ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ಎರಡು ಎಮ್ಮೆಗಳು ಕೊಚ್ಚಿಹೋಗುತ್ತಿದ್ದ ಘಟನೆ ಸಂಭವಿಸಿದೆ. ಈ ಮಧ್ಯೆ, ಒಂದು ಎಮ್ಮೆಯನ್ನು ಯುವಕನೋರ್ವ ರಕ್ಷಣೆ ಮಾಡಿ ಮಾನವೀಯತೆ ತೋರಿದ್ದಾರೆ, ಸಾಹಸ ಮೆರೆದಿದ್ದಾರೆ. ಯುವಕ, ತನ್ನ ಪ್ರಾಣ ಲೆಕ್ಕಿಸದೆ ಎಮ್ಮೆಯನ್ನು ಕಾಪಾಡಿದ್ದಾರೆ. ಸತ್ತಿ ಗ್ರಾಮದ ಬಳಿ ಆನಂದ ಚಿನಗುಂಡಿ ಎಂಬ ಯುವಕ ಎಮ್ಮೆ ಕಾಪಾಡಿದ್ದಾರೆ.
ನದಿ ದಂಡೆ ಮೇಲೆ ಮೇಯುವಾಗ ಏಕಾಏಕಿ ನೀರು ಬಂದು ಎರಡು ಎಮ್ಮೆಗಳು ಕೊಚ್ಚಿಕೊಂಡು ಹೋಗುತ್ತಿದ್ದವು. ಸತ್ತಿ ಗ್ರಾಮದ ಮನೋಜ ಗಂಗಪ್ಪನವರ ಎಂಬುವವರಿಗೆ ಸೇರಿದ್ದ ಎಮ್ಮೆಗಳು ನೀರಿನ ರಭಸಕ್ಕೆ ಕೊಚ್ಚಿಹೋಗುತ್ತಿದ್ದವು. ಕೂಡಲೇ ತನ್ನ ಪ್ರಾಣದ ಹಂಗು ತೊರೆದು ನದಿಗೆ ಹಾರಿದ ಯುವಕ ಆನಂದ ಚಿನಗುಂಡಿ, ಒಂದು ಎಮ್ಮೆಯನ್ನು ರಕ್ಷಣೆ ಮಾಡಿದ್ದಾರೆ.
ಕೊಚ್ಚಿಕೊಂಡು ಹೋಗುತ್ತಿದ್ದ ಎರಡು ಎಮ್ಮೆ ಪೈಕಿ ಒಂದು ಎಮ್ಮೆಯನ್ನ ಎಳೆದು ದಡಕ್ಕೆ ತಂದು ಜೀವ ಉಳಿಸಿದ್ದಾರೆ. ಆನಂದ ಎಮ್ಮೆ ರಕ್ಷಣೆ ಮಾಡುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ತೇಲಿ ಹೋದ ಇನ್ನೊಂದು ಎಮ್ಮೆಗಾಗಿ ಯುವಕರು ಶೋಧ ನಡೆಸುತ್ತಿದ್ದಾರೆ.
ಕಲಬುರಗಿ: ನೆರೆಯ ನಡುವೆ ಅಂತ್ಯಸಂಸ್ಕಾರ
ತುಂಬಿ ಹರಿಯುವ ಹಳ್ಳ ದಾಟಿಕೊಂಡು ಹೋಗಿ ಶವಸಂಸ್ಕಾರ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಚಿಂಚೋಳಿ(H) ಗ್ರಾಮದಲ್ಲಿ ನಿನ್ನೆ (ಜುಲೈ 24) ನಡೆದಿದೆ. ಮುಲ್ಲಾಮಾರಿ ಹಳ್ಳ ದಾಟಿಕೊಂಡು ಜೀವದ ಹಂಗು ತೊರೆದು ಗ್ರಾಮಸ್ಥರು ಶವಸಂಸ್ಕಾರ ಮಾಡಿದ್ದಾರೆ.
ಬ್ರಿಜ್ ಕಾಮಗಾರಿ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಗ್ರಾಮಸ್ಥರು ಹಳ್ಳ ದಾಟಿಕೊಂಡು ಹೋಗಿದ್ದಾರೆ. ತುಂಬಿ ಹರಿಯುವ ಹಳ್ಳದಲ್ಲಿಯೇ ಗ್ರಾಮಸ್ಥರು ಶವ ಹೊತ್ತೊಯ್ದಿದ್ದಾರೆ. ಮಲ್ಲಿಕಾರ್ಜುನ ಹೂಗಾರ (50) ಅನ್ನುವ ವ್ಯಕ್ತಿಯ ಮೃತದೇಹವನ್ನು ಮಲ್ಲಿಕಾರ್ಜುನ ಅವರ ಕೃಷಿ ಜಮೀನಿಗೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ದಾವಣಗೆರೆ: ಶಾಶ್ವತ ಪರಿಹಾರಕ್ಕೆ ಮಹಿಳೆ ಮನವಿ
ಸಚಿವರು, ಶಾಸಕರು, ಅಧಿಕಾರಿಗಳು ಎಲ್ಲಾ ಬಂದು ಹೋದ್ರು, ಆದರೆ ಯಾರಿಂದಲೂ ನಮಗೆ ಯಾವುದೇ ಉಪಯೋಗವಾಗಿಲ್ಲ. ನಮ್ಮ ಸಮಸ್ಯೆ ಬಗೆಹರಿಸುವ ಕೆಲಸವನ್ನು ಯಾರೂ ಮಾಡಿಲ್ಲ. ಪ್ರವಾಹ ಬಂದರೆ ತುಂಗಭದ್ರಾ ನದಿ ನೀರು ಮನೆಗೆ ನುಗ್ಗುತ್ತೆ. ಮನೆಗೆ ನೀರು ನುಗ್ಗಿದಾಗ ಅಧಿಕಾರಿಗಳು ಬರುತ್ತಾರೆ. ಮನೆಯಿಂದ ಕಾಳಜಿ ಕೇಂದ್ರಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ. 2 ದಿನ ಕಾಳಜಿ ಕೇಂದ್ರದಲ್ಲಿಟ್ಟುಕೊಂಡು ವಾಪಸ್ ಕಳಿಸ್ತಾರೆ ಎಂದು ಟಿವಿ9 ಬಳಿ ನೆರೆ ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಮಳೆ ಕಡಿಮೆಯಾಗಿದೆ ಎಂದು ಹೇಳಿ ವಾಪಸ್ ಕಳಿಸ್ತಾರೆ. ನಾವು ಪುನಃ ಅದೇ ಮನೆಗೆ ಬಂದು ಸ್ವಚ್ಛ ಮಾಡಿಕೊಳ್ಳಬೇಕು. ನಾವು ಇರುವುದಕ್ಕೆ ಪರ್ಯಾಯ ವ್ಯವಸ್ಥೆಯನ್ನ ಕಲ್ಪಿಸಿಲ್ಲ. ಹರಿಹರದಲ್ಲಿ ಕೆಹೆಚ್‌ಬಿ ಕಾಲೋನಿಗೆ ಜಮೀನು ಸಿಗುತ್ತದೆ. ನಮ್ಮಂತಹ ಬಡವರಿಗೆ ನೀಡುವುದಕ್ಕೆ ಮನೆ ಸಿಗುವುದಿಲ್ಲ. ನಮ್ಮ ಸಮಸ್ಯೆಯನ್ನು ಎಲ್ಲರಿಗೂ ಹೇಳಿ ಸಾಕಾಗಿ ಹೋಗಿದೆ. ದಯವಿಟ್ಟು ನಮಗೆ ಶಾಶ್ವತ ಪರಿಹಾರವನ್ನು ಕಲ್ಪಿಸಿಕೊಡಿ ಎಂದು ದಾವಣಗೆರೆ ಜಿಲ್ಲೆಯ ಹರಿಹರದ ಗಂಗಾನಗರದಲ್ಲಿ ನೆರೆ ಸಂತ್ರಸ್ತ ಮಹಿಳೆ ಕೇಳಿಕೊಂಡಿದ್ದಾರೆ.
ಕಾರವಾರ: ನೆರೆ ಸಂತ್ರಸ್ತೆ ಅಳಲು
ಗಂಗಾವಳಿ ನದಿ ಪ್ರವಾಹದಿಂದ ಮನೆಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ಎಲ್ಲ ವಸ್ತುಗಳು ಕೊಚ್ಚಿಕೊಂಡು ಹೋಗಿವೆ. ನನ್ನ ಪತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈಗ ಮನೆ ಇಲ್ಲದೆ ದಿಕ್ಕು ತೋಚದ ಸ್ಥಿತಿಯಲ್ಲಿದ್ದೇನೆ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದಾರೆ, ತಿನ್ನಲು ಅನ್ನವೂ ಇಲ್ಲ. ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಪ್ರೇಮಾ ಗೌಡರ್ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Karnataka Rains: ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ; ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ, ಕಾಂಗ್ರೆಸ್ ನಾಯಕರ ಭೇಟಿ, ಪರಿಶೀಲನೆ
(Karnataka Rains Life amid Flood in many places of State Belagavi Kalaburgi Uttara Kannada)
Published On - 3:32 pm, Sun, 25 July 21