
ಬೆಂಗಳೂರು, ಜನವರಿ 29: ರಾಜ್ಯದ ಜನರು ಅಂಗಾಂಗ ದಾನಕ್ಕೆ (Organ Donation) ಹಿಂದೇಟು ಹಾಕುತ್ತಿದ್ದು, ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಅಂಗಾಂಗ ದಾನದ ಬಗ್ಗೆ ವೈದ್ಯರು ಸಾಕಷ್ಟು ಅರಿವು ಮೂಡಿಸುತ್ತಿದ್ದಾರೆ. ಸರ್ಕಾರ ಕೂಡ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಮುಖ್ಯಮಂತ್ರಿಗಳು ಅಂಗಾಂಗ ದಾನಿಗಳನ್ನ ಗೌರವಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ. ಇಷ್ಟಾದರೂ ಮೂಢನಂಬಿಕೆಗಳು ಅಡ್ಡಿ ಉಂಟು ಮಾಡುತ್ತಿವೆ.
ಈ ಜನ್ಮದಲ್ಲಿ ಕಣ್ಣು, ಕಿಡ್ನಿ, ಚರ್ಮ, ಲಿವರ್, ಹೃದಯ, ಕರುಳು ಹೀಗೆ ಅಂಗಾಂಗಳನ್ನು ನೀಡಿದರೆ ಮುಂಬರುವ ಜನ್ಮದಲ್ಲಿ ಅಂಗವೈಕಲ್ಯತೆ ಕಾಡುತ್ತದೆ ಎಂಬ ಮಾತನ್ನು ನಂಬಿ ಜನರು ಅಂಗಾಂಗ ದಾನದಿಂದ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಅಂಗಾಂಗ ದಾನ ಶೇ 30ರಷ್ಟು ಕುಸಿತ ಕಂಡಿದೆ. ಕಳೆದ ಕೆಲವು ದಿನಗಳಿಂದ ಜಾಗೃತಿ ಬಳಿಕ ಕೊಂಚ ಸುಧಾರಣೆಯಾಗಿದೆ ಆದರೂ, ಮೂಢನಂಬಿಕೆ ಅಂಗಾಂಗ ಕುಸಿತಕ್ಕೆ ಕಾರಣವಾಗಿದ್ದು ಜನರು ಇದರಿಂದ ಹೊರ ಬರಬೇಕಿದೆ.
ಇದನ್ನೂ ಓದಿ: ಅಂಗಾಂಗ ದಾನಕ್ಕೂ ಮೊದಲು ಈ ವಿಷಯಗಳು ನಿಮಗೆ ತಿಳಿದಿರಲಿ
ಅಂಗಾಂಗ ದಾನಗಳ ಪೈಕಿ ಚರ್ಮ ಹಾಗು ಕಿಡ್ನಿ ದಾನದ ಸಂಖ್ಯೆ ತೀರಾ ಇಳಮುಖ ಕಂಡಿದೆ. ಅಂಗಾಂಗ ದಾನ ಸಿಗದ ಕಾರಣ ಸರಿಸುಮಾರು 5 ವರ್ಷ ಕಿಡ್ನಿಗಾಗಿ ರೋಗಿಗಳು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಯಕೃತ್ತು ಪಡೆಯಲು ನಾಲ್ಕುವರೆ ವರ್ಷ ವೈಟಿಂಗ್ ಪಿರಿಯಡ್ ಇದ್ದು, ಸರ್ಕಾರದ ಮಹತ್ವಾಕಾಂಕ್ಷೆ ಜೀವನ ಸಾರ್ಥಕತೆ ಯೋಜನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ವೈದ್ಯರು ಅಂಗಾಂಗದಾನಕ್ಕೆ ಒತ್ತಾಯ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಅಂಗಾಂಗ ದಾನದ ಬಗ್ಗೆ ವೈದ್ಯರು ಸಾಕಷ್ಟು ಅರಿವು ಮೂಡಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಾಕಷ್ಟು ಅರಿವು ಮೂಡಿಸುತ್ತಿದೆ. ದೇಹ ಮಣ್ಣಲ್ಲಿ ಮಣ್ಣಾಗುವ ಬದಲು ನೂರಾರು ಜನರಿಗೆ ಬೆಳಕಾಗುವ ಕಲ್ಪವೃಕ್ಷವಾಗಬೇಕಿದೆ.