ಉಗ್ರರು ದಾಳಿ ಮಾಡುವಾಗ ಧರ್ಮ ಕೇಳುತ್ತಾ ಕೂತಿರಲ್ಲ: ಸಚಿವ ಆರ್​ಬಿ ತಿಮ್ಮಾಪುರ ಹೇಳಿಕೆಗೆ ವ್ಯಾಪಕ ಆಕ್ರೋಶ

ಕರ್ನಾಟಕದ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಅವರು ಪಹಲ್ಗಾಮ್ ಉಗ್ರ ದಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಾಳಿಕೋರರು ಧರ್ಮವನ್ನು ಕೇಳಿ ಗುಂಡು ಹಾರಿಸುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಗುಪ್ತಚರ ವೈಫಲ್ಯವನ್ನು ಮುಚ್ಚಿಹಾಕಲು ಈ ಘಟನೆಗೆ ಧರ್ಮದ ಬಣ್ಣ ಹಚ್ಚಬಾರದು ಎಂದೂ ಅವರು ಹೇಳಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಉಗ್ರರು ದಾಳಿ ಮಾಡುವಾಗ ಧರ್ಮ ಕೇಳುತ್ತಾ ಕೂತಿರಲ್ಲ: ಸಚಿವ ಆರ್​ಬಿ ತಿಮ್ಮಾಪುರ ಹೇಳಿಕೆಗೆ ವ್ಯಾಪಕ ಆಕ್ರೋಶ
ಉಗ್ರರು ದಾಳಿ ಮಾಡುವಾಗ ಧರ್ಮ ಕೇಳುತ್ತಾ ಕೂತಿರಲ್ಲ: ಸಚಿವ ಆರ್​ಬಿ ತಿಮ್ಮಾಪುರ

Updated on: Apr 28, 2025 | 10:46 AM

ಬೆಂಗಳೂರು, ಏಪ್ರಿಲ್ 28: ಗುಂಡಿನ ದಾಳಿ ಮಾಡುವಾಗ ಭಯೋತ್ಪಾದಕರು (Terrorists) ಧರ್ಮವನ್ನು ಕೇಳುತ್ತಾ ಕೂರುತ್ತಾರೆಯೇ? ಹಾಗೆ ಮಾಡಿರುವ ಸಾಧ್ಯತೆ ಕಡಿಮೆ ಎಂದು ಕರ್ನಾಟಕ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ (RB Timmapur) ಹೇಳಿದ್ದಾರೆ. ಆ ಮೂಲಕ, ಪಹಲ್ಗಾಮ್ ಉಗ್ರ ದಾಳಿಯಲ್ಲಿ (Pahalgam Terror Attack) ಹತರಾದ ಶಿವಮೊಗ್ಗದ ಮಂಜುನಾಥ್ ಪತ್ನಿ ಪಲ್ಲವಿ ಅವರ ಹೇಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವರು, ಭಯೋತ್ಪಾದಕರು ಧರ್ಮವನ್ನು ಪ್ರಶ್ನಿಸಿ ಗುಂಡಿನ ದಾಳಿ ಮಾಡಿರಬಹುದು ಎಂದು ಅನಿಸುತ್ತಿಲ್ಲ. ಯಾರಾದರೂ ಗುಂಡಿನ ದಾಳಿ ಮಾಡುವಾಗ ನಿಂತುಕೊಂಡು ಪ್ರಶ್ನೆ ಮಾಡುತ್ತಾರೆಯೇ? ಹಾಗೆ ಮಾಡಿರಬಹುದು ಎಂದು ಅನಿಸುತ್ತಿಲ್ಲ. ಒಂದು ವೇಳೆ ಹಾಗೆ ಮಾಡಿದ್ದರೆ ಅದು ಕ್ರೂರ ಕೃತ್ಯ ಎಂದಿದ್ದಾರೆ. ಸಚಿವರ ಹೇಳಿಕೆಗೆ ಇದೀಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.

ಪಲ್ಲವಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ದಾಳಿಯ ಆಘಾತದಿಂದ ಮನಸು ವಿಚಲಿತಗೊಂಡು ಅವರು ಹಾಗೆ (ಮುಸ್ಲಿಮರಾ ಎಂದು ಕೇಳಿ ದಾಳಿ ಮಾಡಿದ್ದಾರೆ ಎಂಬ ಹೇಳಿಕೆ) ಹೇಳಿರಬಹುದು. ತನ್ನ ಮಗನನ್ನು ಮುಸ್ಲಿಮರೇ ರಕ್ಷಿಸಿದ್ದಾರೆಂದು ಪಲ್ಲವಿ ಅವರೇ ಹೇಳಿದ್ದಾರೆ ಎಂದಿದ್ದಾರೆ.

ಗುಪ್ತಚರ ವೈಫಲ್ಯವನ್ನು ಮುಚ್ಚಿ ಹಾಕಲು, ಭಯೋತ್ಪಾದಕ ದಾಳಿಗೆ ಹಿಂದೂ-ಮುಸ್ಲಿಂ ಬಣ್ಣ ಕಟ್ಟುವುದು ಸರಿಯಲ್ಲ. ಇಂಥ ಘಟನೆಗಳನ್ನು ಚುನಾವಣೆ ದೃಷ್ಟಿಯಿಂದ ನೋಡಬಾರದು ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ
ಭಾರತದಲ್ಲಿ ನೂರಾರು ಪಾಕಿಸ್ತಾನಿ ಯೂಟ್ಯೂಬ್​ ಚಾನೆಲ್​ಗಳಿಗೆ ನಿಷೇಧ
ದೇಶದ ಮೇಲೆ ದಾಳಿ ಮಾಡಿದ ದುಷ್ಟರಿಗೆ ಹೀಗೆ ಉತ್ತರ ನೀಡಿ ಎನ್ನುತ್ತಾರೆ ಚಾಣಕ್ಯ
ಉಗ್ರ ಸಮೀರ್​ ಅಹ್ಮದ್ ಕುಟುಂಬದಿಂದ ಹೊರಬಿತ್ತು ಆಘಾತಕಾರಿ ಹೇಳಿಕೆ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ

ಕಾರ್ಗಿಲ್, ಪಹಲ್ಗಾಮ್, ಪುಲ್ವಾಮಾ ಭಯೋತ್ಪಾದಕದ ದಾಳಿಗಳನ್ನು ಗಮನಿಸಿದರೆ ಕೇಂದ್ರ ಗುಪ್ತಚರ ಇಲಾಖೆ ವೈಫಲ್ಯ ಎದ್ದು ಕಾಣುತ್ತದೆ. ಸತ್ತವರ ಹೆಸರಿನಲ್ಲಿ ಲಾಭ ಪಡೆಯಲು ಬಿಜೆಪಿಯವರು ಎದುರು ನೋಡುತ್ತಿರುತ್ತಾರೆ. ದೇಶವು ಗಂಡಾಂತರಕ್ಕೆ ಸಿಲುಕಿದಾಗಲೂ ಬಿಜೆಪಿಯವರು ಅದರಲ್ಲಿ ರಾಜಕೀಯ ಮಾಡುತ್ತಾರೆ ಎಂದು ತಿಮ್ಮಾಪುರ ಹೇಳಿದ್ದಾರೆ.

ತಿಮ್ಮಾಪುರ ಹೇಳಿಕೆಗೆ ಬಿಜೆಪಿ ಆಕ್ಷೇಪ

ತಿಮ್ಮಾಪುರ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಪಾಪಿ ಪಾಕಿಸ್ತಾನದ ಮತಾಂಧ ಮುಸ್ಲಿಂ ಉಗ್ರರ ಪರ ಕರ್ನಾಟಕ ಕಾಂಗ್ರೆಸ್ ಪಕ್ಷದ ಹೃದಯ ಮಿಡಿಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳಿವು

‘‘ಪಹಲ್ಗಾಮ್ ಉಗ್ರರ ದಾಳಿಗೆ ಹಿಂದುತ್ವವೇ ಕಾರಣ ಎಂದು ರಾಬರ್ಟ್ ವಾದ್ರಾ ಹೇಳಿದ್ದಾರೆ. ಯುದ್ದದ ಅವಶ್ಯಕತೆ ಇಲ್ಲ, ನಾವು ಶಾಂತಿಯ ಪರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಾ ಧರ್ಮದಲ್ಲೂ ಹಾದಿ ತಪ್ಪಿದವರಿದ್ದಾರೆಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದಿದ್ದೇ ಪಹಲ್ಗಾಮ್ ನರಮೇಧಕ್ಕೆ ಕಾರಣ ಎಂದು ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಪ್ರತಿಪಾದಿಸಿದ್ದಾರೆ. ದಾಳಿಕೋರರು ಧರ್ಮ ಕೇಳಿ ಕೂರುತ್ತಾರಾ? ಎಂದು ಅಬಕಾರಿ ಸಚಿವ ಅರ್.ಬಿ.ತಿಮ್ಮಾಪುರ ಕೇಳಿದ್ದಾರೆ’’ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ