Coal Crisis: ‘ಕಲ್ಲಿದ್ದಲು ಕೊರತೆಯಾಗಿಲ್ಲ’ ಎಂದು ಅಚ್ಚರಿಯ ಹೇಳಿಕೆ ನೀಡಿದ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್!
Coal Crisis: ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯ ಸಂಬಂಧ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಕಲ್ಲಿದ್ದಲು ಕೊರತೆ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿಕೆಗಿಂತ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ಮಾತನಾಡಿ, ಕಲ್ಲಿದ್ದಲು ಕೊರತೆ ಸಮಸ್ಯೆ ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.
ಕೊಪ್ಪಳ: ರಾಜ್ಯದ ಪ್ರಹ್ಲಾದ್ ಜೋಶಿ ಕಲ್ಲಿದ್ದಲು ಸಚಿವರಾದ ಮೇಲೆ ನಮಗೆ ಕಲ್ಲಿದ್ದಲು ಕೊರತೆಯಾಗಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಆಚ್ಚರಿಯ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಕಲ್ಲಿದ್ದಲು ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಆದ್ದರಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸಮಸ್ಯೆಯಾಗುವ ಆತಂಕವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಹಾಲಪ್ಪ ಆಚಾರ್ ಅವರಿಂದ ವ್ಯತಿರಿಕ್ತ ಹೇಳಿಕೆ ಹೊರಬಿದ್ದಿದೆ. ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯಲ್ಲಿ ಯಾವುದೇ ಕೊರತೆಯಾಗಿಲ್ಲ. ಪ್ರಹ್ಲಾದ್ ಜೋಷಿ ಕೇಂದ್ರ ಸಚಿವರಾದ ಮೇಲೆ ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಾಗಿದೆ. ಯುನಿಟ್ ಬಂದ್ ಆಗುವ ರೀತಿ ಕಲ್ಲಿದ್ದಲು ಪೂರೈಕೆಯಲ್ಲಿ ಸಮಸ್ಯೆಯಾಗಿಲ್ಲ. ಹೇಗಾದರೂ ಮಾಡಿ ಕಲ್ಲಿದ್ದಲು ಪೂರೈಸುವುದಾಗಿ ಜೋಶಿ ಭರವಸೆ ನೀಡಿದ್ದಾರೆ ಎಂದು ಅವರು ನುಡಿದಿದ್ದಾರೆ.
ಹಾಲಪ್ಪ ಆಚಾರ್ ಮಾತನಾಡಿರುವ ವಿಡಿಯೋ ಇಲ್ಲಿದೆ:
ಕಲ್ಲಿದ್ದಲು ಕೊರತೆ ಸಂಬಂಧ ಕೇಂದ್ರದೊಂದಿಗೆ ಚರ್ಚೆ ನಡೆಸಿದ್ದೇವೆ; ಶೀಘ್ರದಲ್ಲೇ ಸಮಸ್ಯೆ ಪರಿಹಾರವಾಗಲಿದೆ; ಸಿಎಂ ಬೊಮ್ಮಾಯಿ: ಬೆಂಗಳೂರು: ಕಲ್ಲಿದ್ದಲು ಕೊರತೆ ಸಂಬಂಧ ಕೇಂದ್ರದ ಜೊತೆ ಚರ್ಚೆ ನಡೆಸಿದ್ದೇವೆ. ರಾಜ್ಯಕ್ಕೆ ಕಲ್ಲಿದ್ದಲು ಪೂರೈಸುವಂತೆ ಮನವಿ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಎರಡು- ಒಡಿಶಾದ ಮಹಾನಂದಿ, ಚಂದ್ರಾಪುರ ಘಟಕ- ಕಲ್ಲಿದ್ದಲು ಗಣಿ ಹಂಚಿದೆ. ಈ 2 ಘಟಕಗಳಿಂದ ಕಲ್ಲಿದ್ದಲು ಪೂರೈಕೆಯಾದರೆ ಸಮಸ್ಯೆ ಇತ್ಯರ್ಥವಾಗುತ್ತದೆ. ಆಗನಾವು ಇನ್ನೊಬ್ಬರ ಮೇಲೆ ಅವಲಂಬನೆ ಆಗಬೇಕಾಗಿರುವುದಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರದಿಂದ ಬೇಕಾದಷ್ಟು ಕಲ್ಲಿದ್ದಲು ತರಿಸಿಕೊಳ್ಳಿ; ವಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ: ಮಂಡ್ಯ: ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಡ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ಧಾರೆ. ಕೇಂದ್ರದಿಂದ ಬೇಕಾದಷ್ಟು ಕಲ್ಲಿದ್ದಲು ತರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಕಲ್ಲಿದ್ದಲು ಕೊರತೆಯಿಂದ ಉತ್ಪಾದನೆ ನಿಲ್ಲಿಸಬಾರದು. ಉತ್ಪಾದನೆ ನಿಲ್ಲಿಸಿದರೆ ರೈತರು, ಗ್ರಾಹಕರಿಗೆ ತೊಂದರೆಯಾಗಲಿದೆ ಎಂದು ಅವರು ನುಡಿದಿದ್ದಾರೆ.
ಇದನ್ನೂ ಓದಿ:
Coal Crisis: ಕಲ್ಲಿದ್ದಲು ಅಭಾವದಿಂದ ವಿದ್ಯುತ್ ಉತ್ಪಾದನೆ ಕುಸಿತ; ಅರ್ಧ ರಾಜ್ಯಕ್ಕೆ ಕತ್ತಲಿನ ಭೀತಿ
Coal Shortage: ವಿದ್ಯುತ್ ಉತ್ಪಾದನೆ ಘಟಕಗಳಲ್ಲಿ ಕಲ್ಲಿದ್ದಲು ಕೊರತೆಗೆ ಕಾರಣ ತೆರೆದಿಟ್ಟ ವಿದ್ಯುತ್ ಸಚಿವಾಲಯ
Coal Crisis: ಭಾರತದಲ್ಲಿ ಕಲ್ಲಿದ್ದಲು ಕೊರತೆಗೆ ಕಾರಣವೇನು?; ಪೂರ್ತಿ ಮಾಹಿತಿ ಇಲ್ಲಿದೆ