ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ (DK Shivakumar) ಕರ್ನಾಟಕ ಹೈಕೋರ್ಟ್ (Karnataka High Court) ಬಿಗ್ ರಿಲೀಫ್ ನೀಡಿದೆ. ಫೆಬ್ರವರಿ 24ರವರೆಗೆ ತನಿಖೆಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್ ಇಂದು(ಫೆಬ್ರವರಿ 10) ಆದೇಶ ಹೊರಡಿಸಿದೆ. ಇದರಿಂದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಬ್ಯುಸಿಯಾಗಿರುವ ಡಿಕೆ ಶಿವಕುಮಾರ್‌ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ತನಿಖಾಧಿಕಾರಿ ತನಿಖೆಯ ಪ್ರಗತಿ ವರದಿ ಹಾಜರುಪಡಿಸಲಿ. ಫೆಬ್ರವರಿ 24ರ ಒಳಗೆ ತನಿಖೆ ವರದಿ ಸಲ್ಲಿಸಲಿ. ಅಲ್ಲಿಯವರೆಗೆ ತನಿಖೆ ಮುಂದುವರಿಸದಂತೆ ಹೈಕೋರ್ಟ್ ಸೂಚನೆ ನೀಡಿದೆ. ಇದರಿಂದಾಗಿ ಡಿಕೆ ಶಿವಕುಮಾರ್ ಗೆ ಸ್ವಲ್ಪ ದಿನಗಳ ಸಮಾಯವಕಾಶ ದೊರೆತಿದ್ದು, ಸದ್ಯ ನಿರಾಳರಾಗಿದ್ದಾರೆ.
ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ತಡೆ ಕೋರಿ ಡಿಕೆ ಶಿವಕುಮಾರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸಿಬಿಐ ಅಧಿಕಾರಿಗಳು ಪದೇ ಪದೇ ನೋಟಿಸ್ ನೀಡುತ್ತಿದ್ದಾರೆ. ಹೆಂಡತಿ, ಮಗಳಿಗೆ ನೋಟಿಸ್ ನೀಡುವ ಮೂಲಕ ಮಾನಸಿಕ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದರು.
ತಮ್ಮ ವಿರುದ್ಧದ ಕೇಸ್‌ನ ತನಿಖೆಗೆ ಮಧ್ಯಂತರ ತಡೆಯಾಜ್ಞೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನನ್ನ ವಿರುದ್ಧ 40 ಕೇಸ್ ವಿಚಾರಣೆ ನಡೆಯುತ್ತಿದೆ. ಇದರಲ್ಲಿ ಯಾವುದು ಎಂದು ವಕೀಲರ ಜೊತೆಗೆ ಮಾತನಾಡುತ್ತೇನೆ. ಕೇಸ್‌ನ ತನಿಖೆಗೆ ಹೈಕೋರ್ಟ್ ತಡೆ ನೀಡಿದ್ದು ಬಹಳ ಸಂತೋಷವಾಗಿದೆ. ಕೋರ್ಟ್ ಮೇಲೆ, ನ್ಯಾಯದ ಮೇಲೆ ನನಗೆ ನಂಬಿಕೆ ಇದೆ ಎಂದರು.
ನ್ಯಾಷನಲ್ ಹೆರಾಲ್ಡ್ ಕೇಸ್‌ಗೆ ಸಂಬಂಧಪಟ್ಟಂತೆ ನೋಟಿಸ್ ಬಂದಿದೆ. ನಾನು ತುಂಬಾ ಬ್ಯುಸಿಯಾಗಿದ್ದೆ. ವಕೀಲರ ಜೊತೆ ಮಾತನಾಡುತ್ತೇನೆ. ಹೈಕೋರ್ಟ್‌ನಿಂದ ಯಾವ ಆದೇಶ ಬಂದಿದೆ ಎಂದು ಮಾಹಿತಿ ಇಲ್ಲ. ವಕೀಲರಿಂದ ಮಾಹಿತಿ ಪಡೆದು ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.
Published On - 5:14 pm, Fri, 10 February 23