Karnataka Rain: ಉತ್ತರ ಕನ್ನಡದಲ್ಲಿ ಕುಂಭದ್ರೋಣ ಮಳೆ: ಗಂಗಾವಳಿ ನದಿ ತಟದಲ್ಲಿ ಪ್ರವಾಹ ಭೀತಿ; ಅಲ್ಲಲ್ಲಿ ಭೂಕುಸಿತ
ಕಾರ್ಮಿಕ ಸಚಿವ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿವರಾಮ ಹೆಬ್ಬಾರ್ ಸ್ವಗ್ರಾಮ ಅರಬೈಲ್ ಸಮೀಪದ ಡಬ್ಗುಳಿಯಲ್ಲಿ ಭೂಕುಸಿತವಾಗಿ ಸಂಪರ್ಕ ಕಡಿತಗೊಂಡಿದೆ. ಕಳೆದ ವರ್ಷವೂ ಗಂಗಾವಳಿ ನದಿ ಪ್ರವಾಹದಿಂದ ಈ ಭಾಗದಲ್ಲಿ ಜನಜೀವನ ಅಲ್ಲೋಲ ಕಲ್ಲೋಲವಾಗಿತ್ತು.
ಕಾರವಾರ: ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿದೆ. ವಿವಿಧ ನದಿಗಳು ತುಂಬಿ ತುಳುಕುತ್ತಿವೆ. (Karnataka Rain) ಉತ್ತರ ಕನ್ನಡದ ಗಂಗಾವಳಿ ನದಿ (Gangavali River) ಪಾತ್ರದ ಜನತೆಗೆ ಈ ವರ್ಷವೂ ಪ್ರವಾಹ ಭೀತಿ ಎದುರಾಗಿದೆ. ಈ ಪ್ರದೇಶದಲ್ಲಿ ಭೂಕುಸಿತದ ಭೀತಿಯೂ ಇದ್ದು ಹುಬ್ಬಳ್ಳಿಯಿಂದ ಅಂಕೋಲಾಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 67ರ ಅರಬೈಲ್ ಘಟ್ಟದಲ್ಲಿ (Arabail Ghat) ಭೂಕುಸಿತ ಸಂಭವಿಸಿ ಸಂಪರ್ಕ ಕಡಿತಗೊಂಡಿತ್ತು. ಸದ್ಯ ಮಣ್ಣು ತೆರವುಗೊಳಿಸಿ ಸಂಪರ್ಕಕ್ಕೆ ಅನುವುಗೊಳಿಸಲಾಗಿದ್ದು, ಇದೇ ರೀತಿ ಮಳೆ ಸುರಿದರೆ ಮತ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ಗಂಗಾವಳಿ ನದಿ ತೀರದ ಹೆಗ್ಗಾರ ಸೇರಿದಂತೆ, ರಾಮನಗುಳಿ ಸೇರಿದಂತೆ ಅಂಕೋಲಾ ನಾಗರಿಕರಿಗೆ ಪ್ರವಾಹ ಭೀತಿ ಎದುರಾಗಿದ್ದು, ಗ್ರಾಮಸ್ಥರು ಎತ್ತರದ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಕಾರ್ಮಿಕ ಸಚಿವ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿವರಾಮ ಹೆಬ್ಬಾರ್ ಸ್ವಗ್ರಾಮ ಅರಬೈಲ್ ಸಮೀಪದ ಡಬ್ಗುಳಿಯಲ್ಲಿ ಭೂಕುಸಿತವಾಗಿ ಸಂಪರ್ಕ ಕಡಿತಗೊಂಡಿದೆ. ಕಳೆದ ವರ್ಷವೂ ಗಂಗಾವಳಿ ನದಿ ಪ್ರವಾಹದಿಂದ ಈ ಭಾಗದಲ್ಲಿ ಜನಜೀವನ ಅಲ್ಲೋಲ ಕಲ್ಲೋಲವಾಗಿತ್ತು.
ಜತೆಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಶಿರಸಿ ಸಿದ್ದಾಪುರ ನಡುವಿನ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.
ಮೈಸೂರು ವರದಿ ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಜಲಾಶಯದ ಒಳ, ಹೊರಹರಿವು ಹೆಚ್ಚಳವಾಗುವ ಸಾಧ್ಯತೆಯಿದ್ದು, ಯಾವುದೇ ಕ್ಷಣದಲ್ಲಾದ್ರೂ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಭಾರಿ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡು ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿದೆ. ಕುದುರೆಮುಖ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಹಾಸನ ವರದಿ ಹಾಸನ ಜಿಲ್ಲೆ ದೋಣೊಗಲ್ ಬಳಿ ಹೆದ್ದಾರಿಯಲ್ಲಿ ಕುಸಿತವಾದದ್ದನ್ನು ಮರಳು ಚೀಲ ಹಾಕಿ ಮತ್ತೆ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮಾಡಲಾಗಿದೆ. ಮತ್ತೊಂದು ಬದಿಯ ಗುಂಡಿ ಮುಚ್ಚಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. 2 ದಿನ ರಸ್ತೆ ಸಂಪೂರ್ಣ ಬಂದ್ ಮಾಡಿರೋ ಅಧಿಕಾರಿಗಳು ಬಿಸಿಲೆ, ಚಾರ್ಮಾಡಿಘಾಟ್ ಮೂಲಕ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ.‘
ಇದನ್ನೂ ಓದಿ:
Shiradi Ghat: ಭೂಕುಸಿತವಾಗಿ ಮಂಗಳೂರು- ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟ್ ಬಂದ್; ಬದಲಿ ಮಾರ್ಗ ಇಲ್ಲಿದೆ
ಮಹಾರಾಷ್ಟ್ರ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ; ಕೃಷ್ಣಾ ನದಿ ನೀರಿನ ಹರಿವಿನಲ್ಲಿ ಭಾರಿ ಪ್ರಮಾಣದ ಏರಿಕೆ
(Karnataka Rain Uttara Kannada Floods in Gangavali river Peoples life is chaotic)
Published On - 9:48 pm, Thu, 22 July 21