Shiradi Ghat: ಭೂಕುಸಿತವಾಗಿ ಮಂಗಳೂರು- ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟ್ ಬಂದ್; ಬದಲಿ ಮಾರ್ಗ ಇಲ್ಲಿದೆ
Karnataka Rain: ಹಾಸನ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಸಕಲೇಶಪುರ ಬಳಿಯ ದೋಣಿಗಲ್ ಎಂಬಲ್ಲಿ ಭೂಕುಸಿತವಾಗಿದೆ. ಇದರಿಂದ ಮಂಗಳೂರು- ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟ್ ಬಂದ್ ಆಗಿದೆ.
ಮಂಗಳೂರು: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಇನ್ನೂ 2-3 ದಿನಗಳ ಕಾಲ ಕರ್ನಾಟಕದಲ್ಲಿ ಮಳೆ ಮುಂದುವರೆಯಲಿದೆ. ಹಾಸನ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಸಕಲೇಶಪುರ ಬಳಿಯ ದೋಣಿಗಲ್ ಎಂಬಲ್ಲಿ ಭೂಕುಸಿತವಾಗಿದೆ. ಇದರಿಂದ ಮಂಗಳೂರು- ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟ್ ಬಂದ್ ಆಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್ ಬಳಿ ರಸ್ತೆಯ ಒಂದು ಕಡೆ ಕುಸಿದುಹೋಗಿರುವುದರಿಂದ ಶಿರಾಡಿ ಘಾಟ್ನಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಬೆಂಗಳೂರು, ಹಾಸನ ಮಾರ್ಗದಿಂದ ಮಂಗಳೂರು ಅಥವಾ ದಕ್ಷಿಣ ಕನ್ನಡಕ್ಕೆ ತೆರಳುವವರು ಶಿರಾಡಿ ಘಾಟ್ ಬದಲಾಗಿ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ನಲ್ಲಿ ತೆರಳಲು ಸೂಚಿಸಲಾಗಿದೆ. ಬೆಂಗಳೂರಿನಿಂದ ಮೂಡಿಗೆರೆ- ಕೊಟ್ಟಿಗೆಹಾರ ಮಾರ್ಗದ ಮೂಲಕ ಚಾರ್ಮಾಡಿ ಘಾಟ್ನಲ್ಲಿ ಮಂಗಳೂರಿಗೆ ತೆರಳಬಹುದು.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ, ಮಂಗಳೂರು ಮುಂತಾದ ಕಡೆಗಳಿಗೆ ತೆರಳುವವರು ಶಿರಾಡಿ ಘಾಟ್ ಬದಲಾಗಿ ಚಾರ್ಮಾಡಿ ಘಾಟ್ ಅಥವಾ ಮಡಿಕೇರಿ ಮಾರ್ಗದ ಸಂಪಾಜೆ ಘಾಟ್ ಮೂಲಕ ಸಂಚರಿಸಬಹುದು. ಶಿರಾಡಿ ಘಾಟಿಯ ನಾಲ್ಕು ಕಡೆಗಳಲ್ಲಿ ಭೂಕುಸಿತ ಆಗಿರುವುದರಿಂದ ಇನ್ನೂ ಕೆಲವು ದಿನಗೂ ಆಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಚಿಕ್ಕಮಗಳೂರಿನಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಪ್ರತಿವರ್ಷ ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತದೆ. ಈ ಬಾರಿ ಚಾರ್ಮಾಡಿ ಘಾಟ್ನಲ್ಲಿ ರಸ್ತೆಗಳನ್ನು ರಿಪೇರಿ ಮಾಡಲಾಗಿದ್ದು, ವಾಹನ ಸಂಚಾರಕ್ಕೇನೂ ತೊಂದರೆಯಿಲ್ಲ. ಆದರೆ, ಮಳೆಯಿಂದ ಎಲ್ಲಾದರೂ ಗುಡ್ಡ ಕುಸಿದರೆ ಈ ಮಾರ್ಗವೂ ಬಂದ್ ಆಗುವ ಭೀತಿ ಪ್ರಯಾಣಿಕರದ್ದು. ಹಾಗೇನಾದರೂ ಬೆಂಗಳೂರಿನಿಂದ ಕರಾವಳಿಗೆ ಪ್ರಯಾಣ ಮಾಡುವವರು ಮಡಿಕೇರಿ ಘಾಟಿ ಮತ್ತು ಕುದುರೆಮುಖ ಘಾಟಿಯನ್ನು ಮಾತ್ರ ಅವಲಂಬಿಸಬೇಕಾಗುತ್ತದೆ.
ಚಾರ್ಮಾಡಿ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲದ ಕಾರಣ ಲಾರಿ ಮುಂತಾದ ಘನ ವಾಹನಗಳು ಮೈಸೂರು- ಮಡಿಕೇರಿ ಮಾರ್ಗದ ಘಾಟಿಯಲ್ಲಿ ಸಂಚರಿಸಲು ಸೂಚಿಸಲಾಗಿದೆ. ಶಿರಾಡಿ ಘಾಟ್ ಬಳಿ ಕುಸಿದಿರುವ ರಸ್ತೆಯ ಕಾಮಗಾರಿ ಮುಗಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ: Karnataka Weather: ರಾಜ್ಯದಲ್ಲಿ ಇಂದು-ನಾಳೆ ವಿಪರೀತ ಮಳೆ; ಕರಾವಳಿ, ಮಲೆನಾಡು ಭಾಗಗಳಲ್ಲಿ ಆರೆಂಜ್ ಅಲರ್ಟ್
ಭಾರೀ ಮಳೆ ಹಿನ್ನೆಲೆ ಶಿರಾಡಿ ಘಾಟ್ನಲ್ಲಿ ಧುಮ್ಮಿಕ್ಕುತ್ತಿವೆ ಹಳ್ಳ, ತೊರೆಗಳು
(Mangalore- Bengaluru Route Passengers should Go by Charmadi Ghat as Shiradi Ghat Closed due to Landslide)