ಬೆಂಗಳೂರು, ಜುಲೈ 19: ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಭಾರಿ ಮಳೆ ಪರಿಣಾಮ ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಸ್ತೆಗಳು ಕೂಡ ನದಿಯಂತಾಗಿವೆ. ಪರಿಣಾಮವಾಗಿ ಹಲವು ಪ್ರಮುಖ ಪ್ರದೇಶಗಳ ನಡುವಿನ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. ಮಂಗಳೂರು ಬೆಂಗಳೂರು ನಡುವಣ ಸಂಚಾರ ಭಾಗಶಃ ಬಂದ್ ಆಗಿದೆ. ಪರಿಣಾಮವಾಗಿ ಬೆಂಗಳೂರಿನಿಂದ ಊರುಗಳಿಗೆ ಹೊರಟಿದ್ದ ಪ್ರಯಾಣಿಕರು ಮತ್ತು ತಮ್ಮ ತಮ್ಮ ಊರುಗಳಿಂದ ರಾಜಧಾನಿಗೆ ಹೊರಟಿಟಿದ್ದವರು ಗುರುವಾರ ರಾತ್ರಿ ಅರ್ಧ ದಾರಿಯಲ್ಲಿ ಪರದಾಡುವಂತಾಯಿತು.
ನಿರಂತರವಾಗಿ ಸುರಿಯುತ್ತಿರುವ ಮಳೆ ಚಿಕ್ಕಮಗಳೂರು ಜಿಲ್ಲೆಯನ್ನ ತೊಯ್ದು ತೊಪ್ಪೆಯಾಗಿಸಿದೆ. ನಿರಂತರ ಮಳೆಗೆ ಕಳಸದಿಂದ ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಬದಲಿ ಮಾರ್ಗ ಹಳುವಳ್ಳಿ ಮೂಲಕ ಸಂಚಾರ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಕಳಸ ಸಂಪೂರ್ಣವಾಗಿ ರಸ್ತೆ ಮಾರ್ಗದ ಸಂಪರ್ಕ ಕಳೆದುಕೊಂಡಂತಾಗಿದೆ.
ಕಳಸ ಪಟ್ಟಣಕ್ಕೆ ಸಂಪರ್ಕಿಸುವ ಮತ್ತೊಂದು ರಸ್ತೆಯೂ ಬಂದ್ ಆಗಿದೆ. ಕೊಪ್ಪ ತಾಲೂಕಿನ ಬಿಳಾಲುಕೊಪ್ಪದಿಂದ ಬಸರೀಕಟ್ಟೆಗೆ ಹೋಗುವ ರಸ್ತೆಯ ಜಲಾವೃತಗೊಂಡಿದ್ದು, ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆಯೇ ಬಂದ್ ಆದಂತಾಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಕೊಪ್ಪ ತಾಲೂಕಿನ ಮೇಗೂರು ಗ್ರಾಮದಲ್ಲಿ 20 ಅಡಿಯಷ್ಟು ಕಂದಕ ಸೃಷ್ಟಿಯಾಗಿ ಮನೆ ಕುಸಿಯುವ ಭೀತಿ ಎದುರಾಗಿದೆ. ಕಂದಕದ ಒಳಗೆ ನೀರು ಹರಿಯುತ್ತಿದ್ದು, ನೀರಿನ ಸೆಲೆ ಹೆಚ್ಚಾಗಿ ಕಂದಕ ಸೃಷ್ಟಿಯಾಗಿರುವ ಸಾಧ್ಯತೆಯಿದೆ.
ನಿರಂತರ ಮಳೆಗೆ ಬೆಳಗಾವಿ ತಾಲೂಕಿನ ಮಜಗಾವಿಯಲ್ಲಿ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ. ಘಟನೆಯಲ್ಲಿ ಎರಡು ಬೈಕ್ ಹಾಗೂ ಒಂದು ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಾಲತ್ರಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಮಂತುರ್ಗಾ ಸೇತುವೆ ಜಲಾವೃತಗೊಂಡಿದ್ದು, ಹೆಮ್ಮಡಗಾ ಖಾನಾಪುರ ಸಂಪರ್ಕ ಕಡಿತಗೊಂಡಿದೆ. ಇದು ಖಾನಾಪುರ ತಾಲೂಕಿನ ಇಪ್ಪತ್ತು ಗ್ರಾಮಗಳಿಗೆ ಸಂಪರ್ಕಿಸುವ ಏಕೈಕ ಸೇತುವೆಯಾಗಿದ್ದು, ಸದ್ಯ ಭಾರಿ ಸಂಕಷ್ಟ ಎದುರಾಗಿದೆ.
ಕೊಡಗಿನಲ್ಲಿ ರಣಭೀಕರ ಮಳೆಯಾಗುತ್ತಿದ್ದು, ಮಡಿಕೇರಿ ತಾಲೂಕಿನ ಮಡಿಕೇರಿ-ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಪ್ರವಾಹ ಉಂಟಾಗಿದೆ. ರಸ್ತೆ ಬದಿಯ ಒಂದು ಅಂಗಡಿ ಮುಳುಗಡೆಯಾಗಿದ್ದು, ಅಂಗಡಿ ವಾಸಿಗಳನ್ನ ಸ್ಥಳಾಂತರಿಸಲಾಗಿದೆ. ಸದ್ಯ ಯಾವುದೇ ಕ್ಷಣ ವಿರಾಜಪೇಟೆ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ. ಇನ್ನು ರಸ್ತೆ ಬದಿಯ 10 ಎಕರೆಗೂ ಅಧಿಕ ಕಾಫಿ ತೋಟಕ್ಕೂ ನೀರು ನುಗ್ಗಿದೆ.
ಕೊಡಗು ಜಿಲ್ಲೆಯಾದ್ಯಂತ ಎಡೆಬಿಡದೆ ವರ್ಷ ಧಾರೆಯಾಗ್ತಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದ ಭಾಗಮಂಡಲ ಭಗಂಡೇಶ್ವರನಿಗೆ ಜಲದಿಗ್ಬಂಧನ ಉಂಟಾಗಿದ್ದು, ದೇವಸ್ಥಾನ ಆವರಣಕ್ಕೆ ನುಗ್ಗಿದ ಕಾವೇರಿ ಆತಂಕ ಸೃಷ್ಟಿಸಿದ್ದಾಳೆ.
ಮೈಸೂರು ಜಿಲ್ಲೆ ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಇದ್ರರಿಂದಾಗಿ ನಂಜನಗೂಡಿನಲ್ಲಿ ಮತ್ತಷ್ಟು ಪ್ರವಾಹ ಭೀತಿ ಎದುರಾಗಿದೆ. ಇಂದು ಬೆಳಗ್ಗೆ ನಂಜನಗೂಡು ಕಪಿಲಾ ನದಿ ಮತ್ತಷ್ಟು ತುಂಬಿ ಹರಿಯುವ ಸಾಧ್ಯತೆಯಿದ್ದು, ಕಪಿಲಾ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಹಾವೇರಿ: ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರ ಸಾವು
ಇತ್ತ ಮಲೆನಾಡಿನಲ್ಲೂ ವರುಣನ ಅಬ್ಬರ ಮುಂದುವರೆದಿದ್ದು, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಬ್ಲಿಗೊಳ ಜಲಾಶಯ ಮಳೆಗೆ ಭರ್ತಿಯಾಗಿದೆ. ಕೋಡಿ ಬಿದ್ದಿರುವ ಜಲಾಶಯದಲ್ಲಿ ಸ್ಥಳೀಯರು ಜೀವದ ಹಂಗು ತೊರೆದು ಮೀನು ಹಿಡಿಯಲು ಪೈಪೋಟಿ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 am, Fri, 19 July 24