ಬೆಂಗಳೂರು: ನವೆಂಬರ್ 1ರಂದು 66ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು, ಈ ಬಾರಿಯ ವಿಶೇಷವೆಂದರೆ ,ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಗೆ ಅರ್ಹರನ್ನು ಗುರುತಿಸಿ ಆನ್ಲೈನ್ ಮೂಲಕ ಅವರ ಹೆಸರು ಶಿಫಾರಸು ಮಾಡಲು ಸಾರ್ವಜನಿಕರಿಗೇ ಅವಕಾಶ ಕಲ್ಪಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.
ಈ ವರ್ಷ 66 ಅರ್ಹ ಸಾಧಕರನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ, ಸಾರ್ವಜನಿಕರು ಯಾರೇ ಆಗಲಿ ಅವರು ಸೇವಾ ಸಿಂಧು ಪೋರ್ಟಲ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಿದ್ಧಪಡಿಸಲಾಗಿರುವ ವಿಶೇಷ ನಮೂನೆಯ ಅರ್ಜಿಯಲ್ಲಿ ಮೂರು ಹೆಸರುಗಳನ್ನು ಶಿಫಾರಸು ಮಾಡಬಹುದಾಗಿದೆ. ಈ ಮೂವರು ಸಾಧಕರ ಹೆಸರು, ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಅವರ ಊರು , ವಿಳಾಸ, ಸಂಪರ್ಕ ಸಂಖ್ಯೆಇತ್ಯಾದಿ ವಿವರಗಳನ್ನು ಒದಗಿಸಲು ಈ ಅರ್ಜಿ ನಮೂನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದ ಮೂಲೆ ಮೂಲೆಯಲ್ಲಿ ವಾಸಮಾಡುತ್ತಿರುವ ಹಾಗೂ ಎಲೆಮರೆಕಾಯಿಯಂತೆ ತಮ್ಮ, ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ, ಮಾಡುತ್ತಿರುವ ವ್ಯಕ್ತಿಗಳನ್ನು ಅವರ ಸುತ್ತ ಮುತ್ತಲೂ ಇರುವವರು ಗುರುತಿಸಿ ಅವರ ಸಾಧನೆಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ನಮಗೆ ತಲುಪಿಸಿದರೆ, ಅದನ್ನು ತಜ್ಞರ ಸಮಿತಿಗೆ ನೀಡಲಾಗುತ್ತದೆ, ಅದನ್ನು ಅವರು ಪರಿಶೀಲನೆ ಮಾಡಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಎಂದು ಪರಿಗಣಿಸಿದರೆ ಖಂಡಿತ ಅವರಿಗೆ ಪ್ರಶಸ್ತಿ ಸಿಗುವಂತಾಗುತ್ತದೆ. ಅದರ ಜೊತೆಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ನೇರವಾಗಿ ಸಾರ್ವಜನಿಕರೇ ಸಾಧಕರನ್ನು ಆಯ್ಕೆ ಮಾಡಿದಂತಾಗುತ್ತದೆ, ಕ್ರೀಡೆ ಹೊರತುಪಡಿಸಿದರೆ ಉಳಿದ ಸಾಧಕರು ಕನಿಷ್ಠ 60 ವರ್ಷ ಮೇಲ್ಪಟ್ಟವರಾಗಿರಬೇಕು ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಇಂತಹ ಪ್ರಯೋಗ ಇದೇ ಮೊದಲ ಬಾರಿಗೆ ಮಾಡಲಾಗುತ್ತಿದ್ದು, ಇದು ಅತ್ಯಂತ ಪಾರದರ್ಶಕ ಹಾಗೂ ಪ್ರಜಾಪ್ರಭುತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ನಡೆಯುತ್ತಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದ್ದಾರೆ. ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೂ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶಿಸಬಹುದಾಗಿದೆ, ಪ್ರಶಸ್ತಿಗೆ ಶಿಫಾರಸು ಮಾಡುವ ವ್ಯಕ್ತಿಗಳ ಹೆಸರನ್ನು ಕಳುಹಿಸಲು ಅಕ್ಟೋಬರ್ 15 ನೇ ತಾರೀಖಿನವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ:
Success Story: ಕಿವುಡಿ ಎಂದು ಮೂದಲಿಸಿದರ ಮುಂದೆ ಐಎಎಸ್ ಅಧಿಕಾರಿಯಾಗಿ ಸಾಧಿಸಿ ತೋರಿಸಿದ ಸೌಮ್ಯ ಶರ್ಮ
(Karnataka Rajyotsava Award apply via mobile online here is the method)
Published On - 5:37 pm, Sat, 25 September 21