ಆನೆ ದಾಳಿಗೆ ಬಲಿಯಾದ ವಯನಾಡ್ ವ್ಯಕ್ತಿಗೆ ಕರ್ನಾಟಕದ ಪರಿಹಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

|

Updated on: Feb 20, 2024 | 9:24 AM

ಕೇರಳದ ವಯನಾಡಿನಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಿರುವುದು ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ ತೆರಿಗೆದಾರರ ಹಣ ದುರ್ಬಳಕೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕಿಸಿದ್ದಾರೆ.

ಆನೆ ದಾಳಿಗೆ ಬಲಿಯಾದ ವಯನಾಡ್ ವ್ಯಕ್ತಿಗೆ ಕರ್ನಾಟಕದ ಪರಿಹಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ಬಿವೈ ವಿಜಯೇಂದ್ರ
Follow us on

ಬೆಂಗಳೂರು, ಫೆಬ್ರವರಿ 20: ಕರ್ನಾಟಕದಲ್ಲಿ (Karnataka) ಸೆರೆಸಿಕ್ಕಿದ್ದು ಎನ್ನಲಾದ ಆನೆಯೊಂದು ವಯನಾಡಿನಲ್ಲಿ (Wayanad) ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವುದಕ್ಕೆ ಇಲ್ಲಿನ ಸರ್ಕಾರ 15 ಲಕ್ಷ ರೂ. ಪರಿಹಾರ ನೀಡಿರುವುದಕ್ಕೆ ಬಿಜೆಪಿ (BJP) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ತೆರಿಗೆದಾರರ ಹಣದ ದುರ್ಬಳಕೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡ್ ಸಂಸದರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.

ಕರ್ನಾಟಕದಾದ್ಯಂತ ಬರಗಾಲ ಮತ್ತು ನೂರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಮಧ್ಯೆ, ಕಾಂಗ್ರೆಸ್ ಪಕ್ಷದ ಸರ್ಕಾರವು ರಾಜ್ಯದ ತುರ್ತು ಅಗತ್ಯಗಳನ್ನು ಪರಿಹರಿಸುವ ಬದಲು ನಾಚಿಕೆಬಿಟ್ಟು ರಾಹುಲ್ ಗಾಂಧಿಯನ್ನು ಸಂತೋಷಪಡಿಸಲು ಆದ್ಯತೆ ನೀಡುತ್ತದೆ. ಕಾಂಗ್ರೆಸ್ ಹೈಕಮಾಂಡ್‌ನ ದುರಾಸೆಯನ್ನು ಪೂರೈಸಲು ಕರ್ನಾಟಕದ ತೆರಿಗೆ ಪಾವತಿದಾರರ ಹಣವನ್ನು ಮತ್ತು ರಾಜ್ಯದ ಖಜಾನೆಯನ್ನು ಅನೈತಿಕವಾಗಿ ಲೂಟಿ ಮಾಡಿದ್ದಕ್ಕೆ ಸಿದ್ದರಾಮಯ್ಯ ಮತ್ತು ಅವರ ಸಂಗಡಿಗರು ಹೊಣೆಯಾಗಬೇಕು ಎಂದು ವಿಜಯೇಂದ್ರ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಟೀಕಿಸಿದ್ದಾರೆ.

ವಿಜಯೇಂದ್ರ ಎಕ್ಸ್ ಸಂದೇಶ


ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಹೋರಾಟದ ನಡುವೆ, ರಾಜ್ಯದ ಬೊಕ್ಕಸದ ಪ್ರತಿ ರೂಪಾಯಿಯನ್ನು ಲೂಟಿ ಮಾಡುವಲ್ಲಿ ಅದರ ಮಂತ್ರಿಗಳು ಯಾವುದೇ ಮುಲಾಜು ತೋರುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.

ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗಳಿಗೆ ಸರ್ಕಾರದ ವತಿಯಿಂದ ನೀಡುವ ಪರಿಹಾರವನ್ನು ಕೇರಳದ ವ್ಯಕ್ತಿಗೂ ನೀಡಲು ಸಮ್ಮತಿಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭಾನುವಾರ ಹೇಳಿದ್ದರು.

ರಾಜ್ಯ ಬಿಜೆಪಿ ಕಿಡಿ

ವಯನಾಡ್​​ನ ವ್ಯಕ್ತಿಗೆ ಪರಿಹಾರ ನೀಡುವ ಸರ್ಕಾರದ ನಡೆಯನ್ನು ರಾಜ್ಯ ಬಿಜೆಪಿ ಘಟಕ ಕೂಡ ಟೀಕಿಸಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವ ಬಿಜೆಪಿ, “ಕನ್ನಡಿಗರ ಶ್ರಮದ ದುಡಿಮೆಯ ತೆರಿಗೆ – ರಾಹುಲ್ ಗಾಂಧಿಯ ವಯನಾಡ್‌ನ ಮಡಿಲಿಗೆ” ಎಂದು ಉಲ್ಲೇಖಿಸಿದೆ. ಇದು ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ವಾಭಿಮಾನಿ ಕನ್ನಡಿಗರ ತೆರಿಗೆ ಹಣವನ್ನು ದುರುಪಯೋಗ ಮಾಡುತ್ತಿರುವ ಅಸಲಿಯತ್ತು. ರಾಹುಲ್ ಗಾಂಧಿ ಅವರ ವಯನಾಡ್ ಕ್ಷೇತ್ರದಲ್ಲಿ ಆನೆ ತುಳಿತಕ್ಕೆ ಸಿಲುಕಿ ವ್ಯಕ್ತಿ ಮೃತನಾದರೆ, ಆ ಆನೆ ಕರ್ನಾಟಕಕ್ಕೆ ಸೇರಿದ್ದು ಎಂಬ ಕಾರಣಕ್ಕೆ ಆ ಮೃತನಿಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬರೋಬ್ಬರಿ ₹15 ಲಕ್ಷ ಪರಿಹಾರ ನೀಡಿದೆ. ಕರ್ನಾಟಕದಲ್ಲಿ 600 ಕ್ಕೂ ಹೆಚ್ಚು ರೈತರು ಸಿಎಂ ಸಿದ್ದರಾಮಯ್ಯ ಅವರ ರೈತ ವಿರೋಧಿ ಆಡಳಿತಕ್ಕೆ ಬೇಸತ್ತು ನೇಣಿಗೆ ಶರಣಾದರೆ, ಅವರ ಆತ್ಮಹತ್ಯೆಯನ್ನು ಗೇಲಿ ಮಾಡಿ, ಬಿಡಿಗಾಸು ಪರಿಹಾರ ನೀಡದ ಕಾಂಗ್ರೆಸ್ ಸರ್ಕಾರ, ಕೇರಳದಲ್ಲಿ ಸತ್ತ ವ್ಯಕ್ತಿಗೆ ರಾಜ್ಯ ಬೊಕ್ಕಸದಿಂದ ಪರಿಹಾರ ನೀಡಿದ್ದು, ಕಾಂಗ್ರೆಸ್‌ನ ರೈತ ವಿರೋಧಿ ಮನಸ್ಥಿತಿಯ ಜ್ವಲಂತ ನಿದರ್ಶನ ಎಂದು ಉಲ್ಲೇಖಿಸಿದೆ.

ಸರ್ಕಾರದ ವಿರುದ್ಧ ಬಿಜೆಪಿ ಟ್ವೀಟ್​​


ಅಷ್ಟಕ್ಕೂ ಸಚಿವ ಈಶ್ವರ್ ಖಂಡ್ರೆ ಬರೆದ ಪತ್ರದಲ್ಲಿ ಯಾವುದೇ ಸಂವಿಧಾನಿಕ ಹುದ್ದೆಯಲ್ಲಿಲ್ಲದ ಕಾಂಗ್ರೆಸ್ ಕಲೆಕ್ಷನ್ ಏಜೆಂಟ್ ವೇಣುಗೋಪಾಲ್ ಅವರನ್ನು ಏಕೆ ಹೆಸರಿಸಲಾಗಿದೆ ಎಂಬುದನ್ನು ಕಲೆಕ್ಷನ್ ಮಾಸ್ಟರ್ ಸಿಎಂ ಸಿದ್ದರಾಮಯ್ಯನವರೇ ತಿಳಿಸಬೇಕು. ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪದಿಂದ ರಾಜ್ಯದ ತೆರಿಗೆದಾರರ ಹಣ ಅನಗತ್ಯವಾಗಿ ಪೋಲಾಗುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ‌. ಸಿಎಂ ಸಿದ್ದರಾಮಯ್ಯನವರೇ ನಿಮಗೆ ನಿಜಕ್ಕೂ ತಾಕತ್ತು ದಮ್ಮು ಇದ್ದರೆ, ಕನ್ನಡಿಗರ ತೆರಿಗೆ ಹಣವನ್ನು ಅನಗತ್ಯವಾಗಿ ಪೋಲು ಮಾಡಿ ಎಂದು ನಿಮಗೆ ಸೂಚನೆ ನೀಡುವ ಎಐಸಿಸಿ ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಿ ಎಂದು ಬಿಜೆಪಿ ಸವಾಲು ಹಾಕಿದೆ.

ಏನಿದು ಪ್ರಕರಣ?

2023 ರ ನವೆಂಬರ್ 30 ರಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ದಂತರಹಿತ ಗಂಡು ಆನೆಯನ್ನು ಸೆರೆಹಿಡಿಯಲಾಗಿತ್ತು. ಮತ್ತು ಬಂಡೀಪುರ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಎರಡು ತಿಂಗಳ ನಂತರ ಆ ಆನೆಯು ಕೇರಳದ ವಯನಾಡ್ ಜಿಲ್ಲೆಗೆ ದಾರಿ ತಪ್ಪಿ ತೆರಳಿರುವುದು ಗೊತ್ತಾಗಿತ್ತು.

ಫೆಬ್ರವರಿ 10 ರಂದು ಕೇರಳದ ವಯನಾಡ್ ಜಿಲ್ಲೆಯಲ್ಲಿ ಆನೆಯ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಇದು ಕರ್ನಾಟಕದಿಂದ ತೆರಳಿದ ಆನೆಯಿಂದ ಸಂಭವಿಸಿದ್ದು, ಮೃತ ವ್ಯಕ್ತಿಗೆ ಪರಿಹಾರ ನೀಡಬೇಕು ಎಂಬ ಮನವಿ ಸಲ್ಲಿಕೆಯಾಗಿತ್ತು. ಇದರಂತೆ, ಅರಣ್ಯ ಸಚಿವ ಖಂಡ್ರೆ ಅವರು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಪರಿಹಾರ ನೀಡುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ: ಹಾಸನ: ಬೆಳ್ಳಂಬೆಳಿಗ್ಗೆ ಗ್ರಾಮದೊಳಗೆ ಎಂಟ್ರಿ ಕೊಟ್ಟ ಒಂಟಿ ಸಲಗ, ಭಯಭೀತರಾದ ಗ್ರಾಮಸ್ಥರು

ಕರ್ನಾಟಕದ ಯಾವುದೇ ವ್ಯಕ್ತಿಗೆ ನೀಡುವ ಪರಿಹಾರಕ್ಕೆ ಸಮನಾದ ಮೊತ್ತವನ್ನು ವಯನಾಡಿನ ವ್ಯಕ್ತಿಗೂ ನೀಡಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ಖಂಡ್ರೆ ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 am, Tue, 20 February 24