AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyclone Tauktae: ತೌಕ್ತೆ ಚಂಡಮಾರುತದಿಂದ ಕರ್ನಾಟಕದಲ್ಲಿ ಭಾರೀ ಮಳೆ; ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್​ ಘೋಷಣೆ​

Karnataka Rain: ತೌಕ್ತೆ ಚಂಡಮಾರುತ ಕರ್ನಾಟಕದ ಬಹುತೇಕ ಎಲ್ಲಾ ಭಾಗಗಳಿಗೂ ಮಳೆ ಹೊತ್ತು ಬರುವ ಸಾಧ್ಯತೆ ಇದ್ದು, ಈ ಬಾರಿ ಮುಂಗಾರಿಗೂ ಮುನ್ನವೇ ಒಂದು ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.

Cyclone Tauktae: ತೌಕ್ತೆ ಚಂಡಮಾರುತದಿಂದ ಕರ್ನಾಟಕದಲ್ಲಿ ಭಾರೀ ಮಳೆ; ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್​ ಘೋಷಣೆ​
ಕರ್ನಾಟಕ ರಾಜ್ಯ ಹವಮಾನ ವರದಿ
Skanda
| Updated By: Digi Tech Desk|

Updated on:May 14, 2021 | 11:37 AM

Share

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣ ಕರ್ನಾಟಕದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 15 ರಿಂದ ಮೇ 17ರ ತನಕ ರಾಜ್ಯದ ಕರಾವಳಿ ಭಾಗ ಸೇರಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಮೇ 15 ಮತ್ತು 16 ರಂದು ಅತಿಯಾದ ಮಳೆಯಾಗುವ ಸಾಧ್ಯತೆ ಇದ್ದು ರೆಡ್ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ಅಂತೆಯೇ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗದ ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿರುವ ಕಾರಣ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಕಾರಣ ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ನೀಡಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ 2 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಮೇ 15 ಮತ್ತು 16ರಂದು ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಮೇ 17ರಂದು ಭಾರೀ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನ ಯಾವ ಯಾವ ಭಾಗಗಳಲ್ಲಿ ಹೆಚ್ಚು ಮಳೆ ಸಾಧ್ಯತೆ ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಸಹ ಮುಂದಿನ ಎರಡು ದಿನಗಳ ಕಾಲ ವರುಣ ದರ್ಶನ ಆಗಲಿದ್ದು, ಶಾಂತಿನಗರ. ಜಯನಗರ. ಕಾರ್ಪೋರೇಷನ್. ಆಡುಗೋಡಿ. ಮಡಿವಾಳ. ಹಾಗೂ ಕೋರಮಂಗಲದಲ್ಲಿ ಮುಂದಿನ ಎರಡು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಉತ್ತರ ಕರ್ನಾಟಕ ಭಾಗಕ್ಕೂ ಕಾಲಿಡಲಿದ್ದಾನೆ ಮಳೆರಾಯ ಮಲೆನಾಡು, ಕರಾವಳಿ ಹಾಗೂ ಬೆಂಗಳೂರಿಗೆ ಬರಲಿರುವ ಮಳೆರಾಯ ಉತ್ತರ ಕರ್ನಾಟಕಕ್ಕೂ ಕಾಲಿಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ ಹಾಗೂ ಬಾಗಲಕೋಟೆಯ ಕೆಲವು ಭಾಗಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇತ್ತ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲೂ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಇಂದು, ನಾಳೆ ಮತ್ತು 17 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಕೆಲವೆಡೆ ಅರೆಂಜ್ ಅಲರ್ಟ್ ಘೋಷಣೆ ‌ಮಾಡಲಾಗಿದೆ. ಕೆಲವು ಕಡೆ ಮೇ 15 ಮತ್ತು 16 ರಂದು ಅತಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ರೆಡ್ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

ಕೊಡಗಿನಲ್ಲಿ 204 ಮಿಲಿ ಮೀಟರ್​ಗೂ ಅಧಿಕ ಮಳೆ ಸಾಧ್ಯತೆ ಕೊಡಗಿನಲ್ಲಿ ನಾಳೆ 204 ಮಿಲಿ ಮೀಟರ್​ಗೂ ಅಧಿಕ ಮಳೆಯಾಗುವ ಸಾಧ್ಯತೆ ಇದ್ದು, ಇಂದು 100 ಮಿಲಿ ಮೀಟರ್​ಗೂ ಹೆಚ್ಚು ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 14 ಮತ್ತು 16 ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಮೇ‌ 15 ರಂದು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಹೀಗಾಗಿ ತಗ್ಗು ಪ್ರದೇಶ, ಬೆಟ್ಟ ಗುಡ್ಡಗಳಲ್ಲಿ ವಾಸಿಸುವವರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಒಟ್ಟಾರೆಯಾಗಿ ತೌಕ್ತೆ ಚಂಡಮಾರುತ ಕರ್ನಾಟಕದ ಬಹುತೇಕ ಎಲ್ಲಾ ಭಾಗಗಳಿಗೂ ಮಳೆ ಹೊತ್ತು ಬರುವ ಸಾಧ್ಯತೆ ಇದ್ದು, ಈ ಬಾರಿ ಮುಂಗಾರಿಗೂ ಮುನ್ನವೇ ಒಂದು ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Cyclone Tauktae: ಮುಂದಿನ 2-3 ದಿನಗಳಲ್ಲಿ ಭಾರೀ ಮಳೆ ಸಾಧ್ಯತೆ; ಅಪ್ಪಳಿಸಲಿದೆ ತೌಕ್ತೆ ಚಂಡಮಾರುತ

(Karnataka Rain likely to get heavy rain in coastal Karnataka and Bangalore due to effect of Cyclone Tauktae red alert by weather department)

Published On - 7:29 am, Fri, 14 May 21