ಬೆಂಗಳೂರು, (ಏಪ್ರಿಲ್ 02): ಉಬರ್, ರ‍್ಯಾಪಿಡೋ ಬೈಕ್ ಟ್ಯಾಕ್ಸಿ (bike taxi) ಕಾರ್ಯಾಚರಣೆಯನ್ನು ನಿಲ್ಲಿಸಲು ಕರ್ನಾಟಕ ಹೈಕೋರ್ಟ್ (Karnataka high Court) ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ನಿಯಮ ರೂಪಿಸಿಲ್ಲ. ನಿಯಮಗಳಿಲ್ಲದೇ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮಾಡುವಂತಿಲ್ಲ. ಹೀಗಾಗಿ ಬೈಕ್ ಟ್ಯಾಕ್ಸಿ ಸ್ಥಗಿತಗೊಳಿಸುವಂತೆ ಓಲಾ, ಉಬರ್ ಮತ್ತು ರ್ಯಾಪಿಡೊಗಳಿಗೆ ಆರು ವಾರಗಳ ಕಾಲಾವಕಾಶ ನೀಡಿ. ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದ್ದು,
3 ತಿಂಗಳಿನಲ್ಲಿ ನಿಯಮ ರೂಪಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.
ಮೋಟಾರ್ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು 2022 ರಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರು ಇಂದು (ಏಪ್ರಿಲ್ 02) ಈ ಆದೇಶ ಹೊರಡಿಸಿದ್ದಾರೆ.
1988 ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಅಗತ್ಯ ನಿಯಮಗಳೊಂದಿಗೆ ಸಂಬಂಧಿತ ಮಾರ್ಗಸೂಚಿಗಳನ್ನು ತಿಳಿಸದ ಹೊರತು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆರು ವಾರಗಳ ಒಳಗೆ ಎಲ್ಲಾ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳು ಸ್ಥಗಿತಗೊಳ್ಳುವಂತೆ ನೋಡಿಕೊಳ್ಳಲು ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.
ಸೂಕ್ತ ಸರ್ಕಾರಿ ನಿಯಮಗಳು ಜಾರಿಗೆ ಬರುವವರೆಗೆ ಬೈಕ್ ಟ್ಯಾಕ್ಸಿಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಅಥವಾ ಅಂತಹ ಸೇವೆಗಳಿಗೆ ಒಪ್ಪಂದ ಸಾಗಣೆ ಪರವಾನಗಿಗಳನ್ನು ನೀಡಲು ಸಾರಿಗೆ ಇಲಾಖೆಗೆ ನಿರ್ದೇಶನ ನೀಡಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಸ್ಪಷ್ಟವಾಗಿ ಹೇಳಿದ್ದಾರೆ.