
ಸಿಎಂ ಸಿದ್ದರಾಮಯ್ಯ(Siddaramaiah) ಸಿಎಂ ಆದ ಬಳಿಕ ನಿನ್ನೆ(ಜು.29) ಮೊದಲ ಬಾರಿಗೆ ಮಂಡ್ಯ(Mandya) ಜಿಲ್ಲೆಗೆ ಭೇಟಿ ನೀಡಿದ್ದರು. ಬಳಿಕ ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ(Bengaluru Mysuru Expressway)ಯಲ್ಲಿ ಅಪಘಾತ ಹೆಚ್ಚಾದ ಹಿನ್ನೆಲೆ 360 ಡಿಗ್ರಿ ಕ್ಯಾಮರಾ ವೀಕ್ಷಿಸಿದರು. ಇನ್ನು ನಿನ್ನೆ ಬೆಂಗಳೂರು ನಗರದಲ್ಲಿ ಮೊಹರಂ(Muharram) ಹಬ್ಬ ಆಚರಣೆ ಅದ್ದೂರಿಯಾಗಿ ನಡೆದಿದೆ. ಜೊತೆಗೆ ಬೆಂಗಳೂರಿನಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರರ ಜಾಡು ಹಿಡಿದು ಸಿಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಅನೇಕ ಕಡೆ ಭರ್ಜರಿ ಮಳೆಯಾಗುತ್ತಿದೆ. ಇದರೊಂದಿಗೆ ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಶಾರ್ಟ್ ಸರ್ಕ್ಯೂಟ್ನಿಂದ ಗ್ರಾನೈಟ್ ಮಳಿಗೆ ಕಚೇರಿ ಹೊತ್ತಿ ಉರಿದಿರುವಂತಹ ಘಟನೆ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಸಮೀಪ ನಡೆದಿದೆ. ಜೈಅಂಬಾಭವಾನಿ ಮಾರ್ಬಲ್ ಹೌಸ್ ಗ್ರಾನೈಟ್ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹೊತ್ತಿ ಉರಿದಿದೆ.
ಜೂನ್ ತಿಂಗಳ ವಿದ್ಯುತ್ ಬಿಲ್ನಲ್ಲಿ ಸ್ವಲ್ಪ ಗೊಂದಲಗಳಿತ್ತು. ಜೂನ್ ಬಿಲ್ನಲ್ಲಿ ಜುಲೈ ತಿಂಗಳ ಕೆಲವು ದಿನಗಳು ಸೇರಿಕೊಂಡಿದೆ. ಕೆಲವರಿಗೆ ಮಾತ್ರ ಸಮಸ್ಯೆಯಾಗಿದೆ, ಅಂಥವರಿಗೆ ಕ್ರೆಡಿಟ್ ಕೊಡ್ತೇವೆ. ಬಾಕಿ ಮೊತ್ತ ಇಲ್ಲದಿದ್ರೆ 4 ತಿಂಗಳ ಬಳಿಕ ಹಣ ಹಿಂದಿರುಗಿಸುತ್ತೇವೆ. ಜುಲೈ ತಿಂಗಳ ಬಿಲ್ ಕಟ್ಟಿದ್ರೆ ಅವರಿಗೆ ವಾಪಸ್ ಹಣ ನೀಡುತ್ತೇವೆ ಎಂದರು.
ಆಗಸ್ಟ್ 5ರಂದು ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಚಿಕ್ಕಮಗಳೂರಿನಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಕಲಬುರಗಿಯಲ್ಲಿ ಸಿಎಂ, ಡಿಸಿಎಂ, AICC ಅಧ್ಯಕ್ಷರು ಚಾಲನೆ ನೀಡ್ತಾರೆ. 1 ಕೋಟಿ 40 ಲಕ್ಷ ಕುಟುಂಬಗಳು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ದಾರೆ. ಜುಲೈ ತಿಂಗಳ 200 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ ಎಂದರು.
ಉಡುಪಿ: ದಯವಿಟ್ಟು ಮಳೆಗಾಲದಲ್ಲಿ ಜಲಪಾತದ ಕಡೆ ಬರಬೇಡಿ ಎಂದು ಸ್ಥಳಿಯ ತಂಡದ ಯುವಕ ಜಗದೀಶ ಹೇಳಿದ್ದಾರೆ. ಅರಣ್ಯ ಇಲಾಖೆ ಈ ಭಾಗದಲ್ಲಿ ಕಟ್ಟೇಚ್ಚರ ವಹಿಸಬೇಕು. ಇದೊಂದು ಧಾರ್ಮಿಕ ಸ್ಥಳ ಇಲ್ಲಿ ಹುಚ್ಚಾಟ ಮಾಡಬೇಡಿ. ತಾಯಿ ಮೂಕಾಂಬಿಕೆ ಮೂಕಾಸುರನನ್ನು ಕೊಂದು ಮಿಂದ ಸ್ಥಳ ಇದು ಎಂದು ಹೇಳಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಲಿಂಗಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ.
ಬೊಮ್ಮಾಯಿಗೆ ಜವಾಬ್ದಾರಿ ನೀಡಿದರೆ ಮತ್ತೆ ಸೋಲುವುದು ಖಚಿತ ಎಂದಿದ್ದಾರೆ.
ಈಗಾಗಲೆ ಕರ್ನಾಟಕ ರಾಜ್ಯದಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ಪಕ್ಷ, ಬಸವರಾಜ ಬೋಮ್ಮಾಯಿ ಅಂತಹ ವ್ಯಕ್ತಿಗಳಿಗೆ ಜವಾಬ್ದಾರಿ ಕೊಟ್ಟರೆ ಮತ್ತೆ ನೆಲ ಕಚ್ಚುವುದು ಕಚಿತ
— S. Lingamurthy (@SLingamurthy2) July 30, 2023
ಬೀದರ್ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥ ಪ್ರಕರಣ ಹೆಚ್ಚಳ ಹಿನ್ನೆಲೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ತುರ್ತು ಸಭೆ ಮಾಡಿದ್ದಾರೆ. ತಿಂಗಳ ಅವಧಿಯಲ್ಲೇ ಜಿಲ್ಲೆಯ 3 ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಮಾಡಿ 50ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರವಾಸಿ ತಾಣ ಕೊಡಚಾದ್ರಿಗಿರಿಗೆ ಇಂದಿನಿಂದ ವನ್ಯಜೀವಿ ವಿಭಾಗ ಪ್ರವೇಶ ನಿಷೇಧಿಸಿದೆ. ಮುಂಗಾರು ಮಳೆ ಹಿನ್ನೆಲೆ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕ್ರಮಕೈಗೊಳ್ಳಲಾಗಿದೆ. ಕಟ್ಟಿನಹೊಳೆ ಮೂಲಕ ತೆರಳುವ ವಾಹನ ಹಾಗೂ ಚಾರಣಕ್ಕೆ ನಿರ್ಬಂಧ ಹೇರಲಾಗಿದೆ.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಗುರುತಿಸಲಾದ ಭೂಸ್ವಾಧೀನ ಪಡೆಯುವ ಜಮೀನನ್ನು ಶಾಸಕ ಜನಾರ್ದನ ರೆಡ್ಡಿ ವೀಕ್ಷಿಸಿದ್ದಾರೆ. ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ 72 ಎಕರೆ ಭೂಪ್ರದೇಶವನ್ನು ಇಂದು ವೀಕ್ಷಣೆ ಮಾಡಲಾಗಿದೆ.
ಚಾಮರಾಜಪೇಟೆ ಮೈದಾನದಲ್ಲಿ ಗಣಪತಿ ಕೂರಿಸಲು ಬಿಡಲಿಲ್ಲ. ಬಿಜೆಪಿ ನೇಮಿಸಿದ ವಕ್ಫ್ ಬೋರ್ಡ್ನ ಶಫಿ ಕೋರ್ಟ್ಗೆ ಹೋದರು. ಆಗ ಶಫಿಗೆ ಬೆನ್ನೆಲುಬಾಗಿ ನಿಂತಿದ್ದು ಸಚಿವ ಜಮೀರ್ ಅಹ್ಮದ್ ಖಾನ್ ಹೀಗಾಗಿ ಚಾಮರಾಜಪೇಟೆ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಲಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಹೇಳಿದ್ದಾರೆ.
ಉಡುಪಿ ಪ್ರಕರಣದಲ್ಲಿ ಇನ್ನೂ ಎಷ್ಟು ವಿಡಿಯೋಗಳು ಇದ್ದಿರಬಹುದು. ಪೊಲೀಸರು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಬಾರದು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಅವರ ಪರವಾಗಿ ಕೆಲಸ ಮಾಡುವುದು. ಕಾಂಗ್ರೆಸ್ ಇದ್ದಾಗ ಅವರ ಪರ ಪೊಲೀಸರು ಕೆಲಸ ಮಾಡಬಾರದು. ಪ್ರಕರಣದ ಬಗ್ಗೆ ಗೃಹ ಸಚಿವರು ಮಕ್ಕಳಾಟ ಎಂದು ಹೇಳಿಕೆ ನೀಡಿದ್ದಾರೆ. ಪರೋಕ್ಷವಾಗಿ ಪ್ರಕರಣ ಮುಚ್ಚಿ ಹಾಕುವಂತೆ ಪೊಲೀಸರಿಗೆ ಹೇಳಿದ್ದಾರೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಹೇಳಿದರು.
ಬೇರೆ ಶಾಸಕರ ರೀತಿ ನನಗೆ ರಾಜಕೀಯ ಅಭದ್ರತೆ ಇಲ್ಲ. ನಾನು ಶಾಸಕನಾಗಿದ್ದೆ ಲಾಟರಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ನಾನು ಯಾವುದೇ ರೀತಿ ರಾಜಕೀಯ ಗಿಮಿಕ್ ಮಾಡಲ್ಲ. ನಾನು ಒಳ್ಳೆಯ ಕೆಲಸ ಮಾಡಿದರೆ ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ ಎಂದು ಹೇಳಿದ್ದಾರೆ.
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಅಧ್ಯಕ್ಷನಾಗಿ ನಾನೇ ಮುಂದುವರಿಯುತ್ತೇನೆ ಎಂದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಜುಲೈ 27 ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದ್ದು, ಆ ಸಭೆಗೆ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಗೈರಾಗಿದ್ದರು. ಆದರೆ ಇದೀಗ ಸಿಎಲ್‌ಪಿ ಸಭೆಗೆ ಹೋಗದಿದ್ದಕ್ಕೆ ಕೊನೆಗೂ ಕಾರಣ ಬಿಚ್ಚಿಟ್ಟಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಯ ಕಾರ್ಯ ಇತ್ತು. ಹಾಗಾಗಿ ಸಿಎಲ್‌ಪಿ ಸಭೆಗೆ ಹೋಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ಯಾಕೆ? ಕೊನೆಗೂ ಕಾರಣ ಕೊಟ್ಟ ಸಚಿವ ಎಂಬಿ ಪಾಟೀಲ್
ಕೋಲಾರ: ನಗರದಿಂದ ರಾಜಸ್ಥಾನಕ್ಕೆ ಹೊರಟಿದ್ದ ಟೊಮ್ಯಾಟೋ ಲಾರಿ ನಾಪತ್ತೆಯಾಗಿದೆ. ಹೌದು, ಬರೊಬ್ಬರಿ 21 ಲಕ್ಷ ಮೌಲ್ಯದ ಟೊಮ್ಯಾಟೋ ತುಂಬಿದ್ದ ಲಾರಿ, ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಹೊರಟ್ಟಿದ್ದು, ಇದೀಗ ಡ್ರೈವರ್ ಹಾಗೂ ಲಾರಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಕುರಿತು ಕೋಲಾರ ನಗರ ಠಾಣೆಗೆ ಮಂಡಿ ಮಾಲೀಕರಿಂದ ದೂರು ನೀಡಿದ್ದಾರೆ.
ಬೀದರ್: ಬರೀದಾಬಾದ್ನಲ್ಲಿ ಕಲುಷಿತ ನೀರು ಸೇವಿಸಿ 14 ಜನರು ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆಯವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಸಚಿವ ಈಶ್ವರ್ ಖಂಡ್ರೆಗೆ, ಸಚಿವ ರಹೀಂ ಖಾನ್, ಡಿಸಿ, ಎಸ್ಪಿ ಸಾಥ್ ಕೊಟ್ಟಿದ್ದಾರೆ.
ಬೆಳಗಾವಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿದೆ ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. 11 ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ಇದೆ. ಉಳಿದ ಕಡೆ ಬರದ ಛಾಯೆ ಇದ್ದು, ಸಿಎಂ ವಿಡಿಯೋ ಸಂವಾದ ಬಿಟ್ಟರೆ ಪರಿಹಾರ ಕಾರ್ಯ ನಡೆದಿಲ್ಲ ಎಂದರು. ಮನೆ ಹಾನಿಯಾದ್ರೆ ತಕ್ಷಣ 10 ಸಾವಿರ ಪರಿಹಾರ ಕೊಡಬೇಕು. ಬೆಳೆ ಹಾನಿ ಆಗಿರುವುದಕ್ಕೆ ಪ್ರಾಥಮಿಕ ಸಮೀಕ್ಷೆಯನ್ನೂ ಮಾಡಿಲ್ಲ. ಜೊತೆಗೆ ಯಾವ ಸಚಿವರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಉಡುಪಿ: ಜು.23ರಂದು ಅರಶಿನಗುಂಡಿ ಜಲಪಾತದಲ್ಲಿ ಕೊಚ್ಚಿ ಹೋಗಿದ್ದ ಭದ್ರಾವತಿ ಮೂಲದ ಶರತ್ ಶವ ಪತ್ತೆಯಾಗಿದೆ. ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರ ಕಾರ್ಯಾಚರಣೆ ನಡೆಸಿದ್ದರು. ಇದೀಗ ಒಂದು ವಾರದ ಬಳಿಕ ಶರತ್ ಕುಮಾರ್ ಮೃತದೇಹ ಅರಶಿನಗುಂಡಿ ಜಲಪಾತದಿಂದ 200 ಮೀಟರ್ ಕೆಳಗಡೆ ಸಿಕ್ಕಿದೆ.
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ಸೇರಿದಂತೆ ಸಣ್ಣ ವಾಹನಗಳಿಗೆ ನಿಷೇಧ ಹೇರಲಾಗಿದೆ. ಈ ಕುರಿತು ಎಕ್ಸ್‌ಪ್ರೆಸ್ ವೇ ಆರಂಭದಲ್ಲಿ ನಾಮಫಲಕ ಅಳವಡಿಕೆ ಮಾಡಲಾಗಿದ್ದು, ವಾಹನ ಸವಾರರ ಗಮನಕ್ಕೆ ಎರಡು ದಿನ ಮೊದಲೇ ನಾಮಫಲಕ ಅಳವಡಿಸಲಾಗಿದೆ. ಹೌದು, ಅ.1 ರಿಂದ ಸರ್ವಿಸ್ ರಸ್ತೆಯಲ್ಲೇ ಸಂಚಾರ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿದೆ.
ಬೆಂಗಳೂರು: ನಾಳೆ(ಜು.31) ಎಸ್ಸಿಪಿ-ಟಿಪಿಎಸ್ಪಿ ಸಭೆ ಹಿನ್ನೆಲೆ ಇಂದು(ಜು.30)ಸಿಎಂ ಅಧಿಕೃತ ನಿವಾಸದಲ್ಲಿ ಸಚಿವರಾದ ಡಾ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಸಭೆ ನಡೆಸಿದ್ದಾರೆ. ದಲಿತರ ಮೇಲೆ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಸಂಗ್ರಹ ಮಾಡುತ್ತಿದ್ದು, ಇದರ ಜೊತೆ ಹಲವು ವಿಚಾರಗಳ ಮಾಹಿತಿ ಪಡೆಯುತ್ತಿದ್ದಾರೆ.
ಬೆಂಗಳೂರು: ಆಗಸ್ಟ್ 1ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದಾರೆ. ಉಡುಪಿ ಕಾಲೇಜು ವಿಡಿಯೋ ಪ್ರಕರಣದ ವಿವಾದದ ಕುರಿತು ಹಾಗೂ ಮಂಗಳೂರಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದ ಹಿನ್ನೆಲೆ ಖುದ್ದು ಸಿಎಂ ಅವರು ತೆರಳಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಮಂಗಳೂರು: ರಾಜ್ಯ ಕರಾವಳಿಯಲ್ಲಿ ಅಬ್ಬರದ ಮಳೆಯ ನಂತರ ಇದೀಗ ಸ್ವಲ್ಪ ಮಟ್ಟಿಗೆ ವರುಣ ಶಾಂತನಾಗಿದ್ದಾನೆ. ಆದರೂ, ಕಡಲ ಅಬ್ಬರ ಮಾತ್ರ ನಿಲ್ಲುತ್ತಿಲ್ಲ. ಈ ಹಿನ್ನಲೆ ಪ್ರವಾಸಿಗರಿಗೆ ಬೀಚ್ಗಳಿಗೆ ಹೋಗಲು ನಿರ್ಬಂಧ ಹೇರಲಾಗಿದೆ. ಮಂಗಳೂರಿನ ಎಂಟು ಪ್ರವಾಸಿ ಬೀಚ್ಗಳಿಗೂ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ.
ಮಂಡ್ಯ: ಮಂಡ್ಯ ಕಾರು ಪಲ್ಟಿಯಾಗಿ ನಾಲ್ವರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸಚಿವ ಹೆಚ್.ಸಿ.ಮಹದೇವಪ್ಪ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಮೊಹರಂ ಹಬ್ಬದ ವೇಳೆ ಕೇಸರಿ ವಸ್ತ್ರ ಹಿಡಿದು ಹೆಬ್ಬಳ್ಳಿ ಅಜ್ಜಲಾಲಸಾಬ್ ಅವರು ಭವಿಷ್ಯ ನುಡಿದಿದ್ದಾರೆ. ‘ಕೇಸರಿವಸ್ತ್ರ ಹಿಡಿದು ಇದರ ಸಲುವಾಗಿ ಬಹಳ ಬಡಿದಾಡುತ್ತಾರೆ. ಇದರ ಸಲುವಾಗಿ ಹೆಣಗಳು ಹೋಗುತ್ತದೆ. ಆದರೆ ಬರೆದು ಇಟ್ಟುಕೊಳ್ಳಿ, ಖುರ್ಚಿ ಮಾತ್ರ ಗಟ್ಟಿಯಾಗಿದೆ ಪಾ ಎಂದು ಕೇಸರಿ ವಸ್ತ್ರ ಹಿಡಿದು ಹೆಬ್ಬಳ್ಳಿ ಗ್ರಾಮದ ಪ್ರಸಿದ್ದ ಲಾಲಸಾಬವಲಿ ದರ್ಗಾದಲ್ಲಿ ಭವಿಷ್ಯ ನುಡಿದಿದ್ದಾರೆ. ಇದೀಗ ಲಾಲಸಾಬ್ ಅಜ್ಜ ಅಜ್ಜನ ಭವಿಷ್ಯವಾಣಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಗಲಾಟೆ ವೇಳೆ ಕೈದಿಯೊಬ್ಬ ಮತ್ತೊಬ್ಬ ಕೈದಿಗೆ ಸ್ಕ್ರೂಡ್ರೈವರ್ನಿಂದ 5 ಬಾರಿ ಇರಿದು ಕೊಲೆಗೆ ಯತ್ನಿಸಿದ್ದಾನೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಿನ್ನೆ(ಜು.30) ಸಂಜೆ ಈ ಘಟನೆ ನಡೆದಿದೆ. ಮಂಡ್ಯ ಮೂಲದ ವಿಚಾರಣಾಧೀನ ಕೈದಿ ಸಾಯಿಕುಮಾರ್ಗೆ, ಶಿಕ್ಷೆಗೆ ಒಳಗಾಗಿರುವ ಕೈದಿ ಶಂಕರ ಭಜಂತ್ರಿ ಎಂಬುವವನಿಂದ ಈ ಕೃತ್ಯ ಎಸಗಲಾಗಿದ್ದು, ಗಾಯಾಳು ಕೈದಿ ಸಾಯಿಕುಮಾರ್ಗೆ ಬೆಳಗಾವಿ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಅರ್ಜಿ ನೋಂದಣಿಗೆ ಹಣ ವಸೂಲಿ ಆರೋಪ ಹಿನ್ನಲೆ ಚಿಂಚಲಿ ಗ್ರಾಮ ಒನ್ ಕೇಂದ್ರದ ಲಾಗ್‌ಇನ್ ಐಡಿ ರದ್ದು ಮಾಡಲಾಗಿದೆ. ಜೊತೆಗೆ ಕ್ರಿಮಿನಲ್ ಕೇಸ್ ಕೂಡ ದಾಖಲು ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಗ್ರಾಮ ಒನ್ ಕೇಂದ್ರದ ಕಂಪ್ಯೂಟರ್ ಆಪರೇಟರ್ ಅಜೀತ್ ಇದ್ಲಿ ವಿರುದ್ಧ ಕೇಸ್ ಇದೀಗ ಐಪಿಸಿ ಸೆಕ್ಷನ್ 1860(U/s 406, 420)ರಡಿ ಪ್ರಕರಣ ದಾಖಲಾಗಿದೆ.
ದಾವಣಗೆರೆ: ಜಮೀನು ವಿವಾದ ಹಿನ್ನೆಲೆ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ ಸುಮಾರೂ 350ಕ್ಕೂ ಹೆಚ್ಚು ಅಡಿಕೆ ಮರ ನಾಶ ಮಾಡಿದ ಘಟನೆ ಜಿಲ್ಲೆ ಹರಿಹರ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಜೊತೆಗೆ ತಡೆಯಲು ಬಂದ ಜಮೀನು ಮಾಲೀಕನ ಮೇಲೆ ಕೊಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಾಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಶಾಸಕ ಡಾ.ಕೆ.ಸುಧಾಕರ್ ಜಟಾಪಟಿಗೆ ಸಂಬಂಧಿಸಿದಂತೆ ಪ್ರದೀಪ್ ಈಶ್ವರ್ ಹಾಗೂ ಡಾ.ಕೆ.ಸುಧಾಕರ್ ಬೆಂಬಲಿಗರ ವಿರುದ್ದ ಪರಸ್ಪರ ದೂರು ದಾಖಲಾಗಿದೆ. ಹೌದು ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ದ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾದರೇ, ಇತ್ತ ಡಾ.ಕೆ ಸುಧಾಕರ್ ಬೆಂಬಲಿಗರ ವಿರುದ್ದ ಚಿಕ್ಕಬಳ್ಳಾಫುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಹಿನ್ನೆಲೆ ಮೈಸೂರಿನಲ್ಲಿ ಅಲರ್ಟ್ ಘೋಷಿಸಲಾಗಿತ್ತು. ಅದರಂತೆ ರಾತ್ರಿ ಬೀಟ್ ಕೂಡ ಮೈಸೂರು ಪೊಲೀಸರು ಹೆಚ್ಚಿಸಿದ್ದರು. ಇದೀಗ ಪೊಲೀಸರು ತಡರಾತ್ರಿ ಬಡಾವಣೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಅಪರಿಚಿತ ವ್ಯಕ್ತಿ, ಅನುಮಾನಸ್ಪದ ವಿಚಾರಗಳು ಕಂಡು ಬಂದರೆ ತಕ್ಷಣ ಪೊಲೀಸರಿಗೆ ತಿಳಿಸಿ ಸಹಕಾರ ನೀಡಿ ಎಂದು ಉದಯಗಿರಿ ಪೊಲೀಸ್ ಠಾಣಾ ಇನ್ಸಪೆಕ್ಟರ್ ರಾಜು ಅವರು ಮನವಿ ಮಾಡುತ್ತಿದ್ದಾರೆ.
Published On - 8:00 am, Sun, 30 July 23