಟೆ ತೀರಿಸಿಕೊಳ್ಳಲು ವಿದ್ಯಾರ್ಥಿನಿಯರಿಗೆ ಫಾರಿನ್ ಟ್ರಿಪ್ ಆಫರ್: ದೆಹಲಿ ಚೈತನ್ಯಾನಂದ ಸ್ವಾಮೀಜಿಯ ಕಾಮ ಪುರಣ ಬಟಾಬಯಲು
ದೆಹಲಿಯ ಪ್ರಸಿದ್ಧ ಸಂಸ್ಥೆ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ನಿರ್ದೇಶಕ ಹಾಗೂ ಆಶ್ರಮದ ಮುಖ್ಯಸ್ಥರಾಗಿದ್ದ ಚೈತನ್ಯಾನಂದ ಸರಸ್ವತಿ ವಿರುದ್ಧ ಲೈಂಗಿಕ ಕಿರಕುಳ, ಅತ್ಯಾಚಾರದ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿಯರಿಗೆ ವಿದೇಶ ಪ್ರವಾಸದ ಆಮಿಷವೊಡ್ಡಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಹಾಗೂ 16 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ನವದೆಹಲಿ, ಸೆಪ್ಟೆಂಬರ್ 25: ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಪ್ರತಿಷ್ಠಿತ ಸಂಸ್ಥೆ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ನಿರ್ದೇಶಕ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ (Chaitanyananda Saraswati) ವಿರುದ್ಧ ಗಂಭೀರವಾದ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಆರೋಪ ದಾಖಲಾಗಿದೆ. ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ಕರ್ನಾಟಕದ (Karnataka) ಶಾರದಾ ಮಠದ ಅಧೀನ ಸಂಸ್ಥೆಯಾಗಿದ್ದು, ಸದ್ಯ ಸ್ವಾಮೀಜಿಯನ್ನು ಆರೋಪ ಕೇಳಿಬಂದ ಕೂಡಲೇ ವಜಾಗೊಳಿಸಲಾಗಿದೆ. ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕೇಸ್ ದಾಖಲಾಗಿದೆ.
ಈ ಬಗ್ಗೆ ನೈಋತ್ಯ ದೆಹಲಿ ಎಸಿಪಿ ಐಶ್ವರ್ಯಾ ಸಿಂಗ್ ಮಾಹಿತಿ ನೀಡಿದ್ದು, ಸ್ವಾಮೀಜಿ ವಿರುದ್ಧ ಉತ್ತರದಲ್ಲಿ ಲೈಂಗಿಕ ಕಿರುಕುಳದ ಒಂದು ದೂರು ಬಂದಿತ್ತು. ನಾವು ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದೇವೆ. ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಒಂದೆರಡಲ್ಲ ಚೈತನ್ಯಾನಂದ ಸ್ವಾಮೀಜಿಯ ಕಾಮಲೀಲೆ!
ಶಾರದಾ ಇನ್‌ಸ್ಟಿಟ್ಯೂಟ್‌ನಲ್ಲಿ ವ್ಯಾಸಂಗ ಮಾಡುತ್ತಿರುವ 32 ವಿದ್ಯಾರ್ಥಿನಿಯರ ಪೈಕಿ ಸುಮಾರು 16 ವಿದ್ಯಾರ್ಥಿನಿಯರಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಸ್ವಾಮೀಜಿ ಮೇಲಿದೆ. ವಿದ್ಯಾರ್ಥಿನಿಯರನ್ನು ವ್ಯವಸ್ಥಿತವಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ತಮ್ಮ ಕೋಣೆಗೆ ಕರೆಸಿಕೊಳ್ಳುತ್ತಿದ್ದ ಸ್ವಾಮೀಜಿ, ನಾನು ಹೇಳಿದಂತೆ ಕೇಳಿಲ್ಲ ಅಂದರೆ ಕಡಿಮೆ ಅಂಕ ಕೊಡಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ಅಶ್ಲೀಲ ವಾಟ್ಸ್ಆ್ಯಪ್ ಸಂದೇಶ, ಸಮ್ಮತಿ ಇಲ್ಲದೆ ಲೈಂಗಿಕ ಸಂಪರ್ಕ
ಅಶ್ಲೀಲ ವಾಟ್ಸಾಪ್ ಸಂದೇಶ ಮತ್ತು ಸಮ್ಮತಿಯಿಲ್ಲದ ಲೈಂಗಿಕ ಸಂಪರ್ಕ ಹೊಂದುತ್ತಿದ್ದ ಆರೋಪವೂ ಸ್ವಾಮೀಜಿ ಮೇಲಿದೆ. ಕೆಲವರಿಗೆ ವಿದೇಶ ಪ್ರವಾಸದ ಭರಸೆ ನೀಡಿ ಲೈಂಗಿಕ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಶೃಂಗೇರಿ ಮಠದ ಆಡಳಿತಾಧಿಕಾರಿಯಿಂದಲೂ ದೂರು
ವಿದ್ಯಾರ್ಥಿನಿಯರು ಮಾತ್ರವಲ್ಲದೆ, ಶೃಂಗೇರಿ ಮಠದ ಆಡಳಿತಾಧಿಕಾರಿ ಸಹ ಸ್ವಾಮೀಜಿ ವಿರುದ್ಧ ದೂರು ನೀಡಿದ್ದರು ಎನ್ನಲಾಗಿದೆ. ಇದೀಗ ಪಟಿಯಾಲ ಹೌಸ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲೂ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ.
ಸ್ವಾಮೀಜಿಯ ವಜಾಗೊಳಿಸಿದ ಶೃಂಗೇರಿ ಮಠದ ಆಡಳಿತ
ವಿಚಾರ ತಿಳಿದ ತಕ್ಷಣ ಶೃಂಗೇರಿ ಮಠದ ಆಡಳಿತ ತಕ್ಷಣ ಸ್ವಾಮೀಜಿಯನ್ನು ವಜಾ ಮಾಡಿದೆ. ಕೇಸ್ ದಾಖಲಾಗುತ್ತಿದ್ದಂತೆಯೇ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಪರಾರಿ ಆಗಿದ್ದಾರೆ. ಪೊಲೀಸರು ತಲಾಶ್ ನಡೆಸಿದ್ದಾರೆ. ಇನ್ನು ಶಾರದಾ ಇನ್‌ಸ್ಟಿಟ್ಯೂಟ್‌ನ ನೆಲಮಾಳಿಗೆಯಲ್ಲಿ ವೋಲ್ವೋ ಕಾರು ಪತ್ತೆಯಾಗಿದ್ದು ನಕಲಿ ನಂಬರ್ ಪ್ಲೇಟ್ ಹೊಂದಿದೆ. ಈ ಬಗ್ಗೆ ಪ್ರತ್ಯೇಕ ದೂರು ದಾಖಲಾಗಿದೆ. ಆರೋಪಿ ವಿದೇಶಕ್ಕೆ ಪಲಾಯನ ಮಾಡುವುದನ್ನು ತಡೆಯಲು ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Thu, 25 September 25



