ಬೆಂಗಳೂರು: ಕರ್ನಾಟಕದಲ್ಲಿ ಎವೈ 4.2 (AY 4.2) ಎಂಬ ಹೊಸ ತಳಿಯ 2 ಕೊವಿಡ್ ಪ್ರಕರಣಗಳು ಪತ್ತೆಯಾಗಿರುವುದರಿಂದ ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಹೊಸ ಕೋವಿಡ್-19 ರೂಪಾಂತರ ಎವೈ 4.2 ರ ಎರಡು ಪ್ರಕರಣಗಳ ಪತ್ತೆಗೆ ಭಯಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಹಾಗೇ, ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರವು ಮತ್ತೊಂದು ಲಾಕ್‌ಡೌನ್ (Karnataka Lockdown) ಹೇರಲು ಚಿಂತನೆ ನಡೆಸುತ್ತಿದೆ ಎಂಬ ಮಾಧ್ಯಮಗಳ ವರದಿಗಳನ್ನು ತಳ್ಳಿಹಾಕಿದೆ. ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಮಾಡುವ ಯಾವ ಯೋಚನೆಯೂ ಸರ್ಕಾರದ ಮುಂದಿಲ್ಲ ಎಂದು ಹೇಳಿದೆ.
ಹೊಸ ತಳಿ ಬಗ್ಗೆ ಎಚ್ಚರವಹಿಸುವಂತೆ ಕೇಂದ್ರ ಸರ್ಕಾರ ಈಗಾಗಲೇ ನಿರ್ದೇಶನ ನೀಡಿದೆ. ವಿದೇಶಗಳಲ್ಲಿ ಕಂಡು ಬರುತ್ತಿರುವ ಕೊರೊನಾ ವೈರಾಣುವಿನ ಡೆಲ್ಟಾ ಎವೈ 4.2 ರೂಪಾಂತರಿ ಕರ್ನಾಟಕದಲ್ಲಿ ಪತ್ತೆಯಾಗಿತ್ತು. ಈ ಮೊದಲು, ಬೆಂಗಳೂರಿನ ಮೂವರು ಮತ್ತು ರಾಜ್ಯದ ಇತರೆಡೆಯ ನಾಲ್ವರಲ್ಲಿ ಈ ರೂಪಾಂತರಿ ಪತ್ತೆಯಾಗಿರುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಣದೀಪ್ ದೃಢಪಡಿಸಿದ್ದರು. ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ನಿಯಂತ್ರಣದಲ್ಲಿವೆ. ವಿದೇಶಗಳಿಂದ ಬರುವ ಪ್ರವಾಸಿಗರು ಕನಿಷ್ಠ 72 ಗಂಟೆ ಮೊದಲು ಮಾಡಿಸಿಕೊಂಡಿರುವ ಆರ್ಟಿ-ಪಿಸಿಆರ್ ಪರೀಕ್ಷೆಯ ವರದಿ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ವರದಿಗಳನ್ನು ಏರ್ ಸುವಿಧಾ ಪೋರ್ಟಲ್ನಲ್ಲಿ ಈ ವರದಿಗಳನ್ನು ಅಪ್ಲೋಡ್ ಮಾಡಬೇಕು.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಟಿಎಸಿ (ತಾಂತ್ರಿಕ ಸಲಹಾ ಸಮಿತಿ) ಅಧ್ಯಕ್ಷ ಡಾ. ಎಂ ಕೆ ಸುದರ್ಶನ್, ಎವೈ 4.2 ಸೋಂಕು ಪತ್ತೆಯಾಗಿರುವುದರಿಂದ ಕರ್ನಾಟಕದಲ್ಲಿ ಮತ್ತೊಂದು ಲಾಕ್‌ಡೌನ್‌ಗೆ ಟಿಎಸಿ ಶಿಫಾರಸು ಮಾಡಿದೆ ಎನ್ನಲಾದ ವರದಿಗಳು ಆಧಾರರಹಿತವಾಗಿವೆ. ಕಳೆದ ಬಾರಿ ರಾಜ್ಯದಲ್ಲಿ ಪ್ರತಿದಿನ ಸುಮಾರು 50,000 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗುತ್ತಿರುವಾಗ ಲಾಕ್‌ಡೌನ್ ಅನ್ನು ಶಿಫಾರಸು ಮಾಡಲಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ ಈ ಸಂಖ್ಯೆ 350ಕ್ಕಿಂತ ಕಡಿಮೆ ಇದೆ.
ಕರ್ನಾಟಕದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಮಾಡಲಾಗುತ್ತದೆ ಎಂಬ ವರದಿಯಿಂದ ಜನರು ಭಯ ಪಡಬಾರದು. ಈ ರೀತಿ ಸುಳ್ಳು ವರದಿಗಳಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಪಡುತ್ತಿದ್ದಾರೆ. ಇತ್ತೀಚೆಗೆ, ಕೋವಿಡ್ ಹೊಸ ಸೂಪರ್-ಸ್ಪ್ರೆಡರ್ AY 4.2 ಡೆಲ್ಟಾ ರೂಪಾಂತರದ ಆವಿಷ್ಕಾರದಿಂದಾಗಿ ಕರ್ನಾಟಕದಲ್ಲಿ ಮತ್ತೊಂದು ಲಾಕ್‌ಡೌನ್ ಅನ್ನು ಶಿಫಾರಸು ಮಾಡುವ ಹಲವಾರು ವರದಿಗಳು ರಾಜ್ಯದ ಜನರನ್ನು ಭಯಭೀತಗೊಳಿಸಿದವು. ಈ ರೀತಿಯ ಭಯವನ್ನು ಹರಡುವ ಕೆಲಸ ಮಾಡಬಾರದು ಎಂದು ತಾಂತ್ರಿಕ ಸಲಹಾ ಸಮಿತಿ ಮನವಿ ಮಾಡಿದೆ.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಆಚರಣೆಗೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ನಿಯಮ ಶಿಫಾರಸು; ಏನೇನಿದೆ ನಿಯಮಗಳು?
ಕೊವಿಡ್ ಸಮಯದಲ್ಲಿ ಆರೋಗ್ಯಕರ ಮತ್ತು ಸುರಕ್ಷಿತ ದೀಪಾವಳಿ ಆಚರಣೆಗೆ ಸರಳ ಸಲಹೆಗಳು
Published On - 4:32 pm, Thu, 28 October 21