3ನೇ ಅಲೆ ನಿರ್ವಹಣೆಗೆ ತಂಡ ರೂಪಿಸಿದ ಕರ್ನಾಟಕ ಸರ್ಕಾರ: ಕೊವಿಡ್ ವಾರ್ರೂಂಗೆ ಮುನಿಶ್ ಮೌದ್ಗಿಲ್ ನೇತೃತ್ವ
ಕರ್ನಾಟಕ ಸರ್ಕಾರವು ಕೊವಿಡ್ ಕಣ್ಗಾವಲು ಮೇಲುಸ್ತುವಾರಿ, ನಿರ್ವಹಣೆ ಹಾಗೂ ಸಮನ್ವಯಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಧಿಕಾರಿಗಳ ಹಲವು ತಂಡಗಳನ್ನು ರಚಿಸಿದೆ
ಬೆಂಗಳೂರು: ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಕೊರೊನಾ ಸೋಂಕು (Coronavirus) ಮತ್ತೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊವಿಡ್ ಸೋಂಕಿನ ನಿಯಂತ್ರಣ, ನಿಗಾವಣೆ ಹಾಗೂ ಜಾಗೃತಿಗೆ ಸಂಬಂಧಿಸಿದಂತೆ ಹಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಹೊರಡಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ (Covid Guidelines) ಅನ್ವಯ ರಾಜ್ಯ ಸರ್ಕಾರವು ಕೊವಿಡ್ ಕಣ್ಗಾವಲು ಮೇಲುಸ್ತುವಾರಿ, ನಿರ್ವಹಣೆ ಹಾಗೂ ಸಮನ್ವಯಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಧಿಕಾರಿಗಳ ಹಲವು ತಂಡಗಳನ್ನು ರಚಿಸಿದೆ. ಈ ತಂಡಗಳ ವಿವರ ಇಂತಿದೆ.
ಕೊವಿಡ್ ವಾರ್ರೂಂ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ಇಡೀ ರಾಜ್ಯವನ್ನು ಒಳಗೊಂಡ ಕಾರ್ಯವ್ಯಾಪ್ತಿ ಇರುವ ಕೊವಿಡ್ ವಾರ್ರೂಂಗೆ ಐಎಎಸ್ ಅಧಿಕಾರಿ ಮುನಿಶ್ ಮೌದ್ಗಿಲ್ ಅವರ ನೇತೃತ್ವ ಇರಲಿದೆ.
ಸೋಂಕಿತರಿಗೆ ಆಸ್ಪತ್ರೆ ಸೌಕರ್ಯ: ರಾಜ್ಯದಲ್ಲಿ ವರದಿಯಾಗುವ ಕೋವಿಡ್ ಸೋಂಕು ಲಕ್ಷಣ ಇರುವವರನ್ನು (ILI ಮತ್ತು SARI) ಆಂಬುಲೆನ್ಸ್ ಮತ್ತು ಆಸ್ಪತ್ರೆಗಳ ಮೂಲಕ ಅಸ್ಪತ್ರೆಗಳಿಗೆ ದಾಖಲಿಸುವ ಹೊಣೆಗಾರಿಕೆಯನ್ನು ಐಎಎಸ್ ಅಧಿಕಾರಿ ಆರ್.ವಿನೂತ್ ಪ್ರಿಯಾ ಅವರಿಗೆ ವಹಿಸಲಾಗಿದೆ.
ಟೆಸ್ಟಿಂಗ್: ಮಾದರಿ ಸಂಗ್ರಹ, ಟೆಸ್ಟಿಂಗ್ ಮತ್ತು ಲ್ಯಾಬ್ ಬಳಕೆಯ ಉಸ್ತುವಾರಿವನ್ನು ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ನಿರ್ವಹಿಸಲಿದ್ದಾರೆ.
ಕಂಟೇನ್ಮೆಂಟ್: ಹೋಮ್ ಐಸೊಲೇಷನ್ ಮತ್ತು ಕಂಟೇನ್ಮೆಂಟ್ ಜೋನ್ ನಿರ್ವಹಣೆಯ ಹೊಣೆಗಾರಿಕೆಯನ್ನು ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರಿಗೆ ನೀಡಲಾಗಿದೆ.
ಲಿಕ್ವಿಡ್ ಆಕ್ಸಿಜನ್: ರಾಜ್ಯಮಟ್ಟದಲ್ಲಿ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ಗಳ ಚಲನೆಯ ಮೇಲ್ವಿಚಾರಣೆಯ ಹೊಣೆಯನ್ನು ಐಎಎಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ ಮತ್ತು ಡಾ.ಎನ್.ಶಿವಶಂಕರ್ ಅವರಿಗೆ ವಹಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪವನ್ ಕುಮಾರ್ ಮಾಲಪಾಟಿ ಅವರು ನೋಡಿಕೊಳ್ಳುತ್ತಾರೆ.
ರಾಜ್ಯಮಟ್ಟದ ಸಹಾಯವಾಣಿ 1912 ಮೂಲಕ ಟೆಲಿಕೌನ್ಸಲಿಂಗ್ ಆಪ್ತಸಮಾಲೋಚನಾ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ವಿಪಿನ್ ಸಿಂಗ್ ಮತ್ತು ಬಿಸ್ವಜಿತ್ ಮಿಶ್ರಾ ನಿರ್ವಹಿಸಲಿದ್ದಾರೆ. ಸರ್ಕಾರೇತರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಜವಾಬ್ದಾರಿಯನ್ನು ಉಮಾ ಮಹದೇವನ್ ಹಾಗೂ ಅಂತರರಾಷ್ಟ್ರೀಯ ಸಹಕಾರ ಪಡೆಯುವ ಜವಾಬ್ದಾರಿಯನ್ನು ಡಾ.ಪೊನ್ನುರಾಜ್ ಅವರಿಗೆ ನೀಡಲಾಗಿದೆ. ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸೌಲಭ್ಯ ಒದಗಿಸುವ ಹೊಣೆಗಾರಿಕೆಯನ್ನು ಪಲ್ಲವಿ ಆಕೃತಿ ಅವರಿಗೆ ನೀಡಲಾಗಿದೆ. ಕೊವಿಡ್ ಸಂಬಂಧಿತ ಪರಿಕರಗಳನ್ನು ಆಮದು ಮಾಡಿಕೊಳ್ಳುವ ನೋಡೆಲ್ ಪ್ರಾಧಿಕಾರದ ಕಾರ್ಯನಿರ್ವಹಣೆಯನ್ನು ಉಮಾ ಮಹದೇವನ್ ಹಾಗೂ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ನೋಡಿಕೊಳ್ಳುತ್ತಾರೆ.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಗೆ ಕೊರೊನಾ ಸೋಂಕು ದೃಢ ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 2,479 ಜನರಿಗೆ ಕೊರೊನಾ ದೃಢ; 4 ಮಂದಿ ಸಾವು