Karnataka Rain: ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೂ 3 ದಿನ ಗುಡುಗು ಸಹಿತ ಮಳೆ

| Updated By: ಸುಷ್ಮಾ ಚಕ್ರೆ

Updated on: May 15, 2022 | 5:55 AM

Bengaluru Rains: ಅಸಾನಿ ಚಂಡಮಾರುತ ದುರ್ಬಲಗೊಂಡಿದ್ದರೂ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇನ್ನೂ 3 ದಿನ ಮಳೆಯಾಗಲಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

Karnataka Rain: ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೂ 3 ದಿನ ಗುಡುಗು ಸಹಿತ ಮಳೆ
ಮಳೆ
Follow us on

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ 3 ವಾರಗಳಿಂದ ಮಳೆಯ ಅಬ್ಬರ ಜೋರಾಗಿದೆ. ಮಳೆಯ ಜೊತೆಗೆ ಚಳಿಯೂ ಸೇರಿ 50 ವರ್ಷಗಳ ದಾಖಲೆಯನ್ನು ಬೆಂಗಳೂರು ಹಿಂದಿಕ್ಕಿದೆ. ಕರ್ನಾಟಕದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಇಂದಿನಿಂದ ಮಂಗಳವಾರದವರೆಗೆ (ಮೇ 17) ರಾಜ್ಯಾದ್ಯಂತ ಮಳೆಯಾಗಲಿದೆ. ಈ ಬಾರಿ ಮೇ 27ಕ್ಕೇ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದೆ. ಬಳಿಕ ಮೂರ್ನಾಲ್ಕು ದಿನಗಳಲ್ಲಿ ಮಾನ್ಸೂನ್ ಮಂಗಳೂರನ್ನು ಪ್ರವೇಶಿಸಿ, ಕರ್ನಾಟಕಕ್ಕೆ ಎಂಟ್ರಿ ಕೊಡಲಿದೆ. ಅಸಾನಿ ಚಂಡಮಾರುತ (Cyclone Asani) ದುರ್ಬಲಗೊಂಡಿದ್ದರೂ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ (Karnataka Rains) ಇನ್ನೂ 3 ದಿನ ಮಳೆಯಾಗಲಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇಂದು ಕರ್ನಾಟಕದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಚದುರಿದ ಮಳೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಬಿರುಗಾಳಿಯೂ ಬೀಸಲಿದೆ. ಕರ್ನಾಟಕದ ಮಲೆನಾಡು, ಉತ್ತರ ಒಳನಾಡಿನಲ್ಲಿ ಇಂದಿನಿಂದ 3 ದಿನ ಮಳೆಯಾಗಲಿದೆ.

ಮುಂದಿನ 3 ದಿನಗಳ ಕಾಲ ಕರ್ನಾಟಕದ ಒಳನಾಡು ಮತ್ತು ಕರಾವಳಿಯಲ್ಲಿ ಚದುರಿದ ಮಳೆಯಾಗುವ ನಿರೀಕ್ಷೆಯಿದೆ. ಆಗಾಗ ಗುಡುಗು ಸಹಿತ ಮಳೆಯೂ ಸುರಿಯಲಿದೆ. ಬೆಂಗಳೂರಿನಲ್ಲಿ ಕಳೆದ 50 ವರ್ಷಗಳಲ್ಲಿ ಅತಿ ಹೆಚ್ಚು ತಂಪಾದ ತಾಪಮಾನವಿರುವ 2ನೇ ವರ್ಷ ಇದಾಗಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಬಿಸಿಲು ಹೆಚ್ಚಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗಲಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ.

ಇದನ್ನೂ ಓದಿ
ಕರ್ನಾಟಕದಲ್ಲಿ ಮೇ ಅಂತ್ಯಕ್ಕೇ ಮುಂಗಾರು ಪ್ರವೇಶ; ಹವಾಮಾನ ಇಲಾಖೆ ಮಾಹಿತಿ
Karnataka Rain: ಇಂದಿನಿಂದ 4 ದಿನ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ
Monsoon 2022: ಈ ಬಾರಿ ಅವಧಿಗೂ ಮೊದಲೇ ಮುಂಗಾರು ಪ್ರವೇಶ; ಕೇರಳದಲ್ಲಿ ಮೇ 27ಕ್ಕೆ ಮೊದಲ ಮಳೆ
Karnataka Rain: ಅಸಾನಿ ಚಂಡಮಾರುತ ಎಫೆಕ್ಟ್: ಇನ್ನೆರಡು ದಿನ ಸಿಲಿಕಾನ್ ಸಿಟಿ ಫುಲ್ ಕೂಲ್ ಕೂಲ್

ಸಾಮಾನ್ಯವಾಗಿ ಮಾನ್ಸೂನ್ ಜೂನ್ 1ರ ಸುಮಾರಿಗೆ ಕೇರಳಕ್ಕೆ ಮಾನ್ಸೂನ್ (ಮುಂಗಾರು) ಆಗಮಿಸುತ್ತದೆ. ಜೂನ್ ಮಧ್ಯದ ವೇಳೆಗೆ ಭಾರತದ ಉಳಿದ ಭಾಗಗಳನ್ನು ಆವರಿಸುತ್ತದೆ. ಆದರೆ, ಈ ಬಾರಿ ಮೇ 27ರಂದು ಕೇರಳಕ್ಕೆ ನೈಋತ್ಯ ಮುಂಗಾರಿನ ಪ್ರವೇಶವಾಗಲಿದೆ. ಈ ವರ್ಷ ಕೇರಳದಲ್ಲಿ ನೈಋತ್ಯ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆಯು ಸಾಮಾನ್ಯ ಆರಂಭದ ದಿನಾಂಕಕ್ಕಿಂತ ಮುಂಚೆಯೇ ಇರುತ್ತದೆ. ಮೇ 15ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಎಲ್ಲೆಲ್ಲಿ ಮಳೆ?:
ಕರ್ನಾಟಕ ಮಾತ್ರವಲ್ಲದೆ, ಅಸ್ಸಾಂ ಮತ್ತು ಮೇಘಾಲಯ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಕೇರಳದಲ್ಲಿ ಇಂದು ಮಳೆಯಾಗಲಿದೆ. ಮಾಹೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಗುಡುಗು ಸಹಿತ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್​ನಲ್ಲಿ ಮಳೆ ಅಥವಾ ಹಿಮದ ಸಾಧ್ಯತೆಯಿದೆ. ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಹರಿಯಾಣ, ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನ ಕೆಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು 45Cಗಿಂತ ಹೆಚ್ಚಿರುವ ಸಾಧ್ಯತೆಯಿದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಒಡಿಶಾ, ಪಶ್ಚಿಮ ಬಂಗಾಳದ ಕೆಲವು ಸ್ಥಳಗಳಲ್ಲಿ 40Cಗಿಂತ ಹೆಚ್ಚು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಳೆಯಾಗಲಿದೆ. ರಾಜಸ್ಥಾನ, ಜಮ್ಮು ವಿಭಾಗ, ವಿದರ್ಭ, ದಕ್ಷಿಣ ಪಂಜಾಬ್ ಮತ್ತು ದಕ್ಷಿಣ ಹರಿಯಾಣ ಮತ್ತು ದೆಹಲಿಯಲ್ಲಿ ಶಾಖದ ಅಲೆ ಹೆಚ್ಚಾಗಲಿದೆ.

ಮಳೆಯ ಕುರಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ