ಕರ್ನಾಟಕ ವಿರೋಧಿಸಿದರೂ ಬೆಳಗಾವಿ ಗಡಿ ಪ್ರದೇಶದಲ್ಲಿ ಆರೋಗ್ಯ ಯೋಜನೆ ಜಾರಿಗೊಳಿಸಿಯೇ ಸಿದ್ಧ; ಮಹಾರಾಷ್ಟ್ರ ಶಾಸಕ

|

Updated on: Mar 16, 2023 | 7:53 PM

ಬೆಳಗಾವಿ ಗಡಿ ಪ್ರದೇಶದಲ್ಲಿ ಮರಾಠಿ ಮಾತನಾಡುವ ಜನರಿಗಾಗಿ ಹಮ್ಮಿಕೊಂಡಿರುವ ಆರೋಗ್ಯ ಯೋಜನೆಯನ್ನು ಕರ್ನಾಟಕ ಸರ್ಕಾರ ತಡೆಯಲು ಮುಂದಾದರೂ ನಾವದನ್ನು ಹೇಗಾದರೂ ಮಾಡಿ ಜಾರಿಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಮಹಾರಾಷ್ಟ್ರದ ಶಾಸಕ ಶಂಭುರಾಜ್ ದೇಸಾಯಿ ಗುರುವಾರ ಹೇಳಿದ್ದಾರೆ.

ಕರ್ನಾಟಕ ವಿರೋಧಿಸಿದರೂ ಬೆಳಗಾವಿ ಗಡಿ ಪ್ರದೇಶದಲ್ಲಿ ಆರೋಗ್ಯ ಯೋಜನೆ ಜಾರಿಗೊಳಿಸಿಯೇ ಸಿದ್ಧ; ಮಹಾರಾಷ್ಟ್ರ ಶಾಸಕ
ಶಂಭುರಾಜ್ ದೇಸಾಯಿ
Image Credit source: ANI
Follow us on

ಮುಂಬೈ: ಬೆಳಗಾವಿ (Belagavi) ಗಡಿ ಪ್ರದೇಶದಲ್ಲಿ ಮರಾಠಿ ಮಾತನಾಡುವ ಜನರಿಗಾಗಿ ಹಮ್ಮಿಕೊಂಡಿರುವ ಆರೋಗ್ಯ ಯೋಜನೆಯನ್ನು ಕರ್ನಾಟಕ ಸರ್ಕಾರ ತಡೆಯಲು ಮುಂದಾದರೂ ನಾವದನ್ನು ಹೇಗಾದರೂ ಮಾಡಿ ಜಾರಿಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಮಹಾರಾಷ್ಟ್ರ(Maharashtra) ಶಾಸಕ ಶಂಭುರಾಜ್ ದೇಸಾಯಿ ಗುರುವಾರ ಹೇಳಿದ್ದಾರೆ. ಕರ್ನಾಟಕ – ಮಹಾರಾಷ್ಟ್ರ ಗಡಿ ಪ್ರದೇಶದ 865 ಗ್ರಾಮಗಳ ಬಗ್ಗೆ ಮಾತುಕತೆ ಪ್ರಗತಿಯಲ್ಲಿದೆ. ಪ್ರಕರಣವು ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆ ಹಂತದಲ್ಲಿಯೂ ಇದೆ. ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಬಳಿ ಮಾತುಕತೆ ನಡೆಸಿದ್ದಾರೆ ಎಂದು ಶಂಭುರಾಜ್ ದೇಸಾಯಿ ತಿಳಿಸಿರುವುದಾಗಿ ‘ಎಎನ್​ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಬೆಳಗಾವಿ ಗಡಿ ಪ್ರದೇಶದಲ್ಲಿ ಆರೋಗ್ಯ ಯೋಜನೆ ಹಮ್ಮಿಕೊಳ್ಳುವುದಕ್ಕಾಗಿ ಮಹಾರಾಷ್ಟ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿರುವ ವಿಚಾರ ಕರ್ನಾಟಕದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.


ಕರ್ನಾಟಕದ ಗಡಿಭಾಗದ ಹಳ್ಳಿಗಳಲ್ಲಿ ವಿವಿಧ ಯೋಜನೆಗಳ ಜಾರಿಗೆ ಮಹಾರಾಷ್ಟ್ರ ಸರ್ಕಾರ 54 ಕೋಟಿ ರೂ. ಮಂಜೂರು ಮಾಡಿರುವುದು ಕನ್ನಡಿಗರ ಸ್ವಾಭಿಮಾನ ಕೆಣಕುವಂತಹ ನಡೆ. ನಾಡಿನ ಹಿತಕ್ಕೆ ಜೀವ ಪಣಕ್ಕಿಟ್ಟು ಹೊರಡಲು ನಾವು ಸಿದ್ಧ. ಕನ್ನಡಿಗರ ಸ್ವಾಭಿಮಾನ, ಕನ್ನಡದ ನೆಲ ಬಲಿ ಕೊಡುತ್ತಿರುವ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಮಹಾರಾಷ್ಟ್ರದ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಬೆಳಗಾವಿ ಗಡಿ ಭಾಗಕ್ಕೆ ಮಹಾರಾಷ್ಟ್ರ ಸರ್ಕಾರ ಹಣ ಬಿಡುಗಡೆ ಮಾಡಿದರೆ ನಾನೇಕೆ ರಾಜೀನಾಮೆ ನೀಡಲಿ; ಡಿಕೆಶಿಗೆ ಬೊಮ್ಮಾಯಿ ಪ್ರಶ್ನೆ

ಕಾಂಗ್ರೆಸ್ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾವು ಕೆಪಿಸಿಸಿ ಅಧ್ಯಕ್ಷರಿಂದ ಪಾಠ ಕಲಿಯಬೇಕಿಲ್ಲ. ನಾವೂ ಕೂಡ ಮಹಾರಾಷ್ಟ್ರದಲ್ಲಿರುವ ಫಂಡರಪುರ, ತುಳಜಾಪುರಕ್ಕೆ ಹೋಗುವ ಕರ್ನಾಟಕದವರಿಗೆ ಹಣ ಬಿಡುಗಡೆ ಮಾಡುತ್ತೇವೆ. ಅವರು ಯಾವ ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇನೆ. ಮಹಾರಾಷ್ಟ್ರದ ಹಸ್ತಕ್ಷೇಪವನ್ನು ಯಾವ ರೀತಿಯಲ್ಲಿ ತಡೆಗಟ್ಟಬೇಕು ಎಂಬುದರ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:49 pm, Thu, 16 March 23