ಬಾಗಲಕೋಟೆ: ಗೆಲುವಿನ ಸರದಾರ ಜಯಸಿಂಹ ಟಗರು 5 ಲಕ್ಷಕ್ಕೆ ಮಾರಾಟ!
ಆ ಟಗರಿನ ಹೆಸರು ಜಯಸಿಂಹ, ಅದು ಕಣಕ್ಕೆ ಇಳಿದರೆ ಎದುರಾಳಿಗೆ ನಡುಕ ಹುಟ್ತಿತ್ತು. ಜಯಸಿಂಹ ಕಾದಾಟಕ್ಕೆ ಇಳಿದ್ರೆ ಗೆಲವು ಕಟ್ಟಿಟ್ಟ ಬುತ್ತಿ. ಜಯಸಿಂಹ ಬಾಗಲಕೋಟೆ ಜಿಲ್ಲೆಯಷ್ಟೇ ಅಲ್ಲದೇ ಪರ ಜಿಲ್ಲೆಯಲ್ಲೂ ಹೆಸರು ಮಾಡಿದ್ದಾನೆ. ಇಂತಹ ಟಗರು ಬರೊಬ್ಬರಿ ಐದು ಲಕ್ಷಕ್ಕೆ ಮಾರಾಟವಾಗಿದೆ.
ಬಾಗಲಕೋಟೆ, ಅಕ್ಟೋಬರ್ 21: ಗುಳೇದಗುಡ್ಡ (Guledgudda) ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಜಯಸಿಂಹ ಎಂಬ ಟಗರು (Tagaru) ಬರೋಬ್ಬರಿ ಐದು ಲಕ್ಷ ರೂ.ಗೆ ಮಾರಾಟವಾಗಿದೆ. ಐದು ಲಕ್ಷಕ್ಕೆ ಮಾರಾಟವಾಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಕಾಳಗಕ್ಕೆ ಬಳಸುವ ಟಗರು ಲಕ್ಷಾಂತರ ರೂಪಾಯಿಗೆ ಮಾರಾಟವಾಗುವುದು ಸಾಮಾನ್ಯ. ಆದರೆ ಐದು ಲಕ್ಷಕ್ಕೆ ಮಾರಾಟವಾಗಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ತೆಗ್ಗಿ ಗ್ರಾಮದ ಬಸವರಾಜ ಎಂಬುವರು ಮೂಲತಃ ಟಗರು ಸಾಕಾಣಿಕೆದಾರರು. ಎರಡು ವರ್ಷದ ಹಿಂದೆ ಈ ಜಯಸಿಂಹ ಎಂಬ ಟಗರನ್ನು 90 ಸಾವಿರ ರೂ ಕೊಟ್ಟು ಖರೀದಿ ಮಾಡಿದ್ದರು. ಇದೀಗ, ಈ ಟಗರನ್ನು ಧಾರವಾಡ ಮೂಲದ ಆರ್ಎಕ್ಸ್ವೈ ಎಂಬ ಟಗರು ಪ್ರೀಯ ಗ್ರೂಪ್ನವರು ಬರೋಬ್ಬರಿ 5 ಲಕ್ಷದ 1 ಸಾವಿರ ರೂ ಕೊಟ್ಟು ಖರೀದಿಸಿದ್ದಾರೆ.
ಈ ಜಯಸಿಂಹ ಟಗರಿನ ಸಾಧನೆಯ ಬಗ್ಗೆ ಹೇಳುವದಾದರೇ, ಜಯಸಿಂಹ ಯಾವುದೇ ಟಗರಿನ ಕಾಳಗದಲ್ಲಿ ಸೋಲನ್ನು ಕಾಣದೇ ಇರುವ ಧೀರ. ಇದರಿಂದ ಮಾಲೀಕ ಬಸವರಾಜ ಇದಕ್ಕೆ ಪ್ರೀತಿಯಿಂದ ಜಯಸಿಂಹ ಎಂಬ ಹೆಸರು ಇಟ್ಟಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ಮೊಸಳೆ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ಎತ್ತು
ಜಯಶಾಲಿ ಜಯಸಿಂಹ ಇಲ್ಲಿಯವರೆಗೂ 50ಕೂ ಹೆಚ್ಚು ಟಗರಿನ ಬಡಿದಾಟದಲ್ಲಿ ಬಹುಮಾನವನ್ನು ಪಡೆದಿದೆ. 6 ಲಕ್ಷಕ್ಕೂ ಅಧಿಕ ಹಣ, ಬೈಕ್ ಹಾಗೂ ಇನ್ನಿತರ ಬಹುಮಾನಗಳನ್ನು ಮಾಲೀಕ ಬಸವರಾಜನಿಗೆ ತಂದು ಕೊಟ್ಟಿದೆ. ಜಿಲ್ಲೆಯಲ್ಲದೆ ಪರ ಜಿಲ್ಲೆಯಲ್ಲಿ ಜಯಸಿಂಹನ ಕ್ರೇಜ್ ಹೆಚ್ಚಾಗಿದೆ. ಹೀಗಾಗಿ ಜಯಸಿಂಹನನ್ನು ಕೊಳ್ಳಲಿಕ್ಕೆ ಟಗರು ಪ್ರಿಯರು ನಾ ಮುಂದು, ತಾ ಮುಂದು ಎಂದು ಸ್ಪರ್ಧೆಗಳಿದಿದ್ದರು.
ಆದರೆ, ಧಾರವಾಡ ಮೂಲದ ಆರ್ಎಕ್ಸ್ವೈ ಎಂಬ ಗ್ರೂಪ್ನವರು ಈ ಜಯಸಿಂಹ ಟಗರನ್ನು ಬರೋಬ್ಬರಿ ಐದು ಲಕ್ಷ ರೂ ಕೊಟ್ಟು ತಮ್ಮದಾಗಿಸಿಕೊಂಡಿದ್ದಾರೆ. ಜಯಸಿಂಹ ಇಷ್ಟು ದುಡ್ಡಿಗೆ ಮಾರಾಟವಾಗಿದ್ದನ್ನು ಕಂಡು ಟಗರು ಪ್ರಿಯರು ಬಲೆ ಮೈಲಾರಿ ಎನ್ನುತ್ತಿದ್ದಾರೆ.
ಟಗರು ಕಾಳಗದ ಕ್ರೇಜ್ ಇಷ್ಟೊಂದು ಬೃಹತ್ ಮೊತ್ತಕ್ಕೆ ಟಗರು ಮಾರಾಟವಾಗಲು ಕಾರಣವಾಗಿದೆ. ಟಗರು ಕಾಳಗ ಪ್ರೀಯರ ಟಗರು ಕ್ರೇಜ್ ಎಷ್ಟಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Mon, 21 October 24