ಹಾವೇರಿ: ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರ ಸಾವು
ಹಾವೇರಿ ಜಿಲ್ಲೆಯಲ್ಲಿ ಕಳೆದ 3-4 ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಇದರಿಂದ ಜಿಲ್ಲೆಯ ಕೆಲವಡೆ ಅವಾಂತರ ಸೃಷ್ಟಿಯಾಗಿವೆ. ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮಳೆಯಿಂದ ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಹಾವೇರಿ, ಜುಲೈ 19: ಮಳೆಯಿಂದ (Rain) ಮನೆ (Home) ಗೋಡೆ ಕುಸಿದು ಮೂವರು ಮೃತಪಟ್ಟಿರುವ ಘಟನೆ ಸವಣೂರು (Savanuru) ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ದುರಂತದಲ್ಲಿ ಚೆನ್ನಮ್ಮ (30), ಅಮೂಲ್ಯ (3), ಅನನ್ಯಾ (6) ಮೃತ ದುರ್ದೈವಿಗಳು. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧೆ ಯಲ್ಲಮ್ಮ, ಪುತ್ರ ಮುತ್ತು, ಸೊಸೆ ಸುನೀತಾ ಗಾಯಾಳುಗಳು. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಆರು ಜನರು ಮನೆಯಲ್ಲಿ ಒಂದೇ ಕಡೆ ಮಲಗಿದ್ದರು. ಇಂದು (ಜು.19) ನಸುಕಿನ ಜಾವ ಸುಮಾರು 3.30ಕ್ಕೆ ಆರು ಜನರ ಮೇಲೆ ಗೋಡೆ ಬಿದ್ದಿದೆ. ಇದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ. ಹುಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸವಣೂರು ತಾಲೂಕು ಆಸ್ಪತ್ರೆಗೆ ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಮ್ಮನವರ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಳೆಯಿಂದ ಮನೆ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದೆ. ಗಂಭೀರ ಗಾಯಗೊಂಡ ವೃದ್ಧೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಕುಟುಂಬಕ್ಕೆ ಶೀಘ್ರದಲ್ಲೇ ಪರಿಹಾರ ನೀಡುತ್ತೇವೆ ಎಂದು ಹೇಳಿದರು.
ಬೊಮ್ಮಾಯಿ ಸಂತಾಪ
ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿರುವ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಃಖವಾಯಿತು. ಈ ಘಟನೆಯಲ್ಲಿ ಇನ್ನೂ ಮೂರು ಜನ ಗಂಭೀರ ಗಾಯಗೊಂಡಿದ್ದು ಅವರಿಗೆ ರಾಜ್ಯ ಸರ್ಕಾರ ಸೂಕ್ತ ಚಿಕಿತ್ಸೆ ನೀಡಬೇಕು. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತೇನೆ. ಮೃತರ ಆತ್ಮಕ್ಕೆ ಆ ಭಗವಂತ ಶಾಂತಿ ನೀಡಲಿ, ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದರು. ಮೃತರ ಕುಟುಂಬಕ್ಕೆ ಸಂಸದ ಬಸವರಾಜ ಬೊಮ್ಮಾಯಿ 2 ಲಕ್ಷ ರೂ. ನೆರವು ನೀಡಿದರು.
5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ
ಎನ್ಡಿಆರ್ಎಫ್ ಮಾರ್ಗಸೂಚಿಯಡಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಹಾವೇರಿ ಜಿಲ್ಲೆ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಕುಸಿದ ಗೋಡೆ, ದುರಂತದಿಂದ ಪಾರಾದ ಗರ್ಭಿಣಿ
ಬೆಳಗಾವಿ: ಖಾನಾಪುರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಗೆ ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದಲ್ಲಿನ ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಗರ್ಭಿಣಿ ಸಮೇತ ಆರು ಜನ ಬದುಕುಳಿದಿದ್ದಾರೆ. ಸಾವಂತ್ ತೇಗೂರ್ ಎಂಬುವರಿಗೆ ಸೇರಿದ ಮನೆಯಲ್ಲಿ ಗರ್ಭಿಣಿ ಮತ್ತು ಆಕೆಯ ಕುಟುಂಬ ವಾಸವಾಗಿದೆ. ಗುರುವಾರ ಮಧ್ಯರಾತ್ರಿ ಮಲಗಿರುವ ಸಮಯದಲ್ಲಿ ಮನೆಯ ಒಂದು ಭಾಗ ಕುಸಿದಿದೆ. ಅದೃಷ್ಟವಶಾತ್ ಕುಸಿದ ಗೋಡೆ ಹೊರ ಭಾಗದಲ್ಲಿ ಬಿದ್ದಿದ್ದಕ್ಕೆ ಕುಟುಂಬ ಬದುಕುಳಿದಿದೆ.
ಇದನ್ನೂ ಓದಿ: ಕರ್ನಾಟಕ ಮಹಾ ಮಳೆಗೆ ಹಲವೆಡೆ ಪ್ರವಾಹ, ಜಲ ದಿಗ್ಬಂಧನ: ನದಿಯಂತಾದ ರಸ್ತೆಗಳು
ಅರ್ಧ ಬಿದ್ದ ಮನೆಯಲ್ಲೇ ಗರ್ಭಿಣಿ ವಾಸ
ಅರ್ಧ ಬಿದ್ದ ಮನೆಯಲ್ಲೇ ತುಂಬು ಗರ್ಭಿಣಿ ಕುಟುಂಬ ವಾಸವಾಗಿದೆ. ಬೇರೆ ಮನೆ ಸಿಗದೆ ಅದೇ ಮನೆಗೆ ತಾಡಪಲ್ ಕಟ್ಟಿಕೊಂಡು ಕುಟುಂಬ ಬದುಕು ನಡೆಸುತ್ತಿದೆ. ಇದೇ ಮನೆಯಲ್ಲಿ ಎರಡು ದಿನದ ಕರು ಕೂಡ ಇದೆ. ಯಜಮಾನ ಸಾವಂತ್ ಮನೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾನೆ. ಹೆರಿಗೆಗೆ ಮಗಳನ್ನು ತವರಿಗೆ ಕರೆದುಕೊಂಡು ಬಂದ ತಾಯಿಗೆ ಮನೆ ಬಿದ್ದು ದಿಕ್ಕೇ ತೋಚದಂತಾಗಿದೆ. ಮಗಳ ಸ್ಥಿತಿ ನೋಡಲು ಆಗದೆ ಹೆತ್ತಮ್ಮ ದುಃಖಿಸುತ್ತಿದ್ದಾಳೆ. ಸರ್ಕಾರ ನೆರವು ನೀಡಿ ನನ್ನ ಕುಟುಂಬ ಬದುಕಿಸುವಂತೆ ಸಾವಂತ್ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 am, Fri, 19 July 24