Bangalore Rains: ತಮಿಳುನಾಡಿಗೆ ಎಂಟ್ರಿ ಕೊಟ್ಟಿರುವ ಮಾಂಡೌಸ್ ಚಂಡಮಾರುತದ (Cyclone Mandous) ಪ್ರಭಾವದಿಂದ ಕರ್ನಾಟಕದಲ್ಲಿ (Karnataka Rains) ಕಳೆದ ನಾಲ್ಕೈದು ದಿನಗಳಿಂದ ಅಕಾಲಿಕ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ (Bengaluru Weather) ಇಂದು ಕೂಡ ತುಂತುರು ಮಳೆ ಸುರಿಯುತ್ತಲೇ ಇದೆ. ಇಂದು ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಗುಡುಗು ಸಹಿತ ಮಳೆ ಮುಂದುವರಿಯಲಿದೆ. ಹವಾಮಾನ ಇಲಾಖೆಯ (IMD) ಮಾಹಿತಿ ಪ್ರಕಾರ, ಕರ್ನಾಟಕದ ಬೆಂಗಳೂರು, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಕೆಲವು ಭಾಗ ಹಾಗೂ ಕರಾವಳಿಯಲ್ಲಿ ಡಿ. 16ರವರೆಗೂ ಮಳೆಯಾಗಲಿದೆ.
ಇಂದು ಕರ್ನಾಟಕದ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆ ಸುರಿಯುವ ಲಕ್ಷಣಗಳು ಇವೆ. ಇದರಲ್ಲಿ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆ ತುಸು ಹೆಚ್ಚಿರಲಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಬೆಳಗ್ಗೆ ಮತ್ತು ರಾತ್ರಿ ಚಳಿ ಹಾಗೂ ಮಂಜಿನ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. 2 ದಿನಗಳಿಂದ ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಅಧಿಕ ಮಳೆ ದಾಖಲಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಡಿಸೆಂಬರ್ 16ರವರೆಗೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮಾಂಡೌಸ್ ಚಂಡಮಾರುತ ದುರ್ಬಲವಾಗಿದ್ದರೂ ಚಾಮರಾಜನಗರ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ IMD ಹಳದಿ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಯಾವುದೇ ಹಾನಿಯಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಹಾಗೇ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಹಾವೇರಿ, ಗದಗ ಮತ್ತು ಬಳ್ಳಾರಿಯಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇದರ ಜೊತೆಗೆ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೂ ಮಳೆಯಾಗಲಿದೆ.
ಇದನ್ನೂ ಓದಿ: Karnataka Rain: ಕರ್ನಾಟಕದ ಹಲವೆಡೆ ಇನ್ನೂ 4 ದಿನ ಗುಡುಗು ಸಹಿತ ಮಳೆ; ಹಳದಿ ಅಲರ್ಟ್ ಘೋಷಣೆ
ಮಂಗಳವಾರ ಬೆಳಗ್ಗೆ ಬೆಂಗಳೂರಿನಲ್ಲಿ 9.2 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಹವಾಮಾನ ಇಲಾಖೆಯು ಇಂದು ಹಗಲಿನಲ್ಲಿ ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆ ನೀಡಿದೆ. ಅಕ್ಟೋಬರ್ ಆರಂಭದಿಂದ ಬೆಂಗಳೂರಿನಲ್ಲಿ 457.2 ಮಿ.ಮೀ ಮಳೆಯಾಗಿದೆ. ಡಿಸೆಂಬರ್‌ನಲ್ಲಿ ನಗರದಲ್ಲಿ 80 ಮಿ.ಮೀ ಗಿಂತ ಹೆಚ್ಚು ಮಳೆ ದಾಖಲಾಗಿದ್ದು, ಡಿಸೆಂಬರ್ 11ರಂದು ಅತಿ ಹೆಚ್ಚು (41 ಮಿ.ಮೀ) ಮಳೆಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನಲ್ಲಿ ಕೂಡ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ ಮತ್ತು ತುಮಕೂರು, ಹಾಸನ ಮತ್ತು ದಾವಣಗೆರೆಯ ಕೆಲವು ಭಾಗಗಳಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಇಂದು ಯಾವ ರಾಜ್ಯಗಳಲ್ಲಿ ಮಳೆ?:
ಇಂದು ಮಲಬಾರ್ ಕರಾವಳಿ, ಲಕ್ಷದ್ವೀಪದಲ್ಲಿ ಅಲ್ಲಲ್ಲಿ ತುಂತುರು ಮಳೆ ಮಳೆಯಾಗುವ ಸಾಧ್ಯತೆ ಇದೆ. ನಿಕೋಬಾರ್ ದ್ವೀಪಗಳಲ್ಲಿ ಅಲ್ಲಲ್ಲಿ ತುಂತುರು ಮಳೆ ಮತ್ತು ಗುಡುಗು ಸಹಿತ ಭಾರೀ ಮಳೆ ಬೀಳುವ ಮುನ್ಸೂಚನೆ ಇದೆ. ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗಬಹುದು. ಅರುಣಾಚಲ ಪ್ರದೇಶದಲ್ಲಿ ಹಿಮಪಾತ ಅಥವಾ ಮಳೆ ಸುರಿಯುವ ಸಾಧ್ಯತೆಯಿದೆ. ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಇಂದು ಮುಂಜಾನೆ ಮಂಜು ಬೀಳುವ ಸಾಧ್ಯತೆಯಿದೆ.