Uttara Kannada: ಮನೆ, ಗುಡ್ಡ ಕುಸಿತ, ರಸ್ತೆ, ಸೇತುವೆ ನೀರುಪಾಲು, ಸಂಪರ್ಕ ಕಡಿತ; ಉತ್ತರ ಕನ್ನಡವಲ್ಲ ಇದು ತತ್ತರ ಕನ್ನಡ ಎಂದ ಜನ
Karnataka Rains: ನನ್ನ ರಾಜಕೀಯ ಜೀವನದಲ್ಲಿ ಇಂತಹ ವಿಕೋಪ ನೋಡಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ ಭಾರಿ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಸೇರಿ ಮುಖ್ಯರಸ್ತೆಗಳೇ ಕುಸಿಯುತ್ತಿವೆ. ರಸ್ತೆಗಳನ್ನು ದುರಸ್ತಿ ಮಾಡುವುದಕ್ಕೆ ಸಾಧ್ಯವೇ ಇಲ್ಲದಂತಾಗಿದೆ ಎಂದು ಟಿವಿ9ಗೆ ಸಚಿವ ಶಿವರಾಂ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ.
ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕು ಕದ್ರಾ ಜಲಾಶಯ ವ್ಯಾಪ್ತಿಯ ಗಾಂಧಿನಗರದಲ್ಲಿ 18 ಮನೆಗಳು ನೆಲಸಮವಾಗಿದೆ. ಒಂದೇ ರಾತ್ರಿ ತುಂಬಿದ ನೀರಿನಿಂದ ಮನೆಗಳು ಕುಸಿದಿವೆ. ಮನೆಬಳಕೆ ವಸ್ತುಗಳ ಸಮೇತ ಮನೆಗಳು ನೆರೆಗೆ ಬಲಿಯಾಗಿದೆ. ಜಲಾಶಯ ವ್ಯಾಪ್ತಿಯಲ್ಲಿ ಸಾಲುಸಾಲು ಮನೆಗಳ ಕುಸಿತ ಸಂಭವಿಸಿದೆ. ಜಲಾಶಯದಿಂದ ಹೊರಬಿಡಲಾದ ನೀರಿನಿಂದ ಉಂಟಾದ ನೆರೆ ಇದಾಗಿದ್ದು, 2 ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟ ಪರಿಣಾಮ ಮನೆಗಳು ನೆಲಸಮ ಆಗಿದೆ. ಮನೆಯಲ್ಲಿದ್ದ ಅಕ್ಕಿ-ಬೇಳೆ ತೆಗೆಯಲು ಸಾಧ್ಯವಾಗದೇ ಓಡಿದ್ದ ನಿವಾಸಿಗಳು. ಬೆಳಗ್ಗೆ ನೀರು ಇಳಿದ ಹಿನ್ನಲೆ ಮನೆಗಳ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ. ಸಾಲ ಮಾಡಿ ಕಟ್ಟಿದ್ದ ಮನೆ ಕುಸಿದುಬಿದ್ದಿದ್ದನ್ನ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಏಕಾಏಕಿ ನೀರು ಬಿಡುಗಡೆ ಮಾಡಿದ್ದಕ್ಕೆ ಜಲಾಶಯದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಉಟ್ಟ ಬಟ್ಟೆ ಬಿಟ್ಟು ಎಲ್ಲವನ್ನೂ ಕಳೆದುಕೊಂಡ 20ಕ್ಕೂ ಅಧಿಕ ಕುಟುಂಬಗಳು ಕಂಗಾಲಾಗಿವೆ. 2019ರ ನೆರೆಯಲ್ಲೂ ಜಲಾಶಯದಿಂದ ಮುಳುಗಡೆಯಾಗಿದ್ದ ಮನೆಗಳು ಇವಾಗಿದ್ದು, ನೆರೆಯಿಂದ ಎರಡೆರಡು ಬಾರಿ ನಿರಾಶ್ರಿತರಾದ ನಿವಾಸಿಗಳು, ನೆರೆಯ ಅಬ್ಬರಕ್ಕೆ ಮತ್ತೆ ಬೀದಿಗೆ ಬಿದ್ದಂತಾಗಿದೆ.
ಇಂತಹ ವಿಕೋಪ ನೋಡಿಲ್ಲ: ಶಿವರಾಮ್ ಹೆಬ್ಬಾರ್ ನನ್ನ ರಾಜಕೀಯ ಜೀವನದಲ್ಲಿ ಇಂತಹ ವಿಕೋಪ ನೋಡಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ ಭಾರಿ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಸೇರಿ ಮುಖ್ಯರಸ್ತೆಗಳೇ ಕುಸಿಯುತ್ತಿವೆ. ರಸ್ತೆಗಳನ್ನು ದುರಸ್ತಿ ಮಾಡುವುದಕ್ಕೆ ಸಾಧ್ಯವೇ ಇಲ್ಲದಂತಾಗಿದೆ ಎಂದು ಟಿವಿ9ಗೆ ಸಚಿವ ಶಿವರಾಂ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ.
ಬೇರೆ ಕಡೆ ಹೊಸ ರಸ್ತೆಯನ್ನು ಮಾಡಬೇಕಾದ ಸ್ಥಿತಿ ಇದೆ. ಇದಕ್ಕೆ ತಕ್ಷಣಕ್ಕೆ ₹50ರಿಂದ 60 ಕೋಟಿ ಹಣ ಬೇಕಾಗುತ್ತೆ. ಸದ್ಯ ಪ್ರವಾಹದಿಂದ ಮೂವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗಿದೆ. ಬೆಳಸೆಯಲ್ಲಿ ಇಬ್ಬರು, ಯಲ್ಲಾಪುರದಲ್ಲಿ ಒಬ್ಬರು ನಾಪತ್ತೆ ಆಗಿದ್ದಾರೆ ಎಂದು ಶಿವರಾಂ ಹೆಬ್ಬಾರ್ ಮಾಹಿತಿ ನೀಡಿದ್ದಾರೆ. ಇದೊಂದು ಅತ್ಯಂತ ದೊಡ್ಡ ಪ್ರವಾಹ. ಜನ, ಜಾನುವಾರು, ಕೃಷಿ ಹಾನಿಯಾಗಿದೆ ಎಂದು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಕಳಚೆ, ತಳಕೆಬೈಲ್ ಪ್ರದೇಶಕ್ಕೆ ಸಚಿವ ಹೆಬ್ಬಾರ್ ಭೇಟಿ ನೀಡಿದ್ದಾರೆ. ಕಳಚೆ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತವಾಗಿದೆ. ಪರ್ಯಾಯ ರಸ್ತೆ ಕಾಮಗಾರಿಗೆ ಸಚಿವರು ಸೂಚನೆ ನೀಡಿದ್ದಾರೆ. ಲೋಕಪಯೋಗಿ, ಪಂಚಾಯತ್ ರಾಜ್, ಕಂದಾಯ ಇಲಾಖೆ ಅಧಿಕಾರಿಗಳಿಗೆ ರಸ್ತೆ ಕಾಮಗಾರಿಗೆ ಸೂಚನೆ ಕೊಟ್ಟಿದ್ದಾರೆ. ಇದೇ ವೇಳೆ, ಮಳೆಯಿಂದ ಮೃತಪಟ್ಟ ದೇವಕಿ ನಾರಾಯಣ್ ಗಾಂವ್ಕರ್ ಕುಟುಂಬಕ್ಕೆ ಸರ್ಕಾರದ ಪರವಾಗಿ 5 ಲಕ್ಷ ಪರಿಹಾರ ವಿತರಣೆ ಮಾಡಿದ್ದಾರೆ.
ಉತ್ತರ ಕನ್ನಡಕ್ಕೆ ನಾಳೆ ಮುಖ್ಯಮಂತ್ರಿ ಭೇಟಿ ಇರುವುದಿಲ್ಲ ಉತ್ತರ ಕನ್ನಡಕ್ಕೆ ನಾಳೆ ಸಿಎಂ ವಿಸಿಟ್ ಇರೋದಿಲ್ಲ. ಇದು ಕರಾವಳಿ ಪ್ರದೇಶ ಆಗಿರೋದ್ರಿಂದ ಹವಮಾನ ವೈಪರೀತ್ಯಗಳು ಇರುತ್ತೆ. ನಿಸರ್ಗ ಅವಕಾಶ ಮಾಡಿಕೊಡತ್ತಾ ನೋಡಬೇಕು. ಮೂರ್ನಾಲ್ಕು ದಿನದಲ್ಲಿ ಮುಖ್ಯಮಂತ್ರಿಗಳನ್ನು ಕರೆದುಕೊಂಡ ವೈಮಾನಿಕ ಸಮೀಕ್ಷೆ ಮಾಡುತ್ತೇನೆ. ಈ ಬಗ್ಗೆ ಸಿಎಂ ಮತ್ತು ಸಂಬಂಧಪಟ್ಟರ ಜೊತೆ ಮಾತನಾಡುತ್ತೇನೆ ಎಂದೂ ಟಿವಿ9 ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ.
ಯಲ್ಲಾಪುರ ಅರಬೈಲ್ ಘಾಟ್ ಗುಡ್ಡ ಕುಸಿತವನ್ನು ಶಿವರಾಮ್ ಹೆಬ್ಬಾರ್ ವೀಕ್ಷಣೆ ಮಾಡಿದ್ದಾರೆ. ನೀರು ನುಗ್ಗಿರುವ ಮನೆಗಳಿಗೆ ಅಧಿಕಾರಿಗಳ ಜೊತೆ ತೆರಳಿ ವೀಕ್ಷಣೆ ಮಾಡಿದ್ದಾರೆ. ಕೂಡಲೆ ಪರಿಹಾರ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಗುಳ್ಳಾಪುರ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಕೇಂದ್ರ ಆಹಾರ ಗುಣಮಟ್ಟ ಪರಿಶೀಲನೆ, ಕಾಳಜಿ ಕೇಂದ್ರದಲ್ಲಿರುವವರ ಆರೈಕೆಗೆ ವಿಶೇಷ ತಂಡ ನೇಮಕ ಮಾಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳ ತಂಡ ನೇಮಕ ಮಾಡಲಾಗಿದೆ.
ಗುಳ್ಳಾಪುರ ಸೇತುವೆ ಕುಸಿತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿದ್ದಾರೆ. ಸೇತುವೆ ಕೊಚ್ಚಿಕೊಂಡು ಹೋಗಿ ಬೃಹತ್ ಅನಾಹುತ ಉಂಟಾಗಿತ್ತು. ಇದೀಗ ಅಲ್ಲಿಗೂ ಶಿವರಾಮ್ ಹೆಬ್ಬಾರ್ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಗುಳ್ಳಾಪುರ-ಹಳವಳ್ಳಿ ಸಂಪರ್ಕ ಸೇತುವೆ ನೀರುಪಾಲು ಗುಳ್ಳಾಪುರ-ಹಳವಳ್ಳಿ ಸಂಪರ್ಕ ಸೇತುವೆ ಕೊಚ್ಚಿಹೋದ ಹಿನ್ನೆಲೆ, ಸೇತುವೆ ಕೊಚ್ಚಿಹೋಗಿ 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ ಆಗಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹಳವಳ್ಳಿ, ಹೆಗ್ಗಾರ, ಕಲ್ಲೇಶ್ವರ, ಶೇವ್ಕಾರ, ಕೊನಾಳ ಸೇರಿ 10ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ಸೇತುವೆ ಕೊಚ್ಚಿಹೋಗಿದೆ. 10ಕ್ಕೂ ಹೆಚ್ಚು ಗ್ರಾಮಗಳ ಸ್ಥಿತಿ ಈಗ ಅಕ್ಷರಶಃ ನಡುಗಡ್ಡೆಯಂತಗಿದೆ.
2019ರ ಪ್ರವಾಹದಲ್ಲಿ ಗ್ರಾಮಗಳ ಸಂಪರ್ಕಕ್ಕೆ ನಿರ್ಮಿಸಿದ್ದ 2 ತೂಗುಸೇತುವೆ ಕೊಚ್ಚಿಹೋಗಿದ್ದವು. ಇದೀಗ ಇದ್ದ ಒಂದು ಸಂಪರ್ಕ ಸೇತುವೆಯೂ ನೀರುಪಾಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಆನ್ಲೆ ಬಳಿ ಪ್ರವಾಹಕ್ಕೆ ಮನೆ ಕುಸಿದುಬಿದ್ದಿದೆ. ಮನೆ ಕುಸಿದುಬಿದ್ದ ಹಿನ್ನೆಲೆ ಮನೆಯ 6 ಜನರು ಬೀದಿಗೆ ಬಿದ್ದಂತಾಗಿದೆ. ಇದ್ದ ಮನೆ ಕಳೆದುಕೊಂಡು 6 ಜನ ನಿರಾಶ್ರಿತರಾಗಿದ್ದಾರೆ.
ಅಘನಾಶಿನಿ ನದಿ ರಭಸ, ಜನಜೀವನದ ಬಗ್ಗೆ ಸ್ಥಳೀಯರ ಮಾಹಿತಿ
40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ತಾಡುಕೊಪ್ಪ ಪ್ರದೇಶ ಸಂಪೂರ್ಣ ಜಲಾವೃತ್ತವಾಗಿತ್ತು. ಈ ಹಿನ್ನೆಲೆಯಲ್ಲಿ, ಸುಮಾರು 40 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಸದ್ಯ ಕೊಂಚ ನೀರು ತಗ್ಗಿದ ಹಿನ್ನಲೆಯಲ್ಲಿ ಮನೆಗಳಿಗೆ ಜನ ಮರಳುತ್ತಿದ್ದಾರೆ. ಮುಳುಗಡೆ ಹೊಂದಿ ಕೆಸರು ಗದ್ದೆಯಾಗಿದ್ದ ಮನೆಗಳನ್ನು ಸರಿ ಮಾಡಲು ಹರಸಾಹಸ ಪಡುತ್ತಿದ್ದಾರೆ. ಅಘನಾಶಿನಿ ನದಿ ಪ್ರವಾಹ, ಮನೆಯಲ್ಲಿರೋ ಎಲ್ಲಾ ದವಸ ಧಾನ್ಯ, ಸಾಮಗ್ರಿ ನೀರು ಪಾಲು ಮಾಡಿದೆ. ನಮಗೆ ಸರ್ಕಾರ ಧಾನ್ಯ ನೀಡಿದ್ರೆ ನಮ್ಮ ಬದುಕು ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಶಿವಮೊಗ್ಗ: ತುಂಗಾ ನದಿ ನೀರಿನಿಂದ ನೆರೆ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿರವಾಳ ಗ್ರಾಮದಲ್ಲಿ ನಾಗರಾಜ್ ಎಂಬುವರ ಮನೆ ಕುಸಿತಗೊಂಡಿದೆ. ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಮನೆಯ ವಸ್ತುಗಳನ್ನು ಹೊರ ತೆಗೆದಿದ್ದಾರೆ.
ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಡ್ಯಾಂ ಭರ್ತಿಯಾಗಿದೆ. 21 ಗೇಟ್ ಮೂಲಕ 87 ಸಾವಿರ ಕ್ಯೂಸೆಕ್ ನೀರು ತುಂಗಾ ನದಿಗೆ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ನೆರೆ ಸೃಷ್ಟಿ ಮಾಡಿರುವ ತುಂಗಾ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿದೆ.
ಇದರಿಂದ ನಗರದಲ್ಲಿ ತುಂಗಾ ನದಿ ನೀರಿನಿಂದ ನೆರೆ ಉಂಟಾಗಿದೆ. ಜಲಾವೃತ ಬಡಾವಣೆಗಳಿಗೆ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿದ್ದಾರೆ. ಕುಂಬಾರಗುಂಡಿ, ಸೀಗೆಹಟ್ಟಿ, ಬಿ.ಬಿ. ಸ್ಟ್ರೀಟ್, ಶಾಂತಮ್ಮ ಲೌಔಟ್ ಜಲಾವೃತಗೊಂಡ ಬಡಾವಣೆಗಳಾಗಿವೆ. ಈಶ್ವರಪ್ಪ ಭೇಟಿ ಹಾಗೂ ಪರಿಶೀಲನೆ ವೇಳೆ ಸಚಿವರಿಗೆ ಶಾಂತಮ್ಮ ಎಂಬ ಲೇಔಟ್ನ ನಿವಾಸಿ, ಸಂತ್ರಸ್ತ ಮಹಿಳೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಸಚಿವರು ಎಷ್ಟೇ ಸಮಜಾಯಿಷಿ ನೀಡಿದರೂ ಕೇಳದ ಮಹಿಳೆ ಬೇಡಿಕೆ ಇಟ್ಟಿದ್ದಾರೆ. ಸಚಿವರು ಮಂಗಳವಾರ ನೆರೆ ಸಭೆ ಮಾಡಿ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದ್ದಾರೆ.
ಮಂಗಳೂರು: ನದಿ ನೀರು ಪ್ರಮಾಣದಲ್ಲಿ ಏರಿಕೆ ಇತ್ತ ಮಂಗಳೂರಿನಲ್ಲಿ ಮಳೆ ಹೆಚ್ಚಾದ ಬೆನ್ನಲ್ಲೇ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ನೀರಿನ ಪ್ರಮಾಣ ಏರಿಕೆಯಾಗಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ಮಳೆಯಾಗುತ್ತಿರುವ ಪರಿಣಾಮ ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರು ಮಟ್ಟ ಏರಿಕೆಯಾಗಿದೆ. ಸದ್ಯ 6.5 ಅಡಿಯಲ್ಲಿ ಬಂಟ್ವಾಳದಲ್ಲಿ ನೇತ್ರಾವತಿ ನದಿ ಹರಿಯುತ್ತಿದೆ. ಅಪಾಯದ ಮಟ್ಟ 8.5 ಅಡಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರ್ತಿರೋ ನೀರು ಆತಂಕ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮತ್ತೆಯ ಬಿರುಸು ಪಡೆದುಕೊಂಡ ಮಳೆರಾಯ, ಜಿಲ್ಲೆಯ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗಗಳಲ್ಲಿ ಜೋರಾಗಿ ಸುರಿದಿದ್ದಾನೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಅತಿವೃಷ್ಟಿ ಹಿನ್ನೆಲೆ; ತಕ್ಷಣಕ್ಕೆ ಬೇಕಾದ ಪರಿಹಾರವನ್ನು ಕೇಂದ್ರ ಸರ್ಕಾರ ಕೊಡಲಿದೆ: ಪ್ರಲ್ಹಾದ್ ಜೋಶಿ
Karnataka Rain: ಉತ್ತರ ಕನ್ನಡದಲ್ಲಿ ಕುಂಭದ್ರೋಣ ಮಳೆ: ಗಂಗಾವಳಿ ನದಿ ತಟದಲ್ಲಿ ಪ್ರವಾಹ ಭೀತಿ; ಅಲ್ಲಲ್ಲಿ ಭೂಕುಸಿತ
(Karwar Yellapura Shivamogga Malenadu region too faces Heavy Rainfall Floods Shivaram Hebbar Eshwarappa visits)
Published On - 6:58 pm, Sat, 24 July 21