NEP Or SEP: ಎನ್‌ಇಪಿ ಬದಲಾಯಿಸಿ, ಎಸ್ಇಪಿ ಜಾರಿಗೊಳಿಸುತ್ತೇವೆ; ಎಂಸಿ ಸುಧಾಕರ್
ಎನ್‌ಇಪಿ ಬದಲಾಯಿಸಿ, ಎಸ್ಇಪಿ ಜಾರಿಗೊಳಿಸುತ್ತೇವೆ. ಈ ಹಿಂದೆ ತರಾತುರಿಯಲ್ಲಿ ಎನ್‌ಇಪಿ ಜಾರಿಗೊಳಿಸಲಾಗಿತ್ತು ಎಂದು ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಹೇಳಿದ್ದಾರೆ.
ಕಲಬುರಗಿ: ರಾಷ್ಟ್ರೀಯ ಶಿಕ್ಷಣ ನೀತಿ (NEP) ರದ್ದುಗೊಳಿಸಿ ರಾಜ್ಯ ಶಿಕ್ಷಣ ನೀತಿ (SEP) ರೂಪಿಸಲು ಕರ್ನಾಟಕದ ನೂತನ ಕಾಂಗ್ರೆಸ್ ಸರ್ಕಾರ ಮುಂದಾಗುತ್ತಿರುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ (MC Sudhakar) ಮತ್ತೊಂದು ಮಹತ್ವದ ಸುಳಿವು ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಎನ್‌ಇಪಿ ಬದಲಾಯಿಸಿ, ಎಸ್ಇಪಿ ಜಾರಿಗೊಳಿಸುತ್ತೇವೆ. ಈ ಹಿಂದೆ ತರಾತುರಿಯಲ್ಲಿ ಎನ್‌ಇಪಿ ಜಾರಿಗೊಳಿಸಲಾಗಿತ್ತು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಇದೀಗ ಹದಿನೈದು ಸಾವಿರ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ 32 ವಿಶ್ವವಿದ್ಯಾಲಯಗಳಿವೆ. ಆಯವ್ಯಯದ ಆರು ಶೇಕಡಾ ಅನುದಾನ ಶಿಕ್ಷಣ ಇಲಾಖೆಗೆ ನೀಡಬೇಕು ಎಂದು ಹೇಳಲಾಗುತ್ತದೆ. ಆದರೆ ಹಿಂದಿನ ಸರ್ಕಾರ 5400 ಕೋಟಿ ರೂ. ನೀಡಿತ್ತು. ಬಜೆಟ್ನ ಶೇಕಡಾ 1.7 ರಷ್ಟು ಅನುದಾನ ಮಾತ್ರ ಉನ್ನತ ಶಿಕ್ಷಣ ಇಲಾಖೆಗೆ ಬಂದಿದೆ. ಬಹುತೇಕ ಅನುದಾನ ಸಂಬಳಕ್ಕೆ ಹೋಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಇಲಾಖೆಯ ಅನುಧಾನ ಹೆಚ್ಚಾಗಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಅತಿಥಿ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿದ್ದ ಪಠ್ಯ ಪುಸ್ತಕವನ್ನು ಕೈಬಿಟ್ಟು ಅದಕ್ಕೂ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿದ್ದ ಪಠ್ಯವನ್ನೇ ಬೋಧಿಸುವಂತೆ ಕೆಲವು ದಿನಗಳ ಹಿಂದಷ್ಟೇ ಸರ್ಕಾರ ಆದೇಶಿಸಿದೆ. ಇದರ ಬೆನ್ನಲ್ಲೇ ಇದೀಗ ಉನ್ನತ ಶಿಕ್ಷಣ ಸಚಿವರು ಎನ್‌ಇಪಿ ರದ್ದತಿ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಎನ್‌ಇಪಿ ರದ್ದುಗೊಳಿಸುವ ಬಗ್ಗೆ ಅಧಿಕೃತ ಘೋಷಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಇತ್ತೀಚೆಗೆ ಬೆಳಗಾವಿಯಲ್ಲಿ ಹೇಳಿದ್ದರು.
ಇದನ್ನೂ ಓದಿ: ಎನ್‌ಇಪಿ ರದ್ದು ವಿಚಾರ; ವಿದ್ಯಾರ್ಥಿಗಳ ಹಿತ ನೋಡಿಕೊಂಡು ಮುಂದಿನ ನಿರ್ಧಾರ ಮಾಡ್ತೀವಿ ಎಂದ ಸಚಿವ ಡಾ. ಎಂಸಿ ಸುಧಾಕರ್
ಕರ್ನಾಟಕದ ಎಲ್ಲಾ 30 ವಿಶ್ವವಿದ್ಯಾಲಯಗಳ ಉಪಕುಲಪತಿಗಳು ರಾಜ್ಯದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ಅನ್ನು ರದ್ದುಗೊಳಿಸದೆ ಮುಂದುವರಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ಇತ್ತೀಚೆಗೆ ವರದಿಯಾಗಿತ್ತು. ಎಂಸಿ ಸುಧಾಕರ್ ಅವರು ಉಪಕುಲಪತಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ್ದರು. ಎನ್ಇಪಿಯ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಪರಿಗಣಿಸಿದ ನಂತರ, ಉಪಕುಲಪತಿಗಳ ಒಟ್ಟಾರೆ ಅಭಿಪ್ರಾಯವು ನೀತಿಯನ್ನು ಮುಂದುವರೆಸುವ ಪರವಾಗಿ ಇತ್ತು. ಈ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ರಾಜ್ಯದ ವಿಶ್ವವಿದ್ಯಾಲಯಗಳು ವಿವಿಧ ಹಂತಗಳಲ್ಲಿ ಅದರ ಅನುಷ್ಠಾನದಲ್ಲಿ ಈಗಾಗಲೇ ಎರಡು ವರ್ಷ ಮುಂದಿವೆ ಎಂದು ಉಪಕುಲಪತಿಗಳು ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:10 pm, Mon, 19 June 23