ಬೆಂಗಳೂರು, ಮೇ 16: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ತಲೆಮರೆಸಿಕೊಂಡು ಜರ್ಮನಿಯಲ್ಲಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಬುಧವಾರ ಬೆಂಗಳೂರಿಗೆ ಬರುತ್ತಾರೆ ಎಂದು ಹೇಳಲಾಗಿತ್ತು. ಎರಡು ಬಾರಿ ಟಿಕೆಟ್ ರದ್ದು ಮಾಡಿದ್ದ ಪ್ರಜ್ವಲ್, ಒಮ್ಮೆ ಟಿಕೆಟ್ ಮುಂದೂಡಿಕೆ ಮಾಡಿಕೊಂಡರು. ನಂತರ ಆ ಟಿಕೆಟನ್ನೂ ರದ್ದು ಮಾಡಿದರು. ಇದಾದ ಬಳಿಕ ಗುರುವಾರ ಬೆಳಗ್ಗೆಗೆ ಮತ್ತೆ LH764 ಲುಫ್ತಾನ್ಸ್ ವಿಮಾನದ ಟಿಕೆಟ್ ಕಾಯ್ದಿರಿಸಿದ್ದರು. ಹೀಗಾಗಿ ಬೆಂಗಳೂರಿಗೆ (Bengaluru) ಬರುತ್ತಾರೆ ಎಂದು ಎಸ್ಐಟಿ ಅಧಿಕಾರಿಗಳು (SIT Officials) ಕಾದು ಕುಳಿತಿದ್ದರು. ಆದರೆ ಅವರಿಗೆ ಪ್ರಜ್ವಲ್ ಮತ್ತೆ ಚಳ್ಳೆಹಣ್ಣು ತಿನ್ನಿಸಿದ್ದಾರೆ.
ಕೊನೇ ಕ್ಷಣದಲ್ಲಿ ಟಿಕೆಟ್ ಬುಕ್ ಆಗಿದ್ದರಿಂದ ಪ್ರಜ್ವಲ್ ಬರಬಹುದು ಎಂಬ ನಿರೀಕ್ಷೆ ಎಸ್ಐಟಿ ಅಧಿಕಾರಿಗಳಲ್ಲಿ ಇತ್ತು. ಆದರೆ, ಜರ್ಮನಿಯ ಕಾಲಮಾನ ಪ್ರಕಾರ 12.20ಕ್ಕೆ ವಿಮಾನ ಟೇಕಾಫ್ ಆಗಿದೆ. ಅತ್ತ ಟೇಕಾಫ್ ಆಗುತ್ತಿದ್ದಂತೆಯೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಪಟ್ಟಿ ಬಂದಿದೆ. ಏರ್‌ಪೋರ್ಟ್‌ನಲ್ಲೇ ಇದ್ದ ಎಸ್ಐಟಿ ಅಧಿಕಾರಿಗಳು, ಪ್ರಯಾಣಿಕರ ಹೆಸರು ಪರಿಶೀಲಿಸಿದ್ದಾರೆ. ಆದರೆ, ವಿಮಾನದಲ್ಲಿರುವ ಪ್ರಯಾಣಿಕರ ಪಟ್ಟಿಯಲ್ಲಿ ಪ್ರಜ್ವಲ್ ಹೆಸರು ಇರಲಿಲ್ಲ. ಬೆಳಗ್ಗೆ ಟಿಕೆಟ್ ಬುಕ್ ಮಾಡಿದ್ದರೂ ಪ್ರಜ್ವಲ್ ಪ್ರಯಾಣ ಮಾಡಿರಲಿಲ್ಲ.
ಪ್ರಜ್ವಲ್ ಆಗಮನದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಅವರು ಬರುವ ಬಗ್ಗೆ ಎಸ್‌ಐಟಿಗೆ ಗೊತ್ತಿರುತ್ತದೆ. ಎಲ್ಲವನ್ನೂ ಹೇಳಲು ಆಗಲ್ಲ ಅಂದರು. ಈ ಮಧ್ಯೆ ಪ್ರಜ್ವಲ್ ಎಲ್ಲಿದ್ದಾನೆ ಎಂಬುದು ಗೊತ್ತಿಲ್ಲ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.
ಇದನ್ನೂ ಓದಿ: ‘ತಪ್ಪು ಮಾಡಿಲ್ಲ, ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ’: ಕಾನೂನು ಹೋರಾಟದ ಜೊತೆಗೆ ರೇವಣ್ಣ ಟೆಂಪಲ್ ರನ್
ಚನ್ನರಾಯಪಟ್ಟಣದಲ್ಲಿ ಮಂಗವಾರ 18 ಕಡೆ ದಾಳಿ ನಡೆಸಿದ್ದ ಎಸ್ಐಟಿ, ಇಡೀ ರಾತ್ರಿ ಶೋಧ ನಡೆಸಿತ್ತು. ಮುಂಜಾನೆ ಮೂರುವರೆರೆಗೂ ಶೋಧ ನಡೆಸಿ ಮಹತ್ವದ ದಾಖಲೆಗಳನ್ನ ಸಂಗ್ರಹಿಸಿತ್ತು. ಪ್ರೀತಂಗೌಡ ಆಪ್ತರಾದ ಕ್ವಾಲಿಟಿ ಬಾರ್ ಶರತ್, ಪುನೀತ್, ಎಚ್.ಪಿ.ಕಿರಣ್, ಕಾಂಗ್ರೆಸ್ ಕಾರ್ಯಕರ್ತರಾದ ಪುಟ್ಟರಾಜು, ನವೀನ್‌ಗೌಡ, ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಸೇರಿ ಹಲವರ ಮನೆ ಮೇಲೆ ದಾಳಿ ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ