Manipur Violence: ಶಾಂತಿ ಕಾಪಾಡುವಂತೆ ಮಣಿಪುರ ಜನತೆಗೆ ಪತ್ರ ಬರೆದ ಪೇಜಾವರ ಶ್ರೀ
ಮಣಿಪುರ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಬೆಳವಣಿಗೆಗಳಿಂದ ಮನಸ್ಸಿಗೆ ತುಂಬ ವಿಷಾದವಾಗಿದೆ. ಶಾಂತಿ ಕಾಪಾಡುವಂತೆ ಮಣಿಪುರ ಜನತೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪತ್ರ ಬರೆದಿದ್ದಾರೆ.
ಮೈಸೂರು, ಜುಲೈ 21: ದೇಶದ ಅವಿಭಾಜ್ಯ ಅಂಗವಾಗಿರುವ ಮಣಿಪುರ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಬೆಳವಣಿಗೆಗಳಿಂದ ಮನಸ್ಸಿಗೆ ತುಂಬ ವಿಷಾದವಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejawar Sri) ಹೇಳಿದ್ದಾರೆ. ಆಕ್ರೋಶದ ಕೈಗೆ ಬುದ್ಧಿಕೊಟ್ಟು ಅನರ್ಥಕ್ಕೆ ಅವಕಾಶ ಬೇಡ ಎಂದು ಶಾಂತಿ ಕಾಪಾಡುವಂತೆ ಮಣಿಪುರ ಜನತೆಗೆ ಪತ್ರ ಬರೆದಿದ್ದಾರೆ.
ಜಗತ್ತಿಗೆ ಅಹಿಂಸೆ ಶಾಂತಿಯ ಮಂತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸಿದ ಭಾರತ ಯಾವುದೇ ಭಾಗದಲ್ಲಿ ಇಂಥ ವಿಲಕ್ಷಣ ಬೆಳವಣಿಗೆಗಳು ನಡೆಯಬಾರದು. ಅದು ನಮಗೆ ಬದುಕು ಕೊಟ್ಟ ನೆಲಕ್ಕೆ ನಾವು ಮಾಡುವ ಅವಮಾನವಾಗುತ್ತದೆ. ಪ್ರಪಂಚದ ಸಮಗ್ರ ಇತಿಹಾಸವನ್ನು ಗಮನಿಸಿದರೆ ಹಿಂಸೆ, ಆಕ್ರಮಣ, ಅತ್ಯಾಚಾರಗಳಿಂದ ಯಾರೂ ಯಾವ ದೇಶವೂ ಏನನ್ನೂ ಸಾಧಿಸಿಲ್ಲ.
ಮುಂದಿನ ಪೀಳಿಗೆಗೆ ಯಾವ ಸಂದೇಶ
ನಮ್ಮ ರಾಮಾಯಣ ಮಹಾಭಾರತಗಳೂ ಅದನ್ನು ಸಾರಿ ಹೇಳಿವೆ. ಮಣಿಪುರದ ನೆಲದಲ್ಲಿ ಅನಾದಿಕಾಲದಿಂದ ಬದುಕುತ್ತಿರುವ ಎರಡು ಸಮುದಾಯಗಳ ನಡುವೆ ಯಾವುದೇ ಅಭಿಪ್ರಾಯ ಬೇಧಗಳಿಂದ ಹುಟ್ಟಿಕೊಂಡ ಈ ಗಲಭೆ ದಂಗೆಗಳಿಂದ ಏನನ್ನು ಸಾಧಿಸಲು ಹೊರಟಿದ್ದೇವೆ? ನಮ್ಮ ಮುಂದಿನ ಪೀಳಿಗೆಗೆ ಯಾವ ಸಂದೇಶವನ್ನು ಕೊಡಲು ಹೊರಟಿದ್ದೇವೆ ಎನ್ನುವುದನ್ನು ಯೋಚಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: ಬಂಧಿತ 4 ಆರೋಪಿಗಳಿಗೆ 11 ದಿನಗಳ ಪೊಲೀಸ್ ಕಸ್ಟಡಿ
ಭಗವದ್ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ಹೇಳಿದಂತೆ ಆಕ್ರೋಶದ ಕೈಗೆ ಬುದ್ಧಿಯನ್ನು ಕೊಟ್ಟರೆ ಬುದ್ಧಿನಾಶವಾಗುತ್ತದೆ. ಬುದ್ಧಿನಾಶವು ನಮ್ಮೆಲ್ಲರ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇಂಥ ವಿನಾಶಕಾರಿ ಬೆಳವಣಿಗೆಗಳು ಅವಶ್ಯವೇ ಎನ್ನುವುದನ್ನು ಗಲಭೆಯಲ್ಲಿ ತೊಡಗಿಕೊಂಡ ಸಮುದಾಯಗಳ ಮುಖಂಡರು ಅತ್ಯಂತ ತಾಳ್ಮೆ ಸಹನೆಯಿಂದ ವಿವೇಚಿಸಬೇಕು.
ಒಬ್ಬನಿಗೆ ಅಥವಾ ಒಂದು ಸಮುದಾಯದ ಮೇಲೆ ದಾಳಿ ಮಾಡಿ ಹಿಂಸಿಸಿ ಸಾರ್ವಜನಿಕ ಸೊತ್ತುಗಳನ್ನು. ನಾಶಮಾಡಿ ಏನನ್ನು ಸಾಧಿಸಿದ್ದೇವೆಂದು ಹೆಮ್ಮೆ ಪಡಬಹುದು. ಆದರೆ ಆ ಹೆಮ್ಮೆ ಶಾಶ್ವತವೇ? ನೂರಕ್ಕೆ ನೂರು ಅಲ್ಲ. ಇದು ಮುಂದೆ ಮತ್ತಷ್ಟು ಅನರ್ಥಕಾರಿ ಬೆಳವಣಿಗೆಗಳಿಗೆ ದಾರಿಯಾದೀತು. ಅದೆಲ್ಲಕ್ಕಿಂತ ಹೆಚ್ಚಾಗಿ ಎರಡು ಸಮುದಾಯಗಳ ನಡುವಿನ ಜಗಳದ ಲಾಭವನ್ನು ಪಡೆಯಲು ಮತ್ಯಾರೋ ಹವಣಿಸಬಹುದು.
ಇದನ್ನೂ ಓದಿ: Manipur Violence: ಮಣಿಪುರದ ಮುಖ್ಯಮಂತ್ರಿ ರಾಜೀನಾಮೆ ನೀಡಲ್ಲ, ಊಹಾಪೋಹಕ್ಕೆ ತೆರೆ ಎಳೆದ ಸರ್ಕಾರ
ಆದ್ದರಿಂದ ಮಣಿಪುರದ ಜನತೆ ತಕ್ಷಣ ಹಿಂಸೆಯ ಮಾರ್ಗವನ್ನು ಬಿಟ್ಟು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಸಮಾಲೋಚಿಸಿ ಮಣಿಪುರದ ಮತ್ತು ಭಾರತದ ಭವ್ಯ ಭವಿಷ್ಯದ ದೃಷ್ಟಿಯಿಂದ ಕೂಡಲೇ ಪರಿಹರಿಸಿಕೊಂಡು ಇಡೀ ದೇಶಕ್ಕೇ ಒಂದು ಒಳ್ಳೆಯ ಸಂದೇಶವನ್ನು ಕೊಡಬೇಕು ಎಂದಿದ್ದಾರೆ.
ಮಧ್ಯಸ್ಥಿಕೆ ವಹಿಸಲು ಸಿದ್ಧ
ಮಣಿಪುರ ರಾಜ್ಯದ ಶಾಂತಿ ಸುಭಿಕ್ಷೆ ಪ್ರಗತಿಗೆ ಮಾರಕವಾಗಿರುವ ಇಂಥ ಅಹಿತಕರ ಬೆಳವಣಿಗೆಗಳಿಗೆ ಆಸ್ಪದ ಕೊಡುವುದಿಲ್ಲ ಎಂದು ಎಲ್ಲರೂ ಒಟ್ಟಾಗಿ ಶಪಥಮಾಡಬೇಕು. ನಮ್ಮ ಒಗ್ಗಟ್ಟು ನಮ್ಮ ಶಕ್ತಿ; ನಮ್ಮ ವಿಘಟನೆ ಮತ್ತೊಬ್ಬನ ಶಕ್ತಿ ಯಾಗುತ್ತದೆ. ಇದನ್ನು ಅರಿತು ಒಗ್ಗಟ್ಟಿನಿಂದ ಮಣಿಪುರ ರಾಜ್ಯದ ಒಳಿತಿಗಾಗಿ ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕುವಂತಾಗಲಿ. ಅವಶ್ಯವಿದ್ದರೆ ಮಣಿಪುರದ ಒಳಿತಿಗಾಗಿ ಯಾವುದೇ ಸಂಧಾನ ಮಾತುಕತೆಗಳಿಗೂ ಮಧ್ಯಸ್ಥಿಕೆ ವಹಿಸಲು ಸಿದ್ಧರಿದ್ದೇವೆ ಎಂದು ಪತ್ರದ ಮೂಲಕ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಂದೇಶ ರವಾನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:47 pm, Fri, 21 July 23