ಮಣಿಪಾಲ: ಸಿನಿಮಾ ಸ್ಟೈಲ್ನಲ್ಲಿ ಪೊಲೀಸರ ರೋಚಕ ಚೇಸಿಂಗ್, ಗರುಡ ಗ್ಯಾಂಗ್‌ನ ಕ್ರಿಮಿನಲ್ ಅರೆಸ್ಟ್
ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದ ರೋಚಕ ಪೊಲೀಸ್ ಕಾರ್ಯಾಚರಣೆಯಲ್ಲಿ ಗರುಡ ಗ್ಯಾಂಗ್‌ನ ಕುಖ್ಯಾತ ಕ್ರಿಮಿನಲ್ ಇಸ್ಸಾಕ್ನ ಬಂಧನವಾಗಿದೆ. ಪೊಲೀಸರು ಹಿಂಬಾಲಿಸುತ್ತಿದ್ದಾಗ, ಇಸ್ಸಾಕ್ ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದನು. ಈ ವೇಳೆ ಇಸ್ಸಾಕ್ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಆದರೆ, ಚುರುಕುತನದಿಂದ ಮಣಿಪಾಲ ಪೊಲೀಸರು ಇಸ್ಸಾಕ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಮಣಿಪಾಲದಲ್ಲಿ ಸಂಚಲನ ಸೃಷ್ಟಿಸಿದೆ.

ಉಡುಪಿ, ಮಾರ್ಚ್ 05: ಮಣಿಪಾಲದಲ್ಲಿ (Manipal) ಸಿನಿಮಿಯ ಸ್ಟೈಲ್ನಲ್ಲಿ ಪೊಲೀಸರ (Police) ರೋಚಕ ಕಾರ್ಯಚರಣೆಯೊಂದು ನಡೆದಿದೆ. ಪ್ರಕರಣವೊಂದರ ಆರೋಪಿಯನ್ನು ಪೊಲೀಸರು ಚೆಸಿಂಗ್ ಮಾಡುವ ವೇಳೆ ಸರಣಿ ಅಪಘಾತಗಳು ಸಂಭವಿಸಿದೆ. ಆದರೂ, ಮಣಿಪಾಲ ಪೋಲೀಸರ ಸಮಯ ಪ್ರಜ್ಞೆಯಿಂದ ಕುಖ್ಯಾತ ಗ್ಯಾಂಗ್‌ನ ಸದಸ್ಯನ ಬಂಧನವಾಗಿದೆ.
ಕುಖ್ಯಾತ ಗರುಡ ಗ್ಯಾಂಗ್‌ನ ದಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಸ್ಸಾಕ್ನ ಬೆನ್ನು ಬಿದ್ದಿದ್ದ ಬೆಂಗಳೂರಿನ ನೆಲಮಂಗಲ ಠಾಣೆ ಪೊಲೀಸರು, ಆರೋಪಿ ಜಾಡು ಹಿಡಿದು ಉಡುಪಿಯ ಮಣಿಪಾಲಕ್ಕೆ ತೆರಳಿದ್ದರು. ಈ ವೇಳೆ ಕಾರಿನಲ್ಲಿ ಓರ್ವ ಯುವತಿಯೊಂದಿಗೆ ಜಾಲಿ ಮಾಡಲು ಮಣಿಪಾಲಕ್ಕೆ ಬಂದಿದ್ದ ಇಸ್ಸಾಕ್ ಎಂಬ ನಟೋರಿಯಸ್ ಕ್ರಿಮಿನಲ್ ಪೊಲೀಸರನ್ನು ಕಂಡ ಕೂಡಲೇ ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ವೇಗವಾಗಿ ಗಾಡಿ ಚಲಾಯಿಸಿ ನಾಲ್ಕು ಕಾರು ಹಾಗು ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ, ನೆಲಮಂಗಲ ಪೊಲೀಸರು ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದ ತಂಡ ಆರೋಪಿಯನ್ನ ಸಾಹಸಮಯವಾಗಿ ಚೇಸ್ ಮಾಡಿ ಮಣಿಪಾಲದ ಮಣ್ಣಪಳ್ಳದ ಬಳಿ ಕಾರಿನೊಂದಿಗೆ ಸೆರೆ ಹಿಡಿದಿದ್ದಾರೆ. ಒಂದಿಷ್ಟು ಸೆಕೆಂಡ್ ಲೇಟ್ ಆಗಿದ್ದರೂ, ಕ್ರಿಮಿನಲ್ ಇಸ್ಸಾಕ್ ಮಿಸ್ ಆಗುತ್ತಿದ್ದ. ಆದರೆ, ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಅವರ ತ್ವರಿತ ಕಾರ್ಯಾಚರಣೆ ಫಲ ನೀಡಿದೆ.
ಗರುಡ ಗ್ಯಾಂಗ್, ಈ ಹೆಸರು ಕೇಳಿದ್ರೆ ಉಡುಪಿ-ಮಂಗಳೂರು ಕಡೆ ಯಾರಿಗೂ ನಿದ್ದೆ ಬರಲ್ಲ. ಕಳ್ಳತನ, ಮಾದಕವಸ್ತು ಸರಬರಾಜು, ಕೊಲೆ ಕೇಸುಗಳಲ್ಲಿ ತೊಡಗಿಸಿಕೊಂಡಿರುವ ಈ ಗ್ಯಾಂಗ್‌ನ ಹಿಂದೆ ಇಸ್ಸಾಕ್ ತರಹದ ಕ್ರಿಮಿನಲ್ಸ್ ಇದ್ದಾರೆ. ಆದರೆ ಮಣಿಪಾಲ ಪೊಲೀಸರ ಮುಂದೆ ಈ ಆಟ ನಡೆದಿಲ್ಲ ಈ ಸಲ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಉಷ್ಣ ಅಲೆ: ಏನೇನು ಮುನ್ನೆಚ್ಚರಿಕೆ ವಹಿಸಬೇಕು? ನೀವು ಮಾಡಬೇಕಾದ್ದಿಷ್ಟು…
ಒಟ್ಟಾರೆಯಾಗಿ ಹಿಂದೆಂದೂ ಕಾಣದ ರೀತಿಯಲ್ಲಿ ರಣರೋಚಕ ಪೊಲೀಸ್ ಕ್ರಿಮಿನಲ್ ಚೇಸಿಂಗ್ ಕಂಡು ಮಣಿಪಾಲದ ಜನ ದಂಗಾಗಿದ್ದಾರೆ. ಈಗಾಗಲೇ ನಟೋರಿಯಸ್ ಕ್ರಿಮಿನಲ್ ಹಾಗೂ ಆತನ ಸ್ನೇಹಿತೆ ಪೋಲೀಸರ ವಶದಲ್ಲಿದ್ದು ವಿಚಾರಣೆ ಮುಂದುವರೆದಿದೆ.