ಕೇಂದ್ರದತ್ತ ಬೊಟ್ಟು ಮಾಡಿ ಜಾರಿಕೊಂಡ ಸಿಎಂ: ಕಬ್ಬು ಬೆಳೆಗಾರರಿಗೆ ಮಹತ್ವದ ಕರೆ ಕೊಟ್ಟ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಕಬ್ಬು ಬೆಳಗಾರರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತರ ಹೋರಾಟಕ್ಕೆ ಬಿಜೆಪಿ ನಾಯಕರು, ಸ್ವಾಮೀಜಿಗಳು, ಸಂಘಟನೆಗಳು ಸಾಥ್ ನೀಡಿವೆ. ಇತ್ತ ಇಂದಿನ ಸಚಿವ ಸಂಪುಟದಲ್ಲಿ ಕೂಡ ಬಿಸಿಬಿಸಿ ಚರ್ಚೆ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದೆಡೆಗೆ ಬೊಟ್ಟು ಮಾಡಿದ್ದಾರೆ.

ಕೇಂದ್ರದತ್ತ ಬೊಟ್ಟು ಮಾಡಿ ಜಾರಿಕೊಂಡ ಸಿಎಂ: ಕಬ್ಬು ಬೆಳೆಗಾರರಿಗೆ ಮಹತ್ವದ ಕರೆ ಕೊಟ್ಟ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ
Updated By: ಗಂಗಾಧರ​ ಬ. ಸಾಬೋಜಿ

Updated on: Nov 06, 2025 | 6:12 PM

ಬೆಂಗಳೂರು, ನವೆಂಬರ್​ 06: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ (sugarcane growers Protest) 8ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿ ಕ್ವಿಂಟಾಲ್​​ 3500 ರೂ. ಬೆಲೆ ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೂಡ ಚರ್ಚೆ ಆಗಿದೆ. ಇದರ ಬೆನ್ನಲ್ಲೇ ತುರ್ತು ಸುದ್ದಿಗೋಷ್ಠಿ ಮಾಡಿದ ಸಿಎಂ ಸಿದ್ದರಾಮಯ್ಯ (Siddaramaiah), FRP ನಿಗದಿ ಮಾಡುವವರು ಕೇಂದ್ರ ಸರ್ಕಾರದವರು. ಪ್ರತಿ ವರ್ಷ ಕೇಂದ್ರ ನಿಗದಿ ಮಾಡುತ್ತದೆ ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ್ದಾರೆ. ಈ ಮೂಲಕ ಸದ್ಯ ಯಾವುದೇ ಪರಿಹಾರ ಹುಡುಕದೇ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿ ಕೈತೊಳೆದುಕೊಂಡಿದ್ದಾರೆ.

ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದ ಸಿಎಂ 

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಗ್ಗೆ ಮುಂಚಿತವಾಗಿ ಸಚಿವ ಎಂಬಿ ಪಾಟೀಲ್ ಜೊತೆಗೆ ಚರ್ಚೆ ಮಾಡಿದ್ದೆ. ಇಂದು ಸಚಿವ ಸಂಪುಟದಲ್ಲೂ ಬಹಳ‌ ಸುದೀರ್ಘವಾದ ಚರ್ಚೆ ಮಾಡಿದ್ದೇವೆ. ಪ್ರತಿಭಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.

ಎಫ್​​ಆರ್​ಪಿ ತೀರ್ಮಾನ ಮಾಡಬೇಕಾಗಿರುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರ ಅಲ್ಲ

ಪ್ರತಿ ವರ್ಷ ಕೇಂದ್ರ ಸರ್ಕಾರ ಎಫ್​​ಆರ್​ಪಿ ನಿಗದಿ ಮಾಡುತ್ತದೆ. ಪ್ರತಿ ಟನ್​ಗೆ 10.25ರಿಕವರಿಗೆ 3,550 ರೂ ನಿಗದಿ ಮಾಡಿದ್ದಾರೆ. ಇದರಲ್ಲಿ ಹಾರ್ವೆಸ್ಟಿಂಗ್, ಸಾರಿಗೆ ವೆಚ್ಚವೂ ಸೇರಿರುತ್ತದೆ. 10.25ಕ್ಕಿಂತ ರಿಕವರಿ ಜಾಸ್ತಿ ಇದ್ದರೆ ಪ್ರತಿ ಕ್ವಿಂಟಾಲ್​ಗೆ 3.46 ರೂ. ನಿಗದಿ ಮಾಡಲಾಗಿದೆ. 9.5 ರಿಕವರಿ ತನಕ ಈ ಬೆಲೆ ಇರುತ್ತದೆ. ಈ ರಿಕವರಿ ಕಡಿಮೆ ಇದ್ದರೆ ಪ್ರತಿ ಟನ್​ಗೆ ರೂ 3,290.50 ಕೊಡಬೇಕು ಎಂದರು.

ಎಫ್​​ಆರ್​ಪಿ ತೀರ್ಮಾನ ಮಾಡಬೇಕಾಗಿರುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರ ಅಲ್ಲ. ಇದನ್ನು ಜಾರಿಗೆ ತರುವುದು ಮಾತ್ರ ರಾಜ್ಯ ಸರ್ಕಾರದ ಕೆಲಸ. ಕಬ್ಬು ನಿಯಂತ್ರಣ ಕಾಯ್ದೆಯಲ್ಲಿ ಇದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ತೂಕ ಸರಿ ಇದೆಯಾ, ನಿಗದಿತ ಸಮಯದಲ್ಲಿ ಫ್ಯಾಕ್ಟರಿಯವರು ಹಣ ಕೊಡುತ್ತಿದ್ದಾರಾ ಎಂಬುದನ್ನಷ್ಟೇ ರಾಜ್ಯ ಸರ್ಕಾರ ನೋಡುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಧಾನಿಗೆ ಸಿಎಂ ಪತ್ರ

ಇನ್ನು ನಾಳೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ಕೋರಿ ಪತ್ರ ಬರೆಯುತ್ತೇನೆ. ತಕ್ಷಣ ಸಮಯ ಕೊಟ್ಟರೆ ಭೇಟಿ ಆಗುತ್ತೇನೆ. ರೈತರ ಪ್ರತಿಭಟನೆ ಮತ್ತು ಅವರ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

ನಾಳೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ರೈತರ ಸಭೆ

ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಶುಕ್ರವಾರ ಬೆಳಗ್ಗೆ 11 ಗಂಟೆ ಸಭೆ ನಡೆಸಿ ರೈತರ ಬೇಡಿಕೆ ಬಗ್ಗೆ ಚರ್ಚೆ ನಡೆಸುವೆ. ಬಳಿಕ ಮಧ್ಯಾಹ್ನ 1 ಗಂಟೆಗೆ ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯಪುರ ರೈತರ ಜೊತೆಗೆ ಸಭೆ ನಡೆಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಕಬ್ಬು ಬೆಳೆಗಾರರ ಪ್ರತಿಭಟನೆ: ಅಡ್ಡ ಗೋಡೆ ಮೇಲೆ ದೀಪವಿಟ್ಟ ಸಿಎಂ ಸಿದ್ದರಾಮಯ್ಯ

ಕನಿಷ್ಟ ಪಕ್ಷ 3500 ರೂ. ಒಂದು ಟನ್ ಕೊಡಬೇಕು ಎಂದು ರೈತರ ಆಗ್ರಹವಿದೆ. ಡಿಸಿ ಎಸ್ಪಿ ಜೊತೆಗೆ ಚರ್ಚೆ ಮಾಡಿದ್ದೇನೆ. 11.25 ರಿಕವರಿ ಬಂದರೆ 3200 ರೂ. ಕೊಡಲು ನಾವು ಸಿದ್ದರಿದ್ದೇವೆ ಎಂದು ಮಾಹಿತಿ ನೀಡಿದ್ದೇವೆ. ಮಹಾರಾಷ್ಟ್ರದಲ್ಲಿ 40ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು 2, 515 ರಿಂದ 3,635 ರೂ. ನೀಡುತ್ತಿವೆ. ಇಳುವರಿ ಮೇಲೆ ಕೊಡುತ್ತಿದ್ದಾರೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:07 pm, Thu, 6 November 25