ಬಿಗಿ ಕ್ರಮಗಳೊಂದಿಗೆ ಗೋಹತ್ಯಾ ನಿಷೇಧ ಕಾನೂನು ಜಾರಿ: ಬಸವರಾಜ ಬೊಮ್ಮಾಯಿ
ಗೋಹತ್ಯೆಗೆ ವಿರೋಧವಿದ್ದರೂ ಗೋ ಕಳ್ಳಸಾಗಣೆ ಮಾಡುವ ದಂಧೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಈ ಅಕ್ರಮವನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು
ಕಾರವಾರ: ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನಿನ ಕುರಿತು ಪರ ವಿರೋಧ ಚರ್ಚೆಗಳಾಗುತ್ತಿರುವ ಸಂದರ್ಭದಲ್ಲೇ ಗೃಹಸಚಿವ ಬಸವರಾಜ ಬೊಮ್ಮಾಯಿ ಕಾನೂನು ಜಾರಿ ಮಾಡುವುದು ಖಚಿತ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೇ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತಂದಿದ್ದೆವು. ಆದರೆ, ಅಂದು ರಾಜ್ಯಪಾಲರು ಅದನ್ನು ತಿರಸ್ಕಾರ ಮಾಡಿದ್ದರಿಂದ ಅದು ಸಫಲವಾಗಲಿಲ್ಲ ಎಂದು ಹೇಳಿದರು.
ಗೋಹತ್ಯೆಗೆ ವಿರೋಧವಿದ್ದರೂ ಗೋ ಕಳ್ಳಸಾಗಣೆ ಮಾಡುವ ದಂಧೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಈ ಅಕ್ರಮವನ್ನು ತಡೆಯಲು ಮತ್ತು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುವ ಸಲುವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ತಡೆಯಲು ಮೊದಲಿಗಿಂತಲೂ ಬಿಗಿ ಕ್ರಮಗಳನ್ನು ಸೇರಿಸಿ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸುತ್ತೇವೆ ಎನ್ನುವ ಮೂಲಕ ಗೃಹ ಸಚಿವರು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದಂತಿದೆ.
ಕೃಷಿ ಸಚಿವರನ್ನು ಸಮರ್ಥಿಸಿಕೊಂಡ ಬೊಮ್ಮಾಯಿ ಇದೇ ಸಂದರ್ಭದಲ್ಲಿ ರೈತರ ಆತ್ಮಹತ್ಯೆ ವಿಚಾರವಾಗಿ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು ಕೃಷಿ ಸಚಿವರು ಎಲ್ಲಾ ರೈತರಿಗೆ ಹಾಗೆ ಹೇಳಿಲ್ಲ. ಕೆಲವರನ್ನು ಉದ್ದೇಶಿಸಿ ಮಾತ್ರ ಆ ಮಾತನ್ನು ಹೇಳಿರಬಹುದು ಎನ್ನುವ ಮೂಲಕ ಬಿ.ಸಿ.ಪಾಟೀಲರನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳಲ್ಲದೇ ಮತ್ತಿನ್ನೇನು? BC ಪಾಟೀಲ್ ಪರ ಮಗಳ ಬ್ಯಾಟಿಂಗ್
‘ಗೋ ಹತ್ಯೆ ಪ್ರಹಸನ! ಗೋ ಹತ್ಯೆ ಮಾಡಿ ಅದನ್ನು ವಿದೇಶಕ್ಕೆ ರಫ್ತು ಮಾಡ್ತಿರೋರು ಯಾರು?’