Karnataka Hijab Hearing: ಹಿಜಾಬ್ ವಿವಾದ ವಿಚಾರಣೆಯನ್ನು ನಾಳೆಗೆ ಮುಂದೂಡಿ ಹೈಕೋರ್ಟ್ ಆದೇಶ
Karnataka Hijab Case Plea Hearing Updates: ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಇಡೀ ರಾಜ್ಯ ಕಾದು ಕುಳಿತಿದೆ. ಇಂದು ಮಧ್ಯಾಹ್ನ 2.30ಕ್ಕೆ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದ್ದು ಕೆಲ ದಿನಗಳು ಕಳೆದಿವೆ. ಉಡುಪಿಯಲ್ಲಿ ಆರಂಭವಾದ ಸಮವಸ್ತ್ರ (Uniform) ಸಮರ ಚರ್ಚೆ ಇಡೀ ದೇಶದಾದ್ಯಂತ ವ್ಯಾಪಿಸಿದೆ. ಹಿಜಾಬ್ ನಮ್ಮ ಹಕ್ಕು ಅಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಹಿಜಾಬ್ ಧರಿಸುವವರೆಗೂ ಕೇಸರಿ ಶಾಲು ಧರಿಸುತ್ತೇವೆ ಅಂತ ವಿದ್ಯಾರ್ಥಿಗಳು ಪಟ್ಟು ಬಿದ್ದಿದ್ದಾರೆ. ಈ ಮಧ್ಯೆ ವಿವಾದದ ಬಗ್ಗೆ ನಿನ್ನೆ (ಫೆಬ್ರವರಿ 16) ಹೈಕೋರ್ಟ್ನಲ್ಲಿ ವಿಚಾರಣೆ ನಡೆಸಲಾಗಿತ್ತು. ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಇಡೀ ರಾಜ್ಯ ಕಾದು ಕುಳಿತಿದೆ. ಮತ್ತೆ, ಇಂದು ಮಧ್ಯಾಹ್ನ 2.30ಕ್ಕೆ ಕೋರ್ಟ್ನಲ್ಲಿ ವಿಚಾರಣೆ ಆರಂಭವಾಗಿತ್ತು. ಹಿಜಾಬ್ ಸಂಬಂಧ ಪಿಐಎಲ್ ಹಾಗೂ ರಿಟ್ ಅರ್ಜಿ ವಿಚಾರಣೆ ನಡೆಸಲಾಗಿತ್ತು. ಆದರೆ, ಮತ್ತೆ ಇಂದು ವಿಚಾರಣೆಯನ್ನು ಮುಂದೂಡಿ ಆದೇಶ ನೀಡಲಾಗಿದೆ. ಹಿಜಾಬ್ ವಿವಾದದ ವಿಚಾರಣೆ ನಾಳೆ (ಫೆಬ್ರವರಿ 18) ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
LIVE NEWS & UPDATES
-
ಹಿಜಾಬ್ ವಿವಾದ: ಸಚಿವ ಡಾ. ಅಶ್ವತ್ಥ್ ನಾರಾಯಣ ಶಾಸಕ ಯು.ಟಿ.ಖಾದರ್ ಭೇಟಿ
ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಸಚಿವ ಡಾ.ಅಶ್ವತ್ಥ್ ಶಾಸಕ ಯು.ಟಿ.ಖಾದರ್ ಭೇಟಿಯಾಗಿದ್ದಾರೆ. ವಿಕಾಸಸೌಧದಲ್ಲಿ ಅಶ್ವತ್ಥ್ ನಾರಾಯಣ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಪದವಿ ಕಾಲೇಜುಗಳಲ್ಲಿನ ವಸ್ತ್ರಸಂಹಿತೆ ಗೊಂದಲ ಬಗ್ಗೆ ಚರ್ಚೆ ಮಾಡಲಾಗಿದೆ.
-
ರಾಮನಗರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 3 ದಿನಗಳ ಕಾಲ ಆನ್ ಲೈನ್ ಕ್ಲಾಸ್ ನಡೆಸಲು ಸೂಚನೆ
ಇತ್ತ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರವಾಗಿ ರಾಮನಗರ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪಾಠ ಕೇಳಲು ಮನವಿ ಮಾಡಿದ್ರು. ಅಧಿಕಾರಿಗಳು ಹಾಗೂ ಪ್ರಾಂಶುಪಾಲರು ಮನವರಿಕೆ ಮಾಡಿದ್ರು ಪ್ರಯತ್ನ ಮಾಡಿದ್ರು. ಆದರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಡಿಸಿ ಜಾರಿ ಮಾಡಿಲ್ಲ. ಹೀಗಾಗಿ ಕೆಲ ಗೊಂದಲ ಆಗಿದೆ. ಈ ಹಿಂದಿನಿಂದಲೂ ಯೂನಿಫಾರ್ಮ್ ಹಾಕಿಕೊಂಡು ಬರುತ್ತಿದ್ದಾರೆ. ಇಂತಹದ್ದೇ ಯೂನಿಫಾರ್ಮ್ ಹಾಕಿಕೊಂಡು ಬರಬೇಕು ಎಂಬ ಕಡತ ಆಗಿಲ್ಲ. ಕಡತಗಳ ಪರಿಶೀಲನೆ ಮಾಡಲಾಗಿದೆ. ಕಾಲೇಜಿನಲ್ಲಿ ಗೊಂದಲವಾತವರಣ ಇದ್ದ ಕಾರಣ, ಮುಂದಿನ 3 ದಿನಗಳ ಕಾಲ ಆನ್ ಲೈನ್ ಕ್ಲಾಸ್ ನಡೆಸಲು ಸೂಚನೆ ನೀಡಲಾಗಿದೆ. ನಿನ್ನೆ ತಹಶೀಲ್ದರ್ ನೇತೃತ್ವದಲ್ಲಿ ಶಾಂತಿ ಸಭೆ ಮಾಡಲಾಗಿದೆ. ವರದಿಗಳ ಆಧಾರ ಮೇಲೆ ಆನ್ ಲೈನ್ ಕ್ಲಾಸ್ ಮಾಡಲು ಸೂಚನೆ ನೀಡಲಾಗಿದೆ. ಸಿಡಿಸಿ ಇಲ್ಲದ ಕಾಲೇಜಿನಲ್ಲಿ ಹಿಜಾಬ್ ಗೆ ಅವಕಾಶ ನೀಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
-
ಹಿಜಾಬ್ ಹಿಂದೆ ಇಸ್ಲಾಮಿಕ್ ಶಕ್ತಿಗಳಿವೆ: ಪ್ರಮೋದ್ ಮುತಾಲಿಕ್
ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಶ್ಯಾಡಂಬಿ ಗ್ರಾಮದಲ್ಲಿ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿದ್ದಾರೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಶಿಕ್ಷಣಕ್ಕಿಂತ ನಮಗೆ ಹಿಜಾಬ್ ಮುಖ್ಯ ಎಂದು ಹೇಳುತ್ತಿದ್ದಾರೆ. ಹಿಜಾಬ್ ಹಿಂದೆ ಇಸ್ಲಾಮಿಕ್ ಶಕ್ತಿಗಳಿವೆ. ವಿದ್ಯಾರ್ಥಿಗಳು ಮಾತ್ರವಲ್ಲದ ಅವರ ಪೋಷಕರು, SDPI, ಪಿಎಫ್ಐ ಸಂಘಟನೆ ಕಾಲೇಜು ಬಳಿ ಧರಣಿ ಮಾಡುತ್ತಿವೆ. ಸರ್ಕಾರ ಯಾಕೆ ಇಂಥವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ ಇವರನ್ನ ಈಗಲೇ ಹದ್ದುಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ನಾವೇ ಬೀದಿಗೆ ಇಳಿಯಬೇಕಾಗುತ್ತೆ ಎಂದು ಮುತಾಲಿಕ್ ಹೇಳಿದ್ದಾರೆ.
ವಿಚಾರಣೆ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ
ಹಿಜಾಬ್ ವಿಚಾರಣೆ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ. ನಾಳೆ (ಫೆಬ್ರವರಿ 18) ರಾಜ್ಯ ಸರ್ಕಾರದ ಪರ ವಾದಮಂಡನೆ ನಡೆಯಲಿದೆ. ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿ ಕೋರ್ಟ್ ಆದೇಶ ಹಿನ್ನೆಲೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲಾ ಕಾಲೇಜುಗಳು, ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ, ತರಗತಿಗಳಲ್ಲಿ ಕೇಸರಿ ಶಾಲು, ಸ್ಕಾರ್ಫ್, ಹಿಜಾಬ್, ಧಾರ್ಮಿಕ ಬಾವುಟ ಧರಿಸದಂತೆ ಸೂಚನೆ ನೀಡಲಾಗಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಎರಡೂ ಕಡೆಯವರು ಒಪ್ಪಿದರೆ ಮಾತ್ರ ರಾಜಿ ಸಂಧಾನ ಸಾಧ್ಯ
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಪರ ಜಿ.ಆರ್.ಮೋಹನ್ ವಾದ ಮಂಡಿಸಿದ್ದಾರೆ. ಸರ್ಕಾರದ ಹಿಜಾಬ್ ನಿರ್ದೇಶನ ನಮಗೆ ಅನ್ವಯವಾಗುವುದಿಲ್ಲ. ಈ ಬಗ್ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ರಾಜಿ ಸಂಧಾನಕ್ಕೆ ಪ್ರಕರಣ ಒಪ್ಪಿಸಲು ವಕೀಲೆಯೊಬ್ಬರ ಮನವಿ ಮಾಡಲಾಗಿದೆ. ಈ ಬಗ್ಗೆ ನಾನು ಮಧ್ಯಂತರ ಅರ್ಜಿ ಸಲ್ಲಿಸಿದ್ದೇನೆ. ರಾಜಿ ಸಂಧಾನಕ್ಕೆ ಒಪ್ಪಿಸಿದರೆ ಸಮಸ್ಯೆ ಬಗೆಹರಿಯಬಹುದು ಎಂದು ಮಧ್ಯಂತರ ಅರ್ಜಿದಾರ ವಕೀಲೆಯ ವಾದ ಮಂಡಿಸಲಾಗಿದೆ. ಎರಡೂ ಕಡೆಯವರು ಒಪ್ಪಿದರೆ ಮಾತ್ರ ರಾಜಿ ಸಂಧಾನ ಸಾಧ್ಯ, ಇಲ್ಲಿ ಸಂವಿಧಾನಿಕ ಪ್ರಶ್ನೆಗಳನ್ನು ಉಲ್ಲೇಖಿಸಲಾಗಿದೆ ಎಂದು ಸಿಜೆ ಹೇಳಿದ್ದಾರೆ.
ಹಿಜಾಬ್ ಹಾಗೂ ಗಡ್ಡ ಬಿಡುವುದರ ಬಗ್ಗೆ ಕೋರ್ಟ್ ತೀರ್ಪುಗಳಿವೆ: ಸುಭಾಷ್ ಝಾ
ಮಧ್ಯಂತರ ಅರ್ಜಿದಾರರ ಪರ ಸುಭಾಷ್ ಝಾ ಮನವಿ ಮಾಡಿದ್ದಾರೆ. ನನಗೆ ಅರ್ಧ ಗಂಟೆ ಸಮಯ ಕೊಡಿ, ಒಂದು ಕಡೆಯ ವಾದ ಮಾತ್ರ ಕೇಳಲಾಗಿದೆ. ನನ್ನ ವಾದವನ್ನು ಹೇಳಲು ಅವಕಾಶ ಕೊಡಿ ಎಂದು ವಕೀಲ ಸುಭಾಷ್ ಝಾ ಮನವಿ ಮಾಡಿದ್ದಾರೆ. ಮಧ್ಯಂತರ ಅರ್ಜಿದಾರರ ವಾದ ಕೇಳಬೇಕೇ ಬೇಡವೇ ನಿರ್ಧರಿಸಿಲ್ಲ. ಮೊದಲಿಗೆ ಅರ್ಜಿದಾರರು ಪ್ರತಿವಾದಿಗಳ ವಾದ ಕೇಳುತ್ತೇವೆ, ನಂತರ ಮಧ್ಯಂತರ ಅರ್ಜಿಗಳ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಸಿಜೆ ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್ ಹಾಗೂ ಗಡ್ಡ ಬಿಡುವುದರ ಬಗ್ಗೆ ಕೋರ್ಟ್ ಗಳ ತೀರ್ಪುಗಳಿವೆ. ಇದರ ಬಗ್ಗೆ ನಾನು ಕೋರ್ಟ್ ಗಮನಕ್ಕೆ ತರಬಯಸುತ್ತೇನೆ ಎಂದು ಸುಭಾಷ್ ಝಾ ಹೇಳಿದ್ದಾರೆ.
ವಕೀಲ ಎ.ಎಂ. ಧರ್ ರಿಂದ ವಾದಮಂಡನೆ
ಬಳಿಕ ಹಿರಿಯ ವಕೀಲ ಎ.ಎಂ. ಧರ್ ರಿಂದ ವಾದಮಂಡನೆ ಮಾಡಲಾಗಿದೆ. ಹಿಜಾಬ್ ಇಲ್ಲದೇ ಕಾಲೇಜಿಗೆ ಹೋಗದ ಪರಿಸ್ಥಿತಿ ಇದೆ. ನೀವು ಯಾವ ಕಾಲೇಜಿನಲ್ಲಿ ಓದುತ್ತಿದ್ದೀರಾ, ಈ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದೀರಾ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ. ನಿಮ್ಮ ಕಾಲೇಜು ನಿಮ್ಮನ್ನು ಪ್ರತಿಬಂಧಿಸಿದೆ ಎಂದು ಹೇಳುತ್ತೀರಾ ಎಂದು ನ್ಯಾ.ಕೃಷ್ಣ ದೀಕ್ಷಿತ್ ಕೇಳಿದ್ದಾರೆ. ಹೌದು ಈ ಅಂಶವನ್ನು ನಾವು ಅರ್ಜಿಯಲ್ಲಿ ಉಲ್ಲೇಖಿಸಿದ್ದೇವೆ ಎಂದು ಎ.ಎಂ.ಧರ್ ಹೇಳಿದ್ದಾರೆ. ಪಿಯುಸಿ ಎಂದು ಉಲ್ಲೇಖಿಸಿದ್ದೇವೆ, ಕ್ಷಮಿಸಿ, ಹೆಸರನ್ನು ಸೇರಿಸಲು ಅನುಮತಿ ಕೋರುತ್ತೇನೆ. ಬೆಂಗಳೂರಿನಲ್ಲಿ ನಾವು ವಿದ್ಯಾಭ್ಯಾಸ ಮಾಡುತ್ತಿದ್ದೇವೆ ಎಂದು ಎ.ಎಂ. ಧರ್ ಹೇಳಿದ್ದು, ಇಂತಹ ಪ್ರಮುಖ ವಿಚಾರಣೆಯಲ್ಲಿ ಹೀಗೆ ಅರ್ಜಿ ಸಲ್ಲಿಸುವುದು ಸೂಕ್ತವೇ ಎಂದು ಅರ್ಜಿದಾರರಿಗೆ ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ.
ನಾಳೆ ಈ ಬಗ್ಗೆ ಸೂಕ್ತ ಪ್ರಮಾಣಪತ್ರ ಸಲ್ಲಿಸುತ್ತೇವೆ, ಅವಕಾಶ ಕೊಡಿ ಎಂದು ಎ.ಎಂ.ಧರ್ ಹೇಳಿದ್ದಾರೆ. ಅರ್ಜಿ ಹಿಂಪಡೆಯಲು ಅನುಮತಿ ಕೇಳಿದ್ದಾರೆ. ನಾವು ಈಗ ಅರ್ಜಿ ವಜಾಗೊಳಿಸುತ್ತೇವೆ. ಸರಿಯಾದ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತೇವೆ ಎಂದು ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದಾರೆ.
ಶುಕ್ರವಾರದಂದು ಹಿಜಾಬ್ ಧರಿಸಲು ಅನುಮತಿ ನೀಡಿ
ಈಗ ಖುರಾನ್ ನನ್ನ ಬಳಿ ಇಲ್ಲ. ಹೀಗಾಗಿ ಓದಲಾಗುವುದಿಲ್ಲ. ಹಿಜಾಬ್ ನಿರ್ಬಂಧಿಸಿದರೆ ಖುರಾನ್ ನಿರ್ಬಂಧಿಸಿದಂತೆ ಎಂದು ಕುಲಕರ್ಣಿ ಹೇಳಿದ್ದಾರೆ. ಹಿಜಾಬ್ ಮತ್ತು ಖುರಾನ್ ಎರಡು ಒಂದೇ ಎನ್ನುತ್ತೀರಾ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ. ನಾನು ಹಿಂದೂ ಬ್ರಾಹ್ಮಣ, ಹಿಜಾಬ್ ನಿರ್ಬಂಧಿಸಿದರೆ ಖುರಾನ್ ನಿರ್ಬಂಧಿಸಿದಂತೆ ಎಂದು ಕುಲಕರ್ಣಿ ಹೇಳೀದ್ದಾರೆ. ಮಧ್ಯಂತರ ಆದೇಶ ನೀಡಲು ಕುಲಕರ್ಣಿ ಮನವಿ ಮಾಡಿದ್ದಾರೆ. ಶುಕ್ರವಾರದಂದು ಹಿಜಾಬ್ ಧರಿಸಲು ಅನುಮತಿ ನೀಡಿ. ಕುಚ್ ಕಾಕರ್ ಕುಚ್ ಪಾನಾ ಹೈ ಎಂದು ಅರ್ಜಿದಾರ ಮತ್ತೆ ಹಾಡು ಹೇಳಿದ್ದಾರೆ. ನಿಮ್ಮ ವಾದ ಮುಗಿದಿದ್ದರೆ ಧನ್ಯವಾದಗಳು ಎಂದು ಸಿಜೆ ತಿಳಿಸಿದ್ದಾರೆ.
ಏಕಾಏಕಿ ಹಿಜಾಬ್ ತೆಗೆಯಿರಿ ಅಂದರೆ ಹೇಗೆ ಸಾಧ್ಯ?: ಜಮೀರ್ ಅಹ್ಮದ್
ಮುಸ್ಲಿಂ ವಿದ್ಯಾರ್ಥಿಗಳು ನೂರಾರು ವರ್ಷಗಳಿಂದ ಹಿಜಾಬ್ ಧರಿಸುತ್ತಿದ್ದಾರೆ. ಏಕಾಏಕಿ ಹಿಜಾಬ್ ತೆಗೆಯಿರಿ ಅಂದರೆ ಹೇಗೆ ಸಾಧ್ಯ? ನಾವು ಕೋರ್ಟ್ ಆದೇಶವನ್ನ ಪಾಲನೆ ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಕಳೆದ ತಿಂಗಳು ಕೇಸರಿ ಶಾಲು ಎಲ್ಲಿಂದ ಬಂತು? ಕೆಲವು ಕಾಲೇಜುಗಳಲ್ಲಿ ಷಡ್ಯಂತ್ರ ನಡೆಯುತ್ತಿದೆ. ಕಾಣದ ಕೈಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಹಲವು ವಿದ್ಯಾರ್ಥಿಗಳಿಗೆ ಒಳಗೆ ಹೋಗಲು ಬಿಡುತ್ತಿಲ್ಲ. ರಾಜ್ಯ ಸರ್ಕಾರ ಆದೇಶವನ್ನ ಹಿಂಪಡೆಯಬೇಕು. ಕೋರ್ಟ್‌ನ ಅಂತಿಮ ತೀರ್ಪಿನ ಬಗ್ಗೆ ವಿಶ್ವಾಸವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಓಲೆ, ಜುಮುಕಿ, ಕುಂಕುಮ, ಲಿಫ್ಟಿಕ್ಗೆ ಡ್ರೆಸ್ಗೂ ಸಂಬಂಧವಿಲ್ಲ: ಬಿಸಿ ನಾಗೇಶ್
ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಡ್ರಸ್ ಕೋಡ್ ಇಲ್ಲ. ಡ್ರೆಸ್ ಕೋಡ್ ಇರುವ ಕಾಲೇಜಿನಲ್ಲಿ ನಿಯಮ ಪಾಲಿಸಬೇಕು. ನಿನ್ನೆ ಮಲ್ಲೇಶ್ವರಂನ ಮಹಿಳಾ ಕಾಲೇಜುನಲ್ಲಿ ಪ್ರಚೋದಿಸಿದ್ದಾರೆ. ಯುವ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರು ಹೋಗಿದ್ದರಂತೆ. ಯಾರು ಪ್ರವೋಕ್ ಮಾಡ್ತಿದ್ದಾರೆ ಅನ್ನೋದು ತನಿಖೆಯಾಗ್ತಿದೆ. ಅಲಂಕಾರದ ವಸ್ತುಗಳ ಬಗ್ಗೆ ನಾವು ಯಾವತ್ತೂ ಮಾತಾಡಿಲ್ಲ. ಓಲೆ, ಜುಮುಕಿ, ಕುಂಕುಮ, ಲಿಫ್ಟಿಕ್ಗೆ ಡ್ರೆಸ್ಗೂ ಸಂಬಂಧವಿಲ್ಲ. ನೂತನ ಸಮವಸ್ತ್ರ ನೀತಿ ಜಾರಿ ಬಗ್ಗೆ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ. ಹೈಕೋರ್ಟ್ ಆದೇಶದ ನಂತರ ತೀರ್ಮಾನ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಹೈಸ್ಕೂಲ್ ಪ್ರಾರಂಭವಾದ ಬಳಿಕ ಕೆಲವೆಡೆ ಗೊಂದಲ ಆಗಿದೆ. ಎಲ್ಲರೂ ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು. ನಿನ್ನೆ 112 ಮಕ್ಕಳು ಕಾಲೇಜಿನಿಂದ ವಾಪಸ್ ಹೋಗಿದ್ದಾರೆ. ಇವತ್ತು 38 ಮಕ್ಕಳು ಕಾಲೇಜಿನಿಂದ ವಾಪಸ್ ಹೋಗಿದ್ದಾರೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.
ಖುರಾನ್ ನಲ್ಲಿ ಹಿಜಾಬ್ ಬಗ್ಗೆ ಎಲ್ಲಿ ಹೇಳಿದೆ ಓದಿ ಎಂದ ಸಿಜೆ
ನಿಮ್ಮ 1ನೇ ಮನವಿ, 2ನೆ ಮನವಿ ಒಂದಕ್ಕೊಂದು ವಿರುದ್ಧವಾಗಿದೆ. 1ನೇ ಮನವಿಯಲ್ಲಿ ಸಮವಸ್ತ್ರ ಕೇಳಿದ್ದೀರಾ, 2ನೇ ಮನವಿಯಲ್ಲಿ ಹಿಜಾಬ್ ಕೇಳುತ್ತಿದ್ದೀರ ಎಂದು ಅರ್ಜಿದಾರರಿಗೆ ಸಿಜೆ ಪ್ರಶ್ನೆ ಮಾಡಿದ್ದಾರೆ. ಕುಚ್ ಪಾಕರ್ ಕುಚ್ ಕೋನಾ ಹೈ, ಕುಚ್ ಕೋಕರ್ ಕುಚ್ ಪಾನಾ ಹೈ ಎಂದು ಅರ್ಜಿದಾರ ಲತಾ ಮಂಗೇಶ್ಕರ್ ಹಾಡು ಉಲ್ಲೇಖಿಸಿದ್ದಾರೆ. ಹಿಜಾಬ್ ಸಾರ್ವಜನಿಕ ಸುವ್ಯವಸ್ಥೆಗೆ ವಿರುದ್ಧವಾಗಿಲ್ಲ. ಹೀಗಾಗಿ ಶುಕ್ರವಾರ ಹಿಜಾಬ್ ಧರಿಸಲು ಅನುಮತಿ ಕೊಡಿ. ಒಂದು ಪಡೆಯಬೇಕಾದರೆ ಒಂದನ್ನು ಕಳೆದುಕೊಳ್ಳಬೇಕು ಎಂದು ಕುಲಕರ್ಣಿ ಹೇಳಿದ್ದಾರೆ. ಖುರಾನ್ ನಲ್ಲಿ ಹಿಜಾಬ್ ಬಗ್ಗೆ ಎಲ್ಲಿ ಹೇಳಿದೆ ಓದಿ ಎಂದು ಸಿಜೆ ಕೇಳಿದ್ದಾರೆ.
ಅರ್ಜಿಯಲ್ಲಿ ನೀವು ಕೇಳುತ್ತಿರುವ ಮನವಿಗಳೇನು; ಸಿಜೆ ಪ್ರಶ್ನೆ
ಪಿಐಎಲ್ ಅರ್ಜಿದಾರ ಡಾ.ವಿನೋದ್ ಜಿ ಕುಲಕರ್ಣಿ ವಾದಮಂಡನೆ ಮಾಡುತ್ತಿದ್ದಾರೆ. ಹಿಜಾಬ್ ವಿವಾದದಿಂದ ವಿದ್ಯಾರ್ಥಿನಿಯರ ಮಾನಸಿಕ ಆರೋಗ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ಹೇಳಿದ್ದಾರೆ. ಮೊದಲು ನೀವು ನಿಯಮದಂತೆ ಪಿಐಎಲ್ ಸಲ್ಲಿಸಿದ್ದೀರಾ ತಿಳಿಸಿ ಎಂದು ಸಿಜೆ ಕೇಳಿದ್ದಾರೆ. ಅರ್ಜಿದಾರರ ಪ್ರಮಾಣಪತ್ರವನ್ನು ಹೈಕೋರ್ಟ್ ಪರಿಶೀಲಿಸುತ್ತಿದೆ. ಅರ್ಜಿಯಲ್ಲಿ ನೀವು ಕೇಳುತ್ತಿರುವ ಮನವಿಗಳೇನು? ಕನಿಷ್ಟ ಪಕ್ಷ ಶುಕ್ರವಾರದಂದು ಹಿಜಾಬ್ ಧರಿಸಲು ಅನುಮತಿ ನೀಡಿ. ರಂಜಾನ್ ನಂದು ಹಿಜಾಬ್ ಧರಿಸಲು ಅನುಮತಿ ನೀಡಲು ಕೋರುತ್ತಿದ್ದೇನೆ. ನೀವು ಪೇಜ್ ನಂಬರ್ 9 ರಲ್ಲಿ ಕೋರಿರುವ ಮನವಿ ಓದಿ ಎಂದು ಸಿಜೆ ಹೇಳಿದ್ದಾರೆ.
ಹೈಕೋರ್ಟ್ ಪಿಐಎಲ್ ನಿಯಮಗಳಿಗೆ ಅನುಸಾರ ಅರ್ಜಿ ಸಲ್ಲಿಕೆಯಾಗಿಲ್ಲ; ಕೊತ್ವಾಲ್ಗೆ ತಿಳಿಸಿದ ಸಿಜೆ
ಹೈಕೋರ್ಟ್ ನಿಯಮದಂತೆ ನೀವು ಪ್ರಮಾಣಪತ್ರ ಸಲ್ಲಿಸಿದ್ದೀರಾ? ಪಿಐಎಲ್ ಹಾಕುವವರು ನಿಯಮ ಪಾಲಿಸಬೇಕೆನ್ನುವುದು ತಿಳಿದಿದೆಯೇ? ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ. ಹೈಕೋರ್ಟ್ ನಿಯಮದಂತೆ ಪ್ರಮಾಣಪತ್ರ ಸಲ್ಲಿಸಿದ್ದೇವೆ ಕೊತ್ವಾಲ್ ಹೇಳಿದ್ದಾರೆ ಇಂತಹ ಅರ್ಜಿಗಳ ಮೂಲಕ ಕೋರ್ಟ್ ಸಮಯ ವ್ಯರ್ಥ ಮಾಡ್ತಿದ್ದೀರಾ? ಎಂದು ನ್ಯಾ.ಕೃಷ್ಣ ದೀಕ್ಷಿತ್ ಕೇಳಿದ್ದಾರೆ. ಸೂಕ್ತವಾದ ಅರ್ಜಿ ಸಲ್ಲಿಸಿಲ್ಲ, ಪೇಜ್ ನಂಬರ್ ಸರಿಯಾಗಿ ಹಾಕಿಲ್ಲ ಎಂದು ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಸಾಮಾಜಿಕ ಆರ್ಥಿಕ ಒಪ್ಪಂದಗಳನ್ನು ತಪ್ಪಾಗಿ ಉಲ್ಲೇಖಿಸುತ್ತಿದ್ದೀರಾ. ನಿಮ್ಮ ಅರ್ಜಿ ನಿಯಮದ ಪ್ರಕಾರವಿಲ್ಲ. ನೀವು 5 ನಿಮಿಷ ಕೊಟ್ಟರೆ ವಾದ ಮುಗಿಸುತ್ತೇನೆ. ಮಹತ್ವದ ಪ್ರಕರಣದಲ್ಲಿ ತಾಂತ್ರಿಕ ಆಕ್ಷೇಪಣೆ ಬೇಡವೆಂದು ಕೋರುತ್ತೇನೆ ಎಂದು ಹೈಕೋರ್ಟ್ ಗೆ ರಹಮತ್ ಉಲ್ಲಾ ಕೊತ್ವಾಲ್ ಮನವಿ ಮಾಡಿದ್ದಾರೆ. ಹೈಕೋರ್ಟ್ ಯಾವ ನಿಯಮ ಅನುಸರಿಸಬೇಕೆಂದು ಹೇಳಬಯಸುತ್ತೀರಾ? ಹೈಕೋರ್ಟ್ ಪಿಐಎಲ್ ನಿಯಮಗಳಿಗೆ ಅನುಸಾರ ಸಲ್ಲಿಕೆಯಾಗಿಲ್ಲ. ಹೀಗಾಗಿ ನಾವು ಈ ಪಿಐಎಲ್ ಅನ್ನು ವಜಾಗೊಳಿಸುತ್ತಿದ್ದೇವೆ ಎಂದು ಸಿಜೆ ಹೇಳಿದ್ದಾರೆ. ಬಳಿಕ, ಪಿಐಎಲ್ ಅರ್ಜಿದಾರ ಡಾ.ವಿನೋದ್ ಜಿ ಕುಲಕರ್ಣಿ ವಾದಮಂಡನೆ ಮಾಡುತ್ತಿದ್ದಾರೆ.
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಅರ್ಜಿ ವಿಚಾರ; ಹೈಕೋರ್ಟ್ನಲ್ಲಿ ವಿಚಾರಣೆ ಆರಂಭ
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಅರ್ಜಿ ವಿಚಾರ ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಆರಂಭ ಆಗಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಪೂರ್ಣ ಪೀಠ ವಿಚಾರಣೆ ನಡೆಸುತ್ತಿದೆ.
ಹಿಜಾಬ್‌ಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ
ವಿಜಯಪುರ ಡಿಸಿ ಕಚೇರಿ ಎದುರು ಹಿಜಾಬ್ ಪರ ಹೋರಾಟ ನಡೆಯುತ್ತಿದೆ. ಮುಸ್ಲಿಂ ಮುಖಂಡರು, ವಿದ್ಯಾರ್ಥಿನಿಯರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಶಾಲಾ ಕಾಲೇಜಿನಲ್ಲಿ ಹಿಜಾಬ್‌ಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. ಹೆಚ್ಚುವರಿ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನೆ ಮಾಡಲಾಗಿದೆ.
ಕಾಲೇಜಿಗೆ ಪ್ರವೇಶ ನಿರಾಕರಿಸಿದ್ದರಿಂದ ಮನೆಗೆ ತೆರಳಿದ ವಿದ್ಯಾರ್ಥಿನಿಯರು
ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು, ಕಾಲೇಜಿಗೆ ಪ್ರವೇಶ ನಿರಾಕರಿಸಿದ್ದರಿಂದ ಮನೆಗೆ ತೆರಳಿದ ಘಟನೆ ಬಾಗಲಕೋಟೆಯ ವಿಜಯಚೇತನಾ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದು ತರಗತಿಗೆ ಹೋಗುವಂತೆ ಸಿಬ್ಬಂದಿ ಸೂಚನೆ ನೀಡಿದ್ದರು. ಹಿಜಾಬ್ ತೆಗೆಯಲು ನಿರಾಕರಿಸಿ ಗೇಟ್ನಲ್ಲಿ ಕಾದು ನಿಂತಿದ್ದರು. ಬಳಿಕ, ಪ್ರವೇಶ ನಿರಾಕರಿಸಿದ್ದರಿಂದ ಮನೆಗೆ ತೆರಳಿದ್ದಾರೆ. ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಹಿಜಾಬ್ ತೆಗೆಯದಿದ್ದರಿಂದ ಪಾಠ ಮಾಡದ ಉಪನ್ಯಾಸಕರು
ಹಿಜಾಬ್ ತೆಗೆಯದಿದ್ದರಿಂದ ಉಪನ್ಯಾಸಕರು ಪಾಠ ಮಾಡದ ಘಟನೆ ಬೆಳಗಾವಿಯ ವಿಜಯ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿದ್ದ ಆಡಳಿತ ಮಂಡಳಿ, 20 ವಿದ್ಯಾರ್ಥಿಗಳ ಮನವೊಲಿಕೆಗೆ ಯತ್ನಿಸಿತ್ತು. ಆದರೆ, ಹಿಜಾಬ್ ತೆಗೆಯುವುದಿಲ್ಲವೆಂದು ವಿದ್ಯಾರ್ಥಿನಿಯರ ಬಿಗಿಪಟ್ಟು ಹಿಡಿದಿದ್ದಾರೆ. ಹೀಗಾಗಿ, 2 ಗಂಟೆ ಪ್ರತ್ಯೇಕವಾಗಿ ಕೂತಿದ್ದು ವಿದ್ಯಾರ್ಥಿನಿಯರು ತೆರಳಿದ್ದಾರೆ.
ಸುಡು ಬಿಸಿಲಿನಲ್ಲೇ ಭಿತ್ತಿ ಪತ್ರ ಹಿಡಿದು ವಿದ್ಯಾರ್ಥಿನಿಯರ ಧರಣಿ
ಯಾದಗಿರಿ ಜಿಲ್ಲೆ ಗುರುಮಠಕಲ್ ಸರ್ಕಾರಿ ಪಿಯು ಕಾಲೇಜು ಬಳಿ ಹಿಜಾಬ್ ಧರಿಸಿ ಕಾಲೇಜು ಒಳಗೆ ಹೋಗುತ್ತೇವೆಂದು ಪಟ್ಟು ಹಿಡಿದ ಘಟನೆ ನಡೆದಿದೆ. ಕಾಲೇಜು ಬಳಿ ವಿದ್ಯಾರ್ಥಿಗಳ ಜತೆ ಪೋಷಕರ ಹೈಡ್ರಾಮಾ ಕಂಡುಬಂದಿದೆ. ಇತ್ತ ಬೆಳಗಾವಿ ಜಿಲ್ಲೆ ಗೋಕಾಕ್ನ GSS ಕಾಲೇಜು ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಕಳೆದ 3 ಗಂಟೆಯಿಂದ ಗೇಟ್ ಮುಂದೆ ವಿದ್ಯಾರ್ಥಿನಿಯರ ಧರಣಿ ನಡೆಸುತ್ತಿದ್ದಾರೆ. ಸುಡು ಬಿಸಿಲಿನಲ್ಲೇ ಭಿತ್ತಿ ಪತ್ರ ಹಿಡಿದು ವಿದ್ಯಾರ್ಥಿನಿಯರು ಹಿಜಾಬ್‌ಗೆ ಅವಕಾಶ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಕಾಲೇಜಿಗೆ ತಹಶೀಲ್ದಾರ್, ಶಿಕ್ಷಣ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ್ದಾರೆ. ಆದರೆ, ಅಧಿಕಾರಿಗಳ ಮನವೊಲಿಕೆಯನ್ನು ವಿದ್ಯಾರ್ಥಿನಿಯರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.
ಮನೆಯಲ್ಲಿ ಹಿಜಾಬ್ ಹಾಕಿಕೊಂಡು ಹೋಗು ಅಂತಾರೆ, ಕಾಲೇಜಿನಲ್ಲಿ ಹಾಕಿಕೊಳ್ಳಬೇಡಿ ಅಂತಾರೆ
ಮನೆಯಲ್ಲಿ ಹಿಜಾಬ್ ಹಾಕಿಕೊಂಡು ಹೋಗು ಅಂತಾರೆ, ಕಾಲೇಜಿನಲ್ಲಿ ಹಾಕಿಕೊಳ್ಳಬೇಡಿ ಅಂತಾರೆ ನಾವು ಏನ್ ಮಾಡೋಣ ಎಂದು ಬೆಳಗಾವಿಯಲ್ಲಿ ವಿಜಯ್ ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಸುಝನ್ ಅಳಲು ತೋಡಿಕೊಂಡಿದ್ದಾರೆ. ಒಂದೆಡೆ ಪಾಲಕರ ಒತ್ತಡ, ಮತ್ತೊಂದೆಡೆ ಪ್ರಾಂಶುಪಾಲರ ಒತ್ತಡ ಇದೆ. ನಮಗೆ ಎಜ್ಯುಕೇಶನ್ ಸಹ ಬೇಕು, ಹಿಜಾಬ್ ಸಹ ಬೇಕು. ಈಗ ಮುಂದೆ ರಂಜಾನ್ ಬರ್ತಿದೆ. ಫೆಬ್ರವರಿ 26ರಂದು ನಮ್ಮ ಪರೀಕ್ಷೆ ಇದೆ. ಹಿಂದಿನಿಂದಲೂ ನಾವು ಹಿಜಾಬ್ ಧರಿಸಿ ಬರ್ತಿದ್ವಿ, ಈಗಲೂ ಅವಕಾಶ ನೀಡಿ ಎಂದು ಕೇಳಿಕೊಂಡಿದ್ದಾರೆ. ನಮ್ಮ ತರಗತಿಯಲ್ಲಿ ಶೇಕಡ 70ಕ್ಕಿಂತ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಬೇಕಾದ್ರೆ ನಮಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಿ. ಸೋಮವಾರದಂದು ನಿರ್ಧಾರ ಮಾಡಿ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಇಂದು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಹೈಕೋರ್ಟ್ ಆದೇಶದ ಬಗ್ಗೆ ತಿಳಿ ಹೇಳಿದ್ರು. ತರಗತಿಯಲ್ಲಿ ಹಿಜಾಬ್ ತೆಗೆದಿಟ್ಟು ಬರುವಂತೆ ಹೇಳಿದ್ರು. ನಾವು ಒಪ್ಪದಿದ್ದಕ್ಕೆ ತರಗತಿಯಲ್ಲಿ ಕೂರಲು ಅವಕಾಶ ನೀಡಲಿಲ್ಲ. ಹೈಕೋರ್ಟ್ ಆದೇಶ ಇದೆ ನೀವು ನಿರ್ಧಾರ ಮಾಡಿ ಅಂತಾ ಕಾಲೇಜು ಸಿಬ್ಬಂದಿ ಹೇಳಿದ್ದಾರೆ. ನಮ್ಮ ಪೇರೆಂಟ್ಸ್ ಹಿಜಾಬ್ ತಗಿಯಬೇಡಿ ಅಂತಾರೆ ಎಂದು ವಿದ್ಯಾರ್ಥಿ ಹೇಳಿದ್ದಾರೆ.
ವಿವಾದಕ್ಕೂ ಮೊದಲು ಇದ್ದ ಪರಿಸ್ಥಿತಿಯನ್ನೇ ಮುಂದುವರಿಸಿ: ಬಿ.ಸಿ ನಾಗೇಶ್ಗೆ ಮುಸ್ಲಿಂ ಶಾಸಕರಿಂದ ಮನವಿ
ಹಿಜಾಬ್ ವಿವಾದ, ಗೊಂದಲ ನಿವಾರಿಸುವಂತೆ ನಾಗೇಶ್ಗೆ ಮನವಿ ಮಾಡಲಾಗಿದೆ. ಪ್ರಾಥಮಿಕ & ಪ್ರೌಢಶಿಕ್ಷಣ ಸಚಿವ ನಾಗೇಶ್ಗೆ ಶಾಸಕರ ಮನವಿ ಮಾಡಲಾಗಿದೆ. ವಿಧಾನಸೌಧದಲ್ಲಿ ಮುಸ್ಲಿಂ ಸಮುದಾಯದ ಶಾಸಕರಿಂದ ಮನವಿ ಕೇಳಿಬಂದಿದೆ. ವಿವಾದಕ್ಕೂ ಮೊದಲು ಇದ್ದ ಪರಿಸ್ಥಿತಿಯನ್ನೇ ಮುಂದುವರಿಸಿ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ಗೆ ಮುಸ್ಲಿಂ ಶಾಸಕರಿಂದ ಮನವಿ ಕೇಳಿಬಂದಿದೆ. ಮುಸ್ಲಿಂ ಶಾಸಕರು ಈ ಬಗ್ಗೆ ಸಚಿವ ನಾಗೇಶ್ಗೆ ಮನವಿ ಮಾಡಿ ತೆರಳಿದ್ದಾರೆ.
ಪರೀಕ್ಷೆ ಬರೆಯದೇ ಎದ್ದು ಹೊರನಡೆದ ವಿದ್ಯಾರ್ಥಿಗಳು
ಹಿಜಾಬ್, ಕೇಸರಿ ಶಾಲು ವಿವಾದ ಮೈಸೂರು ಜಿಲ್ಲೆಗೂ ಕಾಲಿಟ್ಟಿದೆ. ಹಿಜಾಬ್ ಇಲ್ಲದೆ ಪೂರ್ವಭಾವಿ ಪರೀಕ್ಷೆ ಬರೆಯುವುದಿಲ್ಲ ಎಂದು ಹುಣಸೂರಿನ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಪಟ್ಟು ಹಿಡಿಯಲಾಗಿದೆ. ಪರೀಕ್ಷೆ ಬರೆಯದೇ ವಿದ್ಯಾರ್ಥಿಗಳು ಎದ್ದು ಹೊರನಡೆದಿದ್ದಾರೆ. ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲೂ ಸಮಸ್ಯೆ ಕಂಡುಬಂದಿದೆ. ಹಿಜಾಬ್ ಧರಿಸಿ ಪರೀಕ್ಷೆಗೆ ಅವಕಾಶ ನೀಡುವಂತೆ ಆಗ್ರಹ ಕೇಳಿಬಂದಿದೆ.
ಚಿತ್ರದುರ್ಗ ಬಾಲಕಿಯರ ಪಿಯು ಕಾಲೇಜು ಬಳಿ ಹೈಡ್ರಾಮಾ
ಚಿತ್ರದುರ್ಗ ಬಾಲಕಿಯರ ಪಿಯು ಕಾಲೇಜು ಬಳಿ ಹೈಡ್ರಾಮಾ ನಡೆಯುತ್ತಿದೆ. ಕಾಲೇಜು ಬಳಿ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಧರಣಿ ನಡೆಸಲಾಗಿದೆ. ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಬರುವ ವೇಳೆ ಕಿರಿಕ್ ನಡೆದಿದೆ. ಇಂತಹ ಫ್ರೆಂಡ್ಸ್ ಬೇಡ ಎಂದು ಧರಣಿನಿರತರ ಘೋಷಣೆ ಕೇಳಿಬಂದಿದೆ.
Karnataka Hijab Hearing Live: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಕೋರ್ಟ್ ಆದೇಶ ಪಾಲಿಸುವಂತೆ ಮನವಿ
ಹಾವೇರಿ: ಹಿಜಾಬ್ ತೆಗೆಯಲು ನಿರಾಕರಣೆ ಹಿನ್ನೆಲೆ ವಿದ್ಯಾರ್ಥಿನಿಯರನ್ನ ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರು ಕಾಲೇಜನಿಂದ ಹೊರಗೆ ಕಳುಹಿಸಿದ್ದಾರೆ. ಜಿಲ್ಲೆಯ ಹಾನಗಲ್ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಘಟನೆ ನಡೆದಿದೆ. ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯರಿಗೆ ಕೋರ್ಟ್ ಮಧ್ಯಂತರ ಆದೇಶದಂತೆ ಕಾಲೇಜಿನಲ್ಲಿ ನಡೆದುಕೊಳ್ಳುವಂತೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರು ಹೇಳಿದ್ದಾರೆ. ಅಷ್ಟಾದರೂ ಹಿಜಾಬ್ ಧರಿಸಿಕೊಂಡು ಕಾಲೇಜು ಕೊಠಡಿಯೊಳಗೆ ಕೂರಲು ಅವಕಾಶ ಕೊಡುವಂತೆ ವಿದ್ಯಾರ್ಥಿನಿಯರು ಪಟ್ಟು ಹಿಡಿದು ಕುಳಿತಿದ್ದಾರೆ. ಹಿಜಾಬ್ ತೆಗೆದು ಕೊಠಡಿಯೊಳಗೆ ಕೂರಲು ನಿರಾಕರಿಸಿದ್ದಕ್ಕೆ ಐವತ್ತಕ್ಕೂ ಅಧಿಕ ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್ನಿಂದ ಹೊರಕ್ಕೆ ಹಾಕಲಾಗಿದ್ದು, ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Karnataka Hijab Hearing Live: ಸತತ ಎರಡು ಗಂಟೆಗಳ ಕಾಲ ಮನವೊಲಿಕೆ ಕಾರ್ಯ ವಿಫಲ
ಬೆಳಗಾವಿ: ವಿಜಯ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್ ಗಲಾಟೆ ವಿಚಾರವಾಗಿ ಕಾಲೇಜಿನಿಂದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊರ ನಡೆದಿದ್ದಾರೆ. ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಸತತ ಎರಡು ಗಂಟೆಗಳ ಕಾಲ ಮನವೊಲಿಸಲಾಗಿದ್ದು, ಹಿಜಾಬ್ ತೆಗೆಯಲ್ಲಾ ಅಂತಾ ವಿದ್ಯಾರ್ಥಿನಿಯರ ಪಟ್ಟು ಹಿಡಿದಿದ್ದಾರೆ. ತರಗತಿಗೆ ಹಾಜರಾಗಲು ಅವಕಾಶ ನೀಡದ ಕಾಲೇಜು ಆಡಳಿತ ಮಂಡಳಿ, ಹಿಜಾಬ್ ತೆಗೆಯಲು ಒಪ್ಪದಿದ್ದಕ್ಕೆ ಎರಡು ಗಂಟೆ ಕುಳಿತ್ರೂ ಸಿಬ್ಬಂದಿ ಕ್ಲಾಸ್ ತೆಗೆದುಕೊಂಡಿಲ್ಲ.
Karnataka Hijab Hearing Live: ಚಿಕ್ಕೋಡಿಯಲ್ಲಿ ಕ್ಲಾಸ್ ಬಹಿಷ್ಕರಿಸಿದ ಆರು ವಿದ್ಯಾರ್ಥಿಗಳು
ಚಿಕ್ಕೋಡಿ: ಹಿಜಾಬ್‌ಗೆ ಅವಕಾಶ ಇಲ್ಲ ಅಂದಿದಕ್ಕೆ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಮನೆಗೆ ತೆರಳಿತುವಂತಹ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದಿದೆ. ಹಿಜಾಬ್ ಧರಿಸಿ ಬಂದಿದ್ದ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾಲೇಜು ಆಡಳಿತ ಮಂಡಳಿ ಇದನ್ನು ನಿರಾಕರಿಸಿದೆ. ಹಾಗಾಗಿ 6 ವಿದ್ಯಾರ್ಥಿಗಳು ಮನೆಗೆ ವಾಪಸ್ ಹೋಗಿದ್ದು, ಇನ್ನೂಳಿದ ವಿದ್ಯಾರ್ಥಿಗಳು ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗಿದ್ದಾರೆ.
Karnataka Hijab Hearing Live: ಶಿವಮೊಗ್ಗದಲ್ಲಿ ಶಾಂತಿಯುತ ಪ್ರತಿಭಟನೆ
ಶಿವಮೊಗ್ಗ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ಸಮಸ್ಯೆ ಆಗಿಲ್ಲ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಶಾಂತಿಯತ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ ಎಂದು ಟಿವಿ 9ಗೆ ಶಿವಮೊಗ್ಗ ಎಸ್ಪಿ ಬಿ ಎಂ ಲಕ್ಷ್ಮಿ ಪ್ರಸಾದ್ ಹೇಳಿಕೆ ನೀಡಿದ್ದಾರೆ. ಹಿಜಾಬ್ಗಾಗಿ ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ಕಾಲೇಜ್ನಲ್ಲಿ ಪ್ರತಿಭಟನೆ ನಡೆದಿದೆ. ಡಿಸಿ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
Karnataka Hijab Hearing Live: ಹಿಜಾಬ್ ವಿಚಾರವಾಗಿ ಧಾರವಾಡದಲ್ಲಿ ಶ್ರೀರಾಮಸೇನೆ ವತಿಯಿಂದ ಪ್ರತಿಭಟನೆ
ಧಾರವಾಡ: ಹಿಜಾಬ್ ಗಲಾಟೆ ವಿಚಾರವಾಗಿ ನಗರದಲ್ಲಿ ಶ್ರೀರಾಮಸೇನೆ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದು, ಕೋರ್ಟ್ ಸಮವಸ್ತ್ರದ ಬಗ್ಗೆ ಮಧ್ಯಂತರ ಆದೇಶ ನೀಡಿದೆ. ಆದರೆ ಮುಸ್ಲಿಂ ವಿದ್ಯಾರ್ಥಿಗಳು ಇದನ್ನು ಪಾಲಿಸುತ್ತಿಲ್ಲ. ಕೋರ್ಟ್ ಆದೇಶವಿದ್ದರೂ ಹಿಜಾಬ್ ಹಾಕುತ್ತಿದ್ದಾರೆ. ಈ ಮೂಲಕ ನ್ಯಾಯಾಂಗ ನಿಂದನೆ ಆಗುತ್ತಿದ್ದು, ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಪತ್ರ ನೀಡಲಾಗಿದೆ.
Karnataka Hijab Hearing Live: ಹಮೆ ಆಜಾದಿ ಚಾಹಿಯೇ; ಚಿತ್ರದುರ್ಗದಲ್ಲಿ ವಿದ್ಯಾರ್ಥಿಗಳ ಧರಣಿ
ಚಿತ್ರದುರ್ಗ: ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ,ಇಂದು ಕೂಡ ಹಿಜಾಬ್ ವಿವಾದ ಮುಂದುವರೆದಿದೆ. ನಗರದ ಎಸ್ ಆರ್ ಎಸ್ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಧರಣಿ ಮಾಡುತ್ತಿದ್ದಾರೆ. ಹಿಜಾಬ್ ಧರಿಸಿ ತರಗತಿಗೆ ತೆರಳಲು ಅವಕಾಶ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ಹಮೆ ಆಜಾದಿ ಚಾಹಿಯೇ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗುತ್ತಿದ್ದಾರೆ. ಸಮವಸ್ತ್ರ ನೀತಿ ಇರುವ ಕಾರಣ ಹಿಜಾಬ್ ಧರಿಸಿದವರಿಗೆ ಕಾಲೇಜು ಸಿಬ್ಬಂದಿ ನೋ ಎಂಟ್ರಿ ಎಂದಿದ್ದು, ಇಬ್ಬರ ನಡುವೆ ವಾಗ್ವಾದ ಉಂಟಾಯಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.
Karnataka Hijab Hearing Live: ಮಕ್ಕಳ ಶಿಕ್ಷಣಕ್ಕೆ ಕೊಕ್ಕೆ ಹಾಕಿದ ಹಿಜಾಬ್ ವಿವಾದ; ಇಡೀ ಶಾಲೆ ಖಾಲಿ ಖಾಲಿ
ಗದಗ: ಹಿಜಾಬ್ ಧರಿಸಲು ಅವಕಾಶ ಕೊಡದಿದ್ದಕ್ಕೆ ಇಡೀ ಶಾಲೆ ಖಾಲಿಯಾಗಿದೆ. ನಗರದ ಹಳೆ ಬಸ್ ನಿಲ್ದಾಣದ ಎದುರಿಗೆ ಇರೋ ಸರಕಾರಿ ಉರ್ದು ಶಾಲೆ ನಂ.2 ರಲ್ಲಿ ಘಟನೆ ನಡೆದಿದೆ. 221 ವಿದ್ಯಾರ್ಥಿಗಳ ಪೈಕಿ, 8 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹಾಜರಾಗಿದ್ದಾರೆ. 8,9,10, ನೇ ತರಗತಿಯ ಮಕ್ಕಳು ಗೈರಾಗಿದ್ದು, 10 ತರಗತಿ ಹಾಗೂ 8 ನೇ ತರಗತಿಗಳಿಗೆ ಕೇವಲ 8 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಹಿಜಾಬ್ ವಿವಾದ ಕೊಕ್ಕೆ ಹಾಕಿದಂತ್ತಾಗಿದೆ. ಮಕ್ಕಳಿಲ್ಲದೇ ಕ್ಲಾಸ್ನಲ್ಲಿ ಶಿಕ್ಷಕಿಯೊಬ್ಬರು ಸುಮ್ಮನೆ ಕೂತುಕೊಂಡಿದ್ದಾರೆ. ಹಿಜಾಬ್ ಹಾಕಲು ಅವಕಾಶ ಕೊಡದಿದ್ದಕ್ಕೆ ಮಕ್ಕಳು ಬಂದಿಲ್ಲ ಎನ್ನಲಾಗುತ್ತಿದೆ.
Karnataka Hijab Hearing Live: ಶಿವಮೊಗ್ಗ ಡಿಸಿ ಕಚೇರಿ ಎದುರು ವಿದ್ಯಾರ್ಥಿನಿಯರ ಪ್ರತಿಭಟನೆ
ಶಿವಮೊಗ್ಗ: ಹಿಜಾಬ್ ವಿಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಿರುವಾಗ ಶಿವಮೊಗ್ಗ ವಿದ್ಯಾರ್ಥಿನಿಯರು ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ಡಿಸಿ ಡಾ .ಸೇಲ್ವಮಣಿ ಜೊತೆ ಮಾತನಾಡುತ್ತಿರುವ ವಿದ್ಯಾರ್ಥಿನಿಯರು, ಹಿಜಾಬ್ ಧರಿಸಲು ಅವಕಾಶ ನಿಡುವಂತೆ ಮನವಿ ಮಾಡಿಕೊಂಡಿದ್ದಾರೆ.
Karnataka Hijab Hearing Live: ನಾವು ಎಲ್ಲವನ್ನೂ ಸರಿಪಡಿಸುತ್ತೇವೆ; ಬಿ.ಸಿ.ನಾಗೇಶ್ ಹೇಳಿಕೆ
ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಪೈಕಿ 500 ವಿದ್ಯಾರ್ಥಿಗಳಿಂದಷ್ಟೇ ಹಿಜಾಬ್ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ಟಿವಿ 9 ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಸುಮಾರು 8 ಶಾಲಾ ಕಾಲೇಜುಗಳಲ್ಲಿ ಈ ರೀತಿಯಾಗಿದೆ. ಬಿಂದಿ, ಕುಂಕುಮ, ಬಳೆ ತೊಡುವುದು ಅಲಂಕಾರಿಕ ವಿಚಾರವಷ್ಟೇ. ಸಮವಸ್ತ್ರಕ್ಕೆ ಅದನ್ನ ಹೋಲಿಕೆ ಮಾಡಬಾರದು ಎಂದು ಹೇಳಿದ್ದಾರೆ.
Karnataka Hijab Hearing Live: ಭಿತ್ತಿ ಪತ್ರಗಳನ್ನ ಹಿಡುದುಕೊಂಡು ಬಿಸಿಲಿನಲ್ಲಿ ಧರಣಿ ಕುಳಿತ ವಿದ್ಯಾರ್ಥಿನಿಯರು
ಗೋಕಾಕ್: ಹಿಜಾಬ್ ವಿಚಾರವಾಗಿ ನಗರದ ಜಿಎಸ್ಎಸ್ ಕಾಲೇಜು ಎದುರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ ಎರಡು ಗಂಟೆಯಿಂದ ಗೇಟ್ ಮುಂಭಾಗದಲ್ಲಿ ಕುಳಿತ ವಿದ್ಯಾರ್ಥಿನಿಯರು, ಬಿಸಿಲಿನಲ್ಲಿ ಭಿತ್ತಿ ಪತ್ರಗಳನ್ನ ಹಿಡುದುಕೊಂಡು ವಿದ್ಯಾರ್ಥಿನಿಯರು ಧರಣಿ ಕುಳಿತಿದ್ದಾರೆ. ಹಿಜಾಬ್‌ಗೆ ಅವಕಾಶ ನೀಡುವಂತೆ ಪಟ್ಟು ಹಿಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ ಮಾಡಲಾಗುತ್ತಿದೆ.
Karnataka Hijab Hearing Live: ಗಣಿನಾಡು ಬಳ್ಳಾರಿಯಲ್ಲಿ ಹೆಚ್ಚಿದ ಹಿಜಾಬ್ ಕಿಚ್ಚು
ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಹಿಜಾಬ್ ಕಿಚ್ಚು ಹೆಚ್ಚುತ್ತಿದೆ. ಇಂದು ವುಮೆನ್ಸ್ ಕಾಲೇಜಿನಲ್ಲಿ ಹಿಜಾಬ್ ಕಿಚ್ಚು ಶುರುವಾಗಿದ್ದು, ಹಿಜಾಬ್ ತಗೆಯಲ್ಲ, ಬೇಕಾದ್ರೆ ಕ್ಲಾಸ್ ಬಿಡತೇವಿ ಹಿಜಾಬ್ ಬಿಚ್ಚಿಟ್ಟು ಹೋಗಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಹಿಂದು ವಿದ್ಯಾರ್ಥಿನಿಯರು ಮೊದಲು ಕುಂಕುಮ, ಸಿಂಧೂರ ತಗೆಯಲಿ ಕಾಲೇಜಿನಲ್ಲಿ ಧಾರ್ಮಿಕ ಚಿಹ್ನೆಗಳು ಬೇಡ ಅಂದ್ರೆ ಕುಂಕುಮ. ಸಿಂಧೂರಕ್ಕೆ ಅವಕಾಶ ಯಾಕೆ ನೀಡ್ತೀರಾ ಎಂದು ಪ್ರಶ್ನಿಸಿದ್ದಾರೆ. ವುಮೆನ್ಸ್ ಕಾಲೇಜಿನಲ್ಲಿ ೨೫ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ಪ್ರತಿಭಟನೆ ಮಾಡಲಾಗುತ್ತಿದ್ದು, ಕಾಲೇಜಿನ ಗೇಟ್ ಮುಂಭಾಗದಲ್ಲಿ ನಿಂತೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆವರೆಗೂ ಹಿಜಾಬ್ ಗೆ ಅವಕಾಶ ನೀಡಿದ್ರು, ಇಂದು ನಿರಾಕರಣೆ ಯಾಕೆ ಎಂದು ವಿದ್ಯಾರ್ಥಿನಿಯರು ಕ್ಲಾಸ್ ಬಹಿಷ್ಕರಿಸಿದ್ದಾರೆ.
Karnataka Hijab Hearing Live: ಹಿಂದೂಗಳು ಕಾಲೇಜಿಗೆ ಕುಂಕುಮ ಇಟ್ಟಿಕೊಂಡು ಬರುವಂತಿಲ್ಲ
ಕೋಲಾರ: ಹಿಜಾಬ್ ಹಾಗೂ ಬುರ್ಕಾ ತೆಗೆಯಬೇಕು ಅಂದರೆ ನಮಗೆ ಶಿಕ್ಷಣವೇ ಬೇಡ. ನಾವು ಹಿಜಾಬ್ ತೆಗೆಯಬೇಕೆಂದರೆ ಹಿಂದೂಗಳು ಕೂಡ ಕುಂಕುಮ ಇಟ್ಟುಕೊಂಡು ಬರುವಂತಿಲ್ಲ ಎಂದು ವಿದ್ಯಾರ್ಥಿನಿ ರುಸೈನಾ ಕೌಸರ್ ಹೇಳಿದ್ದಾಳೆ. ಬುರ್ಕಾ ಇದ್ರೆ ನಮಗೆ ಸೇಪ್ಟೀ, ನಮ್ಮ ಪೋಷಕರು ಬುರ್ಕಾ ಇದೆ ಅನ್ನೋ ಕಾರಣಕ್ಕೆ ಕಾಲೇಜ್ಗೆ ಕಳಿಸುತ್ತಿದ್ದಾರೆ. ಕೋರ್ಟ್ ಆದೇಶ ಹಿಜಾಬ್ ತೆಗೆಯಬೇಕೆಂದರೆ ನಾವು ಹೋರಾಟ ಮಾಡುತ್ತೇವೆ. ಪಾಕಿಸ್ತಾನಕ್ಕೆ ಹೋಗಿ ಎಂದು ಕೆಲವರು ಹೇಳ್ತಾರೆ, ಆದರೆ ನಾವು ಇಂಡಿಯನ್ಸ್ ನಾವು ಹೋಗೋದಿಲ್ಲ ಅವರೆ ಬೇಕಾದ್ರೆ ಹೋಗಲಿ ಎಂದು ಹೇಳಿದ್ದಾಳೆ.
Karnataka Hijab Hearing Live: ಯಾದಗಿರಿ ಕಾಲೇಜು ಬಳಿ ವಿದ್ಯಾರ್ಥಿನಿಯರ ಹೈಡ್ರಾಮಾ
ಯಾದಗಿರಿ: ಹಿಜಾಬ್ ತೆಗೆದು ಕಾಲೇಜಿಗೆ ಬರುವಂತೆ ಉಪನ್ಯಾಸಕರು ಮನವಿ ಮಾಡಿಕೊಂಡರು, ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿರುವಂತಹ ಘಟನೆ ನಡೆದಿದೆ. ಯಾದಗಿರಿ ಸಿಟಿ ನ್ಯೂ ಕನ್ನಡ ಪಿಯು ಕಾಲೇಜಿನಲ್ಲಿ ಘಟನೆ ನಡೆದಿದ್ದು, ಹಿಜಾಬ್‌ಗೆ ಅವಕಾಶ ನೀಡದಿದ್ರೆ ನಾವು ಮನೆಗೆ ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ. ಹಿಜಾಬ್ಗಾಗಿ 30ಕ್ಕೂ ಅಧಿಕ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದು, ಕಾಲೇಜು ಬಳಿ ಭಾರಿ ಹೈಡ್ರಾಮಾ ಜರುಗಿತು.
Karnataka Hijab Hearing Live: ನಮಗೆ ಕಾನೂನು ಇದೆ, ಏನ್ ಮಾಡಬೇಕು ಅನ್ನೋದು ಗೊತ್ತಿದೆ
ಕೊಪ್ಪಳ: ಹಿಜಾಬ್ ಸಂಘರ್ಷದಿಂದಾಗಿ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ವಾಪಸ್ ಆಗಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಗಂಗಾವತಿ ನಗರದ ಗುಂಜಹಳ್ಳಿ ಹಿರೇನಾಗಪ್ಪ ವಾಣಿಜ್ಯ ಮಾಹಾವಿದ್ಯಾಲಯದಲ್ಲಿ ಈ ಘಟನೆ ನಡೆದಿದ್ದು, ಹಿಜಾಬ್ ಧರಿಸಿದ್ದಕ್ಕೆ ಕ್ಲಾಸ್ ರೂಂ ಒಳಗಡೆ ಬರಲು ನಿಷೇಧಸಲಾಗಿದೆ. ಹಿಜಾಬ್ ತಗೆದು ಬನ್ನಿ ಎಂದು ಕಾಲೇಜ್ ಪ್ರಿನ್ಸಿಪಾಲ್ ಹೇಳಿದರು ಕೂಡ ವಿದ್ಯಾರ್ಥಿಗಳು ನಕಾರವೆತ್ತಿದ್ದಾರೆ. ಇಂದು ಬಿಕಾಂ ವಿದ್ಯಾರ್ಥಿಗಳ ಇಂಟರ್ನಲ್ ಪರೀಕ್ಷೆಯಿದ್ದು, ನಾವು ಹೊರಗಡೆ ಕುಳಿತು ಎಕ್ಸಾಂ ಬರೀತಿವಿ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಈ ಹಿನ್ನಲೆ ವಿದ್ಯಾರ್ಥಿಗಳು ಕಾಲೇಜ್ ಹೊರಗಡೆ ನಿಂತುಕೊಂಡಿದ್ದಾರೆ. ಇವತ್ತು ಎಕ್ಸಾಂ ಇದ್ರೂ ನಮಗೆ ಅವಕಾಶ ಕೊಟ್ಟಿಲ್ಲ ಎಂದು ಆರೋಪಿಸುತ್ತಿದ್ದಾರೆ. ಇನ್ನೂ ಕಾಲೇಜ್ಗೆ ಪೋಷಕರು ಆಗಮಿಸಿದ್ದು, ನಮಗೆ ಕಾನೂನುಯಿದೆ ಏನ್ ಮಾಡಬೇಕು ಅನ್ನೋದು ಗೊತ್ತಿದೆ ಎನ್ನುತ್ತಿದ್ದಾರೆ.
Karnataka Hijab Hearing Live: ಭಾರತದಲ್ಲಿ ಹಿಜಾಬ್ ಧರಿಸುವ ಅಗತ್ಯವಿಲ್ಲ; ಪ್ರಜ್ಞಾ ಸಿಂಗ್ ಠಾಕೂರ್
ದೆಹಲಿ: ಭಾರತದಲ್ಲಿ ಹಿಜಾಬ್ ಧರಿಸುವ ಅಗತ್ಯವಿಲ್ಲ. ತಮ್ಮ ಮನೆಗಳಲ್ಲಿ ತೊಂದರೆ ಎದುರಿಸುತ್ತಿರುವವರು ಹಿಜಾಬ್ ಧರಿಸಬಹುದು ಆದರೆ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಬಾರದು ಎಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಹೆಣ್ಣನ್ನು ಪೂಜಿಸುವುದು ಸನಾತನ ಸಂಸ್ಕೃತಿಯಾಗಿದೆ. ಹೆಣ್ಣಿನ ಸ್ಥಾನವೇ ಪ್ರಧಾನವಾಗಿರುವ ಈ ದೇಶದಲ್ಲಿ ಹಿಜಾಬ್ ಧರಿಸುವ ಅವಶ್ಯಕತೆಯಿದೆಯೇ? ಭಾರತದಲ್ಲಿ ಹಿಜಾಬ್ ಧರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
Karnataka Hijab Hearing Live: ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯವಲ್ಲ ಎಂದ ವಿದ್ಯಾರ್ಥಿನಿ
ರಾಯಚೂರು: ಹಿಜಾಬ್-ಕೇಸರಿ ಶಾಲು ವಿವಾದದ ಮಧ್ಯೆ ವಿದ್ಯಾರ್ಥಿನಿ ಪ್ರಬುದ್ಧ ಹೇಳಿಕೆ ನೀಡಿದ್ದಾರೆ. ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯವಲ್ಲ ಎಂದು ನಗರದ ಎಸ್ ಎಸ್ ಆರ್ ಜಿ ಕಾಲೇಜು ವಿದ್ಯಾರ್ಥಿನಿ ಅಪ್ಸನಾ ಹೇಳಿದ್ದಾಳೆ. ನಮಗೆ ಹಿಜಾಬ್ ರಕ್ಷಣೆ ಕೊಡತ್ತೆ ಅದೇ ರೀತಿ ಶಿಕ್ಷಣವೂ ರಕ್ಷಣೆ ಕೊಡತ್ತೆ. ಹೈಕೋರ್ಟ್ ಆದೇಶದನ್ವಯ ನಾನು ಹಿಜಾಬ್ ತೆಗೆದು ಕ್ಲಾಸ್ಗೆ ಹೋಗ್ತಿದಿನಿ ಎಂದು ಹೇಳಿದ್ದಾಳೆ.
Karnataka Hijab Hearing Live: ಹಿಜಾಬ್ ವಿಚಾರವಾಗಿ ಹುಬ್ಬಳ್ಳಿಯ ಮಹಿಳಾ ಕಾಲೇಜಿಗೆ ಇಂದೂ ಕೂಡ ರಜೆ
ಹುಬ್ಬಳ್ಳಿ: ಹಿಜಬ್ ಧರಿಸಲು ಅವಕಾಶ ನೀಡುವಂತೆ ನಿನ್ನೆ ಪ್ರತಿಭಟನೆ ಹಿನ್ನೆಲೆ, ಇಂದೂ ಸಹ ಮಹಿಳಾ ಪದವಿ ಕಾಲೇಜಿಗೆ ರಜೆ ನೀಡಲಾಗಿದೆ. ಹುಬ್ಬಳ್ಳಿಯ ಜೆ ಸಿ ನಗರದಲ್ಲಿರುವ ಜಗದ್ಗುರು 3 ಸಾವಿರಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಇಂದೂ ರಜೆ ನೀಡಿದೆ. ಹಿಜಬ್ ಪ್ರತಿಭಟನೆ ಹಿನ್ನೆಲೆಯಲ್ಲಿ ನಿನ್ನೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾಲೇಜು ಬಳಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು. ಇಂದು ಎಲ್ಲಾ ಶಾಲಾ ಕಾಲೇಜುಗಳ ಬಳಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜತೆಗೆ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಜೆ ಮುಂದುವರಿಕೆ ಮಾಡಿದ್ದು, ಇದೇ ಆವರಣದಲ್ಲಿರುವ ಪಿಯು ಕಾಲೇಜು ತರಗತಿಗಳು ಯಥಾರೀತಿ ಆರಂಭವಾಗಿವೆ. ಕಾಲೇಜು ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.
ಬೀದರ್ನಲ್ಲಿ ಬಹುತೇಕ ವಿದ್ಯಾರ್ಥಿನಿಯರು ಗೈರು
ಬೀದರ್ನಲ್ಲಿ ಕಾಲೇಜುಆರಂಭವಾದರು ಕಾಲೇಜಿಗೆ ಬಹುತೇಕ ವಿದ್ಯಾರ್ಥಿನಿಯರು ಗೈರಾಗಿದ್ದಾರೆ. ಬೀದರ್ ಕಾಲೇಜುಗಳಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ.
ತೀರ್ಪಿನ ನಂತರವೇ ತರಗತಿಗೆ ಬರಲು ನಿರ್ಧಾರ
ಉಡುಪಿಯಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ನಡೆ ಕುತೂಹಲ ಕೆರಳಿಸಿದೆ. ವಿದ್ಯಾರ್ಥಿನಿಯರು ಮೊದಲ ದಿನ ತರಗತಿಗೆ ಗೈರಾಗಿದ್ದರು. ಬಹುತೇಕ ಕಾಲೇಜುಗಳಲ್ಲಿ ತೀರ್ಪಿನ ನಂತರವೇ ತರಗತಿಗೆ ಬರಲು ನಿರ್ಧಾರ ಮಾಡಿದ್ದಾರೆ.
ಹಿಜಾಬ್ ಇಲ್ಲದೆ ಶಾಲೆಗೆ ಒಳಗೆ ಹೋಗಲ್ಲ; ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರು
ತುಮಕೂರಿನಲ್ಲಿ ವಿದ್ಯಾರ್ಥಿನಿಯರು ಇಂದು ಕೂಡ ಹಿಜಾಬ್ ಧರಿಸಿಯೇ ಬಂದಿದ್ದಾರೆ. ಹಿಜಾಬ್ ಇಲ್ಲದೆ ಶಾಲೆಗೆ ಒಳಗೆ ಹೋಗಲ್ಲ ಅಂತಾ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. ಇಂದು ಕೂಡ ಅವರ ಹಠ ಮುಂದುವರಿಕೆ ಆಗುವ ಸಾಧ್ಯತೆಯಿದೆ.
ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯವಲ್ಲ- ವಿದ್ಯಾರ್ಥಿನಿ
ರಾಯಚೂರಿನಲ್ಲಿ ಹಿಜಾಬ್-ಕೇಸರಿ ಶಾಲು ವಿವಾದದ ಮಧ್ಯೆ ವಿದ್ಯಾರ್ಥಿನಿ ಪ್ರಬುದ್ಧ ಹೇಳಿಕೆ ನೀಡಿದ್ದಾಳೆ. ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯವಲ್ಲ ಅಂತ ವಿದ್ಯಾರ್ಥಿನಿ ಹೇಳಿದ್ದಾಳೆ. ರಾಯಚೂರು ನಗರದ ಎಸ್ ಎಸ್ ಆರ್ ಜಿ ಕಾಲೇಜು ವಿದ್ಯಾರ್ಥಿ ಈ ರೀತಿ ಮಾತನಾಡಿದ್ದಾಳೆ. ನಮಗೆ ಹಿಜಾಬ್ ರಕ್ಷಣೆ ಕೊಡತ್ತೆ, ಅದೇ ರೀತಿ ಶಿಕ್ಷಣವೂ ರಕ್ಷಣೆಯೂ ಕೊಡತ್ತೆ ಅಂತ ಹೇಳಿದ್ದಾಳೆ.
ಉಡುಪಿಯಲ್ಲಿ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಎಕ್ಸಾಮ್ ಮುಂದೂಡಿಕೆ
ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಎಕ್ಸಾಮ್ ಮುಂದೂಡಿಕೆ ಮಾಡಲಾಗಿದೆ. ಫೆಬ್ರವರಿ 7ರಂದು ಎಂಜಿಎಂ ಕಾಲೇಜಿನಲ್ಲಿ ಕೇಸರಿ ಹಿಜಬ್ ಫೈಟ್ ನಡೆದಿತ್ತು. ಇಂದು ದ್ವಿತೀಯ ಪಿಯುಸಿ ಲ್ಯಾಬ್ ಪರೀಕ್ಷೆ ಆರಂಭವಾಗಬೇಕಿತ್ತು. ಗೊಂದಲದ ವಾತಾವರಣ ನಿರ್ಮಾಣ ಆಗಬಾರದೆಂಬ ಉದ್ದೇಶದಿಂದ ಪರೀಕ್ಷೆ ರದ್ದು ಮಾಡಲಾಗಿದೆ.
ಶಿವಮೊಗ್ಗದ DVS ಕಾಲೇಜು ಬಳಿ ಹಿಜಾಬ್ ಹೈಡ್ರಾಮಾ
ಶಿವಮೊಗ್ಗದ DVS ಕಾಲೇಜು ಬಳಿ ಹಿಜಾಬ್ ಹೈಡ್ರಾಮಾ ನಡೆಯುತ್ತಿದೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ, ವಿದ್ಯಾರ್ಥಿಗಳು ಸಾಥ್ ನೀಡುತ್ತಿದ್ದಾರೆ.
ಧಾರವಾಡದಲ್ಲಿ ಶಾಲಾ-ಕಾಲೇಜು ಬಳಿ ಹೆಚ್ಚಿನ ಪೊಲೀಸರ ನಿಯೋಜನೆ
ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ ಅವಳಿ ನಗರದಲ್ಲಿ ಶಾಲ-ಕಾಲೇಜಿನ ಬಳಿ ಸೆಕ್ಷನ್ 144 ಜಾರಿ ಆಗಿದೆ. ಶಾಲಾ-ಕಾಲೇಜು ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಶಾಲಾ-ಕಾಲೇಜಿನಿಂದ 200 ದೂರದವರೆಗೆ ಗುಂಪು ಸೇರುವಂತಿಲ್ಲ. ಅಲ್ಲಲ್ಲಿ ನಿಂತಿರೋ ಜನರನ್ನು ಪೊಲೀಸರು ಮನೆಗೆ ಕಳಿಸುತ್ತಿದ್ದಾರೆ.
ಕುತೂಹಲ ಮೂಡಿಸಿರುವ ವಿದ್ಯಾರ್ಥಿನಿ ಮುಸ್ಕಾನ್ ನಡೆ
ಇಂದಿನಿಂದ ಮಂಡ್ಯದ ಪಿಇಎಸ್ ಕಾಲೇಜು ಪುನರಾರಂಭವಾಗಲಿದೆ. ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಇಂದು ಕಾಲೇಜಿಗೆ ಹಾಜರಾಗುತ್ತಾಳ ಎಂಬ ಕುತೂಹಲ ಮೂಡಿದೆ. ಕಾಲೇಜು ಕೇಸರಿ ವರ್ಸಸ್ ಹಿಜಾಬ್ ಸಂಘರ್ಷಕ್ಕೆ ಸಾಕ್ಷಿಯಾಗಿತ್ತು. ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ವಿಶ್ವಾದ್ಯಂತ ಸುದ್ದಿಯಾಗಿದ್ದಳು.
ವಿಜಯಪುರ ನಗರದ ಸರ್ಕಾರಿ ಪಿಯು ಹಾಗೂ ಡಿಗ್ರಿ ಕಾಲೇಜಿನ ಬಳಿ ನಿಷೇದಾಜ್ಞೆ ಜಾರಿ
ವಿಜಯಪುರದಲ್ಲಿ ಹಿಜಾಬ್ ಸಹಿತ ತರಗತಿಗಳಿಗೆ ಹಾಜರಾಗಬೇಕೆಂದು ವಿದ್ಯಾರ್ಥಿನಿಯರು ನಿನ್ನೆ ಪ್ರತಿಭಟನೆ ನಡೆಸಿದ್ದರು. ನಗರದ ಸರ್ಕಾರಿ ಪಿಯು ಹಾಗೂ ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಪೋಷಕರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಆವರಣದಿಂದ 200 ಮೀಟರ್ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಕಲಂ 144 ರ ಅನ್ವಯ ನಿಷೇದಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್ ಹೇಳಿಕೆಗೆ ಆಕ್ರೋಶ
‘ಮಕ್ಕಳ ಹಿಜಾಬ್‌ಗೆ ಅಡ್ಡಿಪಡಿಸಿದ್ರೆ ತುಂಡುತುಂಡು ಮಾಡುತ್ತೇವೆ’ ಎಂಬ ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ಪೊಲೀಸ್ ಠಾಣೆ ಎದುರು ಧರಣಿ ನಡೆಸಿ ಮುಕ್ರಂ ಖಾನ್ ಹೇಳಿಕೆಗೆ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಧರಣಿಯಲ್ಲು ಮುಕ್ರಂ ಖಾನ್ ವಿರುದ್ಧ ಕೇಸ್ ದಾಖಲಿಸಲು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನಗರದಲ್ಲಿ 144 ಸೆಕ್ಷನ್ ಜಾರಿ
ರಾಜ್ಯದ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ವಿವಾದ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹು-ಧಾ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಆದೇಶ ನೀಡಿದ್ದಾರೆ.
ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು; ಕೊಪ್ಪಳದಲ್ಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ
ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು ಅಂತ ಕೊಪ್ಪಳದಲ್ಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಹೇಳಿಕೆ ನೀಡಿದ್ದಾರೆ. ಸಮುದಾಯದ ಮುಖಂಡರು ಒಂದು ನಿರ್ಣಯಕ್ಕೆ ಬರಲಿ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಸಮವಸ್ತ್ರ ಒಳ್ಳೆಯದು ಅಂತ ಹೇಳಿದರು.
ಹಿಜಾಬ್ ಸಂಘರ್ಷ! ಆತಂಕ ಹೊರ ಹಾಕುತ್ತಿರುವ ಶಿಕ್ಷಣ ತಜ್ಞರು
ಹಿಜಾಬ್ ಸಂಘರ್ಷದ ನಡುವೆ ಶಿಕ್ಷಣ ತಜ್ಞರು ಆತಂಕ ಹೊರ ಹಾಕುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೊರೊನಾ ಕಾಟ ಹಾಗೂ ಹಿಜಾಬ್ ಸಂಘರ್ಷ ಪರಿಣಾಮ ಬೀರಲಿದೆ. ಶೇ 25 ರಿಂದ 30 ರಷ್ಟು ಮಕ್ಕಳ ಕಲಿಕೆ ಕುಗ್ಗಿದೆ. ಹಿಜಾಬ್ ಸಂಘರ್ಷ ಹಾಗೂ ಕೊರೊನಾ ಮಕ್ಕಳ ಕಲಿಕಾ ಪ್ರಗತಿಗೆ ಭಾರಿ ಹೊಡೆತ ತಂದಿಟ್ಟಿದೆ. ಎರಡನೇ ಅಲೆ ಹಾಗೂ ಮೂರನೇ ಅಲೆಯಿಂದ ಚೇತರಸಿಕೊಳ್ಳುತ್ತಿದ್ದಂತೆ ಹಿಜಾಬ್ ಸಂಘರ್ಷ ಶುರುವಾಗಿದೆ. ಕೊರೊನಾ ಹಾಗೂ ಹಿಜಾಬ್ ಸಂಘರ್ಷದಿಂದ ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಮಕ್ಕಳ ಎಕ್ಸಾಂ ಬಗ್ಗೆ ಶಿಕ್ಷಣ ತಜ್ಞರು ಆತಂಕ ಹೊರಹಾಕಿದ್ದಾರೆ.
ಬಳ್ಳಾರಿಯ ಸರಳಾದೇವಿ ಕಾಲೇಜಿಗೆ ಪೊಲೀಸ್ ಭದ್ರತೆ
ಬಳ್ಳಾರಿಯ ಸರಳಾದೇವಿ ಕಾಲೇಜಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಕಾಲೇಜು ಗೇಟ್ ಬಳಿ ಮಹಿಳಾ ಪೊಲೀಸರು ಜಮಾಯಿಸಿದ್ದಾರೆ. ಹಿಜಾಬ್ ಅಥವಾ ಬುರ್ಖಾ ತಗೆದು ಕ್ಲಾಸ್ ತೆರಳುವಂತೆ ಸೂಚನೆ ನೀಡಲಾಗಿದೆ. ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಬುರ್ಖಾ ಹಿಜಾಬ್ ಬಿಚ್ಚಿಡಲು ತಿಳಿಸಲಾಗಿದೆ.
ಹಿಜಾಬ್ ಪರವಿದ್ದ ಹೋರಾಟಗಾರ್ತಿಗೆ ಜೀವ ಬೆದರಿಕೆ
ಹಿಜಾಬ್ ಪರವಿದ್ದ ಹೋರಾಟಗಾರ್ತಿಗೆ ಜೀವ ಬೆದರಿಕೆ ಹಾಕಿದ್ದಾರೆ. ಬೆಳಗಾವಿಯ ಸಾಮಾಜಿಕ ಕಾರ್ಯಕರ್ತೆ ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ ಬಗ್ಗೆ ದೂರು ದಾಖಲಾಗಿದೆ. ವಾಟ್ಸಾಪ್ ಕಾಲ್ ಮಾಡಿ ಅಪರಿಚಿತನಿಂದ ಜೀವ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ. ಹಿಜಾಬ್ ಅಂತಾ ಏನ್ ಹೇಳ್ತಿದಿಯಾ ಆಜಾದಿ ಬೇಕಾ? ನಿನ್ನನ್ನು ಅಟ್ಟಾಡಿಸಿ ಹೊಡೀತೀವಿ ಎಂದು ಜೀವ ಬೆದರಿಕೆ ಹಾಕಿದ್ದಾರೆ.
ವಿದ್ಯಾಸಾಗರ ಶಾಲೆಗೆ ಹೊಸದಾಗಿ ಶಿಕ್ಷಕರು ಬರಲು ಹಿಂದೇಟು
ಬೆಂಗಳೂರಿನ ವಿದ್ಯಾಸಾಗರ ಶಾಲೆಯಲ್ಲಿ ಗಣಿತ ಶಿಕ್ಷಕಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಂಕಷ್ಟ ಎದುರಾಗಿದೆ. ಶಾಲೆಗೆಯಲ್ಲಿ ಗಲಾಟೆ ಹಿನ್ನೆಲೆ ಹೊಸದಾಗಿ ಶಿಕ್ಷಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಗಣಿತ ವಿಷಯ ಬೋಧನೆಗೆ ಶಿಕ್ಷಕರ ಕೊರತೆ ಉಂಟಾಗಿದೆ.
ಚಿಕ್ಕಮಗಳೂರು ಕಾಲೇಜುಗಳಿಗೆ ಬಿಗಿಭದ್ರತೆ
ಚಿಕ್ಕಮಗಳೂರು ಜಿಲ್ಲೆಯ ಶಾಲಾ-ಕಾಲೇಜು ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚಿಕ್ಕಮಗಳೂರು ನಗರದ ಎಂಇಎಸ್ ಕಾಲೇಜಿಗೂ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ನಿನ್ನೆಯಿಡೀ ಎಂಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಕಾಲೇಜ್ ಗೇಟಿನ ಹೊರಗಡೆ ನೂರಾರು ಜನರು ಜಮಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ.ಇಂದೂ ಕೂಡ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ.
ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ
ಹಿಜಾಬ್ ವಿಚಾರವಾಗಿ ನಿನ್ನೆ ಕಾಲೇಜಿನ ಬಳಿ ಗಲಾಟೆ ನಡೆದ ಹಿನ್ನೆಲೆ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ನೀಡಲಾಗಿದೆ. ಆನ್‌ಲೈನ್ ತರಗತಿ ನಡೆಸಲು ಆಡಳಿತ ಮಂಡಳಿ ನಿಧರ್ರಿಸಿದೆ. ಫೆ.19ರವರೆಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ನೀಡಿದ್ದಾಗಿ ಟಿವಿ9ಗೆ ಕಾಲೇಜಿನ ಪ್ರಾಂಶುಪಾಲ ರಾಜಶೇಖರ್ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗಕ್ಕೂ ಹಿಜಾಬ್ ವಿವಾದ ಎಂಟ್ರಿ
ಕೋಟೆನಾಡು ಚಿತ್ರದುರ್ಗಕ್ಕೂ ಹಿಜಾಬ್ ವಿವಾದ ಎಂಟ್ರಿಯಾದ ಹಿನ್ನೆಲೆ ಇಂದು ಮತ್ತೆ ಹಿಜಾಬ್ ಧರಿಸಿ ಬಂದು ಧರಣಿ ಮಾಡುವ ಸಾಧ್ಯತೆಯಿದೆ. ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುವುದಾಗಿ ಪಟ್ಟು ಬಿದ್ದಿದ್ದಾರೆ. ನಿನ್ನೆ ಹಲವು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಬಳಿ ಧರಣಿ ನಡೆಸಿದ್ದರು. ಪಿಯು ಕಾಲೇಜಿನಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಕೋರ್ಟ್ ಆದೇಶ ಪಾಲನೆಗೆ ಡಿಸಿ ಕವಿತಾ ಮನ್ನಿಕೇರಿ ಸೂಚಿಸಿದ್ದರು. ಡಿಸಿ ಮಾತಿಗೂ ಸಹಮತ ನೀಡದೆ ವಿದ್ಯಾರ್ಥಿಗಳು ಮನೆಗೆ ತೆರಳಿದ್ದರು. ನಿನ್ನೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮನೆಗೆ ವಾಪಸ್ ತೆರಳಿದ್ದರು. ಇಂದು ಮತ್ತೆ ಹಿಜಾಬ್ ಧರಿಸಿ ಕಾಲೇಜಿಗೆ ಬರುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಕಾಲೇಜುಗಳ ಬಳಿ ಪೊಲೀಸರು ನಿಗಾ ವಹಿಸಿದ್ದಾರೆ.
ಬೆಳಗಾವಿಯ RLS ಕಾಲೇಜಿನಲ್ಲಿ ನಿನ್ನೆ ಹೈಡ್ರಾಮಾ
ಬೆಳಗಾವಿಯ RLS ಕಾಲೇಜಿನಲ್ಲಿ ನಿನ್ನೆ ಹೈಡ್ರಾಮಾ ನಡೆದ ಹಿನ್ನೆಲೆ ಇಂದು ವಿದ್ಯಾರ್ಥಿನಿಯರ ಮನವೊಲಿಸಲು ಸಿಬ್ಬಂದಿ ನಿರ್ಧರಿಸಿದ್ದಾರೆ. ವಿದ್ಯಾರ್ಥಿನಿಯರನ್ನ ಕಾಲೇಜು ಗೇಟ್ ಬಳಿ ತಡೆಯದೆ, ಕಾಲೇಜಿನ ಒಳಗೆ ಕರೆದೊಯ್ದು ಮನವೊಲಿಸುವ ಸಾಧ್ಯತೆಯಿದೆ. ನಿನ್ನೆ ಹಿಜಾಬ್ ತೆಗೆಯಲು ಒಪ್ಪದೆ 6 ಮುಸ್ಲಿಂ ವಿದ್ಯಾರ್ಥಿನಿಯರು ಮನೆಗೆ ವಾಪಸ್ಸಾಗಿದ್ದರು.
ಶಾಲೆ-ಕಾಲೇಜುಗಳಲ್ಲಿ ಮುಂದುವರಿದ ಹಿಜಾಬ್ ವಿವಾದ
ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮುಂದುವರಿದಿದೆ. ನಿನ್ನೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಹಿಜಾಬ್, ಬುರ್ಖಾ ತೆಗೆಯಲ್ಲವೆಂದು ಪಟ್ಟು ಹಿಡಿದಿದ್ದರು. ಶಾಲೆ-ಕಾಲೇಜು ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದರು. ಹಿಜಾಬ್ ತೆಗೆಯಲು ಒಪ್ಪದೆ ಕೆಲವರು ಮನೆಗೆ ವಾಪಸ್ ಹೋಗಿದ್ದರು. ಇಂದೂ ಸಹ ಹಿಜಾಬ್ ವಿವಾದ ಮುಂದುವರಿಯುವ ಸಾಧ್ಯತೆಯಿದೆ.
Published On - Feb 17,2022 8:31 AM