ಬೆಂಗಳೂರು, ಅಕ್ಟೋಬರ್ 16: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆಗಳಲ್ಲಿ ಹಿಂಗಾರು ಮಳೆಯ ಅಬ್ಬರ ಜೋರಾಗಿದೆ. ವಾಯುಭಾರ ಕುಸಿತದ ಪರಿಣಾಮ ಮಳೆ ತೀವ್ರಗೊಂಡಿದ್ದು, ಅನೇಕ ಕಡೆಗಳಲ್ಲಿ ಅನಾಹುತ ಸೃಷ್ಟಿಸಿದೆ. ರಣಭೀಕರ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಯಲ್ಲಮ್ಮ ದೇವಸ್ಥಾನಕ್ಕೆ ನೀರು ನುಗ್ಗಿದೆ. ಗರ್ಭಗುಡಿಯಲ್ಲಿರುವ ದೇವರ ಮೂರ್ತಿ ಅರ್ಧ ಭಾಗ ಮುಳುಗಿ ಹೋಗಿದೆ. ನೀರಿನ ಮಧ್ಯೆದಲ್ಲೇ ನಿಂತ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.
ತುಮಕೂರಿನಲ್ಲೂ ಭಾರಿ ಮಳೆಯಾಗುತ್ತಿದೆ. ನಿರಂತ ಮಳೆಗೆ ತುಮಕೂರು ನಿವಾಸಿಗಳು ಹೈರಾಣಾಗಿದ್ದು, ಹಲವು ಮನೆಯ ಗೋಡೆಗಳು ಕುಸಿದಿವೆ. ಚಿಕ್ಕಮಗಳೂರಿನ ಕೊಪ್ಪ, ಶೃಂಗೇರಿ, ಕಳಸ, ಮೂಡಿಗೆರೆ, ಎನ್.ಆರ್ ಪುರದಲ್ಲಿ ಭಾರಿ ಮಳೆಯಾಗುತ್ತಿದೆದೆ. ಕೊಪ್ಪ ತಾಲೂಕಿನ ಗುಡ್ಡೇತೋಟ ಗ್ರಾಮದಲ್ಲಿ ಭಾರೀ ಮಳೆಗೆ ಭೂ ಕುಸಿತವಾಗಿದೆ. ಗ್ರಾಮದ ಲೀಲಾ ಎಂಬುವವರ ಮನೆಯ ಮುಭಾಗ ಭೂ ಕುಸಿತವಾಗಿದ್ದು, ಜನರನ್ನ ಸ್ಥಳಾಂತರ ಮಾಡುವಂತೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಂಡ ಸೂಚನೆ ನೀಡಿದೆ.
ಬೆಳೆದು ನಿಂತ ಬೆಳೆಗಳಿಗೂ ವರುಣಾರ್ಭಟ ಕಂಟಕವಾಗಿ ಪರಿಣಮಿಸಿದೆ. ಧಾರವಾಡದ ನವಲಗುಂದ ತಾಲೂಕಿ ಹನಸಿ ಗ್ರಾಮದಲ್ಲಿ ಉದ್ದಿನ ಬೆಳೆ ನಾಶವಾಗಿದೆ. ಕಟಾವು ಮಾಡಿ ರಾಶಿ ಮಾಡಿದ್ದ ಉದ್ದು ಮೊಳಕೆ ಹೊಡೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಹೊರವಲಯದಲ್ಲಿ ಮಳೆ ನೀರಲ್ಲಿ ಈರುಳ್ಳಿ ತೇಲಾಡುತ್ತಿದೆ. ಹೊಲದಲ್ಲಿ ತೇವಾಂಶ ಹೆಚ್ಚಾಗಿ ಈರುಳ್ಳಿ ಕೊಳೆತುಹೋಗಿದೆ.
ಗದಗ ಜಿಲ್ಲೆಯಲ್ಲೂ ಮಳೆ ಅಬ್ಬರ ಜೋರಾಗಿದೆ. ಮಲಪ್ರಭಾ, ಬೆಣ್ಣೆ ಹಳ್ಳದ ಆರ್ಭಟಕ್ಕೆ ಬೆಳೆ ಸರ್ವನಾಶವಾಗಿದೆ. ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಅವಾಂತರವಾಗಿದೆ. ವೈ.ಎಸ್.ಹಡಗಲಿ, ಹೊಳೆಆಲೂರ, ಕುರುಗೋವಿನಕೊಪ್ಪ, ಮೆಣಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮೆಕ್ಕೆಜೋಳ, ಹತ್ತಿ, ಕಬ್ಬು ಸೇರಿ ಹಲವು ಬೆಳೆ ನಾಶವಾಗಿದೆ.
ಕಳೆದ ವಾರ ಕೆಜಿಗೆ 80 ರೂಪಾಯಿವರೆಗೂ ಏರಿದ್ದ ಟೊಮೆಟೋ ದರ ಏಕಾಏಕಿ ಕುಸಿತವಾಗಿದೆ. ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯೊಟೋ ಕೇಳುವವರೇ ಇಲ್ಲದಂತಾಗಿದೆ. ಮಳೆಯಿಂದ ವಿವಿಧ ರಾಜ್ಯಗಳಿಗೆ ಟೊಮ್ಯಾಟೋ ರಫ್ತಾಗುತ್ತಿಲ್ಲ. ಹೆಚ್ಚಿನ ಟೊಮೆಟೋ ರಾಜ್ಯದಲ್ಲೇ ಉಳಿದಿರುವ ಕಾರಣ, ಬೆಲೆ ಕುಸಿತವಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಮಂಗಳೂರಿನ ಕಡಲ ತೀರದಲ್ಲಿ ಬಟ್ಟಪಾಡಿಯಲ್ಲಿ ಅಲೆಗಳ ಆರ್ಭಟ ಜೋರಾಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ರಾಜ್ಯದ 10 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮತ್ತೊಂದೆಡೆ, ಅರಬ್ಬೀ ಸುಮುದ್ರದಲ್ಲಿ ಕೂಡ ವಾಯುಭಾರ ಕುಸಿತವಾಗಿದ್ದು, ಇಂದು ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ 10 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದಿನಿಂದ ನಾಳೆಯವರೆಗೂ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದ 12 ಜಿಲ್ಲೆಗಳಲ್ಲಿ ಅ.20ರವರೆಗೆ ಭಾರಿ ಮಳೆ, ಆರೆಂಜ್ ಅಲರ್ಟ್
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಇರಲಿದೆ. ಇನ್ನು ಸಿಲಿಕಾನ್ ಸಿಟಿಯಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಇರಲಿದ್ದು, ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ