ಸ್ಲೋಚ್ ಹ್ಯಾಟ್​ಗೆ ಕೊಕ್: ಅ 28ರಿಂದಲೇ ಕರ್ನಾಟಕ ಪೊಲೀಸರ ಕೈಸೇರಲಿವೆ ಹೊಸ ಟೋಪಿ

ಕರ್ನಾಟಕದ ಕಾನ್‌ಸ್ಟೆಬಲ್‌ ಮತ್ತು ಹೆಡ್‌ ಕಾನ್‌ಸ್ಟೆಬಲ್‌ಗಳು ಧರಿಸುತ್ತಿದ್ದ ಸ್ಲೋಚ್ ಹ್ಯಾಟ್ ಬದಲಿಗೆ 'ಪೀಕ್ ಕ್ಯಾಪ್' ವಿತರಿಸಲು ಗೃಹ ಇಲಾಖೆ ನಿರ್ಧರಿಸಿದೆ. ಅಕ್ಟೋಬರ್ 28ರಿಂದಲೇ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಿಂದ ಹೊಸ ಕ್ಯಾಪ್‌ಗಳು ವಿತರಣೆ ಆಗಲಿವೆ. ತೆಲಂಗಾಣ ಪೊಲೀಸರ ಮಾದರಿ ಅನುಸರಿಸಲಾಗಿದೆ.

ಸ್ಲೋಚ್ ಹ್ಯಾಟ್​ಗೆ ಕೊಕ್: ಅ 28ರಿಂದಲೇ ಕರ್ನಾಟಕ ಪೊಲೀಸರ ಕೈಸೇರಲಿವೆ ಹೊಸ ಟೋಪಿ
ಪೀಕ್ ಕ್ಯಾಪ್​
Updated By: ಗಂಗಾಧರ​ ಬ. ಸಾಬೋಜಿ

Updated on: Oct 25, 2025 | 11:00 PM

ಬೆಂಗಳೂರು, ಅಕ್ಟೋಬರ್​ 25: ಕರ್ನಾಟಕ ಪೊಲೀಸ್​ ಇಲಾಖೆಯ ಕಾನ್​ಸ್ಟೇಬಲ್‌ಗಳು ಮತ್ತು ಹೆಚ್​​ಸಿಗಳು ಧರಿಸುತ್ತಿದ್ದ ಬ್ರಿಟಿಷ್​ ಕಾಲದ ಟೋಪಿ (Cap) ಬದಲಾವಣೆಗೆ ಇದೀಗ ಕಾಲ ಸನ್ನಿಹಿತವಾಗಿದೆ. ಸ್ಲೋಚ್​​​ ಹ್ಯಾಟ್​ಗೆ ಕೊಕ್​​ ನೀಡಲಾಗುತ್ತಿದ್ದು, ಅದರ ಬದಲಿಗೆ ಪೀಕ್ ಕ್ಯಾಪ್​ (Peak Caps) ವಿತರಿಸುವ ಗೃಹ ಇಲಾಖೆ ಮುಂದಾಗಿದೆ. ಹೊಸ ಟೋಪಿಗಳು ಅಕ್ಟೋಬರ್ 28ರಿಂದಲೇ ಪೊಲೀಸರ ಕೈಸೇರಲಿವೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಅ.28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರು ಹೊಸ ಕ್ಯಾಪ್‌ಗಳ ವಿತರಣೆ ಮಾಡಲಿದ್ದಾರೆ. ಬಳಿಕ ಬೇರೆ ಜಿಲ್ಲೆಗಳ ಕಾನ್ಸ್​​ಟೇಬಲ್​ಗಳಿಗೂ ಹಂತ ಹಂತವಾಗಿ ಕ್ಯಾಪ್ ವಿತರಣೆ ಮಾಡಲಾಗುವುದು.

ಇದನ್ನೂ ಓದಿ: ಸದ್ಯದಲ್ಲೇ ಬ್ರಿಟಿಷ್ ಕಾಲದ ಟೋಪಿಗೆ ನಿವೃತ್ತಿ: ಕರ್ನಾಟಕ ಪೊಲೀಸರ ತಲೆ ಅಲಂಕರಿಸಲಿದೆ ಸ್ಮಾರ್ಟ್​ ಹ್ಯಾಟ್​

ಜೂನ್‌ನಲ್ಲಿ ನಡೆದಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕ್ಯಾಪ್​ ಬದಲಿಸುವ ಬಗ್ಗೆ ತೀರ್ಮಾನವಾಗಿತ್ತು. ತೆಲಂಗಾಣ ಪೊಲೀಸರು ಧರಿಸುವ ಪೀಕ್ ಕ್ಯಾಪ್ ಬಗ್ಗೆ ತೀರ್ಮಾನವಾಗಿತ್ತು. ಸದ್ಯ ಹೊಸ ಟೋಪಿಗಳು ತಯಾರಾಗಿದ್ದು, ಮೊದಲ ಹಂತದಲ್ಲಿ ಪೊಲೀಸರಿಗೆ ಪೀಕ್​ ಕ್ಯಾಪ್​​ ವಿತರಣೆ ನಡೆಯಲಿದೆ.

ಇತ್ತೀಚೆಗೆ ಡಿಜಿಪಿ ಕಚೇರಿಯಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಕ್ಯಾಪ್​ಗಳನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ ಪರಿಶೀಲನೆ ಮಾಡಿದ್ದರು. ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರ ಕ್ಯಾಪ್​ಗಳನ್ನು ಪರಿಶೀಲಿಸಿದ್ದರು. ಬಳಿಕ ಪ್ರಸ್ತಾವಿತ ಕರ್ನಾಟಕ ಪೊಲೀಸ್ ಕ್ಯಾಪ್ ಮಾದರಿ ಬಗ್ಗೆ ಚರ್ಚೆ ಮಾಡಿದ್ದರು.

ಇದನ್ನೂ ಓದಿ: ಬ್ರಿಟೀಷರ ಕಾಲದಿಂದ ಬಳಸುತ್ತಿದ್ದ ಟೋಪಿಗೆ ಕೊಕ್, ಪೊಲೀಸರಿಗೆ ಹೊಸ ಬಣ್ಣದ ಕ್ಯಾಪ್​​ಗೆ ಸರ್ಕಾರ ಅಸ್ತು!

ಆಗಸ್ಟ್ 06ರಂದು ಕಾನ್ಸ್​ಟೇಬಲ್ ಹಾಗೂ ಹೆಡ್ ಕಾನ್ಸ್​​ ಟೇಬಲ್​​ಗಳ ಸ್ಲೋಚ್ ಹ್ಯಾಟ್ ಬದಲಾವಣೆ ಹಿನ್ನಲೆಯಲ್ಲಿ ನೇವಿ ಬ್ಲೂ ಪೀಕ್​ ಕ್ಯಾಪ್​​ಗಳನ್ನು ವಿತರಿಸಲು ರಾಜ್ಯ ಸರ್ಕಾರ ಸಹಮತಿ ನೀಡಿ ಆದೇಶ ಹೊರಡಿಸಿತ್ತು. ಕ್ಯಾಪ್ ಖರೀದಿಸುವ ಸಂಬಂಧ ಟೆಂಡರ್ ಪ್ರಕ್ರಿಯೆಗೆ ಚಾಲನೆ ಕೂಡ ನೀಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:59 pm, Sat, 25 October 25