
Breaking News Today: ಚೈತ್ರಾ ಕುಂದಾಪುರ (Chaitra Kundapura) ಆ್ಯಂಡ್ ಗ್ಯಾಂಗ್ ವಂಚನೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಆಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳದ ಬಗ್ಗೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದರ ಜೊತೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ರಾಜಕೀಯ ವಾಕ್ಸಮರದ ಜೊತೆಗೆ ಪಕ್ಷಗಳಲ್ಲಿ ಲೋಕಸಭೆ ಚುನಾವಣೆ (Lok Sabha Elections) ತಯಾರಿಯೂ ನಡೆಯುತ್ತಿದೆ. ಇದರ ಜೊತೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಮಾತುಕತೆಯೂ ನಡೆಯುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಕೆಲವೆಡೆ ಮಳೆಗಾಗಿ ರೈತರು ಕಾಯುತ್ತಿದ್ದಾರೆ. ಕಾವೇರಿ (Cauvery) ಹೋರಾಟವೂ ನಡೆಯುತ್ತಿದೆ. ಈ ಎಲ್ಲದರ ಕ್ಷಣಕ್ಷಣದ ಮಾಹಿತಿ ಟಿವಿ9 ಲೈವ್ನಲ್ಲಿ ಪಡೆಯಿರಿ.
ದೆಹಲಿ: ರಾಜ್ಯಸಭೆಯಲ್ಲೂ ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರವಾಗಿದೆ. ನಿನ್ನೆ(ಸೆ.20) ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕರಿಸಲಾಗಿತ್ತು. ಲೋಕಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಬಿಲ್ ಇದಾಗಿದ್ದು, ಶೇಕಡಾ 33ರಷ್ಟು ಮೀಸಲಾತಿ ನೀಡುವ ವಿಧೇಯಕ ಅಂಗೀಕಾರವಾಗಿದೆ.
ಮೈಸೂರು: ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನಲೆ ಪ್ರಸಕ್ತ ವರ್ಷ ಸರಳ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ H.C.ಮಹದೇವಪ್ಪ ಹೇಳಿದ್ದಾರೆ. ಈ ಬಾರಿ ಸರಳ ಮತ್ತು ಅರ್ಥಪೂರ್ಣ ದಸರಾ ಆಚರಿಸಲು ನಿರ್ಧಾರ ಮಾಡಲಾಗಿದೆ ಎಂದರು.
ದೆಹಲಿ: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಆಗಮಿಸಿದ್ದಾರೆ.
ಮಂಡ್ಯ: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಖಂಡಿಸಿ ಮಂಡ್ಯ ಯೂತ್ ಗ್ರೂಪ್ಸ್‌ನಿಂದ ಮಂಡ್ಯದಲ್ಲಿ ಪಂಜಿನ ಮೆರವಣಿಗೆ ನಡೆಸಲಾಗಿತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ: ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಭೇಟಿಗೆ ಆಗಮಿಸಿದ್ದ ಡಾ.ಕೆ.ಸುಧಾಕರ್, ಮಾಧ್ಯಮಗಳನ್ನು ಕಂಡು ಕಾರು ನಿಲ್ಲಿಸದೆ ತೆರಳಿದ್ದಾರೆ. ಬಿಜೆಪಿ ನಾಯಕರ ಜೊತೆಗೆ ಮೈತ್ರಿ ಮಾತುಕತೆಗೂ ಮುನ್ನ HDD ಭೇಟಿಗೆ ಯತ್ನಿಸಿದ್ದಾರೆ.
ದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ ಎಂದು ನವದೆಹಲಿಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ‘ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ನಿರ್ಧಾರಕ್ಕೆ ನಾನು ಬದ್ಧ. ಮೈತ್ರಿ ಸಂಬಂಧ ಹೆಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಾರೆ. ಹಾಸನದಲ್ಲಿ ಮೈತ್ರಿ ಅನಿವಾರ್ಯವೋ, ಬೇಡವೋ ನನಗೆ ಗೊತ್ತಿಲ್ಲ ಎಂದರು.
ಬೆಂಗಳೂರು: ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ರಾಜಭವನದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು. ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ, ನ್ಯಾ. ಶ್ರೀಮತಿ ಕನ್ನನ್ ಕುಯಿಲ್ ಶ್ರೀಧರನ್ ಹೇಮಲೇಖಾ ಹಾಗೂ ನ್ಯಾ. ಸಿದ್ದಯ್ಯ ರಾಚಯ್ಯ ಅವರಿಂದ ಹೆಚ್ಚುವರಿ ನ್ಯಾಯಮೂರ್ತಿ ಪದವಿಯ ಅಧಿಕಾರ ಪ್ರಮಾಣ ವಚನ ಸ್ವೀಕಾರ ಮಾಡಿದರು.
ನವದೆಹಲಿಯಲ್ಲಿ ಇಂದು(ಸೆ.21) ರಾತ್ರಿ 9 ಗಂಟೆಗೆ ಬಿಜೆಪಿ, ಜೆಡಿಎಸ್ ನಾಯಕರ ಸಭೆ ನಡೆಯಲಿದೆ. ರಾಜ್ಯಸಭೆ ಹೌದು, ಕಲಾಪ ಮುಗಿದ ನಂತರ ಸಭೆಗೆ ಸ್ಥಳ, ಸಮಯ ನಿಗದಿ ಮಾಡಲಾಗಿದೆ.
ದೆಹಲಿ: ಬಿಜೆಪಿ ನಾಯಕರ ಭೇಟಿಗೂ ಮುನ್ನ ದೆಹಲಿಯ ದೇವೇಗೌಡರ ನಿವಾಸದಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಕುಮಾರಸ್ವಾಮಿ, ರೇವಣ್ಣ, ಕುಪೇಂದ್ರರೆಡ್ಡಿ ಜೊತೆ ಸೀಟು ಬೇಡಿಕೆ ಬಗ್ಗೆ ನಾಯಕರು ಸಮಾಲೋಚನೆ ನಡೆಸಿದ್ದಾರೆ.
ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ವಿಚಾರ ‘ಇನ್ನೆರಡು ದಿನಗಳಲ್ಲಿ ಕನ್ನಡಪರ ಸಂಘಟನೆಗಳು ಚರ್ಚೆ ಮಾಡುತ್ತೇವೆ. ನಂತರ ಹೋರಾಟಕ್ಕೆ ನಿರ್ಧರಿಸುತ್ತೇವೆ ಎಂದು ವಿಧಾನಸೌಧದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು. ಕಾವೇರಿ ನೀರು ಬಿಡಲೇಬೇಕಂದ್ರೆ ಬಂದ್ ಮಾಡಲು ಸಿದ್ಧರಿದ್ದೇವೆ. ನಟರು ಬರುತ್ತೇವೆಂದು ಹೇಳಿದ್ದಾರೆ, ನೋಡೋಣ ಯಾವ ರೀತಿ ಬರುತ್ತಾರೆಂದು. ನಮ್ಮ ಕನ್ನಡ ನಟರು ಎಲ್ಲೆಲ್ಲೋ ಇದ್ದಾರೆ. ನಾಡಿನ ಪರ, ಕನ್ನಡ ಪರ, ರೈತರ ಪರ ಸ್ಯಾಂಡಲ್‌ವುಡ್ ನಟರು ಬರಲಿ ಎಂದರು.
ಮಂಡ್ಯ: ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ ಸೆಪ್ಟೆಂಬರ್ 23 ರಂದು ಮಂಡ್ಯ ಬಂದ್ಗೆ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಕರೆ ಕೊಟ್ಟಿದೆ. ಇಂದಿನ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ನಾಳಿನ ಸಭೆಯಲ್ಲಿ ಬಂದ್ ರೂಪು-ರೇಷೆ ಬಗ್ಗೆ ಚರ್ಚೆ ನಡೆಯಲಿದೆ.
ಬೆಂಗಳೂರು: ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹಿನ್ನಲೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ‘ರಾಜ್ಯ ಸರ್ಕಾರ ಕಾನೂನು ಹೋರಾಟವನ್ನು ಮುಂದುವರಿಸಬೇಕು. ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಸಿಎಂ, ಡಿಸಿಎಂ ನಡುವೆ ಅಸಮಾಧಾನ ಇರೋದು ಜಗಜ್ಜಾಹೀರಾಗಿದೆ ಎಂದರು.
ನವದೆಹಲಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿದ್ದು, ರಾಜ್ಯಸಭೆ ಕಲಾಪ ಮುಗಿದ ನಂತರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಲಿದ್ದಾರೆ. ಸದ್ಯ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕದ ಬಗ್ಗೆ ಚರ್ಚೆ ಆಗುತ್ತಿದ್ದು, ರಾಜ್ಯಸಭೆ ಕಲಾಪದಲ್ಲಿ ಅಮಿತ್ ಶಾ, ಜೆ.ಪಿ.ನಡ್ಡಾ ಭಾಗಿಯಾಗಿದ್ದಾರೆ.
ಬೆಂಗಳೂರು: ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಕುರಿತು ‘ನೀರೇ ಇಲ್ಲದ ಸಂದರ್ಭದಲ್ಲಿ ನಮ್ಮ ಅಹವಾಲು ಆಲಿಸದೆ ಆದೇಶ ನೀಡಿದ್ದಾರೆ ಎಂದು ವಿಧಾನಸೌಧದಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ‘ಇದುವರೆಗೆ ನೀರು ಹರಿಸಿರುವ ಬಗ್ಗೆ ವಕೀಲರು ದಾಖಲೆ ಸಲ್ಲಿಸಿದ್ದಾರೆ. ಕಾವೇರಿ ಕೊಳ್ಳದ ಡ್ಯಾಮ್ಗಳಲ್ಲಿ ಎಷ್ಟು ನೀರಿದೆ ಎಂದು ಮನವರಿಕೆ ಮಾಡಿದ್ದಾರೆ. ಆದರೂ, ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿದೆ ಎಂದಿದ್ದಾರೆ.
ಹುಬ್ಬಳ್ಳಿ: ತಮಿಳುನಾಡಿಗೆ ಮತ್ತೆ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶ ‘ರಾಜ್ಯದ ರೈತರನ್ನು ಬಲಿಕೊಟ್ಟು ಕಾಂಗ್ರೆಸ್ ಸರ್ಕಾರ ದ್ರೋಹ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ‘ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಸರ್ಜನೆ ಮಾಡಬೇಕು. ನಮಗೆ ಕುಡಿಯೋಕೆ ನೀರಿಲ್ಲ. ಆದ್ರೆ, ಕಾಂಗ್ರೆಸ್ ಸರ್ಕಾರ ನೀರು ಬಿಡುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯನ್ನು ಕಾಂಗ್ರೆಸ್ ತಂದಿಟ್ಟಿದೆ ಎಂದು ಕಿಡಿಕಾರಿದ್ದಾರೆ.
ರಾಮನಗರ: ಮೊರಾರ್ಜಿ ವಸತಿ ಶಾಲೆ ಗೋಡೆ ಕುಸಿದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಹೊಸೂರು ಗೊಲ್ಲಳ್ಳಿಯಲ್ಲಿ ನಡೆದಿದೆ. ಬೆಳಗ್ಗೆ ಸ್ನಾನಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ವಿದ್ಯಾರ್ಥಿ ಕೌಶಿಕ್ (12) ಮೃತ ದುರ್ದೈವಿ. ನೀರು ಸಂಗ್ರಹಕ್ಕೆ ತಡೆಗೋಡೆ ನಿರ್ಮಿಸಲಾಗಿತ್ತು. ನೀರಿನ ಪ್ರಮಾಣ ತಡೆಯಲಾಗದೇ ಗೋಡೆ ಕುಸಿದಿದೆ.
ಬೆಂಗಳೂರು ಪದವೀಧರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಚುನಾವಣಾ ಸಿದ್ಧತಾ ಸಭೆ ನಡೆಸಲಾಗುತ್ತಿದೆ. ಶಾಸಕ ಆರ್.ಅಶೋಕ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಸಿದ್ಧರಾಜು, ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ, ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ಬಿಜೆಪಿ ಎಂಎಲ್ಸಿ ಪುಟ್ಟಣ್ಣ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರ ಇದಾಗಿದೆ.
ತಮಿಳುನಾಡಿಗೆ ಮತ್ತೆ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಮಿತ್ರ ಪಕ್ಷ ಡಿಎಂಕೆ ಜೊತೆ ಕಾಂಗ್ರೆಸ್ ಸರ್ಕಾರ ಮಾತನಾಡಬೇಕು. ಡಿಎಂಕೆ ಜೊತೆ ಚರ್ಚಿಸಿ ಕಾವೇರಿ ನದಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿ. ಕೇಂದ್ರ ಮಧ್ಯ ಪ್ರವೇಶ ಮಾಡುವಂತೆ ಒತ್ತಾಯ ಮಾಡುವುದು ಸರಿಯಲ್ಲ. ತಮಿಳುನಾಡಿಗೆ ನೀರು ಬಿಟ್ಟು ಸರ್ಕಾರ ತಪ್ಪು ಮಾಡಿದೆ ಎಂದರು.
ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಕಾವೇರಿ ನೀರು ಬಿಡದಂತೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಹಾಕಲು ಕರವೇ ಕಾರ್ಯಕರ್ತರು ಹೊರಟಿದ್ದಾರೆ. ಕರವೇ ಅಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಹೊರಟ ರ್ಯಾಲಿಯನ್ನು ಮೌರ್ಯ ಸರ್ಕಲ್ ಬಳಿ ಬ್ಯಾರಿಕೇಡ್ ಹಾಕಿ ರ್ಯಾಲಿ ತಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಎಲ್ಲರನ್ನೂ ವಶಕ್ಕೆ ಪೊಲೀಸರ ಪ್ಲಾನ್ ಹಾಕಲಾಗಿದೆ. ಸದ್ಯ ನಾರಾಯಣ ಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಕರ್ತರನ್ನೂ ವಶಕ್ಕೆ ಪಡೆಯಲು ಆರಂಭಿಸಿದ್ದಾರೆ.
ತಮಿಳುನಾಡಿಗೆ ಮತ್ತೆ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ, ಸುಪ್ರೀಂಕೋರ್ಟ್ ತೀರ್ಪು ಗಾಯದ ಮೇಲೆ ಬರೆ ಎಳೆದಂತಾಗಿದೆ. ತಮಿಳುನಾಡು ಕೇಳುವುದಕ್ಕಿಂತ ಮೊದಲೇ ಕರ್ನಾಟಕ ನೀರು ಬಿಟ್ಟಿದೆ. ತಮಿಳುನಾಡಿಗೆ ರಾಜ್ಯ ಸರ್ಕಾರ ಯಾರ ಭಯದಿಂದ ನೀರು ಬಿಟ್ಟಿದೆ. ರಾಜ್ಯ ಸರ್ಕಾರಕ್ಕೆ ಡಿಎಂಕೆ ಬೆದರಿಕೆ ಹಾಕಿರಬಹುದು. ನಿಮ್ಮ I.N.D.I.Aದ ಭಾಗ ಆಗಬೇಕೆಂದರೆ ನೀರು ಬಿಡಿ ಎಂದಿರಬಹುದು ಅಥವಾ ನಿಮ್ಮ ಹೈಕಮಾಂಡ್ ನೀರು ಬಿಡಲು ಸೂಚನೆ ನೀಡಿರಬಹುದು. ನೀರು ಬಿಟ್ಟು ಸಭೆ ಕರೆಯುವ ಹೊಸ ಸಂಪ್ರದಾಯ ಶುರು ಮಾಡಿದ್ದೀರಿ ಎಂದರು.
ಹುಬ್ಬಳ್ಳಿ: ಮೂರು ದಿನ ಯಾವುದೇ ಗೊಂದಲ್ಲ ಇಲ್ಲದೆ ಗಣೇಶ ಪ್ರತಿಷ್ಠಾಪನೆಯಾಗಿದೆ. ಹಿಂದೂ ಸಮಾಜ ಶಾಂತಿಯಿಂದ ಆಚರೆಣೆ ಮಾಡಿದೆ. ಈದ್ಗಾ ಮೈದಾನ ಶುದ್ದಿಯಾಗಿದೆ. ಗಣೇಶ ಉತ್ಸವಕ್ಕೆ ವಿರೋಧ ಮಾಡಿದವರು ದೇಶ ವಿರೋಧಿಗಳು, ಅಧರ್ಮಿಯರು. ನಾವು ಅದನ್ನು ಮೆಟ್ಟಿ ನಿಂತು ಆಚರಣೆ ಮಾಡಿದ್ದೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು. ಅಂಜುಮನ್ ಕಮೀಟಿಯವರು ನೀಚರು. ಹಿಂದೂ ಸಮಾಕ ಕೆಣಕಿದ್ರೆ ನಾವು ಮಸೀದಿಯಲ್ಲಿ ಗಣಪತಿ ಕೂರಸುತ್ತೇವೆ. ಮಸೀದಿಯಲ್ಲಿ ಗಣೇಶ ಕೂರಿಸೋ ತಾಕತ್ತು ನಮಗಿದೆ. ಅಂಜುಮನ್ ಕೋರ್ಟ್ಗೆ ಹೋಗುತ್ನಿತೇವೆ ಅನ್ನೋದು ಸರಿ ಅಲ್ಲ. ನಿಮ್ಮ ಸೊಕ್ಕು ಸರಿ ಅಲ್ಲ. ಇದೇನು ಪಾಕಿಸ್ತಾನ ಅಲ್ಲ, ಅಫಘಾನಿಸ್ತಾನ ಅಲ್ಲ. ಇದು ನಮ್ಮ ನೆಲ, ಮೈದಾನ ಪಾಲಿಕೆ ಆಸ್ತಿ ಎಂದು ಹೇಳಿದೆ. ಅಕಸ್ಮಾತ್ ನೀವು ಕೋರ್ಟ್ ಗೆ ಹೋಗುತ್ತೀರಿ ಅನ್ನೋದೇ ಆದರೆ ನಾವು ನಮಾಜ್ಗೆ ಹೋಗುತ್ತೇವೆ ಎಂದರು.
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಒಪ್ಪಿಗೆ ಹಿನ್ನೆಲೆ ದಾವಣಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ನಡೆಯಿತು. ದಾವಣಗೆರೆಯ ಮಹಾನಗರ ಪಾಲಿಕೆ ಆವರಣದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ವಿಧಾನ ಸಭೆ ಹಾಗೂ ಲೋಕ ಸಭೆಯಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರಮೋದಿ ಅವರ ದಿಟ್ಟ ನಿರ್ಧಾರವೇ ಕಾರಣ ಎಂದು ಘೋಷಣೆ ಕೂಗಲಾಯಿತು.
ಕಾವೇರಿಗಾಗಿಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ, ಯಾವುದೇ ಕಾರಣಕ್ಕೂ ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಅಲ್ಲದೆ, 12 ಗಂಟೆಗೆ ಕರವೇ ನಾರಯಣಗೌಡ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಹೀಗಾಗಿ ಪ್ರತಿಭಟನೆ ರ್ಯಾಲಿ ತಡೆಯಲು ಪೊಲೀಸರು ಸಜ್ಜಾಗಿದ್ದಾರೆ.
ಕಾವೇರಿ ಜಲ ವಿವಾದ ಸಂಬಂಧ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾದರು. ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಗಜೇಂದ್ರ ಸಿಂಗ್ ಶೇಖಾವತ್ ನಿವಾಸದಲ್ಲಿ ಭೇಟಿಯಾಗಿ ನೀರು ಹಂಚಿಕೆ ವಿವಾದದ ಕುರಿತು ಮಾತುಕತೆ ನಡೆಸುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ತಡರಾತ್ರಿ ಸಭೆ ನಡೆಸಿದರು. ಹಳೇ ಮೈಸೂರು ಭಾಗದಲ್ಲಿ ಲೋಕಸಭೆ ತಂತ್ರಗಾರಿಕೆ ಕುರಿತು ಸುದೀರ್ಘ ಮಾತುಕತೆ ನಡೆಸಲಾಯಿತು. ಸಚಿವ ಚಲುವರಾಯಸ್ವಾಮಿ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮತ್ತು ಕೆಲ ಪ್ರಮುಖ ನಾಯಕರು ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಅಲ್ಲದೆ, ಒಕ್ಕಲಿಗರು ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ತಂತ್ರಗಾರಿಕೆ ಕುರಿತು ಚರ್ಚೆ ನಡೆಸಲಾಯಿತು. ಜೆಡಿಎಸ್ ಎಲ್ಲೆಲ್ಲಿ ಸ್ಪರ್ಧೆ ಮಾಡಬಹುದು ಎಂಬ ಮಾಹಿತಿ ಸಂಗ್ರಹ ಮಾಡಲಾಯಿತು. ಅಲ್ಲದೆ, JDS, ಬಿಜೆಪಿ ಮೈತ್ರಿ ಮಣಿಸಲು ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ಕೂಡ ನಡೆದಿದೆ ಎನ್ನಲಾಗುತ್ತಿದೆ.
ದೇವನಹಳ್ಳಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕೆಂಪೇಗೌಡ ಏರ್ಪೋಟ್ನಿಂದ ದೆಹಲಿಗೆ ಪ್ರಯಾಣ ಗೈಗೊಂಡಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದರು.
ಮೈತ್ರಿ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ನಾಳೆ ಮಾತನಾಡುತ್ತೇನೆ. ಎಷ್ಟು ಸೀಟ್ ಅಂತಾ ನಾವು ಚರ್ಚಿಸಿಲ್ಲ, ಬಿಜೆಪಿಯೂ ಚಿಂತನೆ ಮಾಡಿಲ್ಲ. 28 ಕ್ಷೇತ್ರದ ಇಂದಿನ ಪರಿಸ್ಥಿತಿ ಅವಲೋಕಿಸಿ ಚರ್ಚೆ ಮಾಡುತ್ತೇವೆ. ಮೈತ್ರಿ ವಿಚಾರವಾಗಿ ಸಂಜೆ ಅಮಿತ್ ಶಾ, ಜೆಪಿ ನಡ್ಡಾ ಜೊತೆ ಚರ್ಚೆ ಮಾಡುವೆ. ಅವಶ್ಯಕತೆ ಬಿದ್ದರೆ ಪ್ರಧಾನಿ ಮೋದಿ, ದೇವೇಗೌಡರು ಚರ್ಚಿಸುತ್ತಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಮಾತುಕತೆ ನಡೆಸಲು ಇಂದು ಬೆಳಗ್ಗೆ 9.30ಕ್ಕೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವಯಾಗಿ ಲೋಕಸಭಾ ಚುನಾವಣೆ ಸೀಟು ಹಂಚಿಕೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಸದ್ಯ ಜೆಡಿಎಸ್ ನಾಲ್ಕು ಕ್ಷೇತ್ರಗಳ (ಮಂಡ್ಯ, ಹಾಸನ, ಕೋಲಾರ, ತುಮಕೂರು) ಬೇಡಿಕೆ ಮುಂದಿಟ್ಟಿದೆ. ತುಮಕೂರು ಲೋಕಸಭಾ ಕ್ಷೇತ್ರದ ವಿಚಾರ ಇನ್ನೂ ಅಂತಿಮವಾಗಿಲ್ಲ. ಇಂದಿನ ಚರ್ಚೆ ವೇಳೆ ಸೀಟು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನ ಆಗುವ ಸಾಧ್ಯತೆ ಇದೆ. ನಾಳೆ ಅಥವಾ ನಾಡಿದ್ದು ಉಭಯ ಪಕ್ಷಗಳಿಂದ ಜಂಟಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.
Published On - 8:31 am, Thu, 21 September 23