ಬೆಂಗಳೂರು, ಮಾರ್ಚ್ 5: ಕ್ರೀಡಾಂಗಣಗಳನ್ನು (Stadiums) ಅನುಮತಿ ಇಲ್ಲದೆ ದೀರ್ಘಾವಧಿಗೆ ಬಾಡಿಗೆ ನೀಡುವಂತಿಲ್ಲ. ಅಥವಾ ಇತರೆ ರೀತಿಯಲ್ಲಿ ಕ್ರೀಡಾಂಗಣಗಳನ್ನು ಪರಭಾರೆ ಮಾಡುವಂತಿಲ್ಲ ಎಂದು ಕರ್ನಾಟಕ ಸರ್ಕಾರ (Karnataka Government) ಆದೇಶಿಸಿದೆ. ಈ ಸಂಬಂಧ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ (The Department of Youth Empowerment & Sports) ಸುತ್ತೋಲೆ ಹೊರಡಿಸಲಾಗಿದ್ದು, ಸರ್ಕಾರದ ಆದೇಶದನ್ವಯ ಕ್ರೀಡಾಂಗಣ ಬಳಕೆ ನೀತಿಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು ಉಲ್ಲೇಖಿಸಿದೆ.
ಸರ್ಕಾರದ ಆದೇಶದನ್ವಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕ್ರೀಡಾಂಗಣ ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಕ್ರೀಡಾಂಗಣಗಳ ದೈನಂದಿನ ನಿರ್ವಹಣೆಗೆ ಜಿಲ್ಲಾ ಕ್ರೀಡಾಂಗಣಗಳ ನಿರ್ವಹಣಾ ಸಮಿತಿಗಳನ್ನು ರಚಿಸಿ ಆದೇಶಿಸಲಾಗಿದ್ದು, ಸಾಮಾನ್ಯ ಮಾರ್ಗಸೂಚಿಗಳ ಕುರಿತು ಗಮನ ಸೆಳೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಲಾಖಾ ಆಸ್ತಿಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಚಟುವಟಿಕೆಗಳು ನಡೆದಲ್ಲಿ ಅಥವಾ ಇಲಾಖಾ ಆಸ್ತಿಗಳನ್ನು ಇತರರು ಅತಿಕ್ರಮಿಸಿದಲ್ಲಿ ದುರ್ಬಳಕೆ ಮಾಡಿಕೊಂಡಲ್ಲಿ ಅವುಗಳನ್ನು ತಡೆಯುವುದು ಹಾಗೂ ತಕ್ಷಣ ಇಲಾಖಾ ಮುಖ್ಯಸ್ಮರ ಗಮನಕ್ಕೆ ತರುವುದು ಪ್ರತಿಯೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ. ಸರ್ಕಾರದ ಆದೇಶಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಮುದಾಯದ ಶಾಸಕರ ಸಭೆ: ಸಿದ್ಧವಾಯ್ತು ಬೇಡಿಕೆಗಳ ಪಟ್ಟಿ
Published On - 11:31 am, Wed, 5 March 25