ಕರ್ನಾಟಕ ವಿಧಾನಸಭೆ ಅಧಿವೇಶನ ಆರಂಭವಾಗಿದೆ. ಅಧಿವೇಶನ ಆರಂಭವಾದ ದಿನದಿಂದಲೂ ಗದ್ದಲಮಯವಾಗಿದೆ. ಬುಧವಾರ ಸದನದಲ್ಲಿ ಪ್ರತಿಪಕ್ಷ ಬಿಜೆಪಿ ನಾಯಕರು ವಿದಯೇಕದ ಹಾಳೆಯನ್ನು ಹರಿದು ಉಪಸಭಾಪತಿ ಮೇಲೆ ಎಸೆದ ಪರಿಣಾಮ 10 ಶಾಸಕರನ್ನು ಅಮಾನತು ಮಾಡಲಾಗಿದೆ. ನಿನ್ನೆ (ಜು.20) ರಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಭಾಪತಿ ಮತ್ತು ಉಪಸಭಾಪತಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದರು. ಇನ್ನು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಶಂಕಿತ ಉಗ್ರರರನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೇ ಟೊಮೇಟೊ ಬೆಲೆ ಶತಕ ದಾಟಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್..
545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿದೆ. ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದು, ನ್ಯಾಯಾಂಗ ತನಿಖೆಗೆ ಪೊಲೀಸ್ ಇಲಾಖೆ ಹಾಗೂ ಸಿಐಡಿ ಸಹಕರಿಸಬೇಕು. ಅಕ್ರಮದಲ್ಲಿ ಭಾಗಿಯಾಗಿದ್ದ 52 ಅಭ್ಯರ್ಥಿಗಳಿಗೆ
ಇನ್ಮುಂದೆ ಯಾವುದೇ ಇಲಾಖಾ ಪರೀಕ್ಷೆ ಬರೆಯಲು ಶಾಶ್ವತ ನಿಷೇಧಿಸಲಾಗಿದೆ. ಆ ಮೂಲಕ PSI ನೇಮಕಾತಿ ಅಕ್ರಮವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ಸಿಟಿ ರೌಂಡ್ಸ್ ಹೊಡೆಯಲಿದ್ದಾರೆ. ಬೆಳಗ್ಗೆ 10.30ಕ್ಕೆ ಸದಾಶಿವನಗರದ ನಿವಾಸದಿಂದ ಹೊರಡಲಿರುವ ಅವರು, ಬೆಂಗಳೂರಿನ ಕೆಲವೆಡೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಸಂಬಂಧ ಸಿಟಿ ರೌಂಡ್ಸ್ ನಡೆಸುತ್ತಿದ್ದಾರೆ.
ನಾಳೆ ಬೆಳಗ್ಗೆಯಿಂದಲೇ ಕೆಆರ್‌ಎಸ್ ಡ್ಯಾಂನಿಂದ ಕಾವೇರಿ ನದಿ ಹಾಗೂ ನಾಲೆಗಳಿಗೆ ನೀರು ಬಿಡುಗಡೆಗೆ ತೀರ್ಮಾನ ಮಾಡಲಾಗಿದೆ. ಕಾವೇರಿ ನೀರಾವರಿ ನಿಗಮದಿಂದ ಮಾಧ್ಯಮ ಪ್ರಕಟಣೆ ಮಾಡಲಾಗಿದೆ.
ಗೃಹ ಲಕ್ಷ್ಮಿ ಯೋಜನೆಗೆ ಎರಡನೇ ದಿನ 7,77,423 ಮಹಿಳೆಯರಿಂದ ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಇದುವರೆಗೂ 8,81,639 ಮಹಿಳೆಯರಿಂದ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ನಂದಿನಿ ಹಾಲಿನ ದರ 3 ರೂಪಾಯಿ ಹೆಚ್ಚಳ ಮಾಡಲು ಸಿಎಂ ಸಿದ್ದರಾಮಯ್ಯ ಒಪ್ಪಿದ್ದಾರೆ. ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದರು. ನಾವು 5 ರೂ ಗೆ ಬೇಡಿಕೆ ಇಟ್ಟಿದ್ದೆವು. ಹಾಲಿನ ಉಪ ಉತ್ಪನ್ನಗಳ ದರ ನಂತರ ತೀರ್ಮಾನ ಆಗಲಿದೆ. ಹಾಲಿನ ಪುಡಿ ದರ ಏರಿಕೆಗೂ ಪ್ರಸ್ತಾವನೆ ಇಡಲಾಗಿದೆ ಎಂದರು.
ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ಮಾಡಿದ್ದು, ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಶುಕ್ರವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ KMF ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ಲೀಟರ್ಗೆ ಹಾಲಿಗೆ 5 ರೂ. ಹೆಚ್ಚಳಕ್ಕೆ KMF ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಅಂತಿಮವಾಗಿ 3 ರೂಪಾಯಿ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮತಿ ನೀಡಿದ್ದಾರೆ.
Nandini Milk Price: ನಂದಿನಿ ಹಾಲಿನ ದರ ಲೀಟರ್ಗೆ 3 ರೂ. ಹೆಚ್ಚಳ: ಆಗಸ್ಟ್ 1ರಿಂದ ಜಾರಿ
ನಂದಿನಿ ಹಾಲಿನ ದರ ಪರಿಷ್ಕರಣೆ ಸಂಬಂಧ ಸಿಎಂ ನೇತೃತ್ವದಲ್ಲಿ ಕಳೆದ 2 ಗಂಟೆಯಿಂದ ಕೆಎಂಎಫ್ ಆಡಳಿತ ಮಂಡಳಿ ಜತೆ ಸಭೆ ಮಾಡಲಾಗುತ್ತಿದೆ. ಹಾಲಿನ ದರ 5 ರೂಪಾಯಿ ಹೆಚ್ಚಳ ಪ್ರಸ್ತಾವನೆ ಬಗ್ಗೆ ಕೆಎಂಎಫ್ ಆಡಳಿತ ಮಂಡಳಿ, ಹಾಲು ಒಕ್ಕೂಟಗಳ ಜೊತೆ ಸಿಎಂ ಚರ್ಚೆ ಮಾಡುತ್ತಿದ್ದಾರೆ.
ಚಲಿಸುತ್ತಿದ್ದ ಕಾರು, ದ್ವಿಚಕ್ರ ವಾಹನದ ಮೇಲೆ ಮರ ಉರುಳಿಬಿದ್ದಿರುವಂತಹ ಘಟನೆ ಬೆಂಗಳೂರಿನ ಗೋವಿಂದರಾಜನಗರದ ಕಾಮಧೇನು ಆಸ್ಪತ್ರೆ ಬಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸುಬ್ರಮಣಿ ಎಂಬುವರ ಕಾಲಿಗೆ ಗಾಯವಾಗಿದ್ದು, ಗಾಯಾಳನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ದೇಶದ ಅವಿಭಾಜ್ಯ ಅಂಗವಾಗಿರುವ ಮಣಿಪುರ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಬೆಳವಣಿಗೆಗಳಿಂದ ಮನಸ್ಸಿಗೆ ತುಂಬ ವಿಷಾದವಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಆಕ್ರೋಶದ ಕೈಗೆ ಬುದ್ಧಿಕೊಟ್ಟು ಅನರ್ಥಕ್ಕೆ ಅವಕಾಶ ಬೇಡ ಎಂದು ಶಾಂತಿ ಕಾಪಾಡುವಂತೆ ಮಣಿಪುರ ಜನತೆಗೆ ಪತ್ರ ಬರೆದಿದ್ದಾರೆ.
Manipur Violence: ಶಾಂತಿ ಕಾಪಾಡುವಂತೆ ಮಣಿಪುರ ಜನತೆಗೆ ಪತ್ರ ಬರೆದ ಪೇಜಾವರ ಶ್ರೀ
ನಂದಿನ ಹಾಲಿನ ದರ ಪರಿಷ್ಕರಣೆ ಸಂಬಂಧ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಆರಂಭವಾಗಿದ್ದು, ನಂದಿನಿ ಹಾಲಿನ ಪುಡಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ನಂದಿನ ಹಾಲಿನ ದರ ಪರಿಷ್ಕರಣೆ ಸಂಬಂಧ ಕೆಲವೇ ಕ್ಷಣಗಳಲ್ಲಿ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪಶುಸಂಗೋಪನ ಇಲಾಖೆ ಸಚಿವ ಕೆ.ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ಆಡಳಿತ ಮಂಡಳಿ ಸದಸ್ಯರು ಮತ್ತು ಕೆಎಂಎಫ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪರಾರಿಯಾಗಿರುವ ಆರೋಪಿ ISIS ಜೊತೆಗೆ ಸಂಪರ್ಕ ಹೊಂದಿದ್ದಾನೆ. ಹೀಗಾಗಿ ಶಂಕಿತ ಉಗ್ರರ ಬಂಧನ ಪ್ರಕರಣ ಎನ್ಐಎಗೆ ವಹಿಸಬೇಕು. ಆರೋಪಿಗಳ ಹಿನ್ನೆಲೆ ಏನು? ಅವರ ಉದ್ದೇಶ ಏನಾಗಿತ್ತು ಗೊತ್ತಾಗಬೇಕು. ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಎನ್‌ಐಎ ತನಿಖೆಗೆ ವಹಿಸಬೇಕು. ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಇವರ ಜನ ಇರಬಹುದು. ಈ ಬಗ್ಗೆ ತನಿಖೆ ಕೇವಲ ಪೊಲೀಸರಿಂದ ಮಾತ್ರ ಸಾಧ್ಯವಿಲ್ಲ ಎಂದು ಸಿ.ಟಿ.ರವಿ ಹೇಳಿದರು.
ಶಂಕಿತ ಉಗ್ರ ಜಾಹಿದ್ ನಿವಾಸದಲ್ಲಿ 4 ಗ್ರೆನೇಡ್ಗಳು ಪತ್ತೆ ಪ್ರಕರಣಕ್ಕೆ ಮುಂಜಾಗ್ರತಾ ಕ್ರಮ ವಹಿಸಿದ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದೇವೆ ಎಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಆರೋಪಿಗಳ ಬಂಧನ ಮಾತ್ರವಲ್ಲ, ಪ್ರಮುಖ ವಸ್ತುಗಳು ಜಪ್ತಿ ಮಾಡಿದ್ದಾರೆ. ಇದೊಂದು ಅಂತಾರಾಷ್ಟ್ರೀಯ ಪ್ರಕರಣ ಇರಬಹುದು ಎಂದರು.
ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ NIA ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದಾರೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ಮಂಡಿಸಿದೆ. ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿ ವರದಿ ಮಂಡನೆ ಮಾಡಲಾಗಿದ್ದು, ಪ್ರಸಕ್ತ ಅಧಿವೇಶನದಲ್ಲಿ 14 ವಿಧೇಯಕ ಮಂಡಿಸಿ ಅಂಗೀಕರಿಸಲಾಗಿದೆ ಎಂದು ಹೇಳಿದರು.
ಸ್ಪೀಕರ್ ಯುಟಿ ಖಾದರ್ ಸುದ್ದಿಗೋಷ್ಠಿ ಆರಂಭವಾಗಿದ್ದು, 16ನೇ ವಿಧಾನಸಭೆ ಅಧಿವೇಶನ 15 ದಿನಗಳ ಕಲ ನಡೆದಿದೆ. ರಾಜ್ಯ ಪಾಲರು ಸಧನ ಉದ್ದೇಶಿಸಿ ಭಾಷಣ ಮಾಡಿದರು. ಸಿಎಂ ಸಿದ್ಧರಾಮಯ್ಯ ಜು. 7 ರಂದು ಬಜೆಟ್ ಮಂಡಿಸಿದರು ಎಂದು ಹೇಳಿದರು.
ಮಂಡ್ಯದಲ್ಲಿ ಕಾಂಗ್ರೆಸ್ ಬರಲ್ಲ, ತಮ್ಮದೇ ಆಡಳಿತ ಅಂದುಕೊಂಡಿದ್ದರು. ಈಗ ಎಲ್ಲವೂ ರಿವರ್ಸ್ ಆಗುತ್ತಿದೆ, 7 ಕ್ಷೇತ್ರಗಳ ಪೈಕಿ 6ರಲ್ಲಿ ಗೆದ್ದಿದ್ದೇವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ನೋಡಿ ತಡೆದುಕೊಳ್ಳಲು ಆಗುತ್ತಿಲ್ಲ. ಯಾವ ಉದ್ದೇಶದಿಂದ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಮಾಡಲಿ. ಹೊಸ ಸರ್ಕಾರ ಬಂದಾಗ ಅಧಿಕಾರಿಗಳ ವರ್ಗಾವಣೆ ಸಹಜ ಪ್ರಕ್ರಿಯೆ ಎಂದರು.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನಡವಳಿಕೆ ಸರಿಯಿಲ್ಲವೆಂದು ಜೆಡಿಎಸ್ನಿಂದ ಹೊರಬಂದಿದ್ದೇವೆ ಎಂದು ಶಿವಮೊಗ್ಗದಲ್ಲಿ ಕೃಷಿ ಇಲಾಖೆ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ಪ್ರತಿ ಚುನಾವಣೆಯಲ್ಲಿ ಕನಿಷ್ಠ 10 ಜನ ಜೆಡಿಎಸ್ನಿಂದ ಹೊರ ಬರ್ತಿದ್ದಾರೆ. ಜೆಡಿಎಸ್ ಈ ಸ್ಥಿತಿಗೆ ಬರಲು ಅವರ ಕುಟುಂಬದವರೇ ಕಾರಣ, ನಾವಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಶಾಸಕರಾಗಿ ಆಯ್ಕೆ ಹಿನ್ನೆಲೆ ಅವರ ವಿರುದ್ಧ ಅಸಿಂಧು ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳಿಂದ ಪ್ರಜಾಪ್ರತಿನಿಧಿ ಕಾಯ್ದೆ ಸೆ.123(1) ಪ್ರಕಾರ ಆಮಿಷ ಒಡ್ಡುವಂತಿಲ್ಲ. ಮತದಾರರಿಗೆ ಗ್ಯಾರಂಟಿ ಕಾರ್ಡ್ ವಿತರಿಸಿ ಆಮಿಷ ಒಡ್ಡಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಆಯ್ಕೆ ಅಸಿಂಧುಗೊಳಿಸುವಂತೆ ಕೆ.ಎಂ.ಶಂಕರ ಎಂಬುವರಿಂದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಮತದಾರರಿಗೆ ಆಮಿಷ: ಸಿಎಂ ಸಿದ್ದರಾಮಯ್ಯ ಶಾಸಕ ಸ್ಥಾನ ಅಸಿಂಧು ಕೋರಿ ಹೈಕೋರ್ಟ್ಗೆ ಅರ್ಜಿ
ಬಿಜೆಪಿ ಧಿಕ್ಕರಿಸಿ ರಾಜ್ಯದ ಜನರು ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ ಎಂದು ಶಿವಮೊಗ್ಗದಲ್ಲಿ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಹೇಳಿದರು. ಕುಮಾರಸ್ವಾಮಿ ನಡವಳಿಕೆ ಸರಿಯಿಲ್ಲ ಅಂತ ಅಲ್ಲಿಂದ ಹೊರಬಂದಿದ್ದೇವೆ. ಪ್ರತಿ ಚುನಾವಣೆಯಲ್ಲಿ ಕನಿಷ್ಠ 10 ಜನ ಜೆಡಿಎಸ್ನಿಂದ ಹೊರ ಬರ್ತಿದ್ದಾರೆ. ಜೆಡಿಎಸ್ ಈ ಸ್ಥಿತಿಗೆ ಬರಲು ಅವರ ಕುಟುಂಬವೇ ಕಾರಣ, ನಾವಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಬರಲ್ಲ, ತಮ್ಮದೇ ಆಡಳಿತ ಅಂದುಕೊಂಡಿದ್ದರು ಎಂದರು.
ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ನಿರಂತರ ನಾಲ್ಕು ಮಳೆಯಿಂದ ಎರಡು ಮನೆ ಗೋಡೆ ಕುಸಿತವಾಗಿದೆ. ಸ್ಥಳಕ್ಕೆ ಚಿತ್ತಾಪುರ ಪುರಸಭೆ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಬಿಜೆಪಿಯೂ ವಿರೋಧ ಪಕ್ಷ, ಜೆಡಿಎಸ್ ಸಹ ವಿರೋಧ ಪಕ್ಷ. ಒಟ್ಟಾಗಿ ಕೆಲಸ ಮಾಡುವ ನಿರ್ಧಾರ ಆಗಿದೆ. ಎಲ್ಲರ ಅಭಿಪ್ರಾಯ ಪಡೆದು ಪಕ್ಷದ ಸಂಘಟನೆಗೆ 10 ಜನರ ತಂಡ ರಚನೆ ಮಾಡಲಾಗಿದೆ. ಇಡೀ ರಾಜ್ಯದಲ್ಲಿ ಸರ್ಕಾರದ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತುವಂತೆ ದೇವಗೌಡರು ಸಂದೇಶ ನೀಡಿದ್ದಾರೆ. ನಮಗೆ ದೇವೇಗೌಡರು ಸಲಹೆ ನೀಡಿದ್ದಾರೆ. ದೇವೇಗೌಡರ ಮಾರ್ಗದರ್ಶನ, ಪಕ್ಷ ಸಂಘಟನೆ ಮೂಲಕ ಯುವಕರ ತಂಡ ರಚನೆ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಪ್ರಜಾಪ್ರಭುತ್ವ ಉಳಿಸಲು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಸ್ಪೀಕರ್ ಒನ್ಸೈಡ್, ವಿಪಕ್ಷ ತುಳಿಯುವ ಕೆಲಸ ಮಾಡುತ್ತಿದ್ದಾರೆ. ಸ್ಪೀಕರ್ ಯಾಕೆ ಊಟಕ್ಕೆ ಹೋದರಿ ಅಂದ್ವಿ ಅವರು ನಮ್ಮನ್ನ ಹೊರಗಡೆ ಹಾಕಿದರು. ಕಾಂಗ್ರೆಸ್ ಆಫೀಸಿಗೆ ಊಟಕ್ಕೆ ಯಾಕೆ ಹೋದರಿ ಅಂತ ಕೇಳಿದ್ವಿ. ನೀವು ಅಲ್ಲಿ ಬಿರಿಯಾನಿ ತಿಂದರಾ ಅಂತ ಕೇಳಿಲ್ಲ ವೆಜ್ತಿಂದರಾ ಅಂತ ಕೇಳಿಲ್ಲ. ಸರ್ಕಾರ ಹಣದಲ್ಲಿ ತಿನ್ನಬೇಕು ಅಲ್ವ ಯಾಕೆ ಅಲ್ಲಿಗೆ ಹೋದರಿ. ಹೋಟೆಲ್ ಮುಂದೇ ಸ್ವೀಕರ್ ಕೈ ಕಟ್ಟಿಕೊಂಡು ನಿಂತಿದ್ದರು. ಸಭಾಧ್ಯಕ್ಷರ ಮಾನ ಮರ್ಯಾದೆ ತೆಗೆದ ಖಾದರ್ಗೆ ದಿಕ್ಕಾರ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಬೆಂಗಳೂರು: ನಮ್ಮ ಪಕ್ಷದ ಶಾಸಕರನ್ನು ಸದನದಿಂದ ಹೊರಹಾಕಿದ್ದಾರೆ. ದಲಿತರು, ಹಿಂದುಳಿದವರ ಪರ ಎಂದು ಈ ಸರ್ಕಾರ ಹೇಳಿಕೊಳ್ಳುತ್ತೆ. ಆದರೆ ಬಜೆಟ್ನಲ್ಲಿ ದಲಿತರು, ಒಬಿಸಿಯವರಿಗೆ ಏನು ನೀಡಿದೆ ?. ನಮ್ಮ ಸರ್ಕಾರ ದಲಿತರು, ಒಬಿಸಿಗೆ ಹೆಚ್ಚು ಅನುದಾನ ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಜನವಿರೋಧಿ, ಅತ್ಯಂತ ಭ್ರಷ್ಟ ಸರ್ಕಾರ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ವಿದ್ಯುತ್ ದರ ಏರಿಕೆಯಾಗಿದೆ, ಮುಂದೆ ಹಾಲಿನ ದರವೂ ಏರುತ್ತೆ. ಈ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಪರಿಷತ್: ಗಾಂಧಿ ಪ್ರತಿಮೆ ಮುಂದು ಕುಳಿತು ಬಿಜೆಪಿಯವರು ಧರಣಿ ನಡೆಸಿದರು. ಬಿಜೆಪಿ ನಾಯಕರು ಗೋಡ್ಸೆ ಪ್ರತಿಮೆ ಮುಂದೆ ಧರಣಿ ಮಾಡಬೇಕಿತ್ತು. ಗಾಂಧಿ ಕೊಂದವರು ಅದೇ ಪ್ರತಿಮೆ ಮುಂದೆ ಧರಣಿ ನಡೆಸಿದ್ದು ವಿಪರ್ಯಾಸ ಎಂದು ವಿಧಾನಪರಿಷತ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬರೀ ಸುಳ್ಳು ಹೇಳೋದು, ಘರ್ಷಣೆ ಉಂಟು ಮಾಡುವವರು, ಸಮಾಜ ಒಡೆಯುವವರು ಈಗ ಹೋಗಿ ಗಾಂಧಿ ಮುಂದೆ ಕೂತಿದ್ದಾರೆ. ಇದಕ್ಕೆ ಬಿಜೆಪಿಯವರಿಗೆ ನೈತಿಕತೆ ಇದೆಯಾ? ಎಂದು ಪ್ರಶ್ನಿಸಿದರು.
ವಿಧಾನಸಭೆ: ವಿಧಾನಸಭೆಯಲ್ಲಿ ಕಬ್ಬು ಬೆಳಗಾರರ ಸಮಸ್ಯೆ ಬಗ್ಗೆ ಪ್ರಸ್ತಾಪವಾಗಿದೆ. ಈ ವೇಳೆ ಸದನದಲ್ಲಿ ಸಚಿವರ ಅನುಪಸ್ಥಿತಿಗೆ ಆಡಳಿತ ಪಕ್ಷದ ಶಾಸಕ ಲಕ್ಷ್ಮಣ ಸವದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಕ್ಕರೆ ಸಚಿವರು ಸದನದಲ್ಲಿ ಇಲ್ಲ, ಕೈಗಾರಿಕೆ ಸಚಿವರು ಇಲ್ಲ. ರೈತರ ಸುಲಿಗೆ ಮತ್ತು ಕಾರ್ಮಿಕರ ರಕ್ತ ಹಿರುವ ಕೆಲಸ ಆಗುತ್ತಿದೆ. ಕೂಡಲೇ ಸಮಸ್ಯೆ ಬಗೆ ಹರಿಸಬೇಕು ಎಂದು ಲಕ್ಷ್ಮಣ ಸವದಿ ಒತ್ತಾಯ ಮಾಡಿದರು.
ವಿಧಾನಪರಿಷತ್: ಕೇಂದ್ರ ಸರ್ಕಾರ ತೆಂಗು ಬೆಳೆಗಾರರ ವಿರೋಧಿ ನೀತಿ ತೋರಿಸುತ್ತಿದೆ. ಸಿಎಂ ಮಧ್ಯಪ್ರವೇಶ ಮಾಡಬೇಕು ಎಂದು ಕೊಬ್ಬರಿ ಬೆಲೆ ಇಳಿಕೆ ಸಂಬಂಧ ಎಸ್ ರವಿ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಶಿವಾನಂದ ಪಾಟೀಲ್ ತೆಂಗಿನ ಗಿಡ ಕೃಷಿ ಇಲಾಖೆಗೆ ಬರುತ್ತದೆ, ಕೊಬ್ಬರಿ ನನ್ನ ಇಲಾಖೆಗೆ ಬರುತ್ತದೆ. ಕೊಬ್ಬರಿ ಬೆಲೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. 16 ಸಾವಿರ ಕನಿಷ್ಟ ಬೆಲೆ ನೀಡುವುಕ್ಕೆ ಕೇಳಿದ್ದೇವು.
ಆದರೆ ಕೇಂದ್ರ 11 ಸಾವಿರ ಮಾತ್ರ ಕನಿಷ್ಟ ಬೆಂಬಲ ನೀಡಿದ್ದಾರೆ. ಇದಕ್ಕೆ ಕಡಿಮೆಯಾಗುತ್ತದೆ ಅಂತ ನಾವು ರಾಜ್ಯ ಸರ್ಕಾರ 1250 ರೂ. ಸೇರಿಸಿ ಕೊಟ್ಟಿದ್ದೇವೆ ಎಂದರು.
ಬೆಂಗಳೂರು: ಸದನದಿಂದ ಬಿಜೆಪಿ ಶಾಸಕರ ಅಮಾನತು ಮತ್ತು ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ ವಿಚಾರವಾಗಿ ವಿಧಾನಸೌಧ ಆವರಣದಲ್ಲಿ ಗಾಂಧಿ ಪ್ರತಿಮೆ ಎದುರು ವಿಪಕ್ಷ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಬಿಜೆಪಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಅಧಿವೇಶನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರು: ವಿಧಾನಸಭೆ ಕೊನೆಯ ದಿನದ ಸದನಕ್ಕೆ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಗೈರಾಗಿದ್ದಾರೆ.
ಬೆಂಗಳೂರು: ವಿಧಾನಪರಿಷತ್ನಲ್ಲೂ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸದಸ್ಯರು ಗೈರಾಗಿದ್ದಾರೆ.
ಬೆಂಗಳೂರು: ವಿಧಾನ ಪರಿಷತ್ ಕಲಾಪ ಆರಂಭವಾಗಿದ್ದು, ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಬುಡಕಟ್ಟು ಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) ತಿದ್ದುಪಡಿ ವಿದೇಯಕವನ್ನು ಸಚಿವ ಕೃಷ್ಣ ಭೈರೇಗೌಡ ಅವರು ಮಂಡನೆ ಮಾಡಿದರು.
ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಅಪಾರ ಪ್ರಮಾಣದಲ್ಲಿ ಬಂಡೂರಿ ನಾಲಾಗೆ ಹರಿದು ಬರುತ್ತಿದೆ. ಇದರಿಂದ ಕಾಡಂಚಿನ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ನಾಲ್ಕು ಗ್ರಾಮದ ಜನ ಜೀವ ಭಯದಲ್ಲೇ ಕಟ್ಟಿಗೆ ಸೇತುವೆ ಮೇಲೆ ಓಡಾಡುತ್ತಿದ್ದಾರೆ.
ಬೆಂಗಳೂರು: ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರ ಸಂಪರ್ಕದಲ್ಲಿದ್ದ ಹಲವರ ವಿಚಾರಣೆ ನಡೆಸುತ್ತಿದ್ದು, ಶಂಕಿತ ಉಗ್ರರು ಜುನೈದ್, ಟಿ.ನಾಸೀರ್ ಮಾತ್ರವಲ್ಲದೆ ಹಲವರ ಸಹಾಯ ಪಡೆದಿದ್ದಾರೆ. ಇನ್ನು ಸಿಸಿಬಿ ತನಿಖೆ ನಡೆಸುತ್ತಿರುವ ಪ್ರಕರಣವನ್ನೇ ಎನ್‌ಐಎ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.
ಮಂಗಳೂರು: ನಗರದಲ್ಲಿ ಮಾದಕವಸ್ತು ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೈಲ್ಯಾಂಡ್ ಬಳಿಯ ಅಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ನರ್(45) ಬಾಂಗ್ ಮಿಶ್ರಿ ಚಾಕೊಲೇಟ್ ಮಾರುತ್ತಿದ್ದನು. ಈತನನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿ ಇದ್ದ 5,500 ರೂ. ಮೌಲ್ಯದ ಬಾಂಗ್ ಚಾಕೊಲೇಟ್ ಜಪ್ತಿ ಮಾಡಿದ್ದಾರೆ.
ಕಾರ್ ಸ್ಟ್ರೀಟ್ ಬಳಿ ಬಾಂಗ್ ಮಿಶ್ರಿ ಚಾಕೊಲೇಟ್ ಮಾರುತ್ತಿದ್ದ ಮನೋಹರ್ ಶೇಟ್ (49) ನನ್ನು ಮಂಗಳೂರು ಉತ್ತರ ಠಾಣಾ ಬಂಧಿಸಿದ್ದಾರೆ. ಆರೋಪಿಯಿಂದ 48,000 ರೂ. ಮೌಲ್ಯದ ಬಾಂಗ್ ಚಾಕೊಲೇಟ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಮಳೆ ಸುರಿಯುತ್ತುರುವ ಹಿನ್ನೆಲೆ ಗಂಗಾವತಿ ತಾಲೂಕಿನ ಬಸವನದುರ್ಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲಚ್ಚಾವಣಿ ಕುಸಿದು ಬಿಳುತ್ತಿದೆ.
ಬೆಂಗಳೂರು: ಹಾಲಿನ ದರ ಏರಿಕೆ ಮಾಡಿ ಎಂದು ಒಕ್ಕೂಟಗಳು ಬೆನ್ನು ಬಿದ್ದಿದ್ದು, ಈ ಹಿನ್ನೆಲೆ ಇಂದು (ಜು.21) ಹಾಲು ಒಕ್ಕೂಟಗಳು ಮತ್ತು ಕೆಎಂಫ್ ಪದಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಮಾಡಲಿದ್ದಾರೆ. ಸಂಜೆ 6 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೆಎಂಎಫ್ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಭಾಗಿಯಾಗಲಿದ್ದಾರೆ.
Published On - 8:22 am, Fri, 21 July 23