ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಕರ್ಫ್ಯೂ ಹೇರುವ ಅನಿವಾರ್ಯತೆ ಸದ್ಯಕ್ಕೆ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಂದಿಗಿನ ಸಭೆ ನಂತರ ಪತ್ರಿಕಾಗೋಷ್ಠಿ ನಡೆಸಿದ ಅವರು ಹೊಸ ವರ್ಷಾಚರಣೆಗೆ ನೈಟ್ ಕರ್ಫ್ಯೂ ವಿಧಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಕೊವಿಡ್ ತಾಂತ್ರಿಕ ಸಲಹಾ ಸಮಿತಿಯು ಡಿ.20ರಿಂದ ಜನವರಿ 2 ರ ತನಕ ರಾಜ್ಯಾದ್ಯಂತ ಎಲ್ಲಾ ಸಭೆ ಸಮಾರಂಭಗಳನ್ನು ನಿಷೇಧಿಸಲು ಸಲಹೆ ನೀಡಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದ್ದು ಸರ್ಕಾರ ಶೀಘ್ರದಲ್ಲೇ ತನ್ನ ನಿರ್ಧಾರ ಘೋಷಿಸಲಿದೆ ಎಂದು ಹೇಳಿದ್ದಾರೆ.
ಕೊವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ನಿರಂತರ ಅಧ್ಯಯನ ಆಗುತ್ತಿದೆ. ಈವರೆಗಿನ ಅಧ್ಯಯನದ ಪ್ರಕಾರ ರಾಜ್ಯದಲ್ಲಿ ಮೊದಲ ಅಲೆ ಮುಕ್ತಾಯಗೊಂಡಿದ್ದು ಜನವರಿ ಅಥವಾ ಫೆಬ್ರವರಿ ಸಮಯದಲ್ಲಿ ಎರಡನೇ ಅಲೆ ಆರಂಭವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಮಾರುಕಟ್ಟೆಯಲ್ಲಿ ಮೊದಲಿನಂತೆಯೇ ಜನರು ಮುಗಿಬೀಳುತ್ತಿದ್ದಾರೆ. ಆದ್ದರಿಂದ ಇದನ್ನು ನಿಯಂತ್ರಿಸಲು ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲು ಚಿಂತಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಹಿತದೃಷ್ಟಿಯಿಂದ ಹೊಸ ವರ್ಷಾಚರಣೆ ಬೇಡ
ಹೊಸ ವರ್ಷಾಚರಣೆ ಕುರಿತು ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್ ಬೆಂಗಳೂರಿನ ಹಿತದೃಷ್ಟಿಯಿಂದ ಜೊಸ ವರ್ಷಾಚರಣೆ ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಜನ ಸೇರುವುದನ್ನು ನಿಷೇಧಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇವೆ. ಜನ ಒಂದೆಡೆ ಸೇರುವುದನ್ನು ತಡೆಯುವುದು ಸದ್ಯದ ತುರ್ತು ಎಂದಿದ್ದಾರೆ. ಇದರಿಂದಾಗಿ ಬಾರ್, ಪಬ್ಗಳ ವ್ಯವಹಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಬದಲಾಗಿ ಕೊರೊನಾ ನಿಯಂತ್ರಿಸಲು ಸಹಕಾರಿ ಆಗುತ್ತದೆ. ಬಹುತೇಕ ಜನರ ಅಭಿಪ್ರಾಯ ಇದೇ ಆಗಿದೆ ಎಂದು ತಿಳಿಸಿದ್ದಾರೆ.
Published On - 12:53 pm, Fri, 4 December 20