ಕರ್ನಾಟಕದ ಮಲೆನಾಡು ಭಾಗ ಮತ್ತು ಕೇರಳದಲ್ಲಿ (Kerala) ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ನದಿಗಳು ಉಕ್ಕೇರಿ ಹರಿಯುತ್ತಿವೆ. ಜಲಾಶಯಗಳಿಗೆ ಭಾರಿ ಪ್ರಮಾಣದ ಹರಿದುಬರುತ್ತಿದೆ. ನಿರಂತರ ಮಳೆಯಿಂದಾಗಿ ಶಿರಾಡಿ, ಚಿಕ್ಕಮಗಳೂರು, ಚಾರ್ಮಾಡಿ, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ ಸೇರಿ ವಿವಿಧೆಡೆ 10ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ ಕೃಷ್ಣಾ ಹಾಗೂ ಅದರ ಹಲವು ಉಪನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಗೋಕಾಕ್‌ನಲ್ಲಿ 800 ಮನೆಗಳು ಮುಳುಗಡೆಯಾಗಿವೆ. ಬಾಗಲಕೋಟೆ ಜಿಲ್ಲೆಯಲ್ಲೂ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಇದರಿಂದ ಜನರು ಹೈರಾಣಾಗಿದ್ದಾರೆ. ಆರೈಕೆ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ರಾಜ್ಯ ಮತ್ತು ನೆರೆ ರಾಜ್ಯಗಳಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಇದರಿಂದ ಜಲ ಕಂಟಕ ಎದುರಾಗಿದೆ. ಮಳೆಯಿಂದ ರಾಜ್ಯದಲ್ಲಿ ಸಂಭವಿಸುವ ಘಟನೆಗಳ ಕುರಿತಾದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಸಂಜೆ ಸುರಿದ ಮಳೆಗೆ ಮರಗಳು ಧರೆಗುರುಳಿವೆ. ಪುಲಕೇಶಿನಗರ, ಇಂದಿರಾನಗರ ಸೇರಿ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಪುಲಕೇಶಿನಗರದ M.M.ರಸ್ತೆಯಲ್ಲಿ ಕಾರಿನ ಮೇಲೆ ಮರ ಬಿದ್ದಿದೆ.
ಹಾಸನ: ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತ ಹಿನ್ನೆಲೆ ಶಿರಾಡಿಘಾಟ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಬದಲಿ ಮಾರ್ಗದಲ್ಲಿ ಸಂಚಾರ ಮಾಡುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆದೇಶ ಹೊರಡಿಸಿದ್ದಾರೆ. ಮಳೆ ಸುರಿಯುತ್ತಿರುವುದರಿಂದ ಮತ್ತೆ ಭೂಕುಸಿತ ಆತಂಕ ಎದುರಾಗಿದೆ.
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆ ಅಪಾಯದ ಮಟ್ಟ ಮೀರಿ ಕಾವೇರಿ ನದಿ ಹರಿಯುತ್ತಿದೆ. ಕಾವೇರಿ ನದಿಗೆ 1.72 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಗಂಜಾಂ ಬಳಿಯ ನಿಮಿಷಾಂಭ ದೇವಸ್ಥಾನ ಜಲಾವೃತವಾಗಿದೆ.
ಬೆಂಗಳೂರು: ಸಂಜೆ ಸುರಿದ ಮಳೆಗೆ ಬೃಹತ್ ಮರ ಧರೆಗುರುಳಿದ್ದು, ಎರಡು ಕಾರು, ಒಂದು ಆಟೋ ಜಖಂಗೊಂಡಿರುವಂತಹ ಘಟನೆ ಪೊಲೀಸ್ ಕಮೀಷನರ್ ಕಚೇರಿ ಹಿಂಭಾಗದಲ್ಲಿ ನಡೆದಿದೆ. ರಸ್ತೆ ಬದಿ ಪಾರ್ಕ್ ಮಾಡಿದ ಎರಡು ಕಾರು ಹಾಗೂ ಚಲಿಸುತ್ತಿದ್ದ ಆಟೋ ಜಖಂ ಆಗಿದೆ. ಸ್ಥಳಕ್ಕೆ ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು, ಸಿಬ್ಬಂದಿಗಳು ಮರ ತೆರವುಗೊಳಿಸುತ್ತಿದ್ದಾರೆ.
ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲುನಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಕೆಲವು ವಾಹನಗಳು ಸಿಲುಕಿವೆ. ಗುಡ್ಡ ಕುಸಿತದ ರಭಸಕ್ಕೆ ಕಂಟೇನರ್ ಪಲ್ಟಿಯಾಗಿದ್ದು, ಮತ್ತೊಂದು ಬೃಹತ್ ಕಂಟೇನರ್ ಮಣ್ಣಿನಡಿ ಸಿಲುಕಿದೆ. ಪಲ್ಟಿಯಾಗಿರುವ ಕಂಟೇನರ್‌ನಲ್ಲಿ ಚಾಲಕ ಸಿಲುಕಿದ್ದಾನೆ. ಸಂಜೆ ಮಳೆ ಹೆಚ್ಚಾಗಿರುವುದರಿಂದ ಗುಡ್ಡ ಕುಸಿದಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ವಾಹನ ಸಂಚಾರ ಬಂದ್ ಆಗಿದೆ.
ಹಾಸನ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದ ಪರಿಣಾಮ ಭಾರಿ ಮಳೆಗೆ ಶಿರಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ನಲ್ಲಿ ಘಟನೆ ನಡೆದಿದ್ದು, ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ.
ಸಂಜೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ವರುಣನ ಅಬ್ಬರಿಸಿದ್ದು, ಹಲವೆಡೆ ಮಳೆ ಆರಂಭವಾಗಿದೆ. ವರುಣನ ಎಂಟ್ರಿಗೆ ವಾಹನ ಸವಾರರು ಪರದಾಡಿದ್ದು, ಕೆಲದಿನಗಳ ಬ್ರೇಕ್ ಬಳಿಕ ಮಳೆರಾಯ ಮತ್ತೆ ಅಬ್ಬರಿಸುತ್ತಿದ್ದಾನೆ.
ಸಂಜೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಆರಂಭವಾಗಿದೆ. ಶಾಂತಿನಗರ, ವಿಲ್ಸಾನ್ ಗಾರ್ಡಾನ್, ಡಬಲ್ ರೋಡ್, ರಿಚ್ಮಂಡ್ ಸರ್ಕಲ್, ವಿಧಾನಸೌಧ, ಚಾಲುಕ್ಯ ಸರ್ಕಲ್, ಮೆಜೆಸ್ಟಿಕ್, ಹೈಗ್ರೌಂಡ್ಸ್
ವಿಜಯನಗರ, ರಾಜಾಜಿನಗರ, ಮೈಸೂರು ರಸ್ತೆಯಲ್ಲಿ ಸುತ್ತ-ಮುತ್ತ ಜೋರು ಮಳೆ ಸುರಿಯುತ್ತಿದ್ದು, ವಾಹನ ಸವಾರರು ಪರದಾಡಿದ್ದಾರೆ.
ನದಿಗಳ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಸಚಿವ ಕೃಷ್ಣಭೈರೇಗೌಡ ಗುಡ್ ನ್ಯೂಸ್ ನೀಡಿದ್ದಾರೆ. 2.5 ಲಕ್ಷ ರೂ. ಪರಿಹಾರದ ಜೊತೆಗೆ ಹೊಸ ಮನೆ ಕಟ್ಟಿಸಿಕೊಡುತ್ತೇವೆ. ಈ ಸಂಬಂಧ ಶೀಘ್ರವೇ ನಾವು ಆದೇಶವನ್ನು ಹೊರಡಿಸುತ್ತೇವೆ ಎಂದು ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಹೇಳಿದ್ದಾರೆ.
ಕೊಪ್ಪಳ: ಮಲೆನಾಡಿನಲ್ಲಿ ಭಾರಿ ಮಳೆ ಹಿನ್ನೆಲೆ ತುಂಗಭದ್ರಾ ನದಿ ನೀರಿನ ಪ್ರಮಾಣ ಮತ್ತೆ ಏರಿಕೆಯಾಗಿದೆ.
ತುಂಗಭದ್ರಾ ಜಲಾಶಯದಿಂದ ನದಿಗೆ ಈಗ 1.39 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಇಂದು ಮುಂಜಾನೆ 55584 ಕ್ಯೂಸೆಕ್ ನೀರು ಬಿಡಲಾಗಿತ್ತು. ಸಂಜೆಯ ವೇಳೆಗೆ ಹೊರಹರಿವಿನ ಪ್ರಮಾಣ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.
ಯಾದಗಿರಿ: ಕೃಷ್ಣ ನದಿ ನೀರಿನಿಂದ ಯಾದಗಿರಿಯಲ್ಲಿ ಪ್ರವಾಹ ಹಿನ್ನಲೆ ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಷತ್ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ಭೇಟಿ ಮಾಡಿದೆ. ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಬಳಿಯ ಸೇತುವೆ ವಿಕ್ಷಣೆ ಮಾಡಲಾಗಿದೆ.
ಮೈಸೂರು: KRS, ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ ಬಿಟ್ಟ ಹಿನ್ನೆಲೆ ಕಾವೇರಿ, ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ನಂಜನಗೂಡು, ಟಿ.ನರಸೀಪುರ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಟಿ.ನರಸೀಪುರ ತಾಲೂಕಿನ ತಡಿಮಾಲಂಗಿ ಗ್ರಾಮಕ್ಕೆ ವಿಪತ್ತು ನಿರ್ವಹಣಾ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಭೇಟಿ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಮುಂದುವರೆದ ಹಿನ್ನೆಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ. ತುಂಗಾ, ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತುಂಗಾ, ಭದ್ರಾ ಸಂಗಮ ಕ್ಷೇತ್ರದಲ್ಲಿರುವ ಸ್ನಾನಘಟ್ಟ ಮುಳುಗಡೆಯಾಗಿದೆ.
ಘಟಪ್ರಭಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಬಳಿಯ ಮುಧೋಳ ಯಾದವಾಡ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ 7 ಅಡಿಯಷ್ಟು ನೀರು ಹರಿಯುತ್ತಿದೆ.
ಕೇರಳ ರಾಜ್ಯದ ವಯನಾಡಿನಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಕಪಿಲಾ ನದಿ ತೀರದಲ್ಲಿರುವ ಶ್ರೀಬಸವೇಶ್ವರ ದೇವಾಲಯ, ಲಿಂಗಭಟ್ಟರ ಗುಡಿ, ಕಾಶಿ ವಿಶ್ವನಾಥಸ್ವಾಮಿ ದೇವಾಲಯ, ಚಾಮುಂಡೇಶ್ವರಿ, ಅಯ್ಯಪ್ಪಸ್ವಾಮಿ, ದತ್ತಾತ್ರೇಯಸ್ವಾಮಿ, ಪರಶುರಾಮ ದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ. ದೇವಾಲಯದ ಸುತ್ತಮುತ್ತ ಮುಡಿಕಟ್ಟೆ, ಸೋಪಾನಕಟ್ಟೆ, ದಾಸೋಹ ಭವನ ಸೇರಿದಂತೆ ದೇವಸ್ಥಾನದ ಪಾರ್ಕಿಂಗ್, ನೂತನ ಶ್ರೀಕಂಠೇಶ್ವರ ಮಂಗಳಮಂಟಪ ಕಲ್ಯಾಣ ಮಂಟಪ, ಹಳ್ಳದ ಕೇರಿಯಲ್ಲಿನ ಕೆಲವು ಮನೆಗಳು ಜಲಾವೃತಗೊಂಡಿವೆ.
ಚಿಕ್ಕಮಗೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಆನೆಗುಂದಿ ಬಳಿಯ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 169 ಶಿವಮೊಗ್ಗ-ಶೃಂಗೇರಿ-ಮಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ಗುಡ್ಡ ಕುಸಿತದ ರಸ್ತೆಯಲ್ಲೇ ವಾಹನಗಳು ಸಂಚರಿಸುತ್ತಿವೆ. ಗುಡ್ಡ ಕುಸಿಯುತ್ತಿದ್ದರು ಜಿಲ್ಲಾಡಳಿತ ಮಾತ್ರ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ನೇತ್ರಾವತಿ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ನೇತ್ರಾವತಿ ನದಿಗೆ ನೀರಿನ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಉಳ್ಳಾಲದ ಹರೇಕಳದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಯದ ಎಲ್ಲ ಸದ್ಯ ಡ್ಯಾಂ ನ ಎಲ್ಲ ಗೇಟ್ಗಳನ್ನು ಓಪನ್ ಮಾಡಲಾಗಿದೆ. ನೀರು ಹೆಚ್ಚಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ನದಿ-ಸಮುದ್ರದ ಬಳಿ ತೆರಳದಂತೆ ಆದೇಶ ಹೊರಡಿಸಿದೆ.
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 15 ರ ವರೆಗೂ ಪ್ರವಾಸಕ್ಕೆ ಬಾರದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಪ್ರವಾಸಿ ತಾಣಗಳಲ್ಲಿ ಗುಡ್ಡ, ರಸ್ತೆಗಳು ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸ ಬರುವುದನ್ನು ಮುಂದೂಡುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮನವಿ ಮಾಡಿದ್ದಾರೆ.
ಬೆಳಗಾವಿ: ಘಟಪ್ರಭಾ ನದಿಯ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಗೋಕಾಕ್ ಬಳಿಯ ಲೋಳಸೂರು ಸೇತುವೆ ಮೇಲಿನ ನೀರು ಕಡಿಮೆಯಾಗಿದೆ. ಆದರೆ, ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ರಸ್ತೆಗೆ ಹಾನಿಯಾಗಿದ್ದು, ಸೇತುವೆ ಪರಿಶೀಲನೆಗೆ ತಹಶಿಲ್ದಾರ ಮುಂದಾಗಿದ್ದಾರೆ. ಸ್ಥಳಕ್ಕೆ ತಹಶಿಲ್ದಾರ ಡಾ.ಮೋಹನ್ ಬಸ್ಮೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಗುಡ್ಡ ಕುಸಿತದಿಂದ ಬಂದ್ ಆಗಿದ್ದ ಹಾಸನದ ಶಿರಾಡಿಘಾಟ್ನಲ್ಲಿ ಸಂಚಾರ ಆರಂಭವಾಗಿದೆ. ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಬಳಿ ಗುಡ್ಡ ಕುಸಿದಿತ್ತು. ಕೂಡಲೆ ಕಾರ್ಯಪ್ರವೃಹತವಾದ ಜಿಲ್ಲಾಡಳಿತ ಸತತ 10-12 ಗಂಟೆ ಕಾರ್ಯಾಚರಣೆ ನಡೆಸಿ ಮಣ್ಣು ತೆರವು ಮಾಡಿದೆ. ಇದರಿಂದ ರಸ್ತೆ ಸಂಚರಿಸಲು ಮುಕ್ತವಾಗಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲ ಕೆಸರುಮಯವಾಗಿದೆ. ಟ್ರಕ್ವೊಂದು ಕೆಸರಿನಲ್ಲಿ ಸಿಲುಕಿತ್ತು. ನಿಧಾನಗತಿ ಸಂಚಾರದಿಂದ ರಸ್ತೆಯ ಎರಡೂ ಬದಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ಕೊಡಗು: ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಿದ್ದರಿಂದ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಬಸಪ್ಪ ಬಡಾವಣೆ, ಗಂಧದಕೋಟೆ ಮುಳುಗಡೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮಧ್ಯರಾತ್ರಿ ಸಂತ್ರಸ್ತರನ್ನು ರಕ್ಷಿಸಿದ್ದಾರೆ.
ಕುಶಾಲನಗರದಲ್ಲಿ ಹಲವು ಬಡಾವಣೆಗಳು ಮುಳುಗಿವೆ.
ಭದ್ರಾ ಡ್ಯಾಂನಿಂದ 41 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಭದ್ರಾವತಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಹೊಸ ಸೇತುವೆ ಮುಳುಗಡೆಯಾಗಿದೆ. ಸೇತುವೆ ಜಲಾವೃತ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸೇತುವೆಯ ಎರಡು ಕಡೆ ಬ್ಯಾರಿಕೇಡ್ ಪೊಲೀಸರು ಹಾಕಿ ನಿರ್ಬಂಧಿಸಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಜಿಲ್ಲೆಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಎರಡು ದಿನ ಪ್ರವೇಶ ನಿಷೇಧಿಸಲಾಗಿದೆ. ಅತಿಯಾದ ಮಳೆಯಿಂದ ದುಬಾರೆ, ಹಾರಂಗಿ ಸಾಕಾನೆ ಶಿಬಿರಗಳು ಬುಧ ಮತ್ತು ಗುರುವಾರ ಎರಡು ದಿನಗಳ ಕಾಲ ಬಂದ್ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ.
Published On - 8:35 am, Wed, 31 July 24