ಏಳೆಂಟು ಸಚಿವರನ್ನು ಈಗಲೇ ಸಂಪುಟದಿಂದ ಕೈಬಿಡಿ: ಸಿಎಂ ಸಿದ್ದರಾಮಯ್ಯಗೆ ಶಾಸಕರ ಆಗ್ರಹ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ವಿಚಾರಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಗೊಂದಲ ಇತ್ತೀಚೆಗೆ ಪ್ರಕಟವಾಗಿತ್ತು. ಅದನ್ನು ತಣ್ಣಗಾಗಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿತ್ತು. ಆದರೆ ಇದೀಗ ಕೆಲವು ಸಚಿವರ ವಿರುದ್ಧ ಶಾಸಕರು ಅಪಸ್ವರ ಎತ್ತಿದ್ದು, ಸಂಪುಟದಿಂದ ಕೈಬಿಡುವಂತೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದಾರೆ. ಜತೆಗೆ, ಅನುದಾನ ಕೊಡಿ ತಾಳ್ಮೆ ಪರೀಕ್ಷಿಸಬೇಡಿ ಎಂದು ಸಿಎಂಗೆ ಹೇಳಿದ್ದಾರೆ.
ಬೆಂಗಳೂರು, ಜುಲೈ 19: ಕೆಲವು ಮಂದಿ ಶಾಸಕರ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲವು ಸಚಿವರನ್ನು ಈಗಲೇ ಸಂಪುಟದಿಂದ ಕೈಬಿಡುವುದು ಸೂಕ್ತ ಎಂದು ಆಗ್ರಹಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಗುರುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವು ಸಚಿವರ ವಿರುದ್ಧ ಶಾಸಕರು ಸಿಎಂ ಸಿದ್ದರಾಮಯ್ಯ ಬಳಿ ದೂರು ನೀಡಿದ್ದಾರೆ.
ಶಾಸಕರ ಅಸಮಾಧಾನಗಳೇನು?
ಸಚಿವರ ಕಾರ್ಯವೈಖರಿ ಬಗ್ಗೆ ಹಲವು ಮಂದಿ ಹಿರಿಯ ಶಾಸಕರೇ ಸಿದ್ದರಾಮಯ್ಯ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 136 ಶಾಸಕರ ಮೊಬೈಲ್ ಸಂಖ್ಯೆಯನ್ನು ಇಟ್ಟುಕೊಳ್ಳುವುದು ಕೂಡ ಸಚಿವರಿಗೆ ಕಷ್ಟವಾಗುತ್ತದೆಯೇ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಏಳೆಂಟು ಬಂದಿದ್ದ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಸಚಿವರು ತಮ್ಮ ಕಾರ್ಯವೈಖರಿಯನ್ನು ಸುಧಾರಿಸಿಕೊಳ್ಳಬೇಕು ಎಂದು ಶಾಸಕರು ತಾಕಿತು ಮಾಡಿದ್ದಾರೆ.
ಇನ್ನು ಸಭೆಯಲ್ಲಿ ವಿನಯ್ ಕುಲಕರ್ಣಿ, ರಾಜು ಕಾಗೆ, ಮಾಲೂರು ನಂಜೇಗೌಡ ಖಾರವಾಗಿಯೇ ಮಾತನಾಡಿದ್ದಾರೆ ಎನ್ನಲಾಗಿದೆ. ಅನುದಾನಕ್ಕೂ ಬಿಗಿಪಟ್ಟು ಹಿಡಿದು ಸಿಎಂ ಮುಂದೆ ಆಗ್ರಹ ಮಂಡಿಸಿದ್ದಾರೆ. ಅನುದಾನ ಬಿಡುಗಡೆಗೆ ಸಚಿವರಿಗೆ ನೀವೇ ಖುದ್ದಾಗಿ ಹೇಳಿ ಎಂದು ಸಿಎಂಗೆ ಒತ್ತಡ ಹೇರಿದ್ದಾರೆ.
ಇದನ್ನೂ ಓದಿ: ಮೂವರು ನಾಯಕರಿಂದ ವಿರುದ್ಧ ಷಡ್ಯಂತ್ರ: ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಳಲು
ಅನುದಾನ ಕೊಡಿ, ತಾಳ್ಮೆ ಪರೀಕ್ಷಿಸಬೇಡಿ ಎಂದ ಶಾಸಕರು
ಅನುದಾನ ಇಲ್ಲದೆ ಹೋದರೆ ಕ್ಷೇತ್ರಕ್ಕೆ ಕಾಲಿಡುವುದು ಕಷ್ಟವಾಗುತ್ತದೆ. ಅನುದಾನಕ್ಕಾಗಿ ಒಂದು ವರ್ಷದಿಂದ ಚಾತಕ ಪಕ್ಷಗಳಂತೆ ಕಾದಿದ್ದೇವೆ. ಇನ್ನಷ್ಟು ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ಅನುದಾನ ಇಲ್ಲದೆ ಹೋದರೆ ಕ್ಷೇತ್ರದಲ್ಲಿ ಓಡಾಡುವುದು ಕಷ್ಟವಾಗುತ್ತದೆ. ಎಷ್ಟೇ ಬಾರಿ ಹೇಳಿದರೂ ಸಚಿವರ ವರ್ತನೆ ಬದಲಾಗಿಲ್ಲ. ಕೆಲವು ಸಚಿವರನ್ನ ತಕ್ಷಣ ಸಂಪುಟದಿಂದ ಕೈ ಬಿಡುವುದು ಒಳ್ಳೆಯದು ಎಂದು ಸಚಿವರ ವಿರುದ್ಧ ಶಾಸಕಾಂಗ ಸಭೆಯಲ್ಲಿ ಶಾಸಕರು ಅಪಸ್ವರ ಎತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 am, Fri, 19 July 24