ಬಾಣಂತಿಯರ ಮರಣ, ಆಸ್ಪತ್ರೆಯಲ್ಲಿ ಸಾವು ಪ್ರತಿ ವರ್ಷ ಇದ್ದಿದ್ದೇ, ರಾಜಕೀಯ ಮಾಡಬಾರದು: ದಿನೇಶ್ ಗುಂಡೂರಾವ್

| Updated By: Ganapathi Sharma

Updated on: Dec 09, 2024 | 10:42 AM

ಬಾಣಂತಿಯರ ಮರಣ ಪ್ರಮಾಣದ ಬಗ್ಗೆ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನಕ್ಕೂ ಮುನ್ನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ರಾಜಕೀಯ ಉದ್ದೇಶದಿಂದ ಈ ವಿಷಯವನ್ನು ಬಳಸಬಾರದು ಎಂದು ಅವರು ಹೇಳಿದ್ದಾರೆ. ಆದರೆ, ಪ್ರತಿಪಕ್ಷಗಳು ಸರ್ಕಾರದ ವೈಫಲ್ಯ ಮತ್ತು ವೈದ್ಯಕೀಯ ವ್ಯವಸ್ಥೆಯ ದುಸ್ಥಿತಿಯನ್ನು ಪ್ರಶ್ನಿಸಿವೆ.

ಬಾಣಂತಿಯರ ಮರಣ, ಆಸ್ಪತ್ರೆಯಲ್ಲಿ ಸಾವು ಪ್ರತಿ ವರ್ಷ ಇದ್ದಿದ್ದೇ, ರಾಜಕೀಯ ಮಾಡಬಾರದು: ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
Follow us on

ಬೆಳಗಾವಿ, ಡಿಸೆಂಬರ್ 9: ಬಾಣಂತಿಯರ ಮರಣಗಳು ಆಗುತ್ತಿವೆ, ಪ್ರತಿ ವರ್ಷ ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ಇದ್ದೇ ಇರುತ್ತದೆ. ಅದನ್ನೆ ಮುಂದಿಟ್ಟುಕೊಂಡು ರಾಜಕೀಯ ಉದ್ದೇಶದಿಂದ ಮಾತನಾಡಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಾತನಾಡಿದ ಅವರು, ಬಾಣಂತಿಯರ ಸಾವಿನ ವಿಚಾರವಾಗಿ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚೆ ಆಗಬೇಕು. ಅದಕ್ಕೆ ನಾವು ಉತ್ತರ ನೀಡುತ್ತೇವೆ ಎಂದರು.

ಬಾಣಂತಿಯರ ಸಾವಿನ ಬಗ್ಗೆ ನಿಜಾಂಶಗಳ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಬಾಣಂತಿಯರ ಮರಣಗಳು ಆಗುತ್ತಿವೆ, ಅದಕ್ಕೆ ವೈದ್ಯಕೀಯ ಕಾರಣ ಎನ್ನಲಾಗದು. ಅದನ್ನೆ ಮುಂದಿಟ್ಟುಕೊಂಡು ರಾಜಕೀಯ ಉದ್ದೇಶದಿಂದ ಮಾತನಾಡಬಾರದು ಎಂದು ಅವರು ವಿರೋಧ ಪಕ್ಷಗಳ ವಿರುದ್ದ ಕಿಡಿ ಕಾರಿದರು.

ವ್ಯವಸ್ಥೆಗಳನ್ನು ಸರಿಪಡಿಸುವ ಕೆಲಸ ಸಾಕಷ್ಟು ಆಗುತ್ತಿದೆ. ಬಾಣಂತಿಯರ ಮರಣಗಳ ಬಗ್ಗೆ ಬೆಳಗಾವಿ ಅಧಿವೇಶನಲ್ಲಿ ಉತ್ತರ ಕೊಡಲಾಗುವುದು. ಸರ್ಕಾರ ಮೇಡಿಕಲ್ ಮಾಫಿಯಾ ಹಿಡಿತಕ್ಕೆ ಸಿಲುಕಿದೆಯಾ ಎಂಬ ವಿಚಾರವಾಗಿ ಸದನದಲ್ಲಿ ನಾನು ಚರ್ಚೆ ಮಾಡುತ್ತೇನೆ ಎಂದರು. ಆರೋಗ್ಯ ಇಲಾಖೆ ಬಗ್ಗೆ ಮಾತನಾಡಬೇಕು. ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಮರಣದ ವಿಚಾರವಾಗಿ ನಮಗೆ ಬಹಳ ಚಿಂತೆ ಇದೆ. ಸರ್ಕಾರವೂ ಎಚ್ಚೆತ್ತುಕೊಂಡಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತವಾದ ಚಿಕಿತ್ಸೆ ಸಿಗುತ್ತಿಲ್ಲ, ಬಡವರು ಸರ್ಕಾರಿ ಆಸ್ಪತ್ರೆಗೆ ಬರಲು ಭಯ ಪಡುವಂತಾಗಿದೆ ಎಂಬ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಗೇನಿಲ್ಲ ಎಂದು ಸಮಜಾಯಿಷಿ ನೀಡಿದರು.

ವೈದ್ಯರು, ವೈದ್ಯಕೀಯ ಸಿಬ್ಬಂದಿ ನೇಮಕಾತಿ: ಗುಂಡೂರಾವ್

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ನೇಮಕಾತಿಗಳನ್ನು ಮಾಡಲಾಗುವುದು. ಅರೆ ವೈದ್ಯಕಿಯ ಸಿಬ್ಬಂದಿ ಕೊರತೆ ಇದೆ. ಅವರನ್ನೂ ನೇಮಕ ಮಾಡಿಕೊಳ್ಳಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಗುಂಡೂರಾವ್ ಹೇಳಿಕೆಯನ್ನು ಇದೀಗ ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಬಳ್ಳಾರಿಯಲ್ಲಿನ ದುರಂತದ ಹೊರತಾಗಿಯೂ ಆರೋಗ್ಯ ಸಚಿವರು ಬಾಣಂತಿಯರ ಮರಣ, ಆಸ್ಪತ್ರೆಯಲ್ಲಿ ಸಾವುಗಳು ಸಂಭವಿಸುವುದು ಸಾಮಾನ್ಯ ಎಂಬ ರೀತಿಯಲ್ಲಿ ಮಾತನಾಡಿರುವುದು ವಿರೋಧಕ್ಕೆ ಗುರಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಗಾಂಜಾ, ಸಿಗರೇಟ್, ಬಿಯರ್: ಇಸ್ಪೀಟ್ ಆಡುತ್ತಿರುವ ಕೈದಿಗಳ ವಿಡಿಯೋ ವೈರಲ್

ಏತನ್ಮಧ್ಯೆ, ಸರ್ಕಾರ ಬಂದು 17 ತಿಂಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿಲ್ಲ. 17 ತಿಂಗಳಲ್ಲಿ 17 ಅವಾಂತರ ಮಾಡಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರು ಕಳೆದ ಭಾರಿ ಸಿಎಂ ಆಗಿದ್ದಾಗಿನ ಆಡಳಿತ ಈ ಬಾರಿ ಕೊಡುತ್ತಿಲ್ಲ. ಇಡೀ ಸರ್ಕಾರವೇ ನಿದ್ದೆ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ನಿದ್ದೆರಾಮಯ್ಯ ಆಗಿದ್ದಾರೆ. ಬೆಳಗಾವಿಯಲ್ಲಿ 325 ಶಿಶುಗಳ‌ ಮರಣವಾಗಿದೆ, ಸಿಎಂ ಗೆ ಹಿಡಿತ ತಪ್ಪಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ