ಲಾಲ್ ಬಾಗ್ ಮಾವಿನ ಮೇಳಕ್ಕೆ ಡೇಟ್ ಫಿಕ್ಸ್; ಮೇ 24 -ಜೂನ್ 10 ವರೆಗೆ ಮಾವಿನ ಮೇಳ
ರಾಜಧಾನಿ ಬೆಂಗಳೂರಿನಲ್ಲಿ ಮಾವಿನ ಸೀಸನ್ ಆರಂಭವಾಗಿದ್ದು, ಎಲ್ಲಿ ನೋಡಿದ್ರು ಮಾವಿನ ಹಣ್ಣುಗಳೇ ಕಣ್ಣಿಗೆ ಬೀಳುತ್ತಿವೆ. ಇದೀಗ ಲಾಲ್ ಬಾಗ್ ನಿಂದಲೂ ಮ್ಯಾಂಗೋ ಮೇಳ ಆಯೋಜಿಸುತ್ತಿದ್ದು, ಜನರು ಮೇಳಕ್ಕೆ ಬರುವುದಕ್ಕೆ ಉತ್ಸಕರಾಗಿದ್ದಾರೆ. ಮೇ 24 ರಿಂದ ಜೂನ್ 10 ವರೆಗೂ ಮಾವಿನ ಮೇಳ ನಡೆಯಲಿದೆ.
ಬೆಂಗಳೂರು, ಮೇ.16: ಹಣ್ಣುಗಳ ರಾಜ ಮಾವಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರೂ ಇಷ್ಟಪಟ್ಟು ಆಸೆಯಿಂದ ಹಣ್ಣನ್ನ ಖರೀದಿ ಮಾಡ್ತಾರೆ. ಈ ವರ್ಷ ಬಿಸಿಲಿನ ಕಾರಣದಿಂದಾಗಿ ರಾಜಧಾನಿಯಲ್ಲಿ ಮಾವಿನ ಸೀಸನ್ ಲೇಟಾಗಿ ಆರಂಭವಾಗಿದ್ದು, ಮಳೆ ಬಂದ ನಂತರ ಸಿಲಿಕಾನ್ ಸಿಟಿ ಮಂದಿ ಬಗೆ ಬಗೆಯ ಹಣ್ಣುಗಳನ್ನ ಸವಿಯುತ್ತಿದ್ದಾರೆ. ಈ ಮಧ್ಯೆ ಲಾಲ್ ಬಾಗ್ ನಲ್ಲಿಯು (Lal Bagh) ಈ ವರ್ಷ ಮಾವಿನ ಮೇಳ (Mango Mela) ನಡೆಸುವುದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಸಧ್ಯ ಮೇಳಕ್ಕೆ ಡೇಟ್ ಕೂಡ ಫಿಕ್ಸ್ ಮಾಡಿದ್ದಾರೆ.
ಇದೇ ಮೇ 24 ರಿಂದ ಜೂನ್ 10 ರವರೆಗೂ ಮಾವು ಹಾಗೂ ಹಲಸಿನ ಮೇಳ ಮಾಡುವುದಕ್ಕೆ ಮಾವು ಅಭಿವೃದ್ಧಿ ನಿಗಮ ಹಾಗೂ ಲಾಲ್ ಬಾಗ್ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಈ ಮಾವಿನ ಮೇಳಕ್ಕೆ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಸೇರಿದಂತೆ ನಾನಾ ಜಿಲ್ಲೆಗಳ ಮಾವು ಬೆಳೆಗಾರರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಮೇಳದಲ್ಲಿ ವಾಣಿಜ್ಯ, ಪಾರಂಪರಿಕ ಮಾವಿನ ತಳಿಗಳು, ಜೊತೆಗೆ ಉಪ್ಪಿನಕಾಯಿಗೆ ಬಳಸುವ ಆಮ್ಲೆಟ್, ಮಿಡಿ ಮಾವು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರಲಿದೆ.
ಇದನ್ನೂ ಓದಿ: ಮಂಡ್ಯ: ಆಧುನೀಕರಣ ಹೆಸರಲ್ಲಿ ನಾಲೆಗಳಿಗೆ ಹರಿಯದ ನೀರು; ಕಾಮಗಾರಿ ವಿಳಂಬಕ್ಕೆ ರೈತರ ಆಕ್ರೋಶ
ಇನ್ನು ಐಐಎಚ್‌ಆರ್, ಜಿಕೆವಿಕೆ ಮತ್ತಿತರ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಹಲಸಿನ ತಳಿಗಳು, ರೈತರು ಬೆಳೆದ ನಾನಾ ತಳಿಯ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತೆ. ಈ ವರ್ಷದ ಮೇಳದಲ್ಲಿ ಬಾದಾಮಿ, ರಸಪುರಿ, ಸೇಂಧೂರ, ಮಲಗೋವ, ನೀಲಂ, ಮಲ್ಲಿಕಾ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ, ಸಕ್ಕರೆಗುತ್ತಿ ಸೇರಿದಂತೆ ನಾನಾ ತಳಿಯ ಹಣ್ಣುಗಳು ಇರಲಿವೆ. ಇನ್ನು ಪ್ರತಿವರ್ಷ ಮಾವಿನ ಸೀಸನ್ನಲ್ಲಿ ರಾಜ್ಯದಲ್ಲಿ ಸುಮಾರು 15 ಲಕ್ಷ ಟನ್ ಮಾವು ಉತ್ಪಾದನೆಯಾಗಬೇಕಿತ್ತು. ಆದರೆ, ಮಳೆಯಿಲ್ಲದ ಪರಿಣಾಮ ಹಾಗೂ ಅಧಿಕ ತಾಪಮಾನದಿಂದಾಗಿ ಕೇವಲ 4-5 ಲಕ್ಷ ಟನ್‌ನಷ್ಟು ಮಾವಿನ ಫಸಲು ಕಡಿಮೆ ಬಂದಿದೆ. ಹೀಗಾಗಿ ಈ ಬಾರಿ ಮೇಳದಲ್ಲಿ ದರ ಕೊಂಚ ಹೆಚ್ಚೇ ಇರಲಿದೆ.
ಇನ್ನು, ಪ್ರತಿವರ್ಷ ಲಾಲ್ ಬಾಗ್ ನಲ್ಲಿ ಮ್ಯಾಂಗೋ ಮೇಳಕ್ಕೆ ಬರ್ತಿವಿ. ತುಂಬ ಚೆನ್ಮಾಗಿರುತ್ತೆ. ಈ ವರ್ಷವು ಮೇಳಕ್ಕೆ ಕಾಯ್ತಾ ಇದಿವಿ. ರೈತರಿಂದ ನೇರವಾಗಿ ಖರೀದಿ ಮಾಡಬಹುದು. ಜೊತೆಗೆ ಬೆಲೆ ಕೊಂಚ ಕಡಿಮೆ ಇರುತ್ತೆ. ಈ ವರ್ಷದ ಮೇಳಕ್ಕೆ ನಾವು ಕಾಯ್ತಾ ಇದಿವಿ ಅಂತ ಸಂಗೀತ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ, ಈ ವರ್ಷದ ಲಾಲ್ ಬಾಗ್ ಮ್ಯಾಂಗೋ ಮೇಳಕ್ಕೆ ಇನ್ನು ಒಂದು ವಾರ ಮಾತ್ರ ಇದ್ದು, ಸಿಲಿಕಾನ್ ಜನರು ರೈತರಿಂದ ನೇರವಾಗಿ ಖರೀದಿಸಿ ತಮಗಿಷ್ಟದ ಹಣ್ಣುಗಳನ್ನ ಟೇಸ್ಟ್ ಮಾಡಬಹುದಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ