9 ಸಚಿವರು, 37 ಶಾಸಕರ ಪ್ರಮಾಣವಚನ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
ಬೆಳಗಾವಿ ಮೂಲದ ವ್ಯಕ್ತಿಯೋರ್ವರು ಶಾಸಕರು ಹಾಗೂ ಸಚಿವರ ಪ್ರಮಾಣವಚನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ. ಇದರಿಂದ ಕರ್ನಾಟಕದ 9 ಸಚಿವರು ಹಾಗೂ 37 ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಬೆಂಗಳೂರು, (ಡಿಸೆಂಬರ್ 15): ನಿಗದಿತ ನಮೂನೆಯಲ್ಲಿ ಪ್ರಮಾಣವಚನ (Oath) ಸ್ವೀಕರಿಸದ ಹಿನ್ನೆಲೆಯಲ್ಲಿ 9 ಸಚಿವರು, 37 ಶಾಸಕರ ಪ್ರಮಾಣವಚನ ಪ್ರಶ್ನಿಸಿದ್ದ ಪಿಐಎಲ್ ವಜಾಗೊಂಡಿದೆ. ಸಂವಿಧಾನದ ಪ್ರಕಾರ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸದ ಆರೋಪ ಮೇಲೆ ಡಿ.ಕೆ.ಶಿವಕುಮಾರ್, ಜಮೀರ್ ಅಹಮ್ಮದ್ ಖಾನ್, ಕೆ.ಎನ್.ರಾಜಣ್ಣ ಸೇರಿ 9 ಸಚಿವರು ಹಾಗೂ 37 ಶಾಸಕರ ಪ್ರಮಾಣವಚನ ಅಸಾಂವಿಧಾನಿಕವೆಂದು ಘೋಷಿಸುವಂತೆ ಕೋರಿ ಬೆಳಗಾವಿಯ ಭೀಮಪ್ಪ ಗುಂಡಪ್ಪ ಗಡಾದ್ ಎನ್ನುವರು ಸಲ್ಲಿಸಿದ್ದ ಪಿಐಎಲ್ ಅನ್ನು ಕರ್ನಾಟಕ ಹೈಕೋರ್ಟ್ (Karnataka High Court) ವಜಾ ಮಾಡಿದೆ.
ಶಾಸಕರು ಮತದಾರರಿಂದ ಚುನಾಯಿತರಾಗಿದ್ದಾರೆ. ನಿಗದಿತ ನಮೂನೆಯ ಅಪೂರ್ಣ ಪಾಲನೆ ತಾಂತ್ರಿಕ ಅಂಶವಷ್ಟೇ. ಶಾಸಕರು ನಿರೀಕ್ಷೆಯಂತೆ ಜನರ ಕೆಲಸ ಮಾಡುವುದು ಮುಖ್ಯ. ಕೆಲಸ ಮಾಡದವರು ಆಯ್ಕೆಯಾಗದಂತೆ ನೋಡಿಕೊಳ್ಳುವುದು ಜನರಿಗೆ ಬಿಟ್ಟದ್ದು ಎಂದು ಸಿಜೆ ಪ್ರಸನ್ನ ಬಿ.ವರಾಳೆ, ನ್ಯಾ.ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಅಭಿಪ್ರಾಯ ಪಟ್ಟಿದ್ದು, ಭೀಮಪ್ಪ ಗುಂಡಪ್ಪ ಗಡಾದ್ ಸಲ್ಲಿಸಿದ್ದ ಪಿಐಎಲ್ ವಜಾ ಮಾಡಿ ತ್ರಿಸದಸ್ಯ ಪೀಠ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಶಾಸಕ ಜಮೀರ್ ಅಹಮದ್ಗೆ ಸಚಿವ ಸ್ಥಾನ ಕೊಟ್ಟರೂ ರಾಜ್ಯಪಾಲರು ಪ್ರಮಾಣವಚನ ಬೋಧಿಸಬಾರದು ಎಂದು ಪತ್ರ
ಕೆಲವು ಶಾಸಕರು ಹಾಗೂ ಸಚಿವರು ದೇವರ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿದ್ದರು. ಇನ್ನು ಕೆಲವರು ಬೇರೆ ಹೆಸರಿನ ಮೇಲೆ ಸಚಿವರಾಗಿ ಪ್ರಮಾಣವಚನ ಸ್ವೀರಿಸಿದ್ದರು. ಈ ಹಿನ್ನೆಲೆಯಲ್ಲಿ ನಿಗದಿತ ನಮೂನೆ ಪ್ರಕಾರ ಸಚಿವರು, ಶಾಸಕರು ಪ್ರಮಾಣ ವಚನ ಸ್ವೀಕರಿಸಿಲ್ಲ ಎಂದು ಬೆಳಗಾವಿಯ ಭೀಮಪ್ಪ ಗುಂಡಪ್ಪ ಗಡಾದ್ ಎನ್ನುವರು ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು.
Published On - 10:56 pm, Fri, 15 December 23