ಬೆಂಗಳೂರು, ಅಕ್ಟೋಬರ್ 21: ನ್ಯಾಯಾಲಯದ ಅನುಮತಿಯಿಲ್ಲದೆ ಕರ್ನಾಟಕ ಸರ್ಕಾರವು ‘ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2024’ರ ಸೆಕ್ಷನ್ 16 ಮತ್ತು 17 ರ ಅಡಿಯಲ್ಲಿ ಯಾವುದೇ ಕ್ರಮ ಅಥವಾ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ದಿವಂಗತ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಒಡೆಯರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಮಧ್ಯಂತರ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಪ್ರಮೋದಾ ದೇವಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೊಸ ಕಾಯ್ದೆಯ ಸೆಕ್ಷನ್ 16 ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿಗಳಿಗೆ ಸಭೆಯನ್ನು ನಡೆಸದೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ. ಇದನ್ನು ಪ್ರಮೋದಾ ದೇವಿ ಪ್ರಶ್ನಿಸಿದ್ದಾರೆ.
ಅಂತೆಯೇ, ಸೆಕ್ಷನ್ 17 ರ ಅಡಿಯಲ್ಲಿ ಅಧ್ಯಕ್ಷರು ಸಭೆಯನ್ನು ನಡೆಸದೆ ಅಥವಾ ಸದಸ್ಯರ ನಡುವೆ ವಿಷಯವನ್ನು ಚರ್ಚಿಸದೆ ತುರ್ತು ಸಂದರ್ಭಗಳಲ್ಲಿ ಆದೇಶಗಳನ್ನು ಹೊರಡಿಸಲು ಅಧಿಕಾರವನ್ನು ನೀಡುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪ್ರಾಧಿಕಾರದ ಸಭೆಯಲ್ಲಿ ಅಂತಹ ಆದೇಶಗಳನ್ನು ಮಂಡಿಸಿ ವಾಸ್ತವಿಕ ಅನುಮೋದನೆ ಪಡೆದುಕೊಳ್ಳಲಾಗುತ್ತದೆ.
ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ಕಾನೂನು ವಿವಾದಕ್ಕೆ ಸಂಬಂಧಿಸಿದ ರಿಟ್ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗಲೇ ಈ ಕಾಯ್ದೆಯನ್ನು ಘೋಷಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಕಾಯ್ದೆಯ ಘೋಷಣೆ ಶಾಸಕಾಂಗ ಸಭೆಯ ಕಾರ್ಯವಿಧಾನದ ನಿಯಮಗಳನ್ನು ಉಲ್ಲಂಘಿಸುತ್ತದೆ ಮತ್ತು ಕಾಯ್ದೆಯ ವಿವಿಧ ನಿಬಂಧನೆಗಳು ಸಂವಿಧಾನದ 13, 25, 26 ಮತ್ತು 29 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಪ್ರಮೋದಾ ದೇವಿ ಪರ ವಕೀಲರು ವಾದಿಸಿದ್ದಾರೆ.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ದೇವದಾಸ್, ಈ ರಿಟ್ ಅರ್ಜಿಯ ವಿಲೇವಾರಿ ಬಾಕಿ ಉಳಿದಿರುವುದು ನಿಜ. ದೇವಸ್ಥಾನಕ್ಕೆ ಸೇರಿದ ಚರ ಅಥವಾ ಸ್ಥಿರ ಆಸ್ತಿಗಳನ್ನು ವಿಲೇವಾರಿ ಮಾಡಲಾಗುವುದಿಲ್ಲ. ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ದೇವಾಲಯದ ಚಾಲ್ತಿಯಲ್ಲಿರುವ ಸಂಪ್ರದಾಯಗಳನ್ನು ಮಾರ್ಪಡಿಸಲಾಗುವುದಿಲ್ಲ ಅಥವಾ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.
ಹೊಸ ಕಾಯ್ದೆಯ ಅಡಿಯಲ್ಲಿ ಯಾವುದೇ ನಿರ್ಧಾರವನ್ನು ನ್ಯಾಯಾಲಯದ ಪೂರ್ವಾನುಮತಿಯೊಂದಿಗೆ ಮಾತ್ರ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದಾಗ್ಯೂ, ಈ ರಿಟ್ ಅರ್ಜಿಯ ಬಾಕಿಯು ಕಾಯ್ದೆಯಡಿಯಲ್ಲಿ ಸೂಕ್ತವಾದ ನಿಯಮಗಳನ್ನು ರೂಪಿಸುವಲ್ಲಿ ರಾಜ್ಯ ಸರ್ಕಾರವನ್ನು ತಡೆಯುವುದಿಲ್ಲ ಎಂದೂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ, ಪಾನ್, ಮೊಬೈಲ್ ನಿಷೇಧ: ಸಿಎಂ ಘೋಷಣೆ
ದಸರಾ ಮಹೋತ್ಸವಕ್ಕೂ ಕೆಲವು ದಿನಗಳ ಮುನ್ನ ಚಾಮುಂಡಿ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆದಿತ್ತು. ಆ ಸಭೆಯಲ್ಲಿ ಬೆಟ್ಟದ ಅಭಿವೃದ್ಧಿ ಸಂಬಂಧ ಹಲವು ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಇದಕ್ಕೆ ರಾಜಮನೆತನದಿಂದ ಆಕ್ಷೇಪ ವ್ಯಕ್ತವಾಗಿತ್ತು. ಪ್ರಾಧಿಕಾರ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಸಭೆ ನಡೆಸುವುದು ಸರಿಯಲ್ಲ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದರು. ಅಲ್ಲದೆ, ಸಭೆಯಲ್ಲಿ ಅವರು ಭಾಗವಹಿಸಿರಲಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ