Karnataka Lokayukta Raids: ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ

ಕರ್ನಾಟಕ ಲೋಕಾಯುಕ್ತದಾಳಿ; ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಇರುವ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆಯೇ ಬೆಂಗಳೂರು ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದಾರೆ. ಹಾಸನ ಮತ್ತು ಚಿತ್ರದುರ್ಗದ ವಿವಿಧ ಕಡೆಗಳಲ್ಲಿಯೂ ಲೋಕಾಯುಕ್ತ ದಾಳಿ ನಡೆದಿದೆ. ಭ್ರಷ್ಟಾಚಾರದ ಆರೋಪದ ಹಿನ್ನೆಲೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

Karnataka Lokayukta Raids: ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಲೋಕಾಯುಕ್ತ ದಾಳಿ

Updated on: Jul 29, 2025 | 8:55 AM

ಬೆಂಗಳೂರು, ಜುಲೈ 29: ಬೆಂಗಳೂರು (Bengaluru) ಸೇರಿ ರಾಜ್ಯದ ಹಲವೆಡೆ ಮಂಗಳವಾರ ಬೆಳಗ್ಗೆಯೇ ಲೋಕಾಯುಕ್ತ ದಾಳಿ ನಡೆದಿದೆ. ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿ ಹಾಗೂ ಇತರ ಆಸ್ತಿಗಳ ಮೇಲೆ ದಾಳಿ ನಡೆದಿದೆ. ಬೆಂಗಳೂರಿನ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗದಲ್ಲಿಯೂ ದಾಳಿ ನಡೆದಿದೆ. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಮನೆ, ಕಂದಾಯ ಅಧಿಕಾರಿ ಎನ್​.ವೆಂಕಟೇಶ್​​ ಮನೆಯಲ್ಲಿ ಪರಿಶೀಲನೆ ನಡೆಯುತ್ತಿದೆ.

ಹಾಸನ, ಕೊಡಗು ಜಿಲ್ಲೆಯಲ್ಲಿ ಕೂಡ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಹಾಸನ ‌ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್‌ನಲ್ಲಿರುವ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಕೊಡಗು ಜಿಲ್ಲೆ ಕುಶಾಲನಗರದ ಫಾರ್ಮ್‌ಹೌಸ್ ಮೇಲೂ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಲೋಕಾಯುಕ್ತ ಎಸ್​​​ಪಿ ಸ್ನೇಹ ನೇತೃತ್ವದಲ್ಲಿ ದಾಳಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಟಿಹೆಚ್​ಒ ಡಾ.ವೆಂಕಟೇಶ್ ಅವರ ಯರಗುಂಟೇಶ್ವರ ಬಡಾವಣೆಯ ಮನೆ ಮೇಲೆ ದಾಳಿ ನಡೆದಿದೆ. ಆದಿವಾಲ ಗ್ರಾಮದ ಮನೆ, ಕ್ಲಿನಿಕ್‌ ಮೇಲೆ‌ ದಾಳಿ ಮಾಡಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿ, ಹಣ ಗಳಿಕೆ ಆರೋಪ ಹಿನ್ನೆಲೆ ಲೋಕಾಯುಕ್ತ ಎಸ್​​​ಪಿ ವಾಸುದೇವರಾಮ್, ಡಿವೈಎಸ್​​ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿದೆ.

ಇದನ್ನೂ ಓದಿ
ಅಕ್ರಮ ಆಸ್ತಿ ಗಳಿಕೆ: ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ
ಬಿಬಿಎಂಪಿ ಮಳಿಗೆಗಳ ಅವೈಜ್ಞಾನಿಕ ಬಾಡಿಗೆ ವಿರುದ್ಧ ಸಿಡಿದೆದ್ದ ವರ್ತಕರು
ಯೂರಿಯಾ ಜತೆ ನ್ಯಾನೋ ಡಿಎಪಿ ಖರೀದಿ ಕಡ್ಡಾಯ: ರೈತರಿಗೆ ಮತ್ತೊಂದು ಆಘಾತ
ಲೋಕಾ ಬೇಟೆ: ಚಿನ್ನಾಭರಣ ರಾಶಿ, ಕಂತೆ ನಗದು, ಲಕ್ಷಾಂತರ ಮೌಲ್ಯದ ಆಸ್ತಿ ಪತ್ತೆ

ಚಿಕ್ಕಬಳ್ಳಾಪುರದಲ್ಲೂ ಲೋಕಾಯುಕ್ತ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಇಂಜಿನಿಯರ್ ಎಂ.ಆಂಜನೇಯಮೂರ್ತಿ ಮನೆ, ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಎಂ.ಆಂಜನೇಯಮೂರ್ತಿ ಗೌರಿಬಿದನೂರು ತಾಲೂಕಿನ ಕಿರಿಯ ಇಂಜಿನಿಯರ್ ಆಗಿದ್ದಾರೆ. ಆಂಜನೇಯಮೂರ್ತಿ ಅವರ ಯಲಹಂಕದ ಮನೆ, ಜಕ್ಕೂರು ಕಾಂಪ್ಲೇಕ್ಸ್, ತುಮಕೂರು, ಮಧುಗಿರಿ ಸೇರಿದಂತೆ ಗೌರಿಬಿದನೂರು ಕಚೇರಿಗಳ ಮೇಲೆಯೂ ದಾಳಿ ನಡೆದಿದೆ. ನಾಲ್ಕು ತಂಡಗಳಾಗಿ ಲೋಕಾಯುಕ್ತ ಅಧಿಕಾರಿಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್​​​ಪಿ ಜೆಕೆ ಆ್ಯಂಟೊಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ: ಲೋಕಾಯುಕ್ತ ಭರ್ಜರಿ ಬೇಟೆ: ಚಿನ್ನದ ಬಿಸ್ಕತ್, ಚಿನ್ನಾಭರಣ ರಾಶಿ, ಕಂತೆ ಕಂತೆ ನಗದು, ಲಕ್ಷಾಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ

ವಾರದ ಹಿಂದಷ್ಟೇ ರಾಜ್ಯ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಸರ್ಕಾರಿ ಅಧಿಕಾರಿಗಳು ಕೂಡಿಟ್ಟಿದ್ದ ಅಕ್ರಮ ಸಂಪತ್ತನ್ನು ವಶಪಡಿಸಿಕೊಂಡಿದ್ದರು. ಬೆಂಗಳೂರು, ಮೈಸೂರು, ಕೊಪ್ಪಳ ಸೇರಿದಂತೆ ಅನೇಕ ಕಡೆಗಳಲ್ಲಿ ದಾಳಿ ನಡೆದಿತ್ತು. ಚಿನ್ನದ ಬಿಸ್ಕತ್​ಗಳು, ಚಿನ್ನಾಭರಣಗಳು, ಬೆಳ್ಳಿಯ ಆಭರಣಗಳು, ಬೆಳ್ಳಿಯ ಬಟ್ಟಲು, ಬೆಳ್ಳಿ ತಟ್ಟೆ, ಬೆಳ್ಳಿಯ ದೀಪ, ಕಂತೆ ಕಂತೆ ನಗದು ಸೇರಿದಂತೆ ಅಪಾರ ಪ್ರಮಾಣದ ಅಕ್ರಮ ಸಂಪತ್ತನ್ನು ಲೋಕಾಯುಕ್ತ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 am, Tue, 29 July 25