ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಮುಂದಿನ ಕೆಲ ಗಂಟೆಗಳಲ್ಲಿ ತೌಕ್ತೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ. ಮಲೆನಾಡು ಭಾಗದಲ್ಲಿ ಇಂದು ಮುಂಜಾನೆಯಿಂದಲೇ ಮಳೆ ಆರಂಭವಾಗಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕೆಲವೆಡೆ 20 ಸೆಂ.ಮೀಗೂ ಅಧಿಕ ಮಳೆಯಾಗುವ ಸಂಭವವಿದೆ. ತೌಕ್ತೆ ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಮೇ 18ರವರೆಗೆ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದ್ದು, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಉತ್ತಮ ಮಳೆಯಾಗಲಿದೆ. ಅಲ್ಲದೇ ಬೆಂಗಳೂರಿನಲ್ಲೂ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿರಲಿದ್ದು ಗಂಟೆಗೆ 150ರಿಂದ 160 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಇದು 175 ಕಿ.ಮೀ ವೇಗವನ್ನು ಪಡೆಯುವ ಸಾಧ್ಯತೆಯೂ ಇದೆ. ಕೇರಳದ ಸಮುದ್ರ ಭಾಗದ ಕೆಲವೆಡೆ ರಸ್ತೆಗಳೇ ಕೊಚ್ಚಿ ಹೋಗಿವೆ ಎಂದು ವರದಿಯಾಗಿದ್ದು, ಈ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರಿಂದಾಗಿ ಕೇರಳದ ತಿರುವನಂತಪುರಂ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆಯನ್ನೂ ಮಾಡಲಾಗಿದೆ.
ನಿನ್ನೆ (ಮೇ 14) ಲಕ್ಷದ್ವೀಪ ಭಾಗದಲ್ಲಿ ಸಮುದ್ರದಲ್ಲಿ ಅತಿ ಹೆಚ್ಚು ಒತ್ತಡ ಕಂಡುಬಂದಿದ್ದು, ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ಉಲ್ಬಣಿಸಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಅಲ್ಲದೇ ಮೇ.18ರ ವೇಳೆಗೆ ತೌಕ್ತೆ ಚಂಡಮಾರುತವು ಗುಜರಾತ್ ಕರಾವಳಿ ಭಾಗಕ್ಕೆ ಹೋಗಿ ಅಪ್ಪಳಿಸಲಿದೆ ಎನ್ನುವುದಾಗಿಯೂ ಹವಾಮಾನ ಇಲಾಖೆ ಅಂದಾಜಿಸಿದೆ. ಈ ಮೂಲಕ 2021ರ ಮೊದಲ ಚಂಡಮಾರುತ ಕೇರಳ, ಕರ್ನಾಟಕ ಸೇರಿದಂತೆ ಅನೇಕ ಭಾಗಗಳಿಗೆ ಮಳೆಯನ್ನು ಹೊತ್ತು ತರಲಿದೆ.
ಇದನ್ನೂ ಓದಿ:
Cyclone Tauktae: ತೌಕ್ತೆ ಚಂಡಮಾರುತದಿಂದ ಕರ್ನಾಟಕದಲ್ಲಿ ಭಾರೀ ಮಳೆ; ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್ ಘೋಷಣೆ
Cyclone Tauktae: ಮುಂದಿನ 2-3 ದಿನಗಳಲ್ಲಿ ಭಾರೀ ಮಳೆ ಸಾಧ್ಯತೆ; ಅಪ್ಪಳಿಸಲಿದೆ ತೌಕ್ತೆ ಚಂಡಮಾರುತ
(Karnataka Kerala and other parts may get highest rain due to Cyclone Tauktae upto may 18th)