ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ತಡೆ: ಅಕ್ರಮ ತನಿಖೆಗೆ ಆಂತರಿಕ ವಿಚಾರಣಾ ಉಪಸಮಿತಿ ರಚನೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇತ್ತ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್​​ಸಿ) ಅಕ್ರಮಗಳು ಮುನ್ನೆಲೆಗೆ ಬಂದಿದ್ದು, ಕೆಪಿಎಸ್​​​ಸಿ ವಿರುದ್ಧ ಪ್ರತಿಭಟನೆ ಯಾವಾಗ ಎನ್ನುವ ಚರ್ಚೆಗಳು ನಡೆದಿವೆ. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಮೇಜರ್ ಸರ್ಜರಿಗೆ ಮುಂದಾಗಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ತಡೆ: ಅಕ್ರಮ ತನಿಖೆಗೆ ಆಂತರಿಕ ವಿಚಾರಣಾ ಉಪಸಮಿತಿ ರಚನೆ
Kpsc

Updated on: Jul 26, 2026 | 10:13 PM

ಬೆಂಗಳೂರು, ಜುಲೈ 26): ಕರ್ನಾಟಕ ಲೋಕಸೇವಾ ಆಯೋಗವು (KPSC) ಮೊದಲಿನಿಂದಲೂ ಒಂದಿಲ್ಲೊಂದು ವಿವಾದದ ಕೇಂದ್ರ ಬಿಂದುವೇ ಆಗಿದೆ. ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಬಗ್ಗೆ ಸಾಲು ಸಾಲು ದೂರುಗಳು ಬೆಳಕಿಗೆ ಬರುತ್ತಿದ್ದು, ಇದೀಗ ಈ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡಿದೆ. ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆಗೆ ಮುಂದಾಗಿದೆ. ಈ ಸಂಬಂಧ ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕರ್ನಾಟಕ ಲೋಕಸೇವಾ ಆಯೋಗವು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಬದ್ಧವಾಗಿದ್ದು, ತನಿಖಾ ವರದಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ 2026ರ ಜುಲೈ 24ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ದೂರಿನ ಹಿನ್ನೆಲೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಲೋಕಸೇವಾ ಆಯೋಗವು 2026ರ ಜುಲೈ 26ರಂದು ತುರ್ತು ಸಭೆ ನಡೆಸಿದೆ.
ಸಾರ್ವಜನಿಕರ ವಿಶ್ವಾಸವನ್ನು ಕಾಪಾಡುವ ಉದ್ದೇಶದಿಂದ ಹಾಗೂ ಆರೋಪಗಳ ಗಂಭೀರತೆಯನ್ನು ಮನಗಂಡು ಆಯೋಗವು ಕೆಳಕಂಡ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿ ಅವರು ತಿಳಿಸಿದ್ದಾರೆ.

ಇದನ್ನು ಓದಿ: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್​​ಗೆ ಮತ್ತೊಂದು ಶಾಕ್​​: ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಸಂಬಂಧ FIR

ಪ್ರಾಥಮಿಕ ಮಾಹಿತಿಯ ಪರಿಶೀಲನೆ: 2026ರ ಜುಲೈ 24ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು, ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಹಾಗೂ 2026ರ ಜುಲೈ 25ರಂದು ಪೊಲೀಸ್ ಇಲಾಖೆ ನೀಡಿರುವ ಪ್ರಾಥಮಿಕ ಮಾಹಿತಿ ವರದಿಯನ್ನು (FIR) ಆಯೋಗವು ಗಂಭೀರವಾಗಿ ಪರಿಗಣಿಸಿದೆ.

ಆಂತರಿಕ ತನಿಖಾ ಉಪಸಮಿತಿ ರಚನೆ: ಆರೋಪಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಆಯೋಗದ ಹಿರಿಯ ಸದಸ್ಯರ ಅಧ್ಯಕ್ಷತೆಯಲ್ಲಿ ಆಂತರಿಕ ತನಿಖಾ ಉಪಸಮಿತಿಯನ್ನು ರಚಿಸಲಾಗಿದೆ.

ಒಂದು ವಾರದಲ್ಲಿ ವರದಿ ಸಲ್ಲಿಕೆ: ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತ ಹಾಗೂ ಸಂಬಂಧಿತ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ವಾಸ್ತವಾಂಶಗಳ ಕುರಿತ ವಿವರವಾದ ವರದಿಯನ್ನು ಒಂದು ವಾರದೊಳಗೆ ಆಯೋಗಕ್ಕೆ ಸಲ್ಲಿಸುವಂತೆ ಉಪಸಮಿತಿಗೆ ನಿರ್ದೇಶನ ನೀಡಲಾಗಿದೆ.

ತನಿಖೆಗೆ ನೋಡಲ್ ಅಧಿಕಾರಿಗಳ ನೇಮಕ: ತನಿಖಾ ಕಾರ್ಯಕ್ಕೆ ಅಗತ್ಯವಾದ ಆಡಳಿತಾತ್ಮಕ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲು ಕೆಪಿಎಸ್‌ಸಿ ಕಾರ್ಯದರ್ಶಿಯನ್ನು ಹಾಗೂ ಅಗತ್ಯ ಕಾನೂನು ಸಲಹೆ ನೀಡಲು ಕಾನೂನು ವಿಭಾಗದ ಮುಖ್ಯಸ್ಥರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ: ಆಂತರಿಕ ತನಿಖಾ ಉಪಸಮಿತಿ ತನ್ನ ಅಂತಿಮ ವರದಿಯನ್ನು ಸಲ್ಲಿಸುವವರೆಗೆ, 2026ರ ಜುಲೈ 17ರಂದು ಪ್ರಕಟಿಸಲಾಗಿದ್ದ ಪಶುವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯ ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಆಯೋಗವು ನಿರ್ಧರಿಸಿದೆ.

ಆಯೋಗವು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಬದ್ಧವಾಗಿದ್ದು, ತನಿಖಾ ವರದಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us