
ಬೆಂಗಳೂರು, ಜು.8: ಕರ್ನಾಟಕದಲ್ಲಿ ಇಂದು (ಜುಲೈ 8) ಮುಂಗಾರು ಮಳೆ ತೀವ್ರಗೊಂಡಿದ್ದು, ಕರಾವಳಿ, ಮಲೆನಾಡು ಮತ್ತು ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ‘ರೆಡ್ ಅಲರ್ಟ್’ ಮುನ್ಸೂಚನೆ ನೀಡಿದೆ. ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ವಿವಿಧೆಡೆ ಭಾರೀ ಮಳೆಯ ಮುನ್ಸೂಚನೆ ಇರಲಿದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರಿನ ಪ್ರಮುಖ ತಾಲೂಕುಗಳು, ಶಿವಮೊಗ್ಗದ ಸಾಗರ ಹಾಗೂ ಬೆಳಗಾವಿಯ 3 ತಾಲೂಕುಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇಂದು ನಗರದಲ್ಲಿ ಗರಿಷ್ಠ ತಾಪಮಾನ 28°C ಮತ್ತು ಕನಿಷ್ಠ ತಾಪಮಾನ 22°C ದಾಖಲಾಗುವ ನಿರೀಕ್ಷೆಯಿದೆ.
ಉಳಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರವಾದ ಮಳೆಯಾಗಲಿದೆ. ನದಿ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿರುವ ಸಾರ್ವಜನಿಕರು ಸುರಕ್ಷಿತವಾಗಿರಲು ಜಿಲ್ಲಾಡಳಿತಗಳು ಸೂಚಿಸಿವೆ. ಹಾಸನ ಜಿಲ್ಲೆಯ ಮಲೆನಾಡು ಭಾಗವಾದ ಸಕಲೇಶಪುರ ತಾಲೂಕಿನಲ್ಲಿ ನಿರಂತರವಾಗಿ ಭೀಕರ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ. ಮಳೆಯ ಆರ್ಭಟಕ್ಕೆ ಭೂಕುಸಿತ ಹಾಗೂ ಪ್ರವಾಹದ ಭೀತಿ ಎದುರಾಗಿರುವುದರಿಂದ, ತಾಲೂಕು ಆಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಅತ್ಯಂತ ಕಟ್ಟುನಿಟ್ಟಿನ ಜರೂರು ಆದೇಶವೊಂದನ್ನು ಹೊರಡಿಸಿದೆ.
ಇದನ್ನೂ ಓದಿ:ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ: ರಸ್ತೆಯಲ್ಲೇ ಹರಿದ ಡಾಂಬರ್
ಮುಂದಿನ ಆದೇಶದವರೆಗೂ ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ ಟ್ರಕಿಂಗ್ (Trekking) ವ್ಯವಸ್ಥೆಯನ್ನು ಕಲ್ಪಿಸಬಾರದು. ಒಂದು ವೇಳೆ ಆದೇಶ ಮೀರಿ ಪ್ರವಾಸಿಗರನ್ನು ಕರೆದೊಯ್ದರೆ, ಅದರಿಂದಾಗುವ ಯಾವುದೇ ಅವಘಡಗಳಿಗೆ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರೇ ನೇರ ಹೊಣೆಗಾರರಾಗುತ್ತಾರೆ ಎಂದು ಖಡಕ್ ವಾರ್ನಿಂಗ್ ನೀಡಲಾಗಿದೆ. ಎಲ್ಲಾ ಪ್ರಸಿದ್ಧ ಜಲಪಾತಗಳು, ನದಿಗಳು ಮತ್ತು ಹಳ್ಳ-ಕೊಳ್ಳಗಳು, ಗುಡ್ಡಗಾಡು ಪ್ರದೇಶಗಳು ಹಾಗೂ ಇಳಿಜಾರು ಜಾಗಗಳು, ಪ್ರವಾಸಿ ಹಾಗೂ ಅಪಾಯಕಾರಿ ಸ್ಥಳಗಳು ಸ್ಥಳಗಳಿಗೆ ಪ್ರವೇಶ ನಿಷೇಧ ಮಾಡಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ